logo
ಕನ್ನಡ ಸುದ್ದಿ  /  ಕರ್ನಾಟಕ  /  ದೀಪಾವಳಿಗೆ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹೆಚ್ಚುವರಿ 2000 ಕೆಎಸ್‌ಆರ್‌ಟಿಸಿ ಬಸ್‌ ಸೇವೆ; ರಿಯಾಯಿತಿಯೂ ಇದೆ, ಈಗಲೇ ಟಿಕೆಟ್ ಬುಕ್ ಮಾಡಿ

ದೀಪಾವಳಿಗೆ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹೆಚ್ಚುವರಿ 2000 ಕೆಎಸ್‌ಆರ್‌ಟಿಸಿ ಬಸ್‌ ಸೇವೆ; ರಿಯಾಯಿತಿಯೂ ಇದೆ, ಈಗಲೇ ಟಿಕೆಟ್ ಬುಕ್ ಮಾಡಿ

Umesh Kumar S HT Kannada

Oct 26, 2024 05:30 PM IST

google News

ದೀಪಾವಳಿಗೆ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹೆಚ್ಚುವರಿ 2000 ಕೆಎಸ್‌ಆರ್‌ಟಿಸಿ ಬಸ್‌ ಸೇವೆ

  • ದೀಪಾವಳಿಗೆ ಊರಿಗೆ ಹೋಗಲ್ವ, ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹೆಚ್ಚುವರಿ 2000 ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಕೂಡ ಘೋಷಣೆಯಾಗಿದೆ. ಬಸ್‌ ಟಿಕೆಟ್ ಇಂದೇ ಬುಕ್ ಮಾಡಿ, ರಿಯಾಯಿತಿ ಕೂಡ ಪಡೆದುಕೊಳ್ಳಬಹುದು. ಯಾವೆಲ್ಲ ಊರಿಗೆ ವಿಶೇಷ ಬಸ್ ಸೇವೆ ಇದೆ ಎಂಬ ವಿವರ ಈ ವರದಿಯಲ್ಲಿದೆ.

ದೀಪಾವಳಿಗೆ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹೆಚ್ಚುವರಿ 2000 ಕೆಎಸ್‌ಆರ್‌ಟಿಸಿ ಬಸ್‌ ಸೇವೆ
ದೀಪಾವಳಿಗೆ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹೆಚ್ಚುವರಿ 2000 ಕೆಎಸ್‌ಆರ್‌ಟಿಸಿ ಬಸ್‌ ಸೇವೆ (KSRTC)

ಬೆಂಗಳೂರು: ದೀಪಾವಳಿ ಹಬ್ಬ, ಕನ್ನಡ ರಾಜ್ಯೋತ್ಸವ ನಿಮಿತ್ತ ಸಾಲು ರಜೆಗಳಿರುವ ಕಾರಣ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಜನ ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಅಕ್ಟೋಬರ್ 31ಕ್ಕೆ ನರಕ ಚತುರ್ದಶಿ, ನವೆಂಬರ್ 1 ಕನ್ನಡ ರಾಜ್ಯೋತ್ಸವ, ನವೆಂಬರ್ 2 ಬಲಿಪಾಡ್ಯ ಇರುವ ಕಾರಣ ಸಾಲು ಸಾಲು ರಜೆ ಇದೆ. ಬೆಂಗಳೂರಿನಿಂದ ಊರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 30 ರಿಂದ ನವೆಂಬರ್ 01 ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 2000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮಾಡಿದೆ. ನಂತರ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ನವೆಂಬರ್ 03 ಮತ್ತು 04 ರಂದು ವಾಪಸ್ ಬರುವವೂ ಇರುವ ಕಾರಣ ವಿಶೇಷ ಬಸ್‌ಗಳು ಆ ಊರುಗಳಿಂದ ಬೆಂಗಳೂರಿಗೆ ಸೇವೆ ಒದಗಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಯಾವ್ಯಾವ ಊರುಗಳಿಗೆ ಹೆಚ್ಚುವರಿ ವಿಶೇಷ ಕೆಎಸ್‌ಆರ್‌ಟಿಸಿ ಬಸ್‌ ಸೇವೆ

ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಕಾರ್ಯಾಚರಣೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಹೆಚ್ಚುವರಿ ವಿಶೇಷ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಇರಲಿದೆ.

ಇದೇ ರೀತಿ, ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಕಾರ್ಯಾಚರಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಊರುಗಳಿಗೆ ತೆರಳುವ, ವಾಪಸ್ ಬರುವ ಮುಂಗಡ ಟಿಕೆಟ್ ಇಂದೇ ಕಾಯ್ದಿರಿಸಿ, ವಿನಾಯಿತಿ ಪಡೆಯಿರಿ

ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಿ. ಹೀಗೆ ಟಿಕೆಟ್ ಕಾಯ್ದಿರಿಸುವಾಗ ಅಲ್ಲಿ ನಮೂದಿಸಿರುವ ಬಸ್‌ನಿಲ್ದಾಣ ಅಥವಾ ಪಿಕ್ ಅಪ್ ಪಾಯಿಂಟ್ ಹೆಸರು ಗಮನಿಸಬೇಕು. ಸುಗಮ ಸಂಚಾರಕ್ಕೆ ಇದು ನೆರವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ. ಪ್ರಯಾಣಿಕರು ಇ-ಟಿಕೆಟ್‌ ಬುಕ್ ಮಾಡುವುದಕ್ಕೆ www.ksrtc.karnataka.gov.in ವೆಬ್‌ಸೈಟ್‌ಗೆ ಹೋಗಬಹುದು.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ & ಬರುವ ಪ್ರಯಾಣದ ಟಿಕೆಟ್‍ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು. ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳೂ ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.

ಹೆಚ್ಚುವರಿ ವಿಶೇಷ ಸಾರಿಗೆ ಬಸ್‌ಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ವೆಬ್‌ಸೈಟ್‌ ಹಾಗೂ ಕರಾರಸಾ ನಿಗಮದ ವೆಬ್‍ಸೈಟ್‍ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಒದಗಿಸಲಾಗಿದೆ. ಸದರಿ ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಚೀಟಿಗಳಲ್ಲೂ ಕೂಡ ವಾಹನ ಹೊರಡುವ ಸ್ಥಳದ ವಿವರ ನಮೂದಿಸಲಾಗಿದೆ. ಅಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ