Dharwad: ಬೆಂಗಳೂರು ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್; ಸಮಯ ಸೇರಿ ಸಂಪೂರ್ಣ ಮಾಹಿತಿ
Jun 01, 2023 02:25 PM IST
ಬೆಂಗಳೂರು ಧಾರವಾಡ ನಡುವಿನ ವಂದೇ ಭಾರತ್ ರೈಲು ಸಂಚಾರ ಯಾವಾಗ ಅನ್ನೋದು ಮಾಹಿತಿ ಕೊನೆಗೂ ಬಹಿರಂಗವಾಗಿದೆ.
ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ರಾಜ್ಯದಲ್ಲಿ ಎರಡನೇ ರೈಲು ಸೇನೆ ಎನಿಸಲಿದೆ. ಈ ಮೊದಲು ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಿತ್ತು.
ಬೆಂಗಳೂರು: ರಾಜ್ಯದಲ್ಲಿ ಬಹುನಿರೀಕ್ಷಿತ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಂಚಾರ ಆರಂಭಕ್ಕೆ ದಿನ ಗಣನೆ ಆರಂಭವಾಗಿದ್ದು, ಈ ಬಗ್ಗೆ ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
ಈ ವರ್ಷದ ಜುಲೈ ವೇಳೆ ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ (Hubli Dharwad) ನಡುವಿನ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Minister Pralhad Joshi) ತಿಳಿಸಿದ್ದಾರೆ.
ಇದು ಕರ್ನಾಟಕಕ್ಕೆ ಎರಡನೇ ವಂದೇ ಭಾರತ್ ರೈಲು ಸೇನೆಯಾಗಿದ್ದು, ಈಗಾಗಲೇ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಯುತ್ತಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಸಚಿವ ಪ್ರಹ್ಲಾದ್ ಜೋಶಿ ಅವರು, ಜುಲೈ ವೇಳೆಗೆ ಕರ್ನಾಟಕದ ಜನತೆಗೆ ಐಷಾರಾಮಿ ರೈಲು ಸೇವೆಯಾಗಿರುವ ವಂದ್ ಭಾರತ್ ಎಕ್ಸ್‌ಪ್ರೆಸ್ ರೈಲು ನೀಡುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಧಾರವಾಡದ ಸಂಸದರೂ ಆಗಿರುವ ಪ್ರಹ್ಲಾದ್ ಜೋಶಿ ಅವರು, ಜುಲೈನಲ್ಲಿ ಧಾರವಾಡ - ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗುತ್ತದೆ. ಬಹು ನಿರೀಕ್ಷೆಯ ಧಾರವಾಡ - ಬೆಂಗಳೂರು ಮಧ್ಯದ ವಂದೇ ಭಾರತ್ ರೈಲಿನ ಸೇವೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದಿದ್ದಾರೆ.
ಅವಳಿ ನಗರದ ಜನರ ಬಹು ನಿರೀಕ್ಷಿತ ಈ ಉತ್ಕಷ್ಟ ರೈಲಿನ ಪ್ರಯಾಣದ ಅನುಭವವನ್ನು ಶೀಘ್ರದಲ್ಲಿಯೇ ಆಸ್ವಾದಿಸಬಹುದಾಗಿದೆ. ಇಂದು (ಮೇ 31, ಬುಧವಾರ) ದೆಹಲಿಯಲ್ಲಿ ಕೇಂದ್ರ ರೈಲ್ವೇ ಮಂತ್ರಿ ಅಶ್ವಿವಿ ವೈಷ್ಣವ್ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದ್ದು, ರೈಲು ಸೇವೆಯ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ ವೇಳೆಗೆ ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಾರಂಭಿಸಲು ಸ್ವಲ್ಪ ಸಮಯದವರೆಗೆ ಕಾಯಬೇಕಾಗಿತ್ತು. ಇದಕ್ಕೆ ಕಾರಣ ಎರಡೂ ನಗರಗಳ ನಡುವಿನ ಡೌನ್‌ಲೈನ್ ವಿದ್ಯುದ್ದೀಕರಣದ ಕಾರಣ ವಿಳಂಬವಾಗಿದೆ.
ಹುಬ್ಬಳ್ಳಿ-ಧಾರವಾಡ ವಿವಿಧ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಕೇಂದ್ರವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರಾಜಧಾನಿ ನಗರಕ್ಕೆ ಸಂಪರ್ಕವನ್ನು ಸುಲಭಗೊಳಿಸುವ ನಿರೀಕ್ಷೆಯಿದೆ.
ಕೆಲವು ವರದಿಗಳ ಪ್ರಕಾರ, ಭಾರತೀಯ ರೈಲ್ವೆ, ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ಕಾಚಿಗೂಡ (ಹೈದರಾಬಾದ್) ನಡುವೆ ಹೊಸದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಆರಂಭಿಸಲು ಯೋಜನೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
2022ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈ ನಡುವಿನ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು.
ವಿಭಾಗ