ಧರ್ಮಸ್ಥಳ ಲಕ್ಷದೀಪೋತ್ಸವ 2024: ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ, 318 ವೈವಿಧ್ಯಮಯ ಮಳಿಗೆಗಳಲ್ಲಿ ಏನೇನಿದೆ?
Nov 26, 2024 05:20 PM IST
ಧರ್ಮಸ್ಥಳ ಲಕ್ಷದೀಪೋತ್ಸವ 2024: ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ
- ಧರ್ಮಸ್ಥಳ ಲಕ್ಷದೀಪೋತ್ಸವ 2024: ಲಕ್ಷದೀಪೋತ್ಸವ ಹಿನ್ನೆಲೆ ರಾಜ್ಯಮಟ್ಟದ 45ನೇ ವರ್ಷದ ವಸ್ತುಪ್ರದರ್ಶನ ಮಂಗಳವಾರ ಧರ್ಮಸ್ಥಳದಲ್ಲಿ ಆರಂಭಗೊಂಡಿದೆ. ಸುಮಾರು 318 ವೈವಿಧ್ಯಮಯ ಮಳಿಗೆಗಳು ಈ ವಾರಾಂತ್ಯದವರೆಗೆ ಇಲ್ಲಿರಲಿವೆ.
ಮಂಗಳೂರು: ಧರ್ಮಸ್ಥಳ ಲಕ್ಷದೀಪೋತ್ಸವ 2024 ಹಿನ್ನೆಲೆ ರಾಜ್ಯಮಟ್ಟದ 45ನೇ ವರ್ಷದ ವಸ್ತುಪ್ರದರ್ಶನ ಮಂಗಳವಾರ ಧರ್ಮಸ್ಥಳದಲ್ಲಿ ಆರಂಭಗೊಂಡಿದೆ. ಸುಮಾರು 318 ವೈವಿಧ್ಯಮಯ ಮಳಿಗೆಗಳು ಈ ವಾರಾಂತ್ಯದವರೆಗೆ ಇಲ್ಲಿರಲಿವೆ.
“ಜನರಿಗೆ ಮಾಹಿತಿ ಪಡೆಯಲು, ವಿಚಾರಗಳನ್ನು ತಿಳಿದುಕೊಳ್ಳಲು ಹಾಗೂ ಆನಂದಿಸಲು ಅವಕಾಶ ಮಾಡಿಕೊಡುವ ವಸ್ತು ಪ್ರದರ್ಶನದಲ್ಲಿ ಭಕ್ತಿಯ ಜತೆ ಮಾಹಿತಿಯು ಸಿಗುತ್ತದೆ . ಮಾಹಿತಿ ಜತೆ ಮನರಂಜನೆ, ತಿಂಡಿ ತಿನಿಸು ಸವಿಯಲು ಇಲ್ಲಿ ಅವಕಾಶವಿದೆ. ಜ್ಞಾನಕ್ಕೆ ಬೇಕಾದ ಅನೇಕ ವಿಚಾರಗಳು ಇಲ್ಲಿ ಸಿಗಲಿವೆ. ಸಿರಿ,ಯೋಜನೆ, ಬ್ಯಾಂಕ್, ಸ್ವ ಉದ್ಯೋಗ, ಸರಕಾರಿ,ಮೊದಲಾದ ವಿಶೇಷ ಮಳಿಗೆಗಳು ಇವೆ. ಅನೇಕ ಉಪಯೋಗಿ ಅಂಶಗಳನ್ನು ವಸ್ತು ಪ್ರದರ್ಶನದಿಂದ ಪಡೆದುಕೊಳ್ಳಲು ಸಾಧ್ಯ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
318 ಮಳಿಗೆಗಳು ಯಾವುವು?
ಸರಕಾರಿ ಮಳಿಗೆಗಳು, ಬ್ಯಾಂಕ್, ಜೀವ ವಿಮೆ, ಶಿಕ್ಷಣ ಸಂಸ್ಥೆ, ಅಂಚೆ ಇಲಾಖೆ, ಪುಸ್ತಕ ಮಳಿಗೆಗಳು, ಗ್ರಾಮಾಭಿವೃದ್ಧಿ,ಸಿರಿ ಉತ್ಪನ್ನಗಳು, ವಾಹನ, ಕೃಷಿ ಉಪಕರಣ, ರುಡ್ ಸೆಟ್, ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ, ಎಸ್ ಡಿ ಎಂ ಆಸ್ಪತ್ರೆ, ನರ್ಸರಿ ಕರಕುಶಲ ವಸ್ತುಗಳು, ತರಕಾರಿ ಬೀಜಗಳು, ವಸ್ತ್ರ ಮಳಿಗೆಗಳು ,ತಿಂಡಿ ತಿನಿಸುಗಳು, ಗೀಸರ್, ಅಗರಬತ್ತಿ, ಆಯುರ್ವೇದಿಕ್ ಉತ್ಪನ್ನಗಳು, ಸೆಗಣಿಯಿಂದ ತಯಾರಾದ ಪೈಂಟ್, ಅಕ್ವೇರಿಯಂ, ಸಿರಿಧಾನ್ಯ ತಾಮ್ರದ ವಸ್ತುಗಳು, ಪೂಜಾ ಸಾಮಗ್ರಿಗಳ ಮಳಿಗೆಗಳು ಇಲ್ಲಿವೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಸಂಸ್ಥೆ, ಇಲಾಖೆ, ತೋಟಗಾರಿಕೆ, ಪಶು ವೈದ್ಯಕೀಯ ಇಲಾಖೆ, ವಿಮೆ, ಬ್ಯಾಂಕ್ ಮೊದಲಾದ ಮಳಿಗೆಗಳಿದ್ದು ಇಲ್ಲಿ ಆಗಮಿಸುವ ಜನರು ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಸ್ತು ಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಉದ್ಘಾಟನಾ ಕಾರ್ಯಕ್ರಮ
ಯುನಿಸೆಫ್ ಹೈದರಾಬಾದ್ ವಿಭಾಗ ಮುಖ್ಯಸ್ಥ ಡಾ. ಝೆಲಾಲೆಮ್ ಬಿರಹಾನ್ ಟಾಫ್ಸಿ ವಸ್ತು ಪ್ರದರ್ಶನ ಉದ್ಘಾಟಿಸಿದ್ದಾರೆ. "ಹಲವಾರು ವೈವಿಧ್ಯಗಳನ್ನು ಹೊಂದಿರುವ ವಸ್ತು ಪ್ರದರ್ಶನ ಜನತೆಗೆ ಉತ್ತಮವಾದ ಮಾಹಿತಿಗಳನ್ನು ನೀಡಲಿದೆ" ಎಂದವರು ಶ್ಲಾಘಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಪುತ್ತೂರು ಅಂಚೆ ಅಧೀಕ್ಷಕ ಹರೀಶ್ ಜಿ., ಕರ್ನಾಟಕ ಬ್ಯಾಂಕ್ ಜಿಎಂ ವೆಂಕಟೇಶ್ವರನ್, ಯುನಿಸೆಫ್ ನ ವೆಂಕಟೇಶನ್ ಅರಳಿ ಕಟ್ಟೆ, ಎಸ್ ಡಿ ಎಂ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಪ್ರಿನ್ಸಿಪಾಲ್ ಪ್ರಶಾಂತ ಶೆಟ್ಟಿ, ಎಸ್ ಡಿ ಎಂ ಸ್ವಾಯತ್ತ ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ .ಎ. ಕುಮಾರ್ ಹೆಗ್ಡೆ, ಎಸ್‌ಡಿಎಂ ಆಸ್ಪತ್ರೆ ಎಂ ಡಿ ಎಂ.ಜನಾರ್ದನ್, ಸಿರಿ ಸಂಸ್ಥೆ ಎಂ ಡಿ ಕೆ.ಎಸ್. ಜನಾರ್ದನ್,ಎಸ್ ಡಿ ಎಂ ವಸತಿ ಕಾಲೇಜಿನ ಪ್ರಿನ್ಸಿಪಾಲ್ ಸುನಿಲ್ ಪಂಡಿತ್, ಪಿಜಿ ವಿಭಾಗದ ಡೀನ್ ವಿಶ್ವನಾಥ ಪಿ, ಜನಜಾಗೃತಿ ವೇದಿಕೆಯ ವಿವೇಕ ವಿನ್ಸೆಂಟ್ ಪಾಯ್ಸ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವಿ.ಶೆಟ್ಟಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಕೆ.ಎಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿ ಡಿ ಪಿಒ ಪ್ರಿಯಾ ಆಗ್ನೆಸ್, ವಸ್ತು ಪ್ರದರ್ಶನ ಮೇಲ್ವಿಚಾರಕ ಯತೀಶ್ ಕೆ.ಬಳಂಜ ಮತ್ತಿತರರು ಉಪಸ್ಥಿತರಿದ್ದರು. ಎಸ್ ಡಿಎಂ ಕಲಾವಿಭಾಗದ ಡೀನ್ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ಹರೀಶ್ ಮಾಂಬಾಡಿ, ಮಂಗಳೂರು