logo
ಕನ್ನಡ ಸುದ್ದಿ  /  ಕರ್ನಾಟಕ  /  Ct Ravi: ರಾಜ್ಯದ ಆರ್ಥಿಕ ಸ್ಥಿತಿಗತಿಯ ಶ್ವೇತಪತ್ರ ಹೊರಡಿಸಿ; ಶ್ರೀಲಂಕಾ, ಪಾಕಿಸ್ತಾನದಂತೆ ಆರ್ಥಿಕ ದಿವಾಳಿಯಾಗದಿರಲಿ; ಸಿಎಂಗೆ ಸಿಟಿ ರವಿ ಮನವಿ

CT Ravi: ರಾಜ್ಯದ ಆರ್ಥಿಕ ಸ್ಥಿತಿಗತಿಯ ಶ್ವೇತಪತ್ರ ಹೊರಡಿಸಿ; ಶ್ರೀಲಂಕಾ, ಪಾಕಿಸ್ತಾನದಂತೆ ಆರ್ಥಿಕ ದಿವಾಳಿಯಾಗದಿರಲಿ; ಸಿಎಂಗೆ ಸಿಟಿ ರವಿ ಮನವಿ

HT Kannada Desk HT Kannada

Jun 03, 2023 04:24 PM IST

google News

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಟಿ ರವಿ

    • ಆರೋಗ್ಯ, ಶಿಕ್ಷಣದಂಥ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಲು ಸಾಧ್ಯವಿಲ್ಲ. ಇದೆಲ್ಲದಕ್ಕೂ ಅನುದಾನ ಮೀಸಲಿಡಲು ಎಷ್ಟು ಹಣ ಬೇಕು? ಅದನ್ನು ಕ್ರೋಡೀಕರಿಸುವುದು ಹೇಗೆ? ಇದಕ್ಕೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು ಎಂದು ಸಿಟಿ ರವಿ (CT Ravi) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಸೂಚಿಸಿದ್ದಾರೆ. 
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಟಿ ರವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಟಿ ರವಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರು ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (BJP National General Secretary CT Ravi) ಅವರು ಮನವಿ ಮಾಡಿದರು.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ ಐದು ಗ್ಯಾರಂಟಿಗಳನ್ನು ಈಡೇರಿಸುವ ಸಂಪುಟದ ನಿರ್ಣಯದ ಜೊತೆಗೆ ಯಾವಾಗಿಂದ ಜಾರಿ ಆಗಲಿದೆ ಎಂಬುದನ್ನು ತಿಳಿಸಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಕುಟುಂಬಕ್ಕೂ ವ್ಯಕ್ತಿಗೋ

ಪ್ರಣಾಳಿಕೆಯಲ್ಲಿ ಮುದ್ರಿಸಿರುವಂತೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಉಚಿತ ಎಂದಿದ್ದೀರಿ. ಅದು ಪ್ರತಿ ಕುಟುಂಬಕ್ಕೆ ಅಲ್ಲ; ನಾವು ಕೊಟ್ಟ ಮಾತಿನಂತೆ ನಡೆಯುವವರು ಎಂದಿದ್ದೀರಿ. ಈಗ ನೀವು ಕುಟುಂಬಕ್ಕೆ 10 ಕೆಜಿ ಅನ್ನುತ್ತೀರಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಜಮೀರ್ ಅಹ್ಮದ್ ಅವರು ಮನೆಮನೆ ಭೇಟಿ ವೇಳೆ ಮನೆಯಲ್ಲಿ 7 ಜನರಿದ್ದರೆ 70 ಕೆಜಿ ಅಕ್ಕಿ ಎಂದಿದ್ದ ವಿಡಿಯೋ ನೋಡಿದ್ದೇನೆ. ಈಗ ನೀವು ಪ್ರತಿ ಕುಟುಂಬಕ್ಕೆ 10 ಕೆಜಿ ಎನ್ನುತ್ತಿದ್ದೀರಿ. ಅದು ವ್ಯಕ್ತಿಗೋ ಕುಟುಂಬಕ್ಕೋ ಎಂದು ಸ್ಪಷ್ಟಪಡಿಸಿ ಎಂದು ಕೇಳಿದರು.

ದಿವಾಳಿ ಆಗದಿರಲಿ

ವೆನಿಜುವೆಲ ಎಂಬ ರಾಷ್ಟ್ರ ಈ ರೀತಿ (ಉಚಿತ) ಕೊಡುತ್ತ ಕೊಡುತ್ತ ದಿವಾಳಿ ಆಗಿ ಹೋಗಿದೆ. ಹಾಗೇ ನಮ್ಮ ರಾಜ್ಯ ಆಗದಿರಲಿ ಎಂದು ಆಶಿಸಿದ ಸಿಟಿ ರವಿ, ನೀವು ಬುದ್ಧಿವಂತರಿದ್ದೀರಿ. ಹಣ ಜೋಡಿಸುವ ಸಾಮರ್ಥ್ಯ ಇದೆ ಎಂದರು. ಅಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಸಾಲದ ಮೇಲೆ ಕಟ್ಟುವ ಬಡ್ಡಿ ಎಷ್ಟು

ನಮ್ಮ ರಾಜ್ಯದ ಸಂಪನ್ಮೂಲ, ಸಾಲ, ಮೂಲಸೌಕರ್ಯದ ಮೇಲೆ ಹೂಡಿಕೆ ಎಷ್ಟು? ಸಾಲದ ಮೇಲೆ ಕಟ್ಟುವ ಬಡ್ಡಿ ಎಷ್ಟು? ಸಂಬಳ, ನಿವೃತ್ತಿ ವೇತನಕ್ಕೆ ಎಷ್ಟು ಹಣ ವಿನಿಯೋಗ ಆಗುತ್ತಿದೆ? ಎಂದು ಪ್ರಶ್ನಿಸಿದ ಅವರು, ಮೂಲ ಸೌಕರ್ಯದ ಮೇಲೆ ಹೂಡಿಕೆ ಮೂಲಕ ಆದಾಯ ಕ್ರೋಡೀಕರಣ ಸಾಧ್ಯವಿದೆ ಎಂದು ನೆನಪಿಸಿದರು. ಇಲ್ಲವಾದರೆ ಯೋಜನೆಗಳ ಅನುಷ್ಠಾನ ಸಾಧ್ಯವಿಲ್ಲ ಎಂದು ತಿಳಿಸಿದರು.

ಚಾಲ್ತಿಯಲ್ಲಿರುವ ಯೋಜನೆಗಳನ್ನು ಮುಂದುವರೆಸುತ್ತೀರಾ?

ಈಗಾಗಲೇ ಚಾಲ್ತಿಯಲ್ಲಿ ಇರುವ ರೈತರಿಗೆ 5 ಲಕ್ಷ ಬಡ್ಡಿರಹಿತ ಸಾಲ, ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ ಹಣದ ಜೊತೆ ರಾಜ್ಯದಿಂದ 4 ಸಾವಿರ ಕೊಡುತ್ತಿರುವುದು, ಹಾಲಿಗೆ ಪ್ರತಿ ಲೀಟರ್​​ಗೆ 5 ರೂ. ಸಬ್ಸಿಡಿ.. ಹೀಗೆ ಹಲವು ಚಾಲ್ತಿಯಲ್ಲಿರುವ ಯೋಜನೆಗಳಿವೆ. ಅವನ್ನು ಮುಂದುವರಿಸುತ್ತೀರಾ? ಇಲ್ಲವೇ? ಎಂದು ಸ್ಪಷ್ಟಪಡಿಸಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಕ್ರೂಡೀಕರಣ ಹೇಗೆ?

ಆರೋಗ್ಯ, ಶಿಕ್ಷಣದಂಥ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಲು ಸಾಧ್ಯವಿಲ್ಲ. ಇದೆಲ್ಲದಕ್ಕೂ ಅನುದಾನ ಮೀಸಲಿಡಲು ಎಷ್ಟು ಹಣ ಬೇಕು? ಅದನ್ನು ಕ್ರೋಡೀಕರಿಸುವುದು ಹೇಗೆ? ಯಾವ ಮೂಲದಿಂದ? ಇದಕ್ಕೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು. ಆಗ ಮಾತ್ರ ಈ ಯೋಜನೆ ತಾತ್ಕಾಲಿಕವೇ? ನಿರಂತರವಾಗಿ ಕೊಡಲು ಸಾಧ್ಯವೇ? ಅಷ್ಟು ಹಣ ನಮ್ಮಲ್ಲಿದೆಯೇ? ಇದೆಲ್ಲವನ್ನೂ ತಿಳಿಯಲು ಸಾಧ್ಯವಾಗಲಿದೆ ಎಂದರು.

ಈ ಶ್ವೇತಪತ್ರದಿಂದ ತೆರಿಗೆದಾರರಿಗೆ ಸ್ಪಷ್ಟತೆ ಲಭಿಸಲಿದೆ. ಭೀತಿ ದೂರವಾಗಲಿದೆ. ಸಾಲ ಮಾಡುವಿರಾ? ಹೊಸ ತೆರಿಗೆ ಹಾಕುವಿರಾ? ಖರ್ಚು ಉಳಿತಾಯ ಮಾಡಿ ಭರಿಸುವಿರಾ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ಆರ್ಥಿಕ ಸಂಕಷ್ಟದ ಕುರಿತು ಎಚ್ಚರವಿರಲಿ

ಗ್ಯಾರಂಟಿಗಳ ಅನುಷ್ಠಾನದ ಹಂತದಲ್ಲಿ ಲೋಪದೋಷ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತದ ಮೇಲಿದೆ ಎಂದು ಎಚ್ಚರಿಸಿದರು. ಮೂಲಸೌಕರ್ಯದ ಹೂಡಿಕೆಯಲ್ಲಿ ಕೊರತೆಯಾದರೆ, ಅದರ ಪರಿಣಾಮ ಉದ್ಯೋಗ ಸೃಷ್ಟಿಯ ಮೇಲೆ ಆಗಲಿದೆ. ಆದಾಯ ಗಳಿಕೆಯೂ ಕಡಿಮೆ ಆಗಲಿದೆ. ಇದರ ಕಡೆಗೂ ಲಕ್ಷ್ಯ ಇರಲಿ ಎಂದು ಸಿಟಿ ರವಿ ಅವರು ತಿಳಿಸಿದರು.

ಸ್ವಾವಲಂಬಿ ಆಗುವ ಯೋಜನೆಗಳಿಗೆ ಒತ್ತು ಕೊಡದಿದ್ದರೆ ಮುಂದೊಂದು ದಿನ ನಮ್ಮನ್ನು ಅದು ವೆನಿಜುವೆಲ, ಶ್ರೀಲಂಕಾ, ಪಾಕಿಸ್ತಾನದಂಥ ಆರ್ಥಿಕ ಸಂಕಷ್ಟದ ಪರಿಸ್ಥಿತಿಗೆ ದೂಡಬಹುದು. ಹಾಗೆ ಆಗದಿರಲು ನಾವು ಏಕ್ ದಿನ್ ಕಾ ಸುಲ್ತಾನ್ ಆಗಬಾರದು ಎಂದು ಎಚ್ಚರಿಕೆ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ