ಪರಿಸರದ ಮಹತ್ವ: ಹವಾಮಾನ ವೈಪರಿತ್ಯ, ಅರಣ್ಯ ಸಂರಕ್ಷಣೆ ಒಂದೇ ಪರಿಹಾರವೇ, ನಮ್ಮ ನಗರಗಳನ್ನು ಪರಿಸರ ಸ್ನೇಹಿಯಾಗಿಸುವುದು ಹೇಗೆ
Jun 06, 2024 12:58 AM IST
ಹವಾಮಾನ ವೈಪರಿತ್ಯ ತಡೆಗೆ ನಮ್ಮ ನಗರಗಳನ್ನು ಸಜ್ಜುಗೊಳಿಸುವುದು ಹೇಗೆ
- Forest Tales ಹವಾಮಾನ ವೈಪರಿತ್ಯದ ಪರಿಣಾಮಗಳು ನಮ್ಮನ್ನು ಆವರಿಸಿದೆ. ಇದಕ್ಕೆ ನಮ್ಮ ನೀತಿ ನಿರೂಪಣೆಗಳು ಎಷ್ಟು ಪರಿಣಾಮಕಾರಿಯಾಗಿರಬೇಕು. ಇದಕ್ಕೆ ನಮ್ಮ ಪಾತ್ರ ಎನ್ನುವುದು ಈ ವಾರದ ಕಾಡಿನ ಕಥೆಗಳಲ್ಲಿ ಪ್ರಸ್ತಾಪಿಸಲಾಗಿದೆ.
ದೆಹಲಿ ಎನ್ನುವ ದೇಶದ ರಾಜಧಾನಿ ಎನ್ನುವ ಮಹಾನಗರದ ಸ್ಥಿತಿ ನೋಡಿ. ಮೂರು ದಿನದ ಹಿಂದೆ 51 ಡಿಗ್ರಿ ಸೆಲ್ಸಿಯಸ್ ಬಿಸಿಲು. ಮಿತಿ ನೀರಿದ ಸಮಸ್ಯೆ, ವಾಯುಮಾಲಿನ್ಯದ ಮಿತಿ ಮೀರಿದ ಪರಿಸ್ಥಿತಿ. ಎಲ್ಲೋ ಮಳೆ ಬಂದರೆ ಊರಿಗೆ ಊರೇ ದ್ವೀಪ.ದೆಹಲಿಯಲ್ಲಿ ಮೂರು ದಿನದ ಹಿಂದೆ ಒಂದೇ ಟ್ಯಾಂಕರ್‌ನಲ್ಲಿ ನೀರು ಬಂದಿತು. ನೀರು ಪಡೆಯಲು ಅದೆಷ್ಟು ಜನ ಅದರ ಹಿಂದೆ ಹೋಗಿದ್ದು. ಮೂರು ತಿಂಗಳ ಹಿಂದೆಯಷ್ಟೇ ಇದೇ ದೆಹಲಿಯಲ್ಲಿ ಯಮುನೆ ಉಕ್ಕಿ ಹರಿದು ಇಡೀ ನಗರ ಅಕ್ಷರಶಃ ದ್ವೀಪವೇ ಆಗಿ ಹೋಗಿತ್ತು. ಮುಖ್ಯಮಂತ್ರಿ ಮನೆಯೂ ಜಲ ದಿಗ್ಬಂಧನವಾಗಿತ್ತು. ಅದಕ್ಕಿಂತ ಎರಡು ತಿಂಗಳು ಮೊದಲು ದೆಹಲಿಯಲ್ಲಿ ಉಸಿರಾಡಲಾಗದಷ್ಟು ಹವಾಮಾನದಲ್ಲಿ ವ್ಯತ್ಯಯವಾಗಿತ್ತು. ಇಲ್ಲಿಂದ ಓಡಿ ಹೋದರೆ ಸಾಕು ಎನ್ನುವಷ್ಟರ ಮಟ್ಟಿಗೆ ವಾಯುಮಾಲಿನ್ಯವಾಗಿದ್ದನ್ನು ವರದಿಗಳು ಹೇಳಿದ್ದವು. ಇದು ಬರೀ ದೆಹಲಿ ನಗರವೊಂದರ ಕಥೆಯಲ್ಲ. ಭಾರತದಲ್ಲಿರುವ ಬಹುಪಾಲು ನಗರಗಳ ಕಥೆ. ನಗರದಿಂದ ಅದು ಪಟ್ಟಣ, ಗ್ರಾಮೀಣ ಪ್ರದೇಶವನ್ನೂ ತಲುಪಿಯಾಗಿದೆ. ಸಣ್ಣ ಮಳೆಗೆ ಪ್ರವಾಹ, ಸೂರ್ಯನೇ ನೆರಳಿಗೆ ಓಡಬೇಕಾದಷ್ಟು ಬಿಸಿಲು, ವಾಯು ಕೂಡ ಮಲಿನಗೊಂಡಿದೆ. ನೀರು ಕಲುಷಿತವಾಗಿದೆ. ಅಂತರ್ಜಲ ಕುಸಿದು ಪಾತಾಳ ಕಂಡಿದೆ. ಬೃಹತ್ ಕಟ್ಟಡಗಳು, ಅಪಾರ್ಟ್ ಮೆಂಟ್‌ಗಳು ತಲೆ ಎತ್ತಿವೆ. ನಗರದ ಬೃಹತ್ ನಾಲೆಗಳು ಕಸದಿಂದ ತುಂಬಿ ಹೋಗಿವೆ. ಪ್ಲಾಸ್ಟಿಕ್ ಇಲ್ಲದೇ ಮನೆಗೆ ಹೋಗಲು ಆಗುವುದೇ ಇಲ್ಲ. ರಸ್ತೆ ಅಗಲೀಕರಣಕ್ಕೆ ಮರಗಳ ಹನನವಾದರೆ ಅದು ಅಲ್ಲಿಗೆ ಮುಗಿದೇ ಹೋಯಿತು.ಸಸಿ ನೆಟ್ಟರೆ ಮರವಾಗುವುದು ಯಾವಾಗಲೋ?
ಪರಿಸರ ದಿನದ ಸುತ್ತ ಮುತ್ತ
ವಿಶ್ವ ಪರಿಸರ ದಿನ( World Environment day) ಮತ್ತೊಮ್ಮೆ ಬಂದಿದೆ. ಹವಾಮಾನ ವೈಪರಿತ್ಯ( Climate Change)ದ ಪರಿಣಾಮಗಳನ್ನು ನಮ್ಮನ್ನು ಬಾಧಿಸುತ್ತಿವೆ, ಅದೆಲ್ಲವೂ ನಮ್ಮ ಮನೆ ಬಾಗಿಲಿಗೆ, ನಿತ್ಯದ ಬದುಕಿನ ಭಾಗವಾಗಿಯೇ ಹೋಗಿದೆ. ಪರಿಸರದ ಕುರಿತು ಭಾಷಣ ಬಿಗಿದು, ಒಂದೆರಡು ಕಡೆ ಸಸಿ ನೆಟ್ಟರೆ ಇನ್ನು ಮತ್ತೊಂದು ಪರಿಸರ ದಿನವೇ ಬರಬೇಕು ಎನ್ನುವ ಹಂತಕ್ಕೆ ನಾವು ಬಂದಿದ್ದೇವೆ. ಇದರ ಹಿಂದೆ ಇರುವುದು ನಮ್ಮದೇ ಬದುಕಿನಲ್ಲಿ ಆಗಿರುವ ಬದಲಾವಣೆ, ಇದರ ಪರಿಣಾಮ ಆಗುತ್ತಿರುವುದು ಪ್ರಕೃತಿಯ ಮೇಲೆ. ಇದರ ಫಲ ಉಣ್ಣುತ್ತಿರವುದು ನಾವೇ.
ಬಿಹಾರ, ರಾಜಸ್ತಾನ ಮಾತ್ರವಲ್ಲದೇ ಕರ್ನಾಟಕದ ರಾಯಚೂರಿನಲ್ಲೂ ಈ ಬಾರಿ ಬಿರುಬಿಸಿಲು ಎಷ್ಟಿತ್ತು ಎಂದರೆ ಜನ ಜೀವ ಬಿಡುವ ಹಂತಕ್ಕೂ ಹೋಯಿತು. ನೂರಕ್ಕೂ ಹೆಚ್ಚು ಮಂದಿ ಈ ಬಾರಿ ಬಿಸಿಲಿನ ಝಳ ತಾಳಲಾರದೇ ಮೃತಪಟ್ಟರು. ಮಕ್ಕಳಂತೂ ಶಾಲೆಯಲ್ಲಿಯೇ ಬಿಸಿಲ ಕಾವು ತಾಳಲಾರದೇ ಅಸ್ವಸ್ಥರಾಗಿದ್ದನ್ನು ಕಂಡರೆ ಅಬ್ಬಾ ಎನ್ನಿಸದೇ ಇರಲಾರದು.
ಮಳೆ ಎಂದರೇ ಭಯ
ಈಗ ಸಂಜೆಯಾಗುತ್ತಲೇ ಮೋಡ ಕವಿದ ವಾತಾವರಣ. ಅಬ್ಬಾ ಮಳೆ ಬಂದರೆ ಹೇಗಪ್ಪಾ ಎನ್ನುವ ದುಗುಡ ಮನಸಿನಲ್ಲಿಯೇ ಬಂದು ಬಿಡುವುದು ಸಾಮಾನ್ಯ, ಒಂದೇ ಗಂಟೆ ಎಡಬಿಡದೇ ಮಳೆ ಸುರಿಯಿತು ಎಂದರೆ ಮುಗಿದೇ ಹೋಯಿತು. ರಸ್ತೆಗಳೇ ಚರಂಡಿಗಳು. ಸಂಚರಿಸುವವರ ಪಾಡು ಹೇಳತೀರದು. ಬೆಂಗಳೂರು ಮಾತ್ರವಲ್ಲ ಹುಬ್ಬಳ್ಳಿ ನಗರವನ್ನೂ ಈ ಸಮಸ್ಯೆ ಬೇಸಿಗೆಯಲ್ಲಿಯೇ ಕಾಡಿತು. ಇನ್ನು ಮಳೆಗಾಲದಲ್ಲಿ ಪರಿಸ್ಥಿತಿ ಹೇಗಿರಬೇಡ.
ಎರಡು ದಶಕದ ಅಂತರದಲ್ಲಿಯೇ ಇದು ಆಗಿರುವ ಬದಲಾವಣೆಯ ನೋಟವಿದು. ಬೃಹತ್ ಕಟ್ಟಡಗಳ ನಿರ್ಮಿಸಿದರೂ ನೀರು ಹರಿಯುತ್ತಿದ್ದ ನಾಲೆಗಳನ್ನು ಮುಚ್ಚಿ ಮಳೆ ಬಂದರೆ ನೀರು ಇಂಗಲೂ ವ್ಯವಸ್ಥೆ ಮಾಡಿಕೊಳ್ಳದೇ ರಸ್ತೆಗೆ ಹರಿಯುವಂತೆ ಮಾಡಿಕೊಂಡಿದ್ದೇವೆ. ನೀರು ಇಂಗದೇ ಹರಿದು ಹೋಗಲು ವ್ಯವಸ್ಥೆ ಇಲ್ಲದೇ ಇದ್ದಾಗ ಮನೆಗೆ ನುಗ್ಗೋದು ಸಾಮಾನ್ಯ.
ಹಿಂದೆಲ್ಲಾ ಆಯಾ ಕಾಲಗುಣಕ್ಕೆ ಅನುಗುಣವಾಗಿ ಬೆಳೆ ಬೆಳೆಯುತ್ತಿದ್ದುದು ಸಾಮಾನ್ಯವಾಗಿತ್ತು. ಈಗ ಆಹಾರ ಕ್ರಾಂತಿಯ ಕಾರಣದಿಂದಾಗಿ ಯಾವ ಕಾಲಕ್ಕೆ ಏನನ್ನಾದರೂ, ಯಾವ ಪ್ರದೇಶದಲ್ಲಿ ಎಂತಹ ಬೆಳೆಯನ್ನಾದರೂ ತೆಗೆಯಬಲ್ಲೆವು, ಹವಾಗುಣ, ಮಣ್ಣಿನ ಗುಣಮಟ್ಟ ಇವೆಲ್ಲವೂ ಮುಖ್ಯ ಅಲ್ಲವೇ ಅಲ್ಲ.
ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ಪ್ರತಿ ವರ್ಷ ಹವಾಮಾನ ವೈಪರಿತ್ಯದಿಂದಾಗಿ ಅಂದಾಜು 1.20 ಕೋಟಿ ಹೆಕ್ಟೇರ್ ಪ್ರದೇಶ ನಶಿಸುತ್ತಿದೆ. ಇದು ನೇರವಾಗಿ ಆಹಾರ ಮತ್ತು ನೀರಿನ ಮೂಲಗಳ ಮೇಲೆಯೇ ಪರಿಣಾಮ ಬೀರುತ್ತಿದೆ. ಬರದ ಕಾರಣದಿಂದ ಪ್ರತಿ ವರ್ಷ 5.50 ಕೋಟಿ ಮಂದಿ ನೇರ ಪರಿಣಾಮವನ್ನು ಎದುರಿಸುತ್ತಲೇ ಇದ್ದಾರೆ. ಅದರಲ್ಲೂ ಜಾನುವಾರುಗಳು ಹಾಗೂ ಬೆಳೆಯ ಮೇಲಂತೂ ಸಾಕಷ್ಟು ತೊಂದರೆಯಾಗುತ್ತಿರುವುದನ್ನು ಸಂಶೋಧನೆ ಹೇಳುತ್ತದೆ.
ವಾಹನಗಳ ಮಿತಿ ಮೀರಿದ ಬಳಕೆ, ಒಂದೇ ಮನೆಯಲ್ಲಿ ಮೂರ್ನಾಲ್ಕು ಕಾರು, ನಾಲ್ಕೈದು ದ್ವಿಚಕ್ರವಾಹನ ಎನ್ನುವಂತಹ ಸನ್ನಿವೇಶ. ಇವೆಲ್ಲವೂ ನಮ್ಮ ಬದುಕಿಗೆ ಮುಖ್ಯವಾದರೂ ಬಳಕೆ ಹೇಗಿರಬೇಕು ಎನ್ನುವುದನ್ನು ನಮ್ಮ ಕೈ ಮೀರಿ ಹೋಗಿ ಅದು ಪರಿಸರ ಮೇಲೆ ಪರಿಣಾಮ ಬೀರುತ್ತಲೇ. ಅದು ಪರೋಕ್ಷವಾಗಿ ನಮ್ಮನ್ನ ಮತ್ತೊಂದು ರೀತಿಯಲ್ಲಿ ಬಾಧಿಸುತ್ತಲೇ ಇದೆ.
ಅರಣ್ಯ ಬೆಳೆಸುವತ್ತ
ಕರ್ನಾಟಕದಲ್ಲಿ ಅರಣ್ಯದ ಪ್ರದೇಶದ ಪ್ರಮಾಣ ಶೇ.22ರಷ್ಟಿದೆ. ಇದನ್ನು ಶೇ.33ಕ್ಕೆ ಮುಟ್ಟಿಸಬೇಕು ಎನ್ನುವುದು ಹಳೆಯ ಗುರಿ. ಇದಕ್ಕಾಗಿ ನಾವು ವಾರ್ಷಿಕವಾಗಿ ನೆಡಬೇಕಾದ ಸಸಿಗಳ ಸಂಖ್ಯೆ ಬರೋಬ್ಬರಿ 124 ಕೋಟಿ. ಈಗ ನೆಡುತ್ತಿರುವುದು ಬರೀ 5 ಕೋಟಿ ಮಾತ್ರ. ಇದೇ ರೀತಿ ಹೋದರೆ ಇನ್ನು 4 ದಶಕ ದಾಟಿದರೂ ಅರಣ್ಯದ ಗುರಿಯನ್ನು ತಲುಪಲು ಆಗುವುದಿಲ್ಲ. ಇದಕ್ಕಾಗಿ ಶಾಲಾ ಹಂತದಿಂದಲೇ ಮಕ್ಕಳಲ್ಲಿ ಪರಿಸರ, ಮರದ ಮಹತ್ವ ತಿಳಿಸಿಕೊಡುವ ಜತೆಗೆ ಕಡ್ಡಾಯವಾಗಿ ಪ್ರತಿ ವರ್ಷ ಸಸಿ ನೆಟ್ಟು ಅದನ್ನು ಬೆಳೆಸುವ ಮನೋಭಾವ ಬೆಳೆಸಲೇಬೇಕು. ಬೇರೆ ಬೇರೆ ಇಲಾಖೆಗಳು, ಸಂಘ ಸಂಸ್ಥೆಗಳ ಸಹಭಾಗಿತ್ವ ಬಲಪಡಿಸಬೇಕು. ಮರಗಳ ಪ್ರಮಾಣ ವೃದ್ದಿಸಷ್ಟೂ ಹಸಿರು ಹೆಚ್ಚಿ ಇದು ಹವಾಮಾನ್ಯ ಪರಿಹಾರಗಳಿಗೆ ಪರಿಹಾರವಾಗಬಲ್ಲದು ಎನ್ನುವುದು ಸತ್ಯ.
ಪರಿಸರ ಮತ್ತು ಪ್ರವಾಹ
ನಮ್ಮಲ್ಲಿ ನಗರಗಳು ಬೆಳೆದಂತೆ ಪ್ರವಾಹ, ಪರಿಸರ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದಕ್ಕಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಆಗಲೇಬೇಕಾಗುತ್ತದೆ. ನೀವು ಕರ್ನಾಟಕ ಯಾವುದೇ ಪಟ್ಟಣ, ನಗರಗಳಿಗೆ ಹೋದರೆ ರಸ್ತೆ ಬದಿಯಲ್ಲಿ ಕಟ್ಟಡಗಳ ತ್ಯಾಜ್ಯ ಬಿದ್ದಿರುವುದು ಕಾಣುತ್ತದೆ. ಇದೇ ಕಾಲುವೆ, ಚರಂಡಿ ಸೇರಿ ನೀರಿನ ಹರಿವು ಸರಾಗವಾಗಿ ಆಗದಂತೆ ತಡೆಯುತ್ತಿದೆ. ಮತ್ತೊಂದು ಕಡೆ ಮಲಿನ ನೀರು ಸಂಸ್ಕರಿಸಿ ಆಹಾರ, ಔಷಧ, ಅಡುಗೆ ಬಳಸುವುದನ್ನು ಬಿಟ್ಟು ಇತರೆಡೆ ಬಳಸಲು ಯೋಗ್ಯವಾಗುವಂತಹ ಸಂಸ್ಕರಣ ಘಟಕಗಳ ಸ್ಥಾಪನೆ, ನಿರ್ವಹಣೆಯೂ ಬಹುಮುಖ್ಯವೇ, ಇನ್ನು ಕೃಷಿ, ತೋಟಗಾರಿಕೆಯನ್ನು ಜನಸ್ನೇಹಿಯಾಗಿಸುವುದು ಮುಖ್ಯವೇ. ಜನರಿಗೆ ಗುಣಮಟ್ಟದ ಬೆಳೆ ಬೆಳೆಯುವ, ಅದರಲ್ಲೂ ಸಾವಯವ ಉತ್ಪನ್ನಗಳ ಬಳಕೆಗೆ ಪ್ರೇರಣೆಯೂ ಬಲು ಮುಖ್ಯ, ಹವಾಮಾನ ವೈಪರಿತ್ಯ ಎನ್ನುವ ನಾವೇ ಸೃಷ್ಟಿಸಿಕೊಂಡಿರುವ ಸಮಸ್ಯೆಗೆ ಹತ್ತಾರು ಇಲಾಖೆಗಳು ಕೈಜೋಡಿಸಿ ನೀತಿ ನಿರೂಪಣೆ ಮಾಡಿ ಅದಕ್ಕೆ ಸೂಕ್ತ ಆರ್ಥಿಕ ಬೆಂಬಲದೊಂದಿಗೆ ಯೋಜನೆ ಜಾರಿಗೊಳಿಸಿದಾಗ ಮಾತ್ರ ಪರಿಹಾರ ಸಿಗಬಹುದು. ಆಯಾ ನಗರಗಳಿಗೆ ಹೊಂದಿ ಸೂಕ್ತ ಎನ್ನಿಸುವ ಪರಿಸರ ಸ್ನೇಹಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಆಗಲೇಬೇಕಿದೆ. ಮೈಸೂರಿಗೆ ಕೆರೆ ರಕ್ಷಣೆಯೋ, ಬೆಂಗಳೂರಿನಲ್ಲಿ ಹಸಿರು ಉಳಿಸಿ ನಗರ ಕೇಂದ್ರಿತ ಪರಿಸರ ಮಾಲಿನ್ಯ ತಗ್ಗಿಸುವ, ಉತ್ತರ ಕರ್ನಾಟಕ ಊರುಗಳಲ್ಲಿ ಅಲ್ಲಿನ ಸಮಸ್ಯೆಗೆ ಪೂರಕ ಪರಿಹಾರವಾಗಬಲ್ಲ ಯೋಜನೆ ಬೇಕಾಗಬಹುದು.
ಹವಾಮಾನ ವೈಪರಿತ್ಯ ಎನ್ನುವುದು ಅರಣ್ಯ, ಹಸಿರಿನ ನೇರ ನಂಟು ಹೊಂದಿದೆ. ಅರಣ್ಯ ನಾಶವಾದಷ್ಟು ಪರಿಣಾಮ ಹೆಚ್ಚುತ್ತಲೇ ಇರುತ್ತವೆ. ಮಾತು ಬಾರದ ಪ್ರಾಣಿಗಳು ನಾಡಿಗೆ ನುಗ್ಗಿ ನಮ್ಮ ಅನಾಹುತಗಳ ಪರಿಣಾಮವನ್ನು ನಮಗೆ ಎಚ್ಚರಿಸುತ್ತಲೇ ಇವೆ. ನಾವು ಎಚ್ಚರಗೊಳ್ಳಬೇಕಷ್ಟೇ.
ಕರ್ನಾಟಕದ ನೀತಿ ಹೇಗಿದೆ
ಹವಾಮಾನ ವೈಪರಿತ್ಯದಿಂದ ಆಗುತ್ತಿರುವ ಪರಿಣಾಮ, ಹಸಿರು ಪ್ರಮಾಣ ಹೆಚ್ಚಳ, ನಗರೀಕರಣದ ಪ್ರಭಾವಗಳ ಆಧರಿತ ಸುಸ್ಥಿರ ಯೋಜನೆಗಳನ್ನಾಧರಿಸಿ ಪ್ರತಿ ರಾಜ್ಯಗಳೂ ಪರಿಸರ ನೀತಿ ರೂಪಿಸಬೇಕು ಎಂದು ಕೇಂದ್ರ ಸರ್ಕಾರ ಒತ್ತಿ ಹೇಳುತ್ತಲೇ ಇದೆ. ಕರ್ನಾಟಕವೂ ಈ ನಿಟ್ಟಿನಲ್ಲಿ ಪರಿಸರ ನೀತಿ ರೂಪಿಸುವತ್ತ ಹೆಜ್ಜೆ ಇಟ್ಟಿದೆ. ಕರ್ನಾಟಕದಲ್ಲಿಯೇ ಆರೋಗ್ಯ, ಶಿಕ್ಷಣ, ಅರಣ್ಯ, ಕೃಷಿ, ತೋಟಗಾರಿಕೆ, ಕೈಗಾರಿಕೆ,ಇಂಧನ, ಜಲಸಂಪನ್ಮೂಲದಂತಹ ಪ್ರಮುಖ ಇಲಾಖೆಗಳ ಮೂಲಕವೇ ಹವಾಮಾನ ವೈಪರಿತ್ಯಕ್ಕೆ ಕಾಲಮಿತಿಯ ಪರಿಹಾರಗಳನ್ನು ರೂಪಿಸಲು ನೀತಿ ಸಿದ್ದಪಡಿಸಿ ಒಪ್ಪಿಗೆಯನ್ನು ಪಡೆದಿದೆ. ಕರ್ನಾಟಕ ಸರ್ಕಾರವೂ ಇದಕ್ಕೆ ಅನುಮತಿ ನೀಡಿದೆ. ಅಭಿವೃದ್ದಿ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ಇಲಾಖೆಗಳಿಗೆ ಹೊಣೆ ನಿಗದಿಪಡಿಸಿ ಜಿಲ್ಲಾ, ತಾಲ್ಲೂಕು ಹಂತದಲ್ಲಿ ಪರಿಣಾಮಕಾರಿ ಜಾರಿಯ ಪ್ರಯತ್ನ ಶುರುವಾಗಬೇಕಿದೆ. ಕರ್ನಾಟಕದ ಪರಿಸರ ನೀತಿಯಂತೆ ಹತ್ತಕ್ಕೂ ಹೆಚ್ಚು ಇಲಾಖೆಗಳು ಜನಮುಖಿಯಾಗಿ ಯೋಚಿಸಿದರೆ, ಜನ ನಾವೇ ಸೃಷ್ಟಿಸಿಕೊಂಡ ಸಮಸ್ಯೆಗೆ ನಮ್ಮಂದಿಲೇ ಪರಿಹಾರ ಎಂಧು ಕೈ ಜೋಡಿಸಿದರೆ ಮಾತ್ರ ಮಿತಿ ಮೀರಿದ ಬಿಸಿಲು, ಮಳೆ, ಚಳಿ ಮೂಲಕ ಆಗುತ್ತಿರುವ ಹವಾಮಾನ ವೈಪರಿತ್ಯದ ಪ್ರಮಾಣವನ್ನು ತಗ್ಗಿಸಬಹುದು.
ಕರ್ನಾಟಕದ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಹಿರಿಯ ಐಎಫ್ ಎಸ್ ಅಧಿಕಾರಿ ಬಿ.ಪಿ.ರವಿ ಅವರು ಪರಿಸರ ನೀತಿಗೆ ಒಂದು ಸ್ಪಷ್ಟ ದಿಕ್ಕು ಕೊಟ್ಟು ಸರ್ಕಾರದ ಹಂತದಲ್ಲಿ ಅನುಮತಿ ಪಡೆದು ಜಾರಿಗೊಳಿಸುವ ಹಂತಕ್ಕೆ ಬಂದಿದ್ದಾರೆ, ಈ ವರ್ಷ ಅದು ಕೆಳ ಹಂತಕ್ಕೆ ತಲುಪಿದರೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸಹಿತ ನಮ್ಮೂರುಗಳು ದೆಹಲಿ ಆಗುವುದನ್ನು ತಪ್ಪಿಸಬಹುದಷ್ಟೆ.
ಪೂಚಂತೆ ಮಾತು
ಪರಿಸರ ನಮ್ಮ ಮಗುವಿದ್ದ ಹಾಗೆ. ಮಗುವಿಗೆ ನಾವು ಕಲಿಸುವ ರೀತಿಯಲ್ಲಿ ಅದರ ಭವಿಷ್ಯ ಅಡಗಿದೆ. ಪರಿಸರವನ್ನು ನಾವು ರೂಪಿಸಿಕೊಳ್ಳುವ ರೀತಿಯಲ್ಲಿಯೇ ನಮ್ಮ ಭವಿಷ್ಯವೂ ಅಡಗಿದೆ. ಮಾನವನಿಗೆ ಪ್ರಕೃತಿಯ ಅಗತ್ಯವಿದೆ ಹೊರತು ಪ್ರಕೃತಿಗೆ ಮಾನವನ ಅಗತ್ಯವಿಲ್ಲ ಎನ್ನುವ ಪರಿಸರ ಬರಹಗಳ ಮೂಲಕ ನಮ್ಮೆಲ್ಲರನ್ನೂ ಜಾಗೃತಗೊಳಿಸಿದ ಪೂರ್ಣಚಂದ್ರ ತೇಜಸ್ವಿ ಅವರ ಮಾತು ನಮ್ಮ ಹೃದಯಕ್ಕೆ ಇಳಿಯಲಿ.