logo
ಕನ್ನಡ ಸುದ್ದಿ  /  ಕರ್ನಾಟಕ  /  Explained: ಭಾರತದಲ್ಲಿ ಚುನಾವಣೆ ಮತ್ತು ಎಕ್ಸಿಟ್‌ ಪೋಲ್‌, ಮೊದಲ ಮತಗಟ್ಟೆ ಸಮೀಕ್ಷೆ ನಡೆದದ್ದು ಯಾವಾಗ ನೆನಪಿದೆಯಾ..

Explained: ಭಾರತದಲ್ಲಿ ಚುನಾವಣೆ ಮತ್ತು ಎಕ್ಸಿಟ್‌ ಪೋಲ್‌, ಮೊದಲ ಮತಗಟ್ಟೆ ಸಮೀಕ್ಷೆ ನಡೆದದ್ದು ಯಾವಾಗ ನೆನಪಿದೆಯಾ..

HT Kannada Desk HT Kannada

Dec 01, 2023 09:16 PM IST

google News

ಚುನಾವಣಾ ಮತಗಟ್ಟೆ ಸಮೀಕ್ಷೆ (ಸಾಂಕೇತಿಕ ಚಿತ್ರ)

  • ದೇಶದಲ್ಲಿ ಕಳೆದ 24 ಗಂಟೆಗಳಿಂದ ಎಕ್ಸಿಟ್ ಪೋಲ್ ಸಮೀಕ್ಷೆಗಳದ್ದೇ ಚರ್ಚೆ. ಹಾಗಾದರೆ ಇಂತಹ ಸಮೀಕ್ಷೆಗಳನ್ನು ನಡೆಸಲು ಅನುಸರಿಸುವ ಮಾನದಂಡಗಳೇನು? ಎಷ್ಟರ ಮಟ್ಟಿಗೆ ನಿಖರವಾಗಿರುತ್ತವೆ? ವಿವರ ನೀಡಿದ್ದಾರೆ ಎಚ್.ಮಾರುತಿ

ಚುನಾವಣಾ ಮತಗಟ್ಟೆ ಸಮೀಕ್ಷೆ  (ಸಾಂಕೇತಿಕ ಚಿತ್ರ)
ಚುನಾವಣಾ ಮತಗಟ್ಟೆ ಸಮೀಕ್ಷೆ (ಸಾಂಕೇತಿಕ ಚಿತ್ರ) (MRT/ HTKannada)

ಕಳೆದ 24 ಗಂಟೆಗಳಿಂದ ಇಡೀ ದೇಶದಲ್ಲಿ ಎಕ್ಸಿಟ್ ಪೋಲ್ ಅಥವಾ ಮತಗಟ್ಟೆ ನಿರ್ಗಮನ ಸಮೀಕ್ಷೆಗಳದ್ದೇ ಸುದ್ದಿ ಮತ್ತು ಚರ್ಚೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ, ಯಾವ ಪಕ್ಷ ಅಧಿಕಾರ ಉಳಿಸಿಕೊಳ್ಳಲಿದೆ ಮತ್ತು ಕಳೆದುಕೊಳ್ಳಲಿದೆ ಎಂಬ ವಿಷಯಗಳನ್ನು ಫಲಿತಾಂಶ ಪ್ರಕಟವಾಗುವವರೆಗೆ ಎಲ್ಲ ರೀತಿಯ ಸಂವಹನ ಮಾಧ್ಯಮಗಳಲ್ಲಿ ನಿರಂತರವಾಗಿ ಚರ್ಚೆ ನಡೆಯುತ್ತಲೇ ಇರುತ್ತದೆ.

ಹಾಗಾದರೆ ಎಕ್ಸಿಟ್ ಪೋಲ್ ಎಂದರೇನು? ಹೇಗೆ ನಡೆಸುತ್ತಾರೆ? ಎಷ್ಟರ ಮಟ್ಟಿಗೆ ನಿಖರವಾಗಿರುತ್ತವೆ ಎಂಬ ಕುತೂಹಲ ನಿಮ್ಮನ್ನು ಕಾಡುತ್ತಿರಬೇಕಲ್ಲವೇ ? ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ.

ಮತದಾನ ಮಾಡಿ ಮತಗಟ್ಟೆಗಳಿಂದ ಆಚೆ ಬರುವಾಗ ಮತದಾರರನ್ನು ಭೇಟಿ ಮಾಡಿ ಅವರಿಗೆ ನಿಗದಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮತದಾರರು ಕೊಟ್ಟ ಉತ್ತರಗಳ ಆಧಾರದ ಮೇಲೆ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಊಹಿಸಲಾಗುತ್ತದೆ. ಈ ರೀತಿ ಎಕ್ಸಿಟ್ ಪೋಲ್ ಗಳನ್ನು ನಡಸುವ ಅನೇಕ ಸಂಸ್ಥೆಗಳು ಭಾರತದಲ್ಲಿವೆ.

ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಯಾವಾಗ ಪ್ರಕಟಿಸಲಾಗುತ್ತದೆ?

ಇತ್ತೀಚೆಗೆ ಚುನಾವಣೆ ಮುಗಿದ ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಸಂಜೆ 6.30ರ ನಂತರ ಪ್ರಕಟ ಮಾಡಲಾಗಿದೆ. ಚುನಾವಣೆಗೆ ಮತದಾನ ಆರಂಭವಾದ ದಿನದಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಮುಗಿಯುವ ದಿನ ಸಂಜೆ 6.30 ರವರೆಗೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದ ಮೂಲಕ ಪ್ರಕಟ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.

ಭಾರತದಲ್ಲಿ ಎಕ್ಸಿಟ್ ಪೋಲ್ ಆರಂಭವಾಗಿದ್ದು ಯಾವಾಗ?

1960ರ ದಶಕದಲ್ಲೇ ದೆಹಲಿ ಮೂಲದ ಸೆಂಟರ್ ಫಾರ್ ದ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ ಡಿಎಸ್) ದೇಶೀಯವಾಗಿ ಎಕ್ಸಿಟ್ ಪೋಲ್ ಅನ್ನು ಅಭಿವೃದ್ಧಿಪಡಿಸಿದೆ. ಆದರೆ ಗಂಭೀರವಾಗಿ ಎಕ್ಸಿಟ್ ಪೋಲ್ ಆರಂಭವಾಗಿದ್ದು 1980ರ ದಶಕದಲ್ಲಿ. ಆಗ ಖ್ಯಾತ ಪತ್ರಕರ್ತ ಪ್ರಣಯ್ ರಾಯ್ ಮತ್ತು ಡೇವಿಡ್ ಬಟ್ಲರ್ ಎಂಬುವರು ಜೊತೆಯಾಗಿ ಎಕ್ಸಿಟ್ ಪೋಲ್ ಆರಂಭಿಸಿದರು. 1996ರಲ್ಲಿ ದೂರದರ್ಶನದಲ್ಲೂ ಎಕ್ಸಿಟ್ ಪೋಲ್ ಸಮೀಕ್ಷೆಗಳು ಪ್ರಕಟವಾಗಲು ಆರಂಭವಾಯಿತು.

ಸಮೀಕ್ಷೆ ನಡೆಸಲು ಮತದಾರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮತದಾರನ ಲಿಂಗ, ಶಿಕ್ಷಣ, ವಯಸ್ಸು, ರಾಜ್ಯ ಜಿಲ್ಲೆ ಹೀಗೆ ವಿವಿಧ ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗುತ್ತದೆ. 524 ಲೋಕಸಭಾ ಸದಸ್ಯರಿರುವ ಲೋಕಸಭಾ ಚುನಾವಣೆಗೆ ಹೆಚ್ಚೆಂದರೆ 20,000 -30,000 ಮತದಾರರ ಸಮೀಕ್ಷೆ ಮಾಡಲಾಗುತ್ತದೆ. ಇಷ್ಟು ಮಂದಿಯನ್ನು ಎಲ್ಲಾ ರಾಜ್ಯ ಮತ್ತು ಕ್ಷೇತ್ರಗಳಿಂದ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಯಾವುದೇ ಸಂಸ್ಥೆಯ ಸಮೀಕ್ಷೆಯು ಎಲ್ಲಾ ಚುನಾವಣೆಗಳಲ್ಲೂ ನಿಖರತೆ ಹೊಂದಿರುವುದಿಲ್ಲ. ಜನಪ್ರತಿನಿಧಿ ಕಾಯ್ದೆ ಪ್ರಕಾರ ಮತದಾನಕ್ಕೂ ಮುನ್ನ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಪ್ರಕಟಮಾಡುವಂತಿಲ್ಲ.

ಎಕ್ಸಿಟ್ ಪೋಲ್ ಸಮೀಕ್ಷೆಗಳು ನಿಖರವೇ?

ಭಾರತದಂತಹ ದೇಶದಲ್ಲಿ ಚುನಾವಣಾ ಫಲಿತಾಂಶಗಳನ್ನು ಊಹಿಸುವುದು ಕಷ್ಟ ಸಾಧ್ಯ. ಯಾವುದೇ ಮಾನದಂಡಗಳನ್ನು ಅನುಸರಿಸಿ ಎಕ್ಸಿಟ್ ಪೋಲ್ ಸಮೀಕ್ಷೆ ನಡೆಸಿದರೂ ಇಂತಹ ಪಕ್ಷ ಇಂತಿಷ್ಟೇ ಸ್ಥಾನಗಳನ್ನು ಗೆಲ್ಲುತ್ತದೆ ಇಂತಹವರೇ ಗೆಲ್ಲುತ್ತಾರೆ ಎಂದು ಹೇಳಲಾಗದು. ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಮತ್ತು ಎಷ್ಟು ಮತಗಳನ್ನು ಪಡೆಯಬಹುದು ಎಂದು ಹೇಳಲು ಅಸಾಧ್ಯ. ಉದಾಹರಣೆಗೆ 2004 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಎಲ್ಲ ಎಕ್ಸಿಟ್ ಪೋಲ್ ಸಮೀಕ್ಷೆಗಳೂ ಎನ್ ಡಿ ಎ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದ್ದವು. ಆದರೆ ಸಮೀಕ್ಷೆಗಳು ತಪ್ಪಾಗಿದ್ದವು. 1998 ಮತ್ತು 2014ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಮಾತ್ರ ಎಕ್ಸಿಟ್ ಪೋಲ್ ಸಮೀಕ್ಷೆ ಫಲಿತಾಂಶಕ್ಕೆ ಹತ್ತಿರವಾಗಿದ್ದವು.

ಮತಗಟ್ಟೆ ಸಮೀಕ್ಷೆ ಟೀಕೆಗಳಿಂದ ಮುಕ್ತವಲ್ಲ

ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಟೀಕಾಕಾರರು ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಟೀಕಿಸುತ್ತಾರೆ. ಮತದಾರರ ಆಯ್ಕೆ, ಪ್ರಶ್ನೆಗಳು, ಸಮಯ ಎಲ್ಲವನ್ನೂ ಅವಲೋಕಿಸಿದರೆ ಇಂತಹ ಸಮೀಕ್ಷೆಗಳು ಏಕಪಕ್ಷೀಯವಾಗಿರುತ್ತವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ತಮ್ಮ ಎದುರಾಳಿಗಳು ಇಂತಹ ಸಮೀಕ್ಷೆಗಳಿಗೆ ಆರ್ಥಿಕ ಸಹಾಯ ಒದಗಿಸುತ್ತಾರೆ. ಆದ್ದರಿಂದ ನಿಖರವಾಗಿರುವುದಿಲ್ಲ ಎಂದು ರಾಜಕೀಯ ಪಕ್ಷಗಳು ಹೇಳುತ್ತವೆ. ಚುನಾವಣಾ ಆಯೋಗ 1998ರಲ್ಲಿ ಮತದಾನಕ್ಕೂ ಮುನ್ನ ಇಂತಹ ಸಮೀಕ್ಷೆಗಳ ಪ್ರಸಾರವನ್ನು ನಿಷೇಧಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ