logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗೆ ಆರೆಂಜ್ ಅಲರ್ಟ್; ಅಕ್ಟೋಬರ್ 16ರಂದು ನಗರದ ಅಂಗನವಾಡಿ-ಶಾಲೆಗಳಿಗೆ ರಜೆ ಘೋಷಣೆ, ಆದರೆ ಕಾಲೇಜುಗಳಿಗಿಲ್ಲ!

ಬೆಂಗಳೂರಿಗೆ ಆರೆಂಜ್ ಅಲರ್ಟ್; ಅಕ್ಟೋಬರ್ 16ರಂದು ನಗರದ ಅಂಗನವಾಡಿ-ಶಾಲೆಗಳಿಗೆ ರಜೆ ಘೋಷಣೆ, ಆದರೆ ಕಾಲೇಜುಗಳಿಗಿಲ್ಲ!

Prasanna Kumar P N HT Kannada

Oct 16, 2024 12:47 AM IST

google News

ಧಾರಾಕಾರ ಮಳೆ ಮುನ್ಸೂಚನೆ; ಅಕ್ಟೋಬರ್ 16ರಂದು ಬೆಂಗಳೂರು ನಗರದ ಶಾಲೆಗಳಿಗೆ ರಜೆ ಘೋಷಣೆ

    • Bengaluru Rains: ಭಾರೀ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಲೆಗಳಿಗೆ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಜಗದೀಶ್ ಅವರು ಮಾಹಿತಿ ನೀಡಿದ್ದಾರೆ. ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಿಸಿರುವುದಿಲ್ಲ ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.
ಧಾರಾಕಾರ ಮಳೆ ಮುನ್ಸೂಚನೆ; ಅಕ್ಟೋಬರ್ 16ರಂದು ಬೆಂಗಳೂರು ನಗರದ ಶಾಲೆಗಳಿಗೆ ರಜೆ ಘೋಷಣೆ
ಧಾರಾಕಾರ ಮಳೆ ಮುನ್ಸೂಚನೆ; ಅಕ್ಟೋಬರ್ 16ರಂದು ಬೆಂಗಳೂರು ನಗರದ ಶಾಲೆಗಳಿಗೆ ರಜೆ ಘೋಷಣೆ (PTI)

ಬೆಂಗಳೂರು: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ಬೆಂಗಳೂರಿನ ಎಲ್ಲಾ ಶಾಲಾಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ. ಆದರೆ ಯಾವುದೇ ಕಾಲೇಜುಗಳಿಗೆ ರಜೆ ಇರುವುದಿಲ್ಲ. ಅಕ್ಟೋಬರ್​ 16 ಮತ್ತು 17ರಂದು ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಆರೆಂಜ್ ಅಲರ್ಟ್ ಘೋಷಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಖಾಸಗಿ/ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಆದರೆ, ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಿಸಿರುವುದಿಲ್ಲ ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.

ಅಕ್ಟೋಬರ್ 20 ರವರೆಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ದಸರಾ ರಜೆ ಇದೆ. ಆದರೆ, ಅಕ್ಟೋಬರ್​ 14ರ ಸೋಮವಾರದಿಂದಲೇ ಖಾಸಗಿ ಶಾಲೆಗಳು ತರಗತಿಗಳು ಆರಂಭಿಸಿವೆ. ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಮಕ್ಕಳು ಶಾಲೆಗೆ ಬರಲು ಕಷ್ಟ ಎದುರಾಗಿದೆ. ಇದರಿಂದ ನಗರದ ಶಾಲೆಗಳಿಗೆ ರಜೆ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದ್ದಾರೆ. ವಿಶ್ವ ವಿದ್ಯಾಲಯಗಳ ಜತೆ ಚರ್ಚಿಸಿ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಕೆಲವು ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು ಮರು ಪರೀಕ್ಷೆ ನಿಗದಿ ಮಾಡುವುದು ಕಷ್ಟ. ಹೀಗಾಗಿ ವಿಶ್ವ ವಿದ್ಯಾಲಯಗಳ ಜೊತೆ ಚರ್ಚಿಸಿ ರಜೆ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 17ರಂದು ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇರುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಇದೇ ರೀತಿ ಮಳೆ ಸುರಿಯುತ್ತಲೇ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಕಳೆದ ರಾತ್ರಿಯಿಂದ ಆರಂಭವಾದ ಮಳೆ ಇಂದು 10 ಗಂಟೆಯಾದರೂ ಬಿಡುವು ನೀಡಿರಲಿಲ್ಲ. ನೂರಾರು ಶಾಲಾ ವಾಹನಗಳು ಟ್ರಾಫಿಕ್​ನಲ್ಲಿ ಸಿಲುಕಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಿರಲಿಲ್ಲ. ಸಾವಿರಾರು ಮಕ್ಕಳು ಮನೆಯಿಂದ ಹೊರಗೆ ಬರಲಾಗದೆ ಮನೆಯಲ್ಲೇ ಉಳಿದಿದ್ದರು. ಪೋಷಕರೂ ತಮ್ಮ ಸ್ವಂತ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಬಿಡಲು ಸಾಧ್ಯವಾಗಲಿಲ್ಲ. ದಸರಾ ರಜೆ ಮುಗಿದು ನಿನ್ನೆಯಿಂದ ಕೆಲವು ಶಾಲಾ ಕಾಲೇಜುಗಳು ಆರಂಭವಾಗಿವೆ. ಸಿಬಿಎಸ್​ಇ, ಐಸಿಎಸ್​ಇ ಪಠ್ಯದ ಶಾಲೆಗಳು ನಡೆಯುತ್ತಿವೆ. ಮಳೆಯ ಕಾರಣಕ್ಕೆ ಶಾಲಾ ಕಾಲೇಜುಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಅನೇಕ ವಿದ್ಯಾರ್ಥಿಗಳು ಒಂದೆರಡು ತರಗತಿಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಅವರಿಗಾಗಿ ಮತ್ತೆ ಪಾಠ ಮಾಡುವುದಾಗಿ ಕೆಲವು ಶಾಲೆಗಳು ತಿಳಿಸಿವೆ. ಮಳೆ ಇದ್ದ ಕಾರಣ ಸರಿಯಾದ ಸಮಯಕ್ಕೆ ತಲುಪಲು ಆಗಲಿಲ್ಲ. ಬಸ್ ಸಿಗಲಿಲ್ಲ. ಬಸ್ ಸಿಕ್ಕರೂ ಟ್ರಾಫಿಕ್ ಜಾಮ್​ನಲ್ಲಿ ಸಿಲುಕಬೇಕಾಯಿತು.

ಕಾಲೇಜುಗಳಲ್ಲಿ ಪಾಠ ಪ್ರವಚನ ನಡೆಸಲು ಮಾರ್ಗಸೂಚಿಗಳು

  1. ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುವಾಗ ಹಾಗೂ ಮನೆಗೆ ತೆರಳುವ ಸಂದರ್ಭದಲ್ಲಿ ಯಾವುದೇ ಅಪಾಯ ಇಲ್ಲದೆ ಸುರಕ್ಷಿತವಾಗಿ ತಲುಪುವ ಬಗ್ಗೆ ಗಮನ ಹರಿಸಬೇಕು.
  2. ದುರ್ಬಲ/ಶಿಥಿಲ ಕಟ್ಟಡಗಳಲ್ಲಿ ಪಾಠ ಪ್ರವಚನ ನಡೆಸುವಂತಿಲ್ಲ. ಯಾವುದೇ ಅವಘಡ ಉಂಟಾಗದಂತೆ ಎಚ್ಚರಿಕೆ ವಹಿಸಲು ಸೂಚನೆ
  3. ಈಗ ಮಳೆಗಾಗಿ ಮುಂಜಾಗ್ರತಾ ಕ್ರಮವಾಗಿ ರಜೆಯನ್ನು ನೀಡಿ ಉಂಟಾಗಿರುವ ಕಲಿಕಾ ಸಮಯದ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸಿ ನಷ್ಟವನ್ನು ಸರಿದೂಗಿಸುವಂತೆ ತಿಳಿಸಿದೆ.
  4. ವಿದ್ಯಾರ್ಥಿಗಳ ಪೋಷಕರು/ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ನೀರಿರುವ ತಗ್ಗು ಪ್ರದೇಶಗಳಿಗೆ ಹೋಗದಂತೆ ಕ್ರಮ ವಹಿಸಿ.
  5. ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆಯನ್ನು ನೋಡಿಕೊಳ್ಳುವುದು
  6. ಕಾಲೇಜುಗಳಲ್ಲಿ ಪ್ರಾಕೃತಿಕ ವಿಕೋಪ ನಿಭಾಯಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು.

ಇದನ್ನೂ ಓದಿ: Hubli Crime: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಬೆಂಗಳೂರು ವ್ಯಕ್ತಿ ಸೇರಿ ಇಬ್ಬರು ಸಾವು; ದೇಹಗಳು ಛಿದ್ರ ಛಿದ್ರ!

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ