Fake Raid in Shivamogga: ಸರ್ಕಾರಿ ವಾಹನದಲ್ಲೇ ಬಂದು ವಸೂಲಿಗೆ ಇಳಿದ; ಜನರ ಪ್ರಶ್ನೆಗಳಿಗೆ ಅಂಜಿ ಓಡಿ ಹೋದ!; ಸ್ಕಾರ್ಪಿಯೋ ಈಗ ಪೊಲೀಸ್ ವಶ
Nov 02, 2022 07:09 AM IST
ಪೊಲೀಸ್ ವಶಕ್ಕೆ ಸೇರಿದ ಸರ್ಕಾರಿ ವಾಹನ
Fake Raid in Shivamogga: ಆತ ಬಂದದ್ದು ಸರ್ಕಾರಿ ವಾಹನದಲ್ಲೇ. ವಸೂಲಿಗೂ ಇಳಿದ. ಜನರ ಪ್ರಶ್ನೆಗಳನ್ನು ಎದುರಿಸಲಾಗದೆ ತತ್ತರಿಸಿ ಅಲ್ಲಿಂದ ಕಾಲ್ಕಿತ್ತ. ಸ್ಕಾರ್ಪಿಯೋ ಈಗ ಪೊಲೀಸ್ ವಶದಲ್ಲಿದೆ. ಕುತೂಹಲಕಾರಿ ಪ್ರಕರಣ ಹಲವು ಸಂದೇಹಗಳನ್ನು ಹುಟ್ಟುಹಾಕಿದೆ.
ಶಿವಮೊಗ್ಗ: ಅದು ಸರ್ಕಾರಿ ವಾಹನ. ಆಹಾರ ಸುರಕ್ಷತಾ ವಿಭಾಗದ ಆಹಾರ ಅಂಕಿತ ಅಧಿಕಾರಿ ಬಳಸುತ್ತಿದ್ದ ಮಹಿಂದ್ರಾ ಸ್ಕಾರ್ಪಿಯೋ. ಅದರಲ್ಲಿ ಬಂದ ವ್ಯಕ್ತಿ ಶಿವಮೊಗ್ಗ ನಗರದ ಹೋಟೆಲ್, ಬೇಕರಿಗಳಿಗೆ ದಾಳಿ ನಡೆಸಿ, ಮಾಲೀಕರಿಂದ ದಂಡದ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ!
ಪ್ರಜ್ಞಾವಂತ ನಾಗರಿಕರೇ ಈ ಪ್ರಕರಣವನ್ನು ಬಗೆಹರಿಸಿದ್ದಾರೆ. ಸರ್ಕಾರಿ ವಾಹನ ಪೊಲೀಸ್ ವಶಕ್ಕೆ ಹೋಗಿದೆ. ಆದರೂ ಪ್ರಕರಣ ನಿಗೂಢವಾಗಿದ್ದು, ಅನೇಕ ಸಂದೇಹಗಳನ್ನು ಹುಟ್ಟುಹಾಕಿದೆ.
ಆಗಿರುವುದೇನು? ದಾಳಿ ನಡೆಯಿತೇ?
ಶಿವಮೊಗ್ಗ ವಿನೋಬನಗರದಲ್ಲಿ ಹೊಸದಾಗಿ ಶುರುವಾದ ಬೆಣ್ಣೆದೋಸೆ ಹೋಟೆಲ್ ʻಗೊರೂರು ಮಾರ್ಟ್ʼ ಎದುರು ಭಾನುವಾರ ಆಹಾರ ಸುರಕ್ಷತಾ ವಿಭಾಗದ ಆಹಾರ ಅಂಕಿತ ಅಧಿಕಾರಿ ಬಳಸುತ್ತಿದ್ದ ಮಹಿಂದ್ರಾ ಸ್ಕಾರ್ಪಿಯೋ ಬಂದು ನಿಂತಿದೆ. ಅದರಿಂದ ಒಬ್ಬ ಇಳಿದು, ಹೋಟೆಲ್ ಒಳಗೆ ಹೋಗಿ ʻನಾನು ಆಹಾರ ಅಧಿಕಾರಿ. ತಪಾಸಣೆಗೆ ಬಂದಿದ್ದೇನೆʼ ಎಂದು ಹೇಳಿದ್ದ.
ಒಳಗೆಲ್ಲ ನೋಡಿ ಲೋಪಗಳನ್ನು ತೋರಿಸಿ 12,000 ರೂಪಾಯಿ ದಂಡ ಪಾವತಿಸಬೇಕು ಎಂದು ಆತ ಹೇಳಿದ. ಅದಕ್ಕೆ, ʻಅಷ್ಟು ಮೊತ್ತ ಕೂಡಲೇ ಪಾವತಿಸಲಾಗದು. ಇಂದು ಭಾನುವಾರ ಬೇರೆ. ಸೋಮವಾರ ಕಟ್ಟುವೆʼ ಎಂದು ಹೋಟೆಲ್ ಮಾಲೀಕರು ಹೇಳಿ ಕಳುಹಿಸಿದ್ದರು.
ಆತ ಸೋಮವಾರ ಮತ್ತೆ ಅದೇ ವಾಹನದಲ್ಲಿ ಬಂದಿದ್ದ. ಎರಡು ಸಾವಿರ ರೂಪಾಯಿ ಪಡೆದಿದ್ದ. ಅಷ್ಟು ಹೊತ್ತಿಗಾಗಲೇ ಆತ ನಕಲಿ ಅಧಿಕಾರಿ ಎಂಬ ಸುಳಿವು ಸಿಕ್ಕಿದ್ದು, ಕೆಲವು ಮಾಧ್ಯಮದವರು ಸ್ಥಳಕ್ಕೆ ಹೋಗಿದ್ದರು. ಅಲ್ಲಿ ಆತನ ವಿವರ ಮತ್ತು ಗುರುತಿನ ಚೀಟಿ ಕೇಳಿದ್ದಾರೆ
ಇದರಿಂದ ಆತ ಗಾಬರಿಯಾಗಿ ಆಹಾರ ವಿಭಾಗದಲ್ಲಿ ಡೇಟಾ ಎಂಟ್ರಿ ಆಪರೇಟರ್. ಸಾಹೇಬರು ಪರಿಶೀಲನೆಗೆಂದು ನನ್ನನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾನೆ. ಕೂಡಲೇ ಮಾಧ್ಯಮದವರು ಆಹಾರ ಅಂಕಿತ ಅಧಿಕಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ದಾಳಿ ನಡೆಸಿದ ವ್ಯಕ್ತಿ ಯಾರು?
ಆತ ಆಹಾರ ಅಂಕಿತ ಅಧಿಕಾರಿ ಕಚೇರಿಯಲ್ಲಿ ಡೇಟಾ ಎಂಟ್ರಿ ಆಪರೇಟರ್. ಹೆಸರು ಗಂಗಾಧರ್. ಇಲಾಖೆ ವಾಹನದಲ್ಲಿ ಸುತ್ತಾಡಿ ಅಂಗಡಿ, ಹೋಟೆಲ್, ಬೇಕರಿಗಳ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪವಿದೆ.
ಕೂಡಲೇ ಹೋಟೆಲ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ದೂರು ದಾಖಲಿಸಿದ್ದಾರೆ. ವಿನೋಬನಗರ ಪೊಲೀಸರು ವಾಹನ ಜಪ್ತಿ ಮಾಡಿದ್ದು, ವಂಚನೆ ಪ್ರಕರಣ ದಾಖಲಿಸಿದ್ದಾರೆ. ಪರಾರಿಯಾದ ಗಂಗಾಧರ್‌ನ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ.
ಪ್ರಕರಣದಲ್ಲಿರುವ ಸಂದೇಹಗಳೇನು?
ಆಹಾರ ಸುರಕ್ಷತಾ ವಿಭಾಗದ ಅಂಕಿತ ಅಧಿಕಾರಿ ಡಾ.ಮಧು. ಆಹಾರ ಗುಣಮಟ್ಟ, ಸುರಕ್ಷತೆ ಸಂಬಂಧಿಸಿ ದಾಳಿ ನಡೆಸುವ ಅಧಿಕಾರ ಅವರಿಗಿದೆ. ಸ್ಥಳದಲ್ಲೇ ದಂಡ ವಿಧಿಸಿ ವಸೂಲಿ ಕೂಡ ಮಾಡಬಹುದು. ಆದರೆ, ಇಲಾಖೆ ವಾಹನದಲ್ಲಿ ಡಾ.ಮಧು ಇರಲಿಲ್ಲ. ಗಂಗಾಧರ್ ಇದ್ದ. ಮೇಲಧಿಕಾರಿಗಳ ಸೂಚನೆ ಪ್ರಕಾರ ಆತ ನಡೆದುಕೊಂಡನೇ ಅಥವಾ ಚಾಲಕನ ಜತೆಗೂಡಿ ಹಣ ಸುಲಿಗೆ ಮಾಡುತ್ತಿದ್ದನಾ ಎಂಬುದು ಸಂದೇಹ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.