HD Kumaraswamy on PM Modi: ಪ್ರಧಾನಿ ಮೋದಿ ರಾಜ್ಯಕ್ಕೆ ನೂರು ಬಾರಿ ಬಂದರೂ ಬಿಜೆಪಿ ಗೆಲ್ಲುವುದಿಲ್ಲ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
Jan 14, 2023 06:32 PM IST
ಪ್ರೆಸ್ ಕ್ಲಬ್ ಸಂವಾದದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ, ವರದಿಗಾರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಇದ್ದಾರೆ.
ಪ್ರಧಾನಿ ಮೋದಿ ರಾಜ್ಯಕ್ಕೆ ನೂರು ಬಾರಿ ಬಂದರೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಕಾಂಗ್ರೆಸ್ ಗೆ ಶಕ್ತಿ ಇಲ್ಲ, ಜೆಡಿಎಸ್ ಪಕ್ಷಕ್ಕೆ ಬಹುಮತ ಸಿಗಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ನೂರು ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಜೆಡಿಎಸ್ ಪಕ್ಷಕ್ಕೆ ಯಾವ ಆತಂಕವೂ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಇಂದು (ಜ.14, ಶನಿವಾರ) ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹೆಸರಿಟ್ಟುಕೊಂಡೇ ರಾಜ್ಯದ ಬಿಜೆಪಿ ನಾಯಕರು ಚುನಾವಣೆಗೆ ಹೋಗುತ್ತಿದ್ದಾರೆ. ಮೋದಿ ನಾಮಬಲ ಇಲ್ಲದಿದ್ದರೆ ರಾಜ್ಯ ಬಿಜೆಪಿ ಶೂನ್ಯ. ಕಾಂಗ್ರೆಸ್ ನವರು ಭಾರತ್ ಜೋಡೋ ಅಂತಾರೆ. ಆದರೆ ನಾವು ಪಂಚರತ್ನ ಕಾರ್ಯಕ್ರಮಗಳ ಆಧಾರದ ಮೇಲೆ ಜನರ ಬಳಿಗೆ ಹೋಗುತ್ತಿದ್ದೇವೆ ಎಂದರು.
ಬಿಜೆಪಿಯವರ ನಡವಳಿಕೆಯಿಂದ ಜನ ಬೇಸತ್ತು ಹೋಗಿದ್ದಾರೆ
ಬಿಜೆಪಿಯವರ ನಡವಳಿಕೆಯಿಂದ ಜನ ಬೇಸತ್ತು ಹೋಗಿದ್ದಾರೆ. ಮಂಡ್ಯಕ್ಕೆ ಅಮಿತ್ ಶಾ ಬಂದು ಹೋಗಿರೋದು ಯಾವುದೇ ಪರಿಣಾಮ ಬೀರಲ್ಲ. ಬೇಕಿದ್ದರೆ ಬರದಿಟ್ಟುಕೊಳ್ಳಿ, ಮಂಡ್ಯದಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್ ಮತ್ತೊಮ್ಮೆ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ಹೆಚ್ಡಿಕೆ ಹೇಳಿದರು.
ಬಡತನ ನಿವಾರಣೆ ನನ್ನ ಅಜೆಂಡಾ:
ನನ್ನ ನಿಲುವು ಬಡತನ ಹೋಗಲಾಡಿಸುವುದು. ಇದು ನನ್ನ ಅಜೆಂಡಾ. ನಾಡಿನ ಜನತೆ ಏನು ಬಯಸುತ್ತಾರೋ ಅದನ್ನು ಈಡೇರಿಸುವ ನಿಲುವು ನಮ್ಮದು. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳು ಕೇವಲ ರಾಜಕೀಯ ಮಾಡಿಕೊಂಡು ಹೋಗುತ್ತಿವೆ. ಇದು ಚೆನ್ನಾಗಿ ಅರ್ಥವಾಗುತ್ತಿದೆ.
ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇಲ್ಲ:
2006ರಲ್ಲಿ ನಾವು 58 ಸ್ಥಾನ ಗೆದ್ದಿದ್ದೆವು. ಆಗ ಎಂ.ಪಿ.ಪ್ರಕಾಶ್ ಸೇರಿದಂತೆ ಆನೇಕ ನಾಯಕರು ಇದ್ದರು. ನಂತರ ಬಿಟ್ಟು ಹೋದರು. 2008, 2013 ಹಾಗೂ 2018ರಲ್ಲಿ ನಮ್ಮದು ಏಕಾಂಗಿ ಹೋರಾಟ ಆಯಿತು. ಏಕಾಂಗಿ ಹೋರಾಟದಲ್ಲೂ ನಾವು 25 ಸ್ಥಾನಗಳನ್ನು ಗೆದ್ದಿದ್ದೇವೆ. ಕಾಂಗ್ರೆಸ್ ಗೆದ್ದಿದ್ದು ನಮ್ಮ ದುಡಿಮೆಯಿಂದ. ಬಿ.ಎಸ್.ಯಡಿಯೂರಪ್ಪ ಆಗ ಬಿಜೆಪಿ ಬಿಟ್ಟಿದ್ದರಿಂದ ಅವರು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
2018 ರಲ್ಲಿ ಬಿಜೆಪಿ ಬಿ ಟೀಂ ಜೆಡಿಎಸ್. ಹೀಗಾಗಿ ಅವರ ಪರ ಮತ ಹಾಕಬೇಡಿ ಅಂತ ಇಡೀ ರಾಜ್ಯದಲ್ಲಿ ನಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದರು. ಆದರೂ ನಮ್ಮ ಪಕ್ಷ ಏಕಾಂಗಿ ಹೋರಾಟ ನಡೆಸಿ ತೃಪ್ತಿಕರ ಸಾಧನೆ ಮಾಡಿತು. ಆದರೆ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಶಕ್ತಿ 60-70 ಸೀಟು ಮಾತ್ರ. ನಮಗೆ ಹಣದ ಕೊರತೆ ಇತ್ತು. ನಮಗೆ ಜನರ ಪ್ರೀತಿಯ ಕೊರತೆ ಇಲ್ಲ. ನಾನು ಈಗ ನಿತ್ಯ ಹಳ್ಳಿಗಳ ಕಡೆ ಹೋಗುತ್ತಿದ್ದೇನೆ. 116 ಕ್ಷೇತ್ರಗಳನ್ನು ಮಾರ್ಚ್ ವೇಳೆಗೆ ಪೂರ್ಣಗೊಳಿಸುತ್ತೇನೆ. ಉತ್ತರ ಕರ್ನಾಟಕಕ್ಕೆ ಹೋಗೋದೇ ಇಲ್ಲ ಅಂದರು. ಇಂದು ಹೋಗಿ ಬಂದಿದ್ದೇನೆ ಎಷ್ಟು ಜನ ಸೇರಿದ್ದಾರೆ ನೋಡಿ ಎಂದು ವಿವರಿಸಿದರು.
2023 ನಮ್ಮ ರಾಜ್ಯಕ್ಕೆ ವಿಶೇಷವಾದ ವರ್ಷ. ಅನೇಕ ಸವಾಲುಗಳು ವಿವಿಧ ರಂಗಗಳಲ್ಲಿ ಇವೆ. ಇದು ಸವಾಲುಗಳ ವರ್ಷ, ಶ್ರಮ ಪಡುವ ವರ್ಷ. ಚುನಾವಣೆಗೂ ಮುಂಚೆ ನಾಲ್ಕು ತಿಂಗಳ ಸಮಯ ಇದೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ ಹಾಗು ಹೋಗುಗಳು ಹಾಗೂ ಮುಂದಿನ ದಿನಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡುವ ದಿನವಾಗಿದೆ. ಅನೇಕರಿಗೆ ಒಂದೊಂದು ಅನುಭವ ಆಗಿವೆ
ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂತು. ಅವರು ಅನೇಕ ಸವಾಲುಗಳನ್ನು ಎದುರಿಸಿದರು. ಕೋವಿಡ್, ಅಕಾಲಿಕ ಮಳೆ ಮತ್ತಿತರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದು ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದರು.
ನನ್ನ ಆರೋಗ್ಯದ ಬಗ್ಗೆ ಚರ್ಚೆ ಆಗುತ್ತಿದೆ:
ನಾಲ್ಕುವರೆ ವರ್ಷದಲ್ಲಿ ಜೆಡಿಎಸ್ ಬಗ್ಗೆ ಅನೇಕ ವ್ಯಾಖ್ಯಾಗಳೂ ಬಂದಿವೆ. ಜೆಡಿಎಸ್ ಶಕ್ತಿ ಸಂಪೂರ್ಣ ಕ್ಷೀಣಿಸಬಹುದು ಎಂದು ಹೇಳಿದ್ದು ಇದೆ. ಇದನ್ನೂ ನಾನು ಗಮನಿಸಿದ್ದೇವೆ. ಪಕ್ಷದ ಸಂಘಟನೆಯ ಹೆಸರಲ್ಲಿ ನಾನು ಕೊರೊನಾ ಸಮಯದಲ್ಲಿ ಜನರಿಗೆ ತೊಂದರೆ ಕೊಡೋದು ಬೇಡವೆಂದು ಸಮ್ಮನಿದ್ದೆ. ಆಗ ರಾಜಕೀಯ ಸಂಘಟನೆಯ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ದೇವೇಗೌಡರಿಗೆ ವಯಸ್ಸಾಗಿದೆ, ಆರೋಗ್ಯ ಸಮಸ್ಯೆ ಇದೆ. ಕುಮಾರಸ್ವಾಮಿ ರಾಜಕೀಯ ನಿರಾಸಕ್ತಿ ಇದೆ ಅಂತ ನಮ್ಮ ಪಕ್ಷದ ಕೆಲವು ಮುಖಂಡರು ಅಂದುಕೊಂಡಿದ್ದೂ ನಿಜ. ಅವರ ರಾಜಕೀಯ ಭವಿಷ್ಯಕ್ಕೆ ಅವರು ನಿರ್ಧಾರ ಮಾಡಿಕೊಂಡರು. ಅನೇಕರು ವಾಪಸ್ ಬರದೇ ಇದ್ದವರೂ ಇದ್ದಾರೆ, ವಾಪಸ್ ಬಂದವರೂ ಇದ್ದಾರೆ ಎಂದು ಹೇಳಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ, ವರದಿಗಾರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಈ ವೇಳೆ ಉಪಸ್ಥಿತರಿದ್ದರು.