ಕರ್ನಾಟಕದ ಶಾಲೆಗಳಿಗೆ ಬೇಸಿಗೆ ರಜೆ, ಹೊಸ ಶೈಕ್ಷಣಿಕ ವರ್ಷ ಶಾಲೆ ಶುರು ಯಾವಾಗ, ದಿನಾಂಕ ಮತ್ತು ಇತರೆ ವಿವರ
Mar 29, 2024 10:01 AM IST
ಶಾಲಾ ಮಕ್ಕಳ ಸಂಭ್ರಮ (ಎಡ ಚಿತ್ರ),; ಬೋರ್ಡ್ ಗಮನಿಸುತ್ತಿರುವ ಪುಟಾಣಿ (ಬಲ ಚಿತ್ರ).
ಕರ್ನಾಟಕದ ಶಾಲೆಗಳಿಗೆ ಬೇಸಿಗೆ ರಜೆ ಏಪ್ರಿಲ್ 11ಕ್ಕೆ ಶುರುವಾಗಲಿದೆ. ಅದಕ್ಕೂ ಮೊದಲೆ ಫಲಿತಾಂಶ ಪ್ರಕಟವಾಗುತ್ತ, ಅಡ್ಮಿಷನ್ ಯಾವಾಗ ಶುರು, ಹೊಸ ಶೈಕ್ಷಣಿಕ ವರ್ಷ ಶಾಲೆ ಶುರು ಯಾವಾಗ, ದಿನಾಂಕ ಮತ್ತು ಇತರೆ ವಿವರ ಹೀಗಿದೆ ನೋಡಿ.
ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಅದರ ಕಾವು ಏರುತ್ತಿರುವ ಹೊತ್ತು ಇದು. ಈ ನಡುವೆ ರೂಢಿಯಂತೆ ವಾರ್ಷಿಕ ಪರೀಕ್ಷಾ ಸೀಸನ್ ಕೂಡ. ದ್ವಿತೀಯ ಪಿಯು ಪರೀಕ್ಷೆಗಳು ಮಾರ್ಚ್ 22ಕ್ಕೆ ಮುಗಿದಿವೆ. ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ (Karnataka SSLC Exam) ಪ್ರಗತಿಯಲ್ಲಿದ್ದು, ಏಪ್ರಿಲ್ 6ರಂದು ಕೊನೆಯ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ 2023-24ರ ಪ್ರಕಾರ, ಮಾರ್ಚ್ 15ರಿಂದ 30ರ ಅವಧಿಯಲ್ಲಿ 1ನೇ ತರಗತಿಯಿಂದ 9ನೇ ತರಗತಿವರೆಗಿನ ಪರೀಕ್ಷೆ ನಡೆಯುತ್ತಿದೆ. ಈ ಪೈಕಿ 1,2,3,4, 6,7 ನೇ ತರಗತಿಗಳ ಪರೀಕ್ಷೆ ಶಾಲಾ ಮಟ್ಟದಲ್ಲಿ ನಡೆದರೆ, 5,8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವುದಾಗಿ ಘೋಷಿಸಲಾಗಿತ್ತು. ಹೀಗಾಗಿ ಇದನ್ನು 5,8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ಎಂದಿದ್ದರು.
ಈ 5,8, 9ನೇ ತರಗತಿ ಪರೀಕ್ಷೆ ಮಾರ್ಚ್ 10 ರಿಂದ 18ರ ತನಕ ನಡೆಸಲು ಯೋಜಿಸಲಾಗಿತ್ತು. ಆದರೆ ನಡುವೆ ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದರಿಂದ ಇದು ವಿಳಂಬವಾಗಿದ್ದು, ಮಾರ್ಚ್ 25ಕ್ಕೆ ಶುರುವಾಗಿ 28ಕ್ಕೆ ಮುಕ್ತಾಯವಾಗಿದೆ.
ಏಪ್ರಿಲ್ ಮೊದಲ ವಾರ ಫಲಿತಾಂಶ, 11ರಿಂದ ಕರ್ನಾಟಕ ಶಾಲೆಗಳಿಗೆ ಬೇಸಿಗೆ ರಜೆ
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ 2023-24ರ ಪ್ರಕಾರ, ಹಾಲಿ ಶೈಕ್ಷಣಿಕ ವರ್ಷದ 1ನೇ ತರಗತಿಯಿಂದ 9ನೇ ತರಗತಿವರೆಗಿನ ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಏಪ್ರಿಲ್ 1ರಿಂದ 5ರ ನಡುವೆ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಅದಾಗಿ, ಏಪ್ರಿಲ್ 8ರಂದು ಪ್ರಾಥಮಿಕ ಶಾಲಾ ತರಗತಿಗಳ ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್ 10ರಂದು 8 ಮತ್ತು 9ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ.
ಏಪ್ರಿಲ್ 6 ರಿಂದ 13ರ ತನಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಇದರ ನಡುವೆಯೇ, ಹಾಲಿ ಶೈಕ್ಷಣಿಕ ವರ್ಷದ ಬೇಸಿಗೆ ರಜೆ ಏಪ್ರಿಲ್ 11ರಿಂದ ಶುರುವಾಗುತ್ತಿದೆ. ಮೇ 28ರ ತನಕ ಬೇಸಿಗೆ ರಜೆ ಇರಲಿದೆ.
ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳ ತರಗತಿಗಳ ಪರೀಕ್ಷೆಗಳನ್ನು ಈಗಾಗಲೇ ಮುಗಿಸಲಾಗಿದೆ. ಎಲ್‌ಕೆಜಿಯಿಂದ 9ನೇ ತರಗತಿ ವರೆಗಿನ ಮಕ್ಕಳಿಗೆ ಎರಡು ಹಂತಗಳಲ್ಲಿ ಅಂದರೆ ಮಾರ್ಚ್ 22 ಮತ್ತು ಮಾರ್ಚ್ 25ರಿಂದ ಬೇಸಿಗೆ ರಜೆ ಈಗಾಗಲೇ ಶುರುವಾಗಿದೆ.
ಮುಂದಿನ ಶೈಕ್ಷಣಿಕ ವರ್ಷ ಮೇ 29 ರಿಂದ ಶಾಲೆ ಶುರು
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ 2023-24ರ ಪ್ರಕಾರ, ಹಾಲಿ ಶಿಕ್ಷಣ ವರ್ಷದ ಚಟುವಟಿಕೆಗಳು ಮುಗಿದು ಬೇಸಿಗೆ ರಜೆ ಮೇ 28ಕ್ಕೆ ಮುಗಿಯಲಿದೆ. ಮಾರನೇ ದಿನದಿಂದ ಹೊಸ ಶೈಕ್ಷಣಿಕ ವರ್ಷ (2024-25)ದ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಲಿದೆ. ಅಂದರೆ, ಮೇ 29ರಂದು ಶಾಲೆ ಶುರುವಾಗಲಿದೆ.
ಖಾಸಗಿ ಶಾಲೆಗಳಲ್ಲಿ ಪ್ರೀ-ಕೆಜಿಯಿಂದ 10ನೇ ತರಗತಿವರೆಗೂ ಮೇ 27ರಿಂದ ಶಾಲೆ ಶುರುವಾಗಲಿದೆ. ಹೊಸ ಶೈಕ್ಷಣಿಕ ವರ್ಷ (2024-25)ದ ಚಟುವಟಿಕೆಗಳು ಆರಂಭವಾಗಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಈಗಾಗಲೇ ಅಂದರೆ ಜನವರಿಯಲ್ಲಿ ಹೊಸ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಏಪ್ರಿಲ್‌ನಲ್ಲಿ ಇದು ಅಧಿಕೃತವಾಗಿ ನಡೆಯುತ್ತದೆ. ಬೆಂಗಳೂರು ಬಿಟ್ಟು ಹೊರಗೆ ಅಂದರೆ ಜಿಲ್ಲಾ ಮಟ್ಟದಲ್ಲಿ ಏಪ್ರಿಲ್ ಮೂರನೇ ವಾರದಿಂದ ಅಡ್ಮಿಶನ್ ಶುರುವಾಗಲಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.