logo
ಕನ್ನಡ ಸುದ್ದಿ  /  ಕರ್ನಾಟಕ  /  Sudhakar On Covid: ದೇಶದಲ್ಲಿ ಹೆಚ್ಚಿದ ಕೋವಿಡ್ ಕೇಸ್​: ರಾಜ್ಯದಲ್ಲೂ ತಪಾಸಣೆ ಹೆಚ್ಚಳ ಎಂದ ಸಚಿವ ಸುಧಾಕರ್

Sudhakar On Covid: ದೇಶದಲ್ಲಿ ಹೆಚ್ಚಿದ ಕೋವಿಡ್ ಕೇಸ್​: ರಾಜ್ಯದಲ್ಲೂ ತಪಾಸಣೆ ಹೆಚ್ಚಳ ಎಂದ ಸಚಿವ ಸುಧಾಕರ್

HT Kannada Desk HT Kannada

Apr 03, 2023 08:41 PM IST

google News

ಆರೋಗ್ಯ ಸಚಿವ ಡಾ. ಕೆ ಸುಧಾಕರ್

    • ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಸ್ಥಿತಿಗತಿ ಗಮನಿಸಿ ರಾಜ್ಯದಲ್ಲೂ ತಪಾಸಣೆ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.
ಆರೋಗ್ಯ ಸಚಿವ ಡಾ. ಕೆ ಸುಧಾಕರ್
ಆರೋಗ್ಯ ಸಚಿವ ಡಾ. ಕೆ ಸುಧಾಕರ್

ಬೆಂಗಳೂರು: ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಸ್ಥಿತಿಗತಿ ಗಮನಿಸಿ ರಾಜ್ಯದಲ್ಲೂ ತಪಾಸಣೆ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.

ಕೋವಿಡ್ ಸ್ಥಿತಿಗತಿ ಮತ್ತು ಬೇಸಿಗೆ ಸಂದರ್ಭದಲ್ಲಿ ಜನರ ರಕ್ಷಣೆ ಬಗ್ಗೆ ಈಗಾಗಲೇ ಸಲಹೆ ಕೊಡಲಾಗಿದೆ. ದೇಶದ ಪರಿಸ್ಥಿತಿ ಗಮನಿಸಿದರೆ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಜೊತೆ ಮಾತನಾಡಿ ರಾಜ್ಯದಲ್ಲಿ ತಪಾಸಣೆ ಹೆಚ್ಚು ಮಾಡಿದ್ದೇವೆ ಎಂದು ಹೇಳಿದರು.

ಬಿಜೆಪಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿಯಿಂದ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ತಪಾಸಣೆ ಜಾಸ್ತಿ ಮಾಡಿದ್ದೇವೆ. ಮೂರನೇ ಡೋಸ್ ಪಡೆದಿಲ್ಲದವರು ಬೇಗ ಲಸಿಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿರೀಕ್ಷೆಗೆ ಮೀರಿ ತಾಪಮಾನ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಎಳೆನೀರು, ಮಜ್ಜಿಗೆ, ತಂಪು ಪಾನೀಯ ಕುಡಿಯಬೇಕು. ಬೆಳಗ್ಗೆ 11-12 ರಿಂದ ಮಧ್ಯಾಹ್ನ 3ರ ವರೆಗೆ ಬಿಸಿಲಿನಲ್ಲಿ ಜಾಸ್ತಿ ಇರಬಾರದು ಎಂದು ಅರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಏಪ್ರಿಲ್ ಅಲ್ಲೇ ಈ ರೀತಿ ಆದರೆ ಮೇ ವೇಳೆಗೆ ಇನ್ನೂ ಬಿಗಡಾಯಿಸಬಹುದು. ಅಗತ್ಯ ಇದ್ದರೆ ಒ.ಆರ್.ಎಸ್ ಪ್ಯಾಕೆಟ್ಸ್ ಇಟ್ಟು ಕೊಳ್ಳಬೇಕು. ತಾಪಮಾನ ಹೆಚ್ಚಳದ ಕುರಿತು ಹಿರಿಯ ಅಧಿಕಾರಿಗಳ ಜೊತೆ ಕೂಡ ಈಗಾಗಲೇ ಮಾತನಾಡಿದ್ದೇನೆ ಎಂದು ಹೇಳಿದರು.

ಇನ್ನು, ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಪ್ರತಿನಿಧಿಗಳ ಜೊತೆ ಸಮಾಲೋಚನೆಯಲ್ಲಿ ಬಿಜೆಪಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿ ಪರವಾಗಿ ಸಲಹೆ ಪಟ್ಟಿಯನ್ನು ಸಚಿವ ಸುಧಾಕರ್ ಸ್ವೀಕರಿಸಿದರು. ಎಲ್ಲಾ ವರ್ಗದವರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಪಡೆದು ಪ್ರಣಾಳಿಕೆ ರೂಪಿಸಲಾಗುತ್ತಿದೆ. ಚುನಾವಣೆ ಬಳಿಕ ಸರ್ಕಾರ ರಚನೆ ಮಾಡಿದಾಗ ಮುಂಬರುವ 5 ವರ್ಷಗಳಲ್ಲಿ ಏನೆಲ್ಲಾ ಅನುಷ್ಠಾನಕ್ಕೆ ತರಬೇಕು, ಅದು ಕಾರ್ಯ ಸಾಧುವೇ ಎನ್ನುವುದನ್ನು ಗಮನಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದರು.

ಇಡೀ ದೇಶದಲ್ಲಿ ಬ್ರೇಕ್‌ಫಾಸ್ಟ್ ಪಾರಂಪರೆ ಆರಂಭವಾಗಿದ್ದು ಉಡುಪಿಯಿಂದ. ಎಲ್ಲಾ ನಗರಗಳಲ್ಲೂ ಸಾವಿರಾರು ದರ್ಶಿನಿಗಳಿವೆ. ಕೋವಿಡ್ ಸಮಯದಲ್ಲಿ ಉಚಿತವಾಗಿ ಹಲವಾರು ಜನರ ಹೊಟ್ಟೆ ತುಂಬಿಸಿ ದೊಡ್ಡ ಕಾರ್ಯ ಮಾಡಿದೆ. ಹೀಗಾಗಿ ಈ ಉದ್ಯಮ ವಲಯ ಕೊಟ್ಟಿರುವ ಸಲಹೆಗಳು ಅತ್ಯಮೂಲ್ಯ. ಹೋಟೆಲ್‌ಗಳಿಗೆ ಪಾರದರ್ಶಕತೆಯಿಂದ ಲೈಸನ್ಸ್ ಕೊಡುವ ಕೆಲಸ ನಡೆಯಲಿದ್ದು, ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಹಾಗಾಗಿ ಏಕಗವಾಕ್ಷಿ ಪರವಾನಿಗೆ ಕೊಡಲು ಸಾಧ್ಯವಿದೆಯೋ ಎನ್ನುವುದನ್ನು ಪ್ರಣಾಳಿಕೆ ಸಮಿತಿ ಚರ್ಚಿಸಿ, ಅದನ್ನು ಜಾರಿ ಮಾಡುವ ಬಗ್ಗೆ ಚಿಂತಿಸಲಿದೆ ಎಂದರು.

ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ಲಾಕ್‌ಡೌನ್ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಿತ್ತು. ಆದಾಯ ಕಡಿಮೆಯಿದ್ದರೂ ಸರ್ಕಾರಿ ನೌಕರರಿಗೆ ಒಂದು ರೂ. ವೇತನ ಕಡಿಮೆ ಮಾಡದ ದೇಶದ ಏಕಮಾತ್ರ ರಾಜ್ಯ ಕರ್ನಾಟಕ. ಅತಿವೃಷ್ಠಿ ಸಮಸ್ಯೆ ಎಡಬಿಡದೆ ಕಾಡಿದರೂ ಅನೇಕ ಸವಾಲುಗಳ ಮಧ್ಯೆ ಕರ್ನಾಟಕ ಭಾರತದಲ್ಲೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿ ನಂ. 2 ಸ್ಥಾನ ಪಡೆದ ರಾಜ್ಯವಾಗಿದೆ. ಮುಂದಿನ ಬಾರಿಯೂ ಬಿಜೆಪಿಗೆ ಮತ ನೀಡಿ ಅಭಿವೃದ್ಧಿ ಕಾರ್ಯ ಮಾಡಲು ಆಶೀರ್ವಾದ ಮಾಡಿ ಎಂದು ಕೋರಿದರು.

ಸಂವಾದದಲ್ಲಿ ಹೋಟೆಲ್ ಮಾಲೀಕರ ಬೇಡಿಕೆಗಳು:

1. ಬೆಂಗಳೂರು ನಗರದಲ್ಲಿ ಹೋಟೆಲ್ ಬರುವವರಿಗೆ ಟ್ರಾಫಿಕ್ ಕಿರಿ ಕಿರಿ ಉಂಟಾಗದಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.

2. ಯಾವುದೇ ಲೈಸೆನ್ಸ್ ಪಡಿಯಲು ಆನ್ ಲೈನ್ ವ್ಯವಸ್ಥೆ ಮಾಡಬೇಕು.

3. ಫುಡ್ ಸ್ಟ್ರೀಟ್ ವೆಂಡರ್ ಗಳಿಗೆ ಸರ್ಕಾರದಿಂದ ನಿಯಮಗಳನ್ನು ಹಾಕಬೇಕು

4. ಸರ್ಕಾರದಿಂದ 5% ಜಿ.ಎಸ್.ಟಿ ಹೊಟೇಲ್ ಉದ್ಯಮಕ್ಕೆ ಇದ್ದು ಆದರೆ ಒಟ್ಟಾರೆಯಾಗಿ 18% ಗಿಂತ ಹೆಚ್ಚು ಜಿ.ಎಸ್.ಟಿ ಕಟ್ಟುತ್ತಿದ್ದೇವೆ. ಈ ಹೊರೆಯನ್ನು ಕಡಿತಗೊಳಿಸಲು ಒತ್ತಾಯ.

5. ಗ್ಯಾಸ್ ದರವನ್ನು 200 ರಿಂದ 300 ರೂಪಾಯಿ ಕಡಿಮೆ ಮಾಡಬೇಕೆಂಬ ಮನವಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ