logo
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಗೆಡ್ಡೆ-ಗೆಣಸು, ಸೊಪ್ಪು ಮೇಳ; ಏನಿದರ ವಿಶೇಷ?

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಗೆಡ್ಡೆ-ಗೆಣಸು, ಸೊಪ್ಪು ಮೇಳ; ಏನಿದರ ವಿಶೇಷ?

Jayaraj HT Kannada

Oct 23, 2024 03:27 PM IST

google News

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಗೆಡ್ಡೆ-ಗೆಣಸು, ಸೊಪ್ಪು ಮೇಳ

    • 2025ರ ಜನವರಿ 4 ಮತ್ತು 5ರಂದು ಮಂಗಳೂರು ನಗರದಲ್ಲಿ ರಾಜ್ಯ ಮಟ್ಟದ ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಗೆಣಸು, ಸುವರ್ಣ ಗೆಡ್ಡೆ ಮೊದಲಾದ ಗೆಡ್ಡೆಗಳನ್ನು ಬೆಳೆಯುವತ್ತ ಕೃಷಿಕರು ಒತ್ತು ನೀಡುತ್ತಿದ್ದಾರೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಗೆಡ್ಡೆ-ಗೆಣಸು, ಸೊಪ್ಪು ಮೇಳ
ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಗೆಡ್ಡೆ-ಗೆಣಸು, ಸೊಪ್ಪು ಮೇಳ

ಮಂಗಳೂರು: ಮನುಷ್ಯನ ಆರೋಗ್ಯದ ಸಮತೋಲನ ಕಾಪಾಡುವಲ್ಲಿ ನಮ್ಮ ಆಹಾರದಲ್ಲಿ ತರಕಾರಿ, ಹಣ್ಣು-ಹಂಪಲುಗಳ ಜತೆಗೆ ಗೆಡ್ಡೆ ಗೆಣಸು ಮತ್ತು ಸೊಪ್ಪುಗಳ ಪಾತ್ರವೂ ಪ್ರಮುಖ. ಈ ಗೆಡ್ಡೆ ಗೆಣಸುಗಳ ವೈವಿಧ್ಯತೆ, ಸೊಪ್ಪುಗಳ ನಾನಾ ವಿಧಗಳ ಬಗ್ಗೆ ಅರಿವು ಹಾಗೂ ಪರಿಚಯ ನೀಡುವ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳವನ್ನು ಆಯೋಜಿಸಲಾಗಿದೆ. ಹೀಗಾಗಿ ಜಿಲ್ಲೆಯ ರೈತರಿಂದ ಭರದ ಸಿದ್ಧತೆ ಆರಂಭಗೊಂಡಿವೆ. 2025ರ ಜನವರಿ 4 ಮತ್ತು 5ಕ್ಕೆ ರಾಜ್ಯಮಟ್ಟದ ಈ ಮೇಳ ಮಂಗಳೂರಿನಲ್ಲಿ ನಡೆಯಲಿದೆ. ಮಂಗಳೂರಿನ ಊರ್ವ ಮಾರ್ಕೆಟ್ ಬಳಿ ಇರುವ ಗಾಂಧಿನಗರ ಬಳಿ ಸಂಘನಿಕೇತನದಲ್ಲಿ ಈ ಮೇಳ ನಡೆಯಲಿದೆ.

ಸಾವಯವ ಕೃಷಿಯ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸುತ್ತಿರುವ ಸಾವಯವ ಕೃಷಿಕ ಗ್ರಾಹಕ ಬಳಗದ ನೇತೃತ್ವದಲ್ಲಿ ಜನವರಿ 4 ಮತ್ತು 5ರಂದು ಆಯೋಜಿಸಲಾಗಿರುವ ಈ ಮೇಳದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ, ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಗೆಣಸು, ಸುವರ್ಣ ಗೆಡ್ಡೆ ಮೊದಲಾದ ಗೆಡ್ಡೆಗಳತ್ತ ಸಾವಯವ ಕೃಷಿಕರು ಒತ್ತು ನೀಡುತ್ತಿದ್ದಾರೆ.

ಈ ಮೇಳದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳುನಾಡಿನಿಂದಲೂ ವಿವಿಧ ರೀತಿಯ ಗೆಡ್ಡೆ ಗೆಣಸುಗಳೊಂದಿಗೆ ರೈತರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಸಾವಯವ ಬಳಗದಿಂದ ಮಾತುಕತೆ, ಆಹ್ವಾನ ನೀಡುವ ಚಟುವಟಿಕೆಗಳು ನಡೆಯುತ್ತಿವೆ. ವಿವಿಧ ಗೆಡ್ಡೆಗೆಣಸು, ಸೊಪ್ಪುಗಳ ವೈವಿಧ್ಯತೆಯ ಪ್ರದರ್ಶನದ ಜತೆಗೆ ಮೇಳದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ. ಗೆಡ್ಡೆ ಗೆಣಸು ಹಾಗೂ ಸೊಪ್ಪುಗಳ ವಿವಿಧ ಬಗೆಯ ಖಾದ್ಯಗಳ ಪ್ರದರ್ಶನ ಹಾಗೂ ಮಾರಾಟವೂ ಮೇಳದಲ್ಲಿರಲಿದೆ.

ತರಬೇತಿ ಕಾರ್ಯಕ್ರಮ

ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಲಾಗಿರುವ ಮೇಳದ ಪೂರ್ವಭಾವಿಯಾಗಿ, ಅಕ್ಟೋಬರ್‌ 16ರಂದು ಶಕ್ತಿನಗರದ ಪ್ರಕೃತಿ-ಡ್ಸ್‌ನಲ್ಲಿ ಆಸಕ್ತರಿಗಾಗಿ ಕೆಸುವನ್ನು ಬೆಳೆಸುವುದು ಹಾಗೂ ಮೌಲ್ಯವರ್ಧನೆಯ ಬಗ್ಗೆ ಉಚಿತ ತರಬೇತಿಯನ್ನು ಆಯೋಜಿಸಲಾಯಿತು. ಜೋನ್ಸನ್ ನೆಲ್ಯಾಡಿ ಮತ್ತು ತಂಡದಿಂದ ತರಬೇತಿ ನೀಡಲಾಯ್ತು. 35 ಮಂದಿ ಹೆಸರು ನೋಂದಾಯಿಸಿ ಭಾಗವಹಿಸಿದರು. ಮುಂದೆ ನವೆಂಬರ್ 10ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನಂತೂರು ಶ್ರೀ ಭಾರತೀ ಸಭಾಭವನದಲ್ಲಿ ಎಲೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ.

ಮೇಳಕ್ಕಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಎಂ.ಬಿ. ಪುರಾಣಿಕ್, ಅಧ್ಯಕ್ಷರಾಗಿ ನಿವೃತ್ತ ಎಡಿಸಿ ಪ್ರಭಾಕರ ಶರ್ಮರನ್ನು ಆಯ್ಕೆ ಮಾಡಲಾಗಿದೆ.

ಮೈಸೂರು ಮತ್ತು ಜೊಯಿಡಾದಲ್ಲಿ ಇಂತಹ ಗೆಡ್ಡೆಗೆಣಸು ಮೇಳಗಳು ನಡೆಯುತ್ತಿರುತ್ತವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಪ್ರಥಮ ಭಾರಿಗೆ ನಡೆಸಲಾಗುತ್ತಿದೆ. ಆಂಧ್ರ, ತಮಿಳುನಾಡು, ಕೇರಳ ಮೊದಲಾದ ರಾಜ್ಯಗಳ ರೈತರ ಜತೆ ನಾವು ಈಗಾಗಲೇ ಮಾತುಕತೆ ನಡೆಸಿದ್ದು, ರಾಜ್ಯದ ಜೊಯಿಡಾ, ಉಡುಪಿ, ಮಡಿಕೇರಿ ಸೇರಿದಂತೆ ಹಲವು ಜಿಲ್ಲೆಗಳ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಮೇಳದಲ್ಲಿ ಭಾಗವಹಿಸಲು ಒಪ್ಪಿಕೊಂಡ ಹಲವು ರೈತರಿಗೆ ಈಗಾಗಲೇ ಅವರ ನಿವಾಸಕ್ಕೆ ತೆರಳಿ ಆಹ್ವಾನವನ್ನು ನೀಡಲಾಗಿದೆ ಎಂದು ಬಳಗದ ಪ್ರಮುಖರಾದ ರತ್ನಾಕರ್ ಕುಳಾಯಿ ತಿಳಿಸಿದ್ದಾರೆ.

ಕೇರಳದ ಶಾಜಿ ಬೆಳೆ ವೈವಿಧ್ಯ

ಕೇರಳ ವಯನಾಡಿನ ಶಾಜಿ ಎಂಬವರು 200ಕ್ಕೂ ಅಧಿಕ ಗೆಡ್ಡೆ ಗೆಣಸಿನ ವೈವಿಧ್ಯಗಳನ್ನು ಬೆಳೆಯುತ್ತಿದ್ದು, ಮೇಳದಲ್ಲಿ ಅವರು ಭಾಗವಹಿಸಲಿದ್ದಾರೆ. ವಿಶ್ವ ದಾಖಲೆ ಮಾಡಿದವರು, ಸಾಧನೆಗೈದ ರೈತರು ಈ ಮೇಳದಲ್ಲಿ ತಮ್ಮ ಬೆಳೆಗಳ ವೈವಿಧ್ಯತೆಯನ್ನು ಜಿಲ್ಲೆಯ ಜನರಿಗೆ ಪರಿಚಯಿಸಲಿದ್ದಾರೆ ಎಂದು ರತ್ನಾಕರ್ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ