ಪ್ರಜಾಪ್ರಭುತ್ವ ದಿನದಂದು ಮಾನವ ಬಂಧುತ್ವಕ್ಕೆ ಕೈ ಕೈ ಹಿಡಿದರು; ಕರ್ನಾಟಕದಲ್ಲಿ ವಿಶ್ವ ದಾಖಲೆಯ 2500 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಾಣ
Sep 15, 2024 10:49 AM IST
ಪ್ರಜಾಪ್ರಭುತ್ವ ದಿನ ಅಂಗವಾಗಿ ಮೈಸೂರಿನ ಚಾಮರಾಜ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿದ ಯುವ ಸಮುದಾಯ
- Human Chain ಕರ್ನಾಟಕದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಾಣಕ್ಕೆ ಭಾರೀ ಬೆಂಬಲ ದೊರಕಿತು.
ಬೆಂಗಳೂರು:ನಾವೆಲ್ಲಾ ಒಂದು, ಸಂವಿಧಾನವೇ ನಮಗೆ ಶ್ರೇಷ್ಠ. ಮಾನವ ಬಂಧುತ್ವವನ್ನು ಸಾರೋಣ ಎನ್ನುವ ಸಂದೇಶದೊಂದಿಗೆ ಕರ್ನಾಟಕದಾದ್ಯಂತ 2500 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ರಾಜ್ಯಾದ್ಯಂತ ನಿರ್ಮಿಸಲಾಯಿತು.ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೂ ಕೈ ಹಿಡಿದು ಮಾನವ ಸರಪಳಿ ಹಿಡಿದಿದ್ದು ವಿಶ್ವ ದಾಖಲೆ ಸೇರುವ ಹಂತಕ್ಕೂ ಹೋಗಿದೆ. ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್ ಜಿಲ್ಲೆಯಿಂದ ಚಾಮರಾಜನಗರದ ವರೆಗೂ ಸಮಾಜದ ಎಲ್ಲಾ ವರ್ಗದ ಜನರೂ ಸೇರಿದಂತೆ ಸುಮಾರು 25 ಲಕ್ಷ ಮಂದಿ ಕೈಕೈ ಹಿಡಿದು ರಾಜ್ಯದುದ್ದಕ್ಕೂ ವಿಶ್ವದ ಬೃಹತ್ ಮಾನವ ಸರಪಳಿ ನಿರ್ಮಿಸಿದರು. ಇದೇವೇಳೆ ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿ ಮೂಡಿಸಿದರು. ಹಾಗೆಯೇ, ಸುತ್ತಮುತ್ತ ಪ್ರದೇಶದಲ್ಲಿ ಗಿಡಗಳನ್ನೂ ನೆಟ್ಟು ಪರಿಸರ ಜಾಗೃತಿಯನ್ನೂ ಮೂಡಿಸಿದರು.
ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ರಾಜ್ಯ 32 ಇಲಾಖೆಗಳ ಸುಮಾರು 8 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇಡೀ ಕಾರ್ಯಕ್ರಮಕ್ಕಾಗಿ ಶ್ರಮಿಸಿದ ಪರಿಣಾಮವಾಗಿ ಭಾನುವಾರ ಬೆಳಿಗ್ಗೆ ಇಡೀ ಕರ್ನಾಟಕದ ಒಂದು ಎನ್ನುವ ಭಾವನೆಯೊಂದಿಗೆ ಮಕ್ಕಳು,. ಯುವಕರು, ಹಿರಿಯರು,ಮಹಿಳೆಯರು, ಅಧಿಕಾರಿಗಳು ಪರಸ್ಪರ ಕೈ ಹಿಡಿದರು.
ಸಚಿವರ ಆಸಕ್ತಿ
ಇಲಾಖೆ ಸಚಿವರಾದ ಡಾ. ಹೆಚ್. ಸಿ. ಮಹಾದೇವಪ್ಪ ಹೆಚ್ಚಿನ ಆಸಕ್ತಿ ವಹಿಸಿ ಸಿದ್ಧತೆಗಳನ್ನು ನಡೆಸಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಮಾನವ ಸರಪಳಿ ನಿರ್ಮಿಸಲಾಯಿತು. ಈ ವಿನೂತನ ಮತ್ತು ಬೃಹತ್ ಕಾರ್ಯಕ್ರಮಕ್ಕೆ ಲಂಡನ್ ನ ವಿಶ್ವ ದಾಖಲೆ ಪರಿಶೀಲಿಸುವ ತಂಡ ಆಗಮಿಸಿದ್ದು, ಎಲ್ಲವೂ ದಾಖಲೆಗಳ ನಿಯಮದಂತಿರುವುದನ್ನು ವಿವಿಧ ಹಂತಗಳಲ್ಲಿ ಅಧ್ಯಯನ ಮಾಡುತ್ತಿದೆ. ನಂತರ ಕಾರ್ಯಕ್ರಮ ದಾಖಲೆಗಳ ನಿಯಮಕ್ಕೆ ಒಪ್ಪುವಂತೆ ಇದ್ದರೆ ಕಾರ್ಯಕ್ರಮವನ್ನು ವಿಶ್ವ ದಾಖಲೆಗೆ ಸೇರಿಸಲಿದೆ.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರ ಮಾರ್ಗದರ್ಶನದಲ್ಲಿ ಡ್ರೋನ್ ಚಿತ್ರೀಕರಣ ಹಾಗೂ ಪ್ರತಿ ಜಿಲ್ಲೆಯ ತಾಲೂಕುಗಳ ಮಾಹಿತಿಗಳು ಕ್ಷಣಕ್ಷಣದಲ್ಲಿ ಲಭ್ಯವಾಗಿ ಆಯೋಜಕರ ನಡುವೆ ಸಂಪೂರ್ಣ ಸಮನ್ವಯದೊಂದಿಗೆ ನಡೆಯುವಂತೆ ಮಾಡುವ ವಿಶೇಷ ಸುಧಾರಿತ ತಂತ್ರಜ್ಞಾನದ ಜಾಲವೂ ಕೆಲಸ ಮಾಡುತ್ತಿದೆ.
ಈ ವಿಶೇಷ ಮಾನವ ಸರಪಳಿ ಪ್ರತಿ ಜಿಲ್ಲೆ, ತಾಲೂಕು ಹಾಗೂ ಪ್ರಮುಖ ಗ್ರಾಮಗಳಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ಹಾದು ಹೋಗಿದ್ದು, ಎಲ್ಲಾ ಹಳ್ಳಿಗಳಲ್ಲೂ ಇದೊಂದು ಹಬ್ಬದಂತೆ ಆಚರಿಸಲಾಗುತ್ತಿದೆ. ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ. ಬೆಳಗಾವಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಮಾನವ ಸರಪಳಿಗಳು ನಿರ್ಮಾಣವಾದವು.
3 ಕೋಟಿ ಜನರ ಬೆಂಬಲ
ವಿಶ್ವಸಂಸ್ಥೆ 2007ರ ಸೆ.15 ಅನ್ನು ವಿಶ್ವ ಪ್ರಜಾಪ್ರಭುತ್ವದ ದಿನ ಎಂದು ಘೋಷಿಸಿತ್ತು. ಇದರ ಅಂಗವಾಗಿ ಅನೇಕ ದೇಶಗಳಲ್ಲಿ ಅಂದು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ. ಆದರೆ ಇದರ ಮೌಲ್ಯವನ್ನು ಹೆಚ್ಚು ಪ್ರಚಾರ ಮಾಡಿ ವಿಶ್ವ ಮಟ್ಟದಲ್ಲಿ ಸಾರುವ ಪ್ರಯತ್ನಕ್ಕೆ ಸರಕಾರ ಈ ಹಿಂದೆಯೇ ಕೈ ಹಾಕಿತ್ತು. ಹೀಗಾಗಿ ಕಳೆದ ವರ್ಷ 2023 ಸೆ.15ರಂದು ರಾಜ್ಯಾದ್ಯಂತ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಕಾರ್ಯಕ್ರಮ ನಡೆಸಲಾಗಿತ್ತು. ಇದರಲ್ಲಿ ಸುಮಾರು 2.3 ಕೋಟಿ ಭಾಗವಹಿಸಿ ಸರಕಾರಕ್ಕೆ ಆಶ್ಚರ್ಯ ಉಂಟು ಮಾಡಿದ್ದರು. ಇದರಿಂದ ಸ್ಫೂರ್ತಿ ಪಡೆದ ಸರಕಾರ ಈ ಬಾರಿ 25 ಲಕ್ಷ ಜನರು ರಾಜ್ಯದುದ್ದಕ್ಕೂ ನಿಂತು ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಓದುವಂತೆ ಮಾಡುತ್ತಿದೆ. ಒಟ್ಟು 3 ಕೋಟಿ ಜನರ ಬೆಂಬಲ ಈ ಕಾರ್ಯಕ್ರಮಕ್ಕೆ ಸಿಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಬೆಂಗಳೂರಲ್ಲಿ ಸಿಎಂ ಚಾಲನೆ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ ಉದ್ಘಾಟಿಸಿದರು.
ಪ್ರಜಾಪ್ರಭುತ್ವ ದಿನದ ರಾಯಭಾರಿ ಹರೇಕಳ ಹಾಜಪ್ಪ, ಪೌರ ಕಾರ್ಮಿಕ ತಾಯಂದಿರಾದ ನಾಗಲಕ್ಷ್ಮಿ, ಮಂಜುಳ ಹಾಗೂ ತೃತೀಯ ಲಿಂಗಿ ಪ್ರಿಯಾಂಕ ಮತ್ತು ಇಬ್ಬರು ವಿಶೇಷ ಚೇತನ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಡ-ಬಲದಲ್ಲಿ ನಿಂತು ಪ್ರಜಾಪ್ರಭುತ್ವ ದಿನವನ್ನು ಅರ್ಥಪೂರ್ಣಗೊಳಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಪತಿ ರುದ್ರಪ್ಪ ಲಮಾಣಿ, ಸಚಿವರಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮದ್, ಯು.ಬಿ.ವೆಂಕಟೇಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಮೈಸೂರಲ್ಲಿ ದಸರಾ ಆನೆಗಳ ಸಾಥ್
ಮೈಸೂರಿನ ಅರಮನೆ ಮುಂಭಾಗದಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮಕ್ಕೆ ದಸರಾ ಗಜಪಡೆಯ ತಂಡವೂ ಸಾಥ್ ನೀಡಿತು. ಬೆಳಿಗ್ಗೆಯ ವಿಹಾರಕ್ಕೆ ಹೊರಟ ಆನೆಗಳು ಮಾನವ ಸರಪಳಿ ನಿರ್ಮಿಸಿದವರಿಗೆ ಜತೆಯಾದವು. ಈ ವೇಳೆ ಸಂವಿಧಾನ ಬಾವುಟವನ್ನು ಹಿಡಿದು ಗಮನ ಸೆಳದರು. ಅಲ್ಲದೇ ವಿದ್ಯಾರ್ಥಿಗಳು ಕೂಡ ಉತ್ಸಾಹದಿಂದ ಭಾಗಿಯಾದರು.
ಇದಲ್ಲದೇ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಗಳ ಸಮಸ್ತ ಜನರು ಸಂವಿಧಾನ ಪೀಠಿಕೆ ಓದಿ ಮಾನವ ಸರಪಳಿ ನಿರ್ಮಿಸಿದರು. ಆ ಪ್ರದೇಶದಲ್ಲೇ ಗಿಡ ನೆಡುವ ಮೂಲಕ ಇಡೀ ಕಾರ್ಯಕ್ರಮ ಅರ್ಥಪೂರ್ಣವಾಗಿಸಿದರು.