Mangaluru: ಮಂಗಳೂರಲ್ಲಿ ಮತದಾನೋತ್ತರ ಸಂಘರ್ಷ: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿಗೆ ಕಲ್ಲು ತೂರಾಟ
May 10, 2023 10:34 PM IST
ಮಂಗಳೂರಲ್ಲಿ ಮತದಾನೋತ್ತರ ಸಂಘರ್ಷ
- Dakshina Kannada news: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಸಂದರ್ಭ, ಕೆಲ ಘರ್ಷಣೆಯ ಘಟನೆಗಳು ನಡೆದಿದ್ದು, ಮತದಾನದ ಬಳಿಕ ಅಭ್ಯರ್ಥಿಯೋರ್ವರ ಕಾರಿಗೆ ಕಲ್ಲು ತೂರಾಟವಾಗಿದೆ. ಈ ಸಂದರ್ಭ ನಿಯಂತ್ರಣಕ್ಕೆಂದು ಬಂದ ಪೊಲೀಸರ ಮೇಲೂ ಕಲ್ಲು ತೂರಾಟವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ವೇಳೆ ಕೆಲ ಕಡೆಗಳಲ್ಲಿ ಸಣ್ಣಪುಟ್ಟ ಘರ್ಷಣೆಗಳು ನಡೆದಿದ್ದರೆ, ಮತದಾನದ ಬೆನ್ನಲ್ಲೇ, ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಕಾರಿಗೆ ಕಲ್ಲು ತೂರಾಟ ನಡೆಸಿದ ಘಟನೆ ಇಳಿಸಂಜೆ ನಡೆದಿದೆ.
ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಕುಲದೀಪ್ ಆರ್. ಜೈನ್ ಭೇಟಿ ನೀಡಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಚುನಾವಣೆಯ ಬಳಿಕ ಈ ಘಟನೆ ಮಂಗಳೂರಿನ ಹೊರವಲಯದ ಮೂಡುಶೆಡ್ಡೆ ಎಂಬಲ್ಲಿ ನಡೆದಿದ್ದು, ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಚಕಮಕಿಯ ವೇಳೆ ಈ ಕಲ್ಲು ತೂರಾಟವಾಗಿದೆ ಎನ್ನಲಾಗಿದೆ.
ಬಿಜೆಪಿ ಕಾರ್ಯಕರ್ತರು ಸೇರಿದ್ದ ಸಂದರ್ಭ ಮಿಥುನ್ ರೈ ಮತ್ತು ಬೆಂಬಲಿಗರಿದ್ದ ಕಾರು ಬಂದಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಿದ್ದಾರೆ.
ಎರಡೂ ತಂಡಗಳ ಜಯಘೋಷದ ಸಂದರ್ಭ ಮಿಥುನ್ ಕಾರಿಗೆ ಕಲ್ಲು ತೂರಾಟ ನಡೆದಿದೆ. ಈ ಸಂದರ್ಭ ಇಬ್ಬರಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ. ಅಷ್ಟರಲ್ಲಿ ಪೊಲೀಸರು ಆಗಮಿಸಿ ಗುಂಪು ಚದುರಿಸಿದ್ದಾರೆ. ಸ್ಥಳದಲ್ಲೀಗ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಚುನಾವಣಾ ಸಂದರ್ಭವೂ ಗಲಾಟೆ
ಇನ್ನೊಂದು ಘಟನೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೊಯ್ದೀನ್ ಬಾವಾ ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ದೂರು, ಪ್ರತಿದೂರು ಬಜಪೆ ಠಾಣೆಯಲ್ಲಿ ದಾಖಲಾಗಿದೆ. ಇದೇ ವೇಳೆ ಬಂಟ್ವಾಳದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹಣ ಹಂಚಿಕೆ ನಡೆಸುತ್ತಿರುವ ಆರೋಪದ ವಿಚಾರದಲ್ಲಿ ಮಾತಿನ ಚಕಮಕಿ ಘಟನೆಗಳು ನಡೆದಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ವಿಟ್ಲದಲ್ಲಿ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ಮಧ್ಯೆ ಚಕಮಕಿಗಳು ನಡೆದಿವೆ.
ನಿಷೇಧಾಜ್ಞೆ ಜಾರಿ
ಚುನಾವಣೋತ್ತರ ಗಲಭೆಗಳ ಹಿನ್ನೆಲೆಯಲ್ಲಿ ಮಂಗಳೂರು ಹೊರವಲಯದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ಮಂಗಳೂರು ಕಮೀಷನರ್ ಬುಧವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು