ಕನ್ನಡ ಸುದ್ದಿ  /  Karnataka  /  Siddaramaiah On Congress Guarantee Free Electricity Gruha Lakshmi Gruha Jyoti Annabhagya Free Bus Pass For Women Mgb

Siddaramaiah On Guarantee: ಜುಲೈ 1 ರಿಂದ ವಿದ್ಯುತ್ ಉಚಿತ; ಮನೆ ಯಜಮಾನಿಗೆ 2000 ರೂ, ಅನ್ನಭಾಗ್ಯ, ಉಚಿತ ಬಸ್​, ಯುವನಿಧಿ ಯಾವಾಗ ಆರಂಭ?

Congress Guarantee: ಕಾಂಗ್ರೆಸ್​​ನ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವನಿಧಿಯನ್ನು ಜಾರಿ ಮಾಡುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾವ ಯೋಜನೆ ಯಾವಾಗಿನಿಂದ ಆರಂಭ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಕಾಂಗ್ರೆಸ್​ ಗ್ಯಾರಂಟಿ ಕುರಿತು ಸಿದ್ದರಾಮಯ್ಯ ಸುದ್ದಿಗೋಷ್ಠಿ
ಕಾಂಗ್ರೆಸ್​ ಗ್ಯಾರಂಟಿ ಕುರಿತು ಸಿದ್ದರಾಮಯ್ಯ ಸುದ್ದಿಗೋಷ್ಠಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್​ ನೀಡಿದ ಗ್ಯಾರಂಟಿಗಳನ್ನು (Congress Guarantee) ತಪ್ಪದೇ ಈಡೇರಿಸುವ ಕುರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದು, ಜನರ ಗೊಂದಲಗಳಿಗೆ ತೆರೆಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ಜುಲೈ 1 ರಿಂದ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ನೀಡುತ್ತೇವೆ. ಜುಲೈವರೆಗೆ ದಾಖಲೆ ಸಂಗ್ರಹಿಸಿ ಮನೆ ಯಜಮಾನಿಗೆ 2000 ರೂ. ಸಹಾಯಧನ ವಿತರಣೆಯನ್ನು ಸ್ವಾತಂತ್ರ್ಯೋತ್ಸವದಂದು (ಆಗಸ್ಟ್ 15) ಆರಂಭಿಸಲಿದ್ದೇವೆ. ಜೂನ್ 11ಕ್ಕೆ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಯೋಜನೆಗೆ ಚಾಲನೆ ನೀಡುತ್ತೇವೆ, ಜುಲೈ 1 ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುತ್ತೇವೆ, ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಯುವನಿಧಿ ಯೋಜನೆ ಸೇರಿದಂತೆ ಷರತ್ತುಗಳೊಂದಿಗೆ ಪಂಚ ಗ್ಯಾರಂಟಿಗಳ ಜಾರಿ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಗೃಹಜ್ಯೋತಿ

ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್​ ವಿದ್ಯುತ್​ ಉಚಿತವಾಗಿ ನೀಡಲಾಗುವುದು. ಯಾರು 200 ಯುನಿಟ್​ ಒಳಗಡೆ ವಿದ್ಯುತ್​ ಬಳಸುತ್ತಾರೆ ಅವರು ಬಿಲ್​ ಕಟ್ಟಬೇಕಿಲ್ಲ. ಜುಲೈ 1 ರಿಂದ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟಪಡಿಸಿದರು.

ಯಾರು ಎಷ್ಟು ವಿದ್ಯುತ್ ಬಳಸ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಮೇಲೆ ಶೇ.10 ರಷ್ಟರವರೆಗಿನ ವಿದ್ಯುತ್ ಉಚಿತ. ಜು.1 ರಿಂದ ಆಗಸ್ಟ್ ವರೆಗಿನ ಖರ್ಚಿಗೆ ಇದು ಲೆಕ್ಕ. ಜುಲೈನಿಂದ ಮಾಡಿರುವ ಖರ್ಚಿನ ಬಿಲ್ ಆಗಸ್ಟ್ ನಲ್ಲಿ ಬರಲಿದೆ. ಜುಲೈವರೆಗಿನ ಬಾಕಿ ಉಳಿಸಿಕೊಂಡವರಿಗೆ ಸಮಯ ಕೊಡುತ್ತೇವೆ ಅವರೇ ಕಟ್ಟಬೇಕು. ಸರ್ಕಾರ ಕಟ್ಟಲ್ಲ.

ಗೃಹಲಕ್ಷ್ಮಿ

ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಂತೆ ಪ್ರತಿ ತಿಂಗಳು ಮನೆಯ ಒಡತಿಗೆ 2 ಸಾವಿರ ರೂಪಾಯಿ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿ, ಮನೆ ಯಜಮಾನಿಯ ಅಕೌಂಟ್​​ಗೆ ತಿಂಗಳಿಗೆ 2000 ಸಾವಿರ ರೂ. ಹಾಕುತ್ತೇವೆ. ಇದಕ್ಕಾಗಿ ಅವರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಜೂನ್​ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಸಮಯವಾಕಾಶ ನೀಡಲಾಗುವುದು. ಮನೆ ಯಜಮಾನಿ ಕಡ್ಡಾಯವಾಗಿ ಆಧಾರ್​ ಕಾರ್ಡ್​​, ಬ್ಯಾಂಕ್​ ಅಕೌಂಟ್​ ಪಾಸ್​ಬುಕ್​ ಝೆರಾಕ್ಸ್​ ನೀಡಬೇಕು. ಎಪಿಎಲ್​ ಮತ್ತು ಬಿಪಿಎಲ್​​ ಕಾರ್ಡ್​ದಾರರಿಗೂ ಕೂಡ ಈ ಯೋಜನೆ ಅನ್ವಯವಾಗುತ್ತದೆ. ಜುಲೈವರೆಗೆ ದಾಖಲೆ ಸಂಗ್ರಹಿಸಿ ಮನೆ ಯಜಮಾನಿಗೆ 2000 ರೂ. ಸಹಾಯಧನ ವಿತರಣೆಯನ್ನು ಸ್ವಾತಂತ್ರ್ಯೋತ್ಸವದಂದು (ಆಗಸ್ಟ್ 15) ಆರಂಭಿಸಲಿದ್ದೇವೆ. ಎಂದು ಹೇಳಿದ್ಧಾರೆ.

ಇದಕ್ಕೆ ಬೇರಾವುದೇ ಷರತ್ತುಗಳಿಲ್ಲ. ಸಾಮಾಜಿಕ ಭದ್ರತಾ ಸೇವೆಗಳಡಿ ಪಿಂಚಣಿಯ ಜೊತೆಗೆ ಇದೂ ಸಿಗಲಿದೆ. ಆದರೆ, ಸರ್ಕಾರದ ನಿವೃತ್ತ ನೌಕರರ ಪಿಂಚಣಿ ಪಡೆಯುತ್ತಿರುವವರಿಗೆ ಇಲ್ಲ. ತಾಂತ್ರಿಕ ಕಾರಣದಿಂದ ಎರಡು ತಿಂಗಳು ಗೃಹ ಲಕ್ಷ್ಮಿ ಯೋಜನೆ ವಿಳಂಬವಾಗಲಿದೆ. ಇದಕ್ಕಾಗಿ ಪ್ರತ್ಯೇಕ ಸಾಫ್ಟ್ ವೇರ್ ರೂಪಿಸುತ್ತಿದ್ದೇವೆ ಎಂದರು.

ಅನ್ನಭಾಗ್ಯ

ಜುಲೈ 1 ರಿಂದ ಬಿಪಿಎಲ್​ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುತ್ತೇವೆ. ನಾವು 7 ಕೆ.ಜಿ. ಕೊಡುತ್ತಿದ್ದೆವು. ಈಗ ಅದನ್ನು 5 ಕೆ.ಜಿ.ಗೆ ಇಳಿಸಿದ್ದಾರೆ. 10 ಕೆ.ಜಿ. ಆಹಾರಧಾನ್ಯ ಕೊಡುವುದಾಗಿ ನಾವೀಗ ಹೇಳಿದ್ದೆವು. ಈಗಾಗಲೇ ಆಹಾರಧಾನ್ಯ ಸರಬರಾಜಾಗಿದ್ದು, ದಾಸ್ತಾನು ಇಲ್ಲ. ಹೀಗಾಗಿ ಜು.1 ರಿಂದ ಬಿಪಿಎಲ್ + ಅಂತ್ಯೋದಯ ಅನ್ನ ಕಾರ್ಡುದಾರರಿಗೆ ತಲಾ 10 ಕೆ.ಜಿ. ಅಕ್ಕಿ ಕೊಡುತ್ತೇವೆ. ನ್ಯಾಫೆಡ್ ಕೇಂದ್ರ, ಎನ್ ಸಿಸಿಎಫ್ ಎಲ್ಲಿಂದಲಾದರೂ ಸರಿ ತಂದು ಕೊಡುತ್ತೇವೆ ಎಂದು ಸಿಎಂ ತಿಳಿಸಿದರು.

ಉಚಿತ ಬಸ್​ ಪ್ರಯಾಣ

ಸಮಾಜದಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ. ಸ್ಥಾನಮಾನ ಪರಿಗಣಿಸದೆ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂ.11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್ ಪ್ರೆಸ್, (ಎಸಿ, ನಾನ್ ಎಸಿ ಸ್ಲೀಪರ್, ಲಕ್ಸ್ಯುರಿ, ರಾಜಹಂಸ ಬಸ್ ಹೊರತುಪಡಿಸಿ) ಉಚಿತ ಪ್ರಯಾಣ. ರಾಜ್ಯದ ಒಳಗಡೆಗೆ ಮಾತ್ರ ಅವಕಾಶ ಇರಲಿದೆ. ಕೆಎಸ್ಆರ್ಟಿಸಿಯಲ್ಲಿ ಶೇ.50 ರಷ್ಟು ಆಸನ ಮೀಸಲು. ಹೆಣ್ಣು ಮಕ್ಕಳಿಲ್ಲದಿದ್ದರೆ, ಗಂಡಸರು ಕುಳಿತು ಹೋಗಬಹುದು ಎಂದರು.

ಯುವನಿಧಿ

2022-23 ರಲ್ಲಿ ತೇರ್ಗಡೆ ಹೊಂದಿದ ವೃತ್ತಿಶಿಕ್ಷಣವೂ ಸೇರಿ ಎಲ್ಲ ಪದವೀಧರರು ನೋಂದಣಿ ಮಾಡಿಕೊಂಡ ದಿನದಿಂದ 24 ತಿಂಗಳ (2 ವರ್ಷ) ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ನೀಡಲಾಗುವುದು. ಅಷ್ಟರೊಳಗೆ ಉದ್ಯೋಗ ಪಡೆದವರು ಘೋಷಿಸಿಕೊಳ್ಳಬೇಕು. ಉದ್ಯೋಗ ಸಿಕ್ಕರೆ ನಿಧಿ ಸ್ಥಗಿತವಾಗಲಿದೆ. ಯುವಕ, ಯುವತಿ + ತೃತೀಯಲಿಂಗಿಗಳಿಗೂ ಅನ್ವಯ. ಜಾಯಿ, ಧರ್ಮ , ಲಿಂಗ ಬೇಧವಿಲ್ಲದೇ ಸಹಾಯನಿಧಿ ನೀಡಲಾಗುತ್ತದೆ. ಇದಕ್ಕೆ ಅರ್ಜಿ ಹಾಕಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.