ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ಭರವಸೆಯ ಬೆಳಕು; ಸಹಜ ಅಂಗಾಂಶ ಬಳಸಿಕೊಂಡು ರೊಬಾಟಿಕ್ ಸರ್ಜರಿ ಮೂಲಕ ಸ್ತನ ಪುನರ್ ನಿರ್ಮಿಸಿದ ಬೆಂಗಳೂರು ವೈದ್ಯರು
ಬೆಂಗಳೂರು ವೈದ್ಯರ ತಂಡ ಮೂರನೇ ಹಂತದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 38 ವರ್ಷದ ಮಹಿಳೆಗೆ ಸಹಜ ಅಂಗಾಂಶ ಬಳಸಿಕೊಂಡು ರೊಬೋಟಿಕ್ ಸರ್ಜರಿ ಮೂಲಕ ಸ್ತನ ಪುನರ್ ನಿರ್ಮಿಸಿ, ಅವರ ಬದುಕಿನಲ್ಲಿ ಭರವಸೆ ತುಂಬಿದ್ದಾರೆ. ಚಿಕಿತ್ಸೆಯ ಮಹತ್ವವನ್ನು ಫೋರ್ಟಿಸ್ ಆಸ್ಪತ್ರೆಯ ಡಾ.ಸಂದೀಪ್ ನಾಯಕ್ ಅವರು ವಿವರಿಸಿರುವುದು ಹೀಗೆ-
ಬೆಂಗಳೂರು: ಪ್ರಸ್ತುತ ಬಹುತೇಕ ಮಹಿಳೆಯರನ್ನು ಕಾಡುವ ಪ್ರಮುಖ ರೋಗಗಳ ಪೈಕಿ ಸ್ತನ ಕ್ಯಾನ್ಸರ್ ಮುಖ್ಯವಾದುದು. ಅನೇಕರಿಗೆ ಇದರ ಅರಿವಾಗುವ ಹೊತ್ತಿಗೆ ಅದು ಎರಡು ಅಥವಾ ಮೂರನೇ ಹಂತ ತಲುಪಿರುತ್ತದೆ. ಇಂತಹ ಸನ್ನಿವೇಶದಲ್ಲಿ ಚಿಕಿತ್ಸೆ ಕಷ್ಟ ಎಂದು ಕೈ ಚೆಲ್ಲುವ ಸನ್ನಿವೇಶ ಹೆಚ್ಚು. ಆದರೆ, ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರ ತಂಡ ಮೂರನೇ ಹಂತದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 38 ವರ್ಷದ ಮಹಿಳೆಗೆ ಸಹಜ ಅಂಗಾಂಶ ಬಳಸಿಕೊಂಡು ರೊಬೋಟಿಕ್ ಸರ್ಜರಿ ಮೂಲಕ ಸ್ತನ ಪುನರ್ ನಿರ್ಮಿಸಿ, ಅವರ ಬದುಕಿನಲ್ಲಿ ಭರವಸೆ ತುಂಬಿದ್ದಾರೆ.
ಈ ಮಹತ್ವದ ಸರ್ಜರಿ ನಡೆಸಿದ ಆಸ್ಪತ್ರೆಯ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ ವಿಭಾಗದ ನಿರ್ದೇಶಕ ಡಾ. ಸಂದೀಪ್ ನಾಯಕ್ ಪಿ ಇದನ್ನು ದೃಢೀಕರಿಸಿದ್ದು, ಮಾಧ್ಯಮ ಪ್ರಕಟಣೆಯ ಮೂಲಕ ಈ ಚಿಕಿತ್ಸೆಯ ಮಹತ್ವವನ್ನು ವಿವರಿಸಿದ್ದಾರೆ.
ಏನಿದು ಸ್ತನ ಪುನರ್‌ನಿರ್ಮಾಣ ಶಸ್ತ್ರಚಿಕಿತ್ಸೆ
ಮೂರನೇ ಹಂತದ ಸ್ತನಕ್ಯಾನ್ಸರ್‌ನಿಂದ ಬಳಲುತ್ತಿದ್ದ 38 ವರ್ಷದ ಮಹಿಳೆ ಫೋರ್ಟಿಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಲ್ಲಿ ಅವರಿಗೆ ರೊಬೊಟಿಕ್ ಸರ್ಜರಿ ನಡೆಸಿ ಸ್ತನ ಪುನರ್‌ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಅವರ ಶರೀರದ ಮತ್ತೊಂದು ಭಾಗದ ಅಂಗಾಂಶ ತೆಗೆದುಕೊಳ್ಳಲಾಗಿತ್ತು. ಈ ಚಿಕಿತ್ಸೆಯನ್ನು ಡಾ. ಸಂದೀಪ್ ನಾಯಕ್ ಪಿ ಅವರ ವೈದ್ಯ ತಂಡ ನೆರವೇರಿಸಿತ್ತು.
"ಸಣ್ಣ ಪಾಪು ಇದ್ದ 38 ವರ್ಷದ ರೇಹಾ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಎಡಸ್ತನದ ಕ್ಯಾನ್ಸರ್ ಮೂರನೇ ಹಂತಕ್ಕೆ ತಲುಪಿತ್ತು. ಹೀಗಾಗಿ ಅವರಿಗೆ ಮಗುವಿಗೆ ಹಾಲುಣಿಸಲು ಕಷ್ಟವಾಗಿತ್ತು. ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಸ್ತನ ಕ್ಯಾನ್ಸರ್ ಮೂರನೇ ಹಂತಕ್ಕೆ ತಲುಪಿರುವುದು ಅರಿವಿಗೆ ಬಂತು. ಕೂಡಲೇ ಅವರಿಗೆ ಕಿಮೊಥೆರಪಿ ಕೋರ್ಸ್ ಪೂರ್ಣಗೊಳಿಸುವಂತೆ ಸಲಹೆ ನೀಡಲಾಗಿತ್ತು. ಅದರಂತೆ ಅವರು ಆ ಕೋರ್ಸ್ ಪೂರ್ಣಗೊಳಿಸಿದರು ಎಂದು ಡಾ. ಸಂದೀಪ್ ನಾಯಕ್ ವಿವರಿಸಿದರು.
ಆ ಮಹಿಳೆ ಸ್ತನ ಪುನರ್ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿದ ಕಾರಣ ಅವರಿಗೆ ವಿನೂತನ ರೊಬೊಟಿಕ್ ಸರ್ಜರಿ ನಡೆಸಲಾಯಿತು. ಇದರಲ್ಲಿ ರೊಬೊಟಿಕ್-ಸಹಾಯದ ನಿಪ್ಪಲ್ ಸ್ಪೇರಿಂಗ್ ಸ್ತನಛೇದನ ಮತ್ತು ಎಲ್‌ಡಿ ಫ್ಲಾಪ್ ಪುನರ್ನಿರ್ಮಾಣದ ಸಲಹೆ ನೀಡಲಾಗಿತ್ತು. ಅದಕ್ಕೆ ಅವರ ಒಪ್ಪಿಗೆ ಪಡೆದು ಬಳಿಕ ಕ್ಯಾನ್ಸರ್ ಪೀಡಿತ ಸ್ತನ ಅಂಗಾಂಶವನ್ನು ತೆಗೆದುಹಾಕಲಾಯಿತು. ಬಳಿಕ ರೊಬೋಟಿಕ್ ನೆರವಿನ ಎಲ್‌ಡಿ ಫ್ಲಾಪ್ ಪುನರ್ನಿರ್ಮಾಣದ ಮೂಲಕ ರೋಗಿಯ ಶರೀರದ ಹಿಂಭಾಗದ ಅಂಗಾಂಶ ತೆಗೆದು ಸ್ತನದ ಕ್ಯಾನ್ಸರ್ ಪೀಡಿತ ಅಂಗಾಂಶ ತೆಗೆದ ಖಾಲಿ ಜಾಗಕ್ಕೆ ಜೋಡಿಸಿ ಸ್ತನವನ್ನು ಪುನರ್ ನಿರ್ಮಿಸಲಾಗಿದೆ ಎಂದು ಡಾಕ್ಟರ್ ಸಂದೀಪ್ ವಿವರಿಸಿದ್ದಾರೆ.
ದೇಶದಲ್ಲಿ ಮೊದಲ ರೊಬೋಟಿಕ್ ಸರ್ಜರಿ ಎಂದ ಡಾಕ್ಟರ್
ಈ ರೊಬೋಟಿಕ್ ಸರ್ಜರಿ ಕಡಿಮೆ ಅಪಾಯದಿಂದ ಕೂಡಿದ್ದು, ರೋಗಿ ಬೇಗ ಚೇತರಿಸಿಕೊಳ್ಳುವುದಕ್ಕೆ ಸಹಕಾರಿ. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ರೊಬೋಟ್ ಸಹಾಯದಿಂದ ನಡೆಸಿದ ಸ್ತನ ಮರುನಿರ್ಮಾಣ ಶಸ್ತ್ರಚಿಕಿತ್ಸೆಯು ಹೆಚ್ಚು ಪರಿಣಾಮಕಾರಿ ಎಂದು ಡಾ. ಸಂದೀಪ್ ವಿವರಿಸಿದ್ದಾರೆ.
ಅಷ್ಟೇ ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ತಮ್ಮ ದೇಹದ ಭಾಗವನ್ನೇ ಬಳಸಿಕೊಂಡು ಸ್ತನವನ್ನು ನೈಸರ್ಗಿಕವಾಗಿ ರೋಬೋಟ್ ಸಹಾಯದ ಮೂಲಕ ಮರುನಿರ್ಮಾಣದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಕಾರ್ಯ ವಿಧಾನದಲ್ಲಿ ಫೋರ್ಟಿಸ್ ಆಸ್ಪತ್ರೆಯ ಡಾ ಅಮೀನುದ್ದೀನ್ ಖಾನ್ ಮತ್ತು ಡಾ ಭರತ್ ಜಿ ಅವರ ಸಹಕಾರ ಪ್ರಶಂಸನೀಯ. ಪ್ರಸ್ತುತ ರೋಗಿಯು ಆರೋಗ್ಯವಾಗಿದ್ದಾರೆ ಎಂದು ಡಾ ಸಂದೀಪ್ ವಿವರ ನೀಡಿದರು.