Karnataka Rain: ಕರಾವಳಿಯಲ್ಲಿ ಮುಂದುವರಿದ ಮಳೆ, ಶಿರಾಡಿ ಘಾಟ್‌ನಲ್ಲಿ ರಾತ್ರಿ ಸಂಚಾರ ಬಂದ್, ಮಾಣಿ-ಮೈಸೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ
Aug 02, 2024 11:36 AM IST
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪದ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದಾಗಿ ಮೈಸೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.
- ಮಾಣಿ - ಮೈಸೂರು ಹೆದ್ದಾರಿಯ ಪುತ್ತೂರಿನ ತೆಂಕಿಲದಲ್ಲಿ ರಸ್ತೆ ಕುಸಿತ ಉಂಟಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಗುಡ್ಡ ಕುಸಿತ ಉಂಟಾಗಿದೆ. ಬೆಂಗಳೂರು-ಮಂಗಳೂರು ರಸ್ತೆಯ ಶಿರಾಡಿ ಘಾಟ್‌ನಲ್ಲಿಯೂ ಹಲವು ಬಾರಿ ಗುಡ್ಡ ಜರಿದಿದೆ. (ವರದಿ: ಹರೀಶ್ ಮಾಂಬಾಡಿ)
ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್‌ನ ದೊಡ್ಡತಪ್ಲು ಬಳಿ ಗುಡ್ಡ ಜರಿದು ವಾಹನಗಳ ಮೇಲೆ ಮಣ್ಣು ಬಿದ್ದಿದೆ. ನಂತರ ಮಣ್ಣು ಸರಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತಾದರೂ ರಾತ್ರಿ ಪ್ರಯಾಣದಲ್ಲಿ ಅಪಾಯ ಹೆಚ್ಚು ಎನ್ನುವ ಕಾರಣಕ್ಕೆ ಶಿರಾಡಿ ಘಾಟ್ ಮಾರ್ಗವನ್ನು ಸಂಜೆ 7 ರಿಂದ ಮುಂಜಾನೆಯವರೆಗೂ ಬಂದ್ ಮಾಡಲು ಅಧಿಕಾರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಸಂಚಾರ ಬಂದ್ ಮಾಡಲಾಗಿದೆ. ಈ ಮೊದಲು ಹಾಸನ ಜಿಲ್ಲೆ ಹರ್ಲೆ ಎಸ್ಟೇಟ್ ಸಮೀಪ ಮಣ್ಣು ಕುಸಿದಿತ್ತು. ಇದೂ ಸಹ ಸಂಚಾರ ಸ್ಥಗಿತಗೊಳ್ಳಲು ಕಾರಣವಾಗಿತ್ತು.
ಇತ್ತೀಚಿನ ದಿನಗಳಲ್ಲಿ ಈ ಮಾರ್ಗದಲ್ಲಿ ಹಲವು ಬಾರಿ ಮಣ್ಣು ಕುಸಿದಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರೈಲ್ವೆ ಹಳಿಗಳ ಮೇಲೆ ಗುಡ್ಡ ಕುಸಿದ ಕಾರಣದಿಂದ ಈ ಮಾರ್ಗದಲ್ಲಿ ಇದೀಗ ರೈಲು ಸಂಚಾರವು ಸ್ಥಗಿತಗೊಂಡಿದೆ. ಎಡಕುಮೆರಿ ಸಮೀಪ ಮಣ್ಣು ಸರಿಸುವ ಮತ್ತು ರಿಪೇರಿ ಕಾಮಗಾರಿ ಭರದಿಂದ ಸಾಗಿತ್ತು, ರೈಲು ಸಂಚಾರ ಆರಂಭವಾಗಲು ಇನ್ನೂ ಕೆಲ ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 750 ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.
ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ
ದಕ್ಣಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರವೂ ಮಳೆ ಅವಿರತ ಮುಂದುವರಿದಿದೆ. ಮುಂಜಾನೆಯಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಗುಡ್ಡ ಕುಸಿತದ ಪ್ರಕರಣಗಳು ಬೆಳಕಿಗೆ ಬಂದಿವೆ. ಪುತ್ತೂರಿನ ತೆಂಕಿಲ ಎಂಬಲ್ಲಿ ಗುಡ್ಡ ಕುಸಿದು ಮಾಣಿ-ಮೈಸೂರು ಹೆದ್ದಾರಿ ಬಂದ್ ಆಗಿದೆ. ಪುತ್ತೂರಿನ ಬೈಪಾಸ್ ರಸ್ತೆ ಬಪ್ಪಳಿಗೆಯಲ್ಲಿ ಗುಡ್ಡ ಕುಸಿತದಿಂದಾಗಿ ಅಲ್ಲಿರುವ ದೇವಿ ದೇವಸ್ಥಾನ ಹಾಗೂ ಮನೆಯೊಂದು ಅಪಾಯದಲ್ಲಿದೆ.
ಮೈಸೂರು ರಸ್ತೆಯಲ್ಲಿ ಶುಕ್ರವಾರ ನಸುಕಿನಲ್ಲಿ ಗುಡ್ಡ ಕುಸಿದಿದೆ. ಬೈಪಾಸ್ ಹೆದ್ದಾರಿಗೆ ಮಣ್ಣು ಬಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಮಡಿಕೇರಿ-ಮೈಸೂರು ರಸ್ತೆಯಲ್ಲಿ ಪ್ರಯಾಣಿಸುವವರಿಗಾಗಿ ಬದಲಿ ರಸ್ತೆಯಾಗಿ ಪುತ್ತೂರು ನಗರ ಒಳಗೆ ರಸ್ತೆಯನ್ನು ಗುರುತಿಸಲಾಗಿದೆ. ನಸುಕಿನ ಜಾವ ಯಾವುದೇ ವಾಹನ ಸಂಚಾರ ಇಲ್ಲದ ಸಮಯ ಗುಡ್ಡ ಕುಸಿತವಾದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಮಾಣಿ - ಮೈಸೂರು ಹೆದ್ದಾರಿಯ ಪುತ್ತೂರಿನ ತೆಂಕಿಲದಲ್ಲಿ ರಸ್ತೆ ಕುಸಿತ ಉಂಟಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಗುಡ್ಡ ಕುಸಿತ ಉಂಟಾಗಿದೆ. ಈ ಬಾರಿ ಮಾತ್ರ ದೊಡ್ಡಮಟ್ಟದಲ್ಲಿ ಗುಡ್ಡದ ಮಣ್ಣು ರಸ್ತೆ ಮೇಲೆ ಬಿದ್ದಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಒಳರಸ್ತೆಗಳಲ್ಲಿಯೂ ಗುಡ್ಡ ಕುಸಿತ ಪ್ರಕರಣಗಳು ವರದಿಯಾಗಿವೆ.