ಕನ್ನಡ ಸುದ್ದಿ  /  Karnataka  /  Education News Karnataka Govt Cannot Alone Decide On Exam Pattern Ongoing 5 8 9 Exams Cannot Be Termed Board Exam Hc Uks

ಕರ್ನಾಟಕದ 5,8,9ನೇ ತರಗತಿ ಪರೀಕ್ಷೆಗಳು ಬೋರ್ಡ್ ಪರೀಕ್ಷೆ ಎನ್ನಲಾಗದು ಎಂದ ಹೈಕೋರ್ಟ್‌ ನ್ಯಾಯಪೀಠ

ಕರ್ನಾಟಕದಲ್ಲಿ ಈಗ ನಡೆಯುತ್ತಿರುವ 5, 8, 9ನೇ ತರಗತಿ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆ ಅಥವಾ ಮೌಲ್ಯಾಂಕ ಪರೀಕ್ಷೆ ಎಂದು ಹೇಳಲಾಗದು ಎಂದು ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ. ಯಾಕೆ ಎಂಬುದರ ವಿವರ ಇಲ್ಲಿದೆ.

ವಿದ್ಯಾರ್ಥಿಗಳು (ಎಡ ಚಿತ್ರ); ಕರ್ನಾಟಕ ಹೈಕೋರ್ಟ್ (ಬಲ ಚಿತ್ರ)
ವಿದ್ಯಾರ್ಥಿಗಳು (ಎಡ ಚಿತ್ರ); ಕರ್ನಾಟಕ ಹೈಕೋರ್ಟ್ (ಬಲ ಚಿತ್ರ)

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುತ್ತಿದೆ ಎಂಬ ಕಾರಣಕ್ಕೆ ಹಾಲಿ ನಡೆಯುತ್ತಿರುವ 5,8,9ನೇ ತರಗತಿಯ ಪರೀಕ್ಷೆಗಳನ್ನು ಬೋರ್ಡ್ ಪರೀಕ್ಷೆ (Board Exam) ಎಂದಾಗಲೀ, ಮೌಲ್ಯಾಂಕನ ಪರೀಕ್ಷೆ (Summative Assessment) ಎಂದಾಗಲೀ ಹೇಳಲಾಗದು ಎಂದು ಕರ್ನಾಟಕ ಹೈಕೋರ್ಟ್‌ (Karnataka High Court) ಅಭಿಪ್ರಾಯ ಪಟ್ಟಿದೆ.

ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರಿದ್ದ ನ್ಯಾಯಪೀಠವು, ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 5, 8, 9 ಮತ್ತು 11 ನೇ ತರಗತಿಗಳಿಗೆ ನಿಗದಿಪಡಿಸಿದ ಪರೀಕ್ಷೆಗಳನ್ನು ಏಕ ಸದಸ್ಯ ಪೀಠ ರದ್ದುಗೊಳಿಸಿದ್ದರ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಗಳನ್ನು ಅಂಗೀಕರಿಸಿ ಮಾರ್ಚ್ 22 ರಂದು ನೀಡಿದ ತೀರ್ಪಿನಲ್ಲಿ ಈ ರೀತಿ ಅಭಿಪ್ರಾಯಪಟ್ಟಿದೆ.

ಬೋರ್ಡ್ ಪರೀಕ್ಷೆ ಕುರಿತು ನ್ಯಾಯಪೀಠ ಹೇಳಿರುವುದು

ನೀತಿ ನಿಬಂಧನೆಗಳೊಂದಿಗೆ ಪರೀಕ್ಷೆಗಳನ್ನು ನಡೆಸಿದ ಕೂಡಲೇ, ಯಾವುದೇ ರೀತಿಯಲ್ಲಿ ಅವುಗಳನ್ನು ಬೋರ್ಡ್ ಪರೀಕ್ಷೆ ಎಂದು ಪರಿಗಣಿಸಲಾಗುವುದಿಲ್ಲ. ಅದೂ ಅಲ್ಲದೆ ಅಂತಹ ಪರೀಕ್ಷೆಗಳು ಆರ್‌ಟಿಇ ಕಾಯ್ದೆ 2009ರ ಉಲ್ಲಂಘನೆ ಎಂದು ನ್ಯಾಯಪೀಠ ಹೇಳಿತು.

ಅದೇ ರೀತಿ ಪರೀಕ್ಷೆ ನಡೆಸುವುದರಿಂದ ಮಕ್ಕಳ ಯೋಗಕ್ಷೇಮಕ್ಕೆ ಮತ್ತು ಅವರ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂಬ ಪ್ರತಿವಾದಿಗಳ (ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ ಮತ್ತು ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪಾಲಕರ ಸಂಘ) ವಾದಗಳನ್ನು ಒಪ್ಪುವುದಿಲ್ಲ. ಮೌಲ್ಯಮಾಪನ ವಿಧಾನದ ಅಳವಡಿಕೆಯು ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ ಮತ್ತು ಸಜ್ಜುಗೊಳಿಸುತ್ತದೆ ಎಂದು ನ್ಯಾಯಪೀಠ ಇದೇ ವೇಳೆ ಹೇಳಿತು.

ಆರ್‌ಟಿಇ ಕಾಯಿದೆಯ ಸೆಕ್ಷನ್ 16 ರ ನಿಬಂಧನೆಗಳ ಅಡಿಯಲ್ಲಿ ಮಾಡಲಾದ ಮೌಲ್ಯಮಾಪನಗಳ ಚೌಕಟ್ಟಿನಲ್ಲೇ ನಡೆಯುತ್ತಿರುವ ಪರೀಕ್ಷೆಗಳು ಕಂಡುಬರುತ್ತವೆ. ಅವುಗಳನ್ನು ನಿರ್ವಹಿಸುವುದಕ್ಕೆ ಕೆಎಸ್‌ಇಎಬಿ ಅನ್ನು ನೇಮಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ನ್ಯಾಯಪೀಠ ವಿವರಿಸಿದೆ.

ಸರ್ಕಾರ ಏಕಾಕಿಯಾಗಿ ಪರೀಕ್ಷಾ ಪದ್ಧತಿಯನ್ನು ಬದಲಾಯಿಸಲಾಗದು

5, 8, 9 ಮತ್ತು 11 ನೇ ತರಗತಿಗಳ ಪರೀಕ್ಷಾ ಮಾದರಿಯನ್ನು ಬದಲಾಯಿಸುವುದು ಕೇವಲ ರಾಜ್ಯ ಸರ್ಕಾರ ಮಾತ್ರ ನಿರ್ಧರಿಸುವ ವಿಷಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಪರೀಕ್ಷಾ ಮಾದರಿಯಲ್ಲಿ ಬದಲಾವಣೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರವು ಎಲ್ಲ ಪಾಲುದಾರರೊಂದಿಗೆ ಚರ್ಚಿಸಬೇಕು. ಹಾಗೆ ಮಾಡುವುದರಿಂದ ಅದನ್ನು ಪರಿಣಾಮಕಾರಿಯಾಗಿ ಸಾರ್ವಜನಿಕವಾಗಿ ಪ್ರಸ್ತುತಪಡಿಸಬಹುದು ಎಂದು ನ್ಯಾಯಾಲಯ ವಿವರಿಸಿದೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಅದೇ ಕ್ಲಾಸ್‌ನಲ್ಲಿ ಉಳಿಸುವುದು, ಸಾರ್ವಜನಿಕವಾಗಿ ಫಲಿತಾಂಶ ಪ್ರಕಟಿಸುವುದು, ಬಾಹ್ಯ ಅಧ್ಯಾಪಕರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಂತಾದ ಪ್ರಮುಖ ಲಕ್ಷಣಗಳು ಬದಲಾದ ಪರೀಕ್ಷಾ ವಿಧಾನಕ್ಕೆ ಅನ್ವಯಿಸುವುದಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.

ಹೀಗಿರುವಾಗ ಈ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆ ಎಂದೋ, ಮೌಲ್ಯಾಂಕನ ಪರೀಕ್ಷೆ ಎಂದೋ ಹೇಗೆ ಹೇಳುವುದು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.

IPL_Entry_Point