BP Home Remedies: ಅಧಿಕ ರಕ್ತದೊತ್ತಡಕ್ಕೆ ಸರಳ ಮನೆಮದ್ದುಗಳಿವು; ಆರೋಗ್ಯಕರ ಜೀವನಶೈಲಿಯಿಂದ ನೊ ಬಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  Bp Home Remedies: ಅಧಿಕ ರಕ್ತದೊತ್ತಡಕ್ಕೆ ಸರಳ ಮನೆಮದ್ದುಗಳಿವು; ಆರೋಗ್ಯಕರ ಜೀವನಶೈಲಿಯಿಂದ ನೊ ಬಿಪಿ

BP Home Remedies: ಅಧಿಕ ರಕ್ತದೊತ್ತಡಕ್ಕೆ ಸರಳ ಮನೆಮದ್ದುಗಳಿವು; ಆರೋಗ್ಯಕರ ಜೀವನಶೈಲಿಯಿಂದ ನೊ ಬಿಪಿ

Home Remedies for High Blood Pressure: ಅಧಿಕ ರಕ್ತದೊತ್ತಡವನ್ನು ನಿಭಾಯಿಸಲು ಸರಳ ಪರಿಹಾರ ಕ್ರಮಗಳಿವೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಜೊತೆಗೆ, ಸರಳ ಮನೆಮದ್ದುಗಳ ಮೂಲಕ ಬಿಪಿ ನಿಯಂತ್ರಣಕ್ಕೆ ತರಬಹುದು. ವೈದ್ಯರ ಸಲಹೆ ಜೊತೆಗೆ ನಿಧಾನವಾಗಿ ರಕ್ತದೊತ್ತಡವನ್ನು ಹತೋಟಿಗೆ ತರಬಹುದು.

ಅಧಿಕ ರಕ್ತದೊತ್ತಡಕ್ಕೆ ಸರಳ ಮನೆಮದ್ದುಗಳಿವು; ಆರೋಗ್ಯಕರ ಜೀವನಶೈಲಿಯಿಂದ ನೊ ಬಿಪಿ
ಅಧಿಕ ರಕ್ತದೊತ್ತಡಕ್ಕೆ ಸರಳ ಮನೆಮದ್ದುಗಳಿವು; ಆರೋಗ್ಯಕರ ಜೀವನಶೈಲಿಯಿಂದ ನೊ ಬಿಪಿ (Freepik)

ಬಿಪಿ ಅಥವಾ ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಎಂದು ಹೇಳಲಾಗುತ್ತದೆ. ಈ ಸಮಸ್ಯೆಯು ದೇಹಕ್ಕೆ ನಿಧಾನವಾಗಿ ಅಪಾಯ ತಂದೊಡ್ಡುತ್ತದೆ. ಅಧಿಕ ರಕ್ತದೊತ್ತಡವು ದೇಹದ ಕಾರ್ಯಗಳಿಗೆ ಅಡ್ಡಿಪಡಿಸುವ ಮೂಲಕ ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಸೇರಿದಂತೆ ಅನೇಕ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಬಿಪಿಗೆ ಸೂಕ್ತ ಪರಿಹಾರ ಕ್ರಮ ಅನುಸರಿಸದಿದ್ದರೆ, ಅಧಿಕ ರಕ್ತದೊತ್ತಡದಿಂದ ಅತ್ಯಂತ ಅಪಾಯಕಾರಿ ಮತ್ತು ಅಕಾಲಿಕ ಸಾವು ಎದುರಾಗಬಹುದು. ಹೀಗಾಗಿ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ.

ಅನೇಕ ಬಾರಿ ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಕೆಲವು ತಿಂಗಳುಗಳವರೆಗೆ ಯಾವುದೇ ರೋಗಲಕ್ಷಣಗಳೇ ಕಾಣಿಸುವುದಿಲ್ಲ. ಹೀಗಾಗಿ ಒಂದು ನಿರ್ದಿಷ್ಟ ವಯಸ್ಸಿನ ನಂತರ ರಕ್ತದೊತ್ತಡದ ಬಗ್ಗೆ ನಿಯಮಿತ ಆರೋಗ್ಯ ಮೇಲ್ವಿಚಾರಣೆ ನಿರ್ಣಾಯಕವಾಗಿದೆ. ಹೃದಯಕ್ಕೆ ಸಂಬಂಧಿಸಿದಂತೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ.

ರಕ್ತದೊತ್ತಡವನ್ನು ನಿಭಾಯಿಸಲು ಮನೆಯಲ್ಲೇ ಕೆಲವೊಂದು ಪರಿಹಾರ ಕ್ರಮಗಳನ್ನು ಅನುಸರಿಸಬಹುದು. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ನಮ್ಮ ಕೈಯಲ್ಲಿದೆ. ಹೀಗಾಗಿ ನಿಮಗೆ ಬಿಪಿ ಸಮಸ್ಯೆ ಇದ್ದರೆ, ಮುಂದೆ ಬರದಂತೆ ತಡೆಗಟ್ಟಲು ಮನೆಮದ್ದುಗಳು ಏನೇನು ಎಂಬುದನ್ನು ನೋಡೋಣ.

ಅಧಿಕ ರಕ್ತದೊತ್ತಡವನ್ನು ನೀವಾಗಿಯೇ ನಿರ್ವಹಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳು ಹೀಗಿವೆ.

ಆಹಾರದಲ್ಲಿ ಈ ಅಗತ್ಯ ಬದಲಾವಣೆಗಳನ್ನು ಮಾಡಿ

ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಹೆಚ್ಚು ಸೇವಿಸಿ. ಬಾಳೆಹಣ್ಣು, ಗೆಣಸು, ಸೊಪ್ಪು ತರಕಾರಿಗಳು ಒಳ್ಳೆಯದು. ಡೈರಿ ಉತ್ಪನ್ನಗಳು ಕೂಡಾ ಒಳ್ಳೆಯದು. ಮೀನು, ಅಗಸೆ ಬೀಜ, ವಾಲ್‌ನಟ್ಸ್ ಸೇರಿದಂತೆ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸೇವಿಸಿ. ಫೈಬರ್ ಭರಿತ ಆಹಾರಗಳಾದ ಧಾನ್ಯಗಳು, ಹಣ್ಣುಗಳು, ತರಕಾರಿಗಳನ್ನು ಸೇವಿಸಿ. ಇದೇ ವೇಳೆ ಸೋಡಿಯಂ ಸೇವನೆಯನ್ನು ಕಡಿಮೆ ಮಾಡಿ.

ಗಿಡಮೂಲಿಕೆಯಿಂದ ಪರಿಹಾರ

ಅಡುಗೆ ಮನೆಯಲ್ಲಿರುವ ಅರಿಶಿನ ಸಕಲ ರೋಗಗಳಿಗೂ ಮದ್ದು. 1 ಟೀಸ್ಪೂನ್ ಅರಿಶಿನ ಪುಡಿಯನ್ನು ಬಿಸಿ ಹಾಲಿಗೆ ಮಿಶ್ರಣ ಮಾಡಿ ಕುಡಿಯಿರಿ. ಪ್ರತಿದಿನ 1ರಿಂದ 2 ಬೆಳ್ಳುಳ್ಳಿಯನ್ನು ಸೇವಿಸಿ. ನಿತ್ಯ 300ರಿಂದ 500 ಮಿಗ್ರಾಂನಷ್ಟು ಅಶ್ವಗಂಧ ಕ್ಯಾಪ್ಸುಲ್‌ ಸೇವಿಸಿ.

ಜೀವನಶೈಲಿ ಆರೋಗ್ಯಕರವಾಗಿರಲಿ

ಪ್ರತಿನಿತ್ಯ ನಿಯಮಿತವಾಗಿ ಲಘು ವ್ಯಾಯಾಮಗಳನ್ನು ಮಾಡಿ. ವಾಕಿಂಗ್, ಜಾಗಿಂಗ್‌, ಯೋಗಾಭ್ಯಾಸ ಮಾಡಿ. ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ, ದೀರ್ಘ ಉಸಿರಾಟ ಅಭ್ಯಾಸ ಮಾಡಿ. ಪ್ರತಿದಿನ ಸಾಕಷ್ಟು ನಿದ್ರೆ ಮಾಡಿ. ಕನಿಷ್ಠ 7ರಿಂದ 8 ಗಂಟೆಗಳಾದರೂ ನಿದ್ದೆ ಬೀಳಲಿ. ದೇಹದ ತೂಕ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಿ. ತೂಕ ಹೆಚ್ಚಿದರೂ ದೇಹಕ್ಕೆ ಒಳ್ಳೆಯದಲ್ಲ. ಮದ್ಯಪಾನ ಮತ್ತು ಧೂಮಪಾನ ಅಭ್ಯಾಸವಿದ್ದರೆ, ಅದನ್ನು ಒಂದು ಮಿತಿಯಲ್ಲಿ ಇಟ್ಟುಕೊಳ್ಳಿ.

ಸರಳ ಹಾಗೂ ನೈಸರ್ಗಿಕ ಪರಿಹಾರಗಳು

1/2 ನಿಂಬೆ ರಸವನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಿರಿ. ಸೌತೆಕಾಯಿ ಜ್ಯೂಸ್‌ ಕೂಡಾ ಒಳ್ಳೆಯದು. ಪ್ರತಿದಿನ 1/2 ಕಪ್ ಸೌತೆಕಾಯಿ ರಸ ಅಥವಾ ಹಸಿ ಸೌತೆ ತಿನ್ನಿ. ಪ್ರತಿದಿನ 1/2 ಕಪ್ ಬೀಟ್ರೂಟ್ ಜ್ಯೂಸ್, 1 ಕಪ್ ಎಳನೀರು ಕುಡಿದರೆ ಒಳ್ಳೆಯದು. ಬಿಸಿ ನೀರಿಗೆ 1 ಟೀಸ್ಪೂನ್ ಶುಂಠಿ ಹಾಕಿ ಕುಡಿಯಿರಿ.

ವೈದ್ಯರನ್ನು ಸಂಪರ್ಕಿಸಿ

ಯಾವುದೇ ರೀತಿಯ ಹೊಸ ಪರಿಹಾರ ವಿಧಾನ ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಿ. ತೀವ್ರ ತಲೆನೋವು, ತಲೆತಿರುಗುವಿಕೆ, ಎದೆ ನೋವು, ಉಸಿರಾಟದ ಸಮಸ್ಯೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ವೈದ್ಯರ ಸಲಹೆಯಂತೆ ಚಿಕಿತ್ಸೆ ಮುಂದುವರೆಸಬಹುದು.

Whats_app_banner