ವಿದ್ಯುತ್ ಬಿಲ್ ಕಟ್ಟಿದ್ದ 200 ರೂ ಕೇಳಿದ್ದಕ್ಕೆ ಅಣ್ಣ-ತಮ್ಮನ ನಡುವೆ ಜಗಳ; ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಸಾವಿನಲ್ಲಿ ಅಂತ್ಯ
Oct 26, 2024 09:12 PM IST
ಮೃತ ಸಿದ್ದರಾಜು.
- Karnataka Crime: ಮೈಸೂರಿನ ನಂಜನಗೂಡು ತಾಲೂಕಿನ ಅಹಲ್ಯ ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಅಣ್ಣ-ತಮ್ಮನ ನಡುವೆ ನಡೆದ ಜಗಳ ತಮ್ಮನ ಸಾವಿನಲ್ಲಿ ಅಂತ್ಯವಾಗಿದೆ. ಮತ್ತೊಂದು ಪ್ರಕರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ರೌಡಿಶೀಟರ್ ಬಂಧನವಾಗಿದೆ.
ಮೈಸೂರು: ಕ್ಷುಲಕ ಕಾರಣಕ್ಕೆ ನಡೆದ ಗಲಾಟೆ ತಮ್ಮನ ಸಾವಿನಲ್ಲಿ ಅಂತ್ಯವಾಗಿದೆ. ಅಣ್ಣನ ಬಳಿ ವಿದ್ಯುತ್ ಬಿಲ್ ಕಟ್ಟಿದ್ದ 200 ರೂಪಾಯಿ ಕೇಳಿದ ಸಂದರ್ಭದಲ್ಲಿ ಪರಸ್ಪರ ಜಗಳ ಆರಂಭಗೊಂಡಿತ್ತು. ಗಲಾಟೆ ಬಳಿಕ ತಮ್ಮನನ್ನು ಅಣ್ಣ ಮನೆಯಿಂದ ಹೊರ ಹಾಕಿದರು. ಇದರಿಂದ ಬೇಸತ್ತ ತಮ್ಮ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸಿದ್ದರಾಜು (32) ಮೃತ ದುರ್ದೈವಿ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಹಲ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ಕರೆಂಟ್ ಬಿಲ್ ಕಟ್ಟಿ ಮನೆಗೆ ಬಂದ ನಂತರ ಅದರ ಹಣವನ್ನು ಕೇಳಿದ್ದಕ್ಕೆ ಜಗಳ ಆರಂಭವಾಗಿದೆ. ಹೀಗಾಗಿ, ಮನೆಯಿಂದ ಅಣ್ಣ, ತಮ್ಮನನ್ನು ಹೊರ ದಬ್ಬಿದ್ದಾನೆ. ಹೊರ ಬಂದ ತಮ್ಮ ಗ್ರಾಮದ ಹೊರ ವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಗ್ರಾ.ಪಂ ಸದಸ್ಯೆಯ ಪತಿ ಹತ್ಯೆ ಪ್ರಕರಣ, ರೌಡಿಶೀಟರ್ ಬಂಧನ
ಮೈಸೂರು: ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಪತಿಯ ಕೊಲೆ ಪ್ರಕರಣವನ್ನು ಭೇದಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಪ್ರಮುಖ ರೌಡಿಶೀಟರ್ನನ್ನು ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಗೋವರ್ಧನ್ (36) ಸೇರಿದಂತೆ ನಾಲ್ವರ ಬಂಧನವಾಗಿತ್ತು. ಇದೀಗ ಒಟ್ಟಾರೆ ಐವರು ಬಂಧನಕ್ಕೆ ಒಳಪಟ್ಟಿದ್ದಾರೆ. ನಂಜನಗೂಡಿನ ನೀಲಕಂಠನಗರ ನಿವಾಸಿ ಜಾಹಿರ್ (25), ಹಳ್ಳದಕೇರಿ ನಿವಾಸಿ ಮಣಿಕಂಠ (24), ಕೆಎಚ್‌ಬಿ ಕಾಲೋನಿ ನಿವಾಸಿ ಮಹೇಂದ್ರ (25) ಬಂಧನವಾಗಿತ್ತು. ಇದೀಗ ಪ್ರಮುಖ ಆರೋಪಿ ರೌಡಿಶೀಟರ್ ಧನರಾಜ್ ಆಲಿಯಾಸ್ ಭೋಲಾರನ್ನು ಬಂಧಿಸಿದ್ದಾರೆ.
ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದು ಹತ್ಯೆ ಕೇಸ್ನಲ್ಲಿ ಭಾಗಿಯಾಗಿರುವ ಧನರಾಜ್ ಆಲಿಯಾಸ್ ಭೋಲಾ ಮತ್ತೆ ಜೈಲುಪಾಲಾಗಿದ್ದಾರೆ. ಕೊಲೆ ಆರೋಪಿಯೂ ಆಗಿರುವ ಬಿಜೆಪಿ ಮುಖಂಡ ಗೋವರ್ಧನ್ ಸ್ನೇಹಿತನೂ ಹೌದು. ಅಕ್ಟೋಬರ್ 6 ರಂದು ನಂಜನಗೂಡಿನ ದೇವರಸನಹಳ್ಳಿಯಲ್ಲಿ ಕೊಲೆ ನಡೆದಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸೌಭಾಗ್ಯ ಪತಿ ನಂಜುಂಡಸ್ವಾಮಿ ಹತ್ಯೆಗೆ ಒಳಗಾದವರು. ಹಾಲಿ ಸದಸ್ಯ ಗೋವರ್ಧನ್ ಅಧಿಕಾರ ಹಸ್ತಾಂತರಕ್ಕೆ ಹಿಂದೇಟು ಹಾಕಿದ್ದರು. ಅಧಿಕಾರ, ಅನುದಾನ ಬಳಕೆಗೆ ಆಪ್ತೆ ಸುಮತಿ ಎಂಬವರನ್ನು ಅಧ್ಯಕ್ಷೆಯನ್ನಾಗಿ ಮಾಡಿದ್ದ ಗೋವರ್ಧನ್, ಸುಫಾರಿ ನೀಡಿದ್ದರು ಎನ್ನಲಾಗಿದೆ.
ಅಕ್ಟೋಬರ್ 6ರಂದು ದೇವರಸನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸೌಭಾಗ್ಯ ಪತಿ ಕೆಬ್ಬೇಪುರ ಗ್ರಾಮದ ನಂಜುಂಡಸ್ವಾಮಿ (47) ಅವರ ಶವ ಹೊಸೂರು ಸಮೀಪ ಪತ್ತೆಯಾಗಿತ್ತು. ಕೈಕಾಲು ಮುರಿದು, ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಕಂಡು ಬಂದಿತ್ತು. ಭತ್ತದ ಗದ್ದೆಯಲ್ಲಿ ಬಿಸಾಡಿ ಅಪಘಾತ ಎಂಬಂತೆ ಬಿಂಬಿಸಿದ್ದರು. ಈ ಸಂಬಂಧ ತನ್ನ ಪತಿಯನ್ನು ರಾಜಕೀಯ ಪ್ರೇರಿತವಾಗಿ ಕೊಲೆ ಮಾಡಿದ್ದಾರೆ ಎಂದು ಪತ್ನಿ ದೂರು ದಾಖಲಿಸಿದ್ದರು. ಸೌಭಾಗ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅವರಿಗೆ ಅಧಿಕಾರ ನೀಡಿದರೆ ತನ್ನ ಅಸ್ತಿತ್ವ ಹೋಗುತ್ತದೆ ಎಂದುಕೊಂಡಿದ್ದ ಗೋವರ್ಧನ್, ಗ್ರಾ.ಪಂಗೆ ಬಂದ ಕೋಟಿ ಕೋಟಿ ರೂಪಾಯಿ ಅನುದಾನದ ಕಮೀಷನ್ ಕೈ ತಪ್ಪುತ್ತದೆ ಎಂಬ ಆತಂಕದಲ್ಲಿದ್ದರು. ಈ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.
ಪೊಲೀಸರ ದೌರ್ಜನ್ಯ: ಅಮೃತ ದೇಸಾಯಿ ಖಂಡನೆ
ಧಾರವಾಡ: ತಾಲೂಕಿನ ಗರಗ ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬನನ್ನು ಮಾರಣಾಂತಿಕವಾಗಿ ಥಳಿಸಲಾಗಿದ್ದು, ಪೊಲೀಸರ ಅಮಾನವೀಯ ವರ್ತನೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸರಿಂದ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಕಾರ್ತಿಕ ಈಟಿ ಎಂಬ ಯುವಕನ ಆರೋಗ್ಯ ವಿಚಾರಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಏನಿದು ಘಟನೆ: ಗರಗ ಗ್ರಾಮದ ಕಾರ್ತಿಕ ಈಟಿ ಎಂಬ ಯುವಕ ಆನಂದಗೌಡ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, 6 ತಿಂಗಳ ಹಿಂದೆ ಏಜೆನ್ಸಿಯಲ್ಲಿ ಕಳ್ಳತನದ ಪ್ರಕರಣ ನಡೆದಿತ್ತು. ಈಗ ಅದೇ ಪ್ರಕರಣದ ನೆಪವಿಟ್ಟುಕೊಂಡು ಕಾರ್ತಿಕನೇ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ 3 ದಿನಗಳಿಂದ ಆತನನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಮೃತ ದೇಸಾಯಿ, ಗರಗ ಪೊಲೀಸರು ಹೀಗೆ ದುರುದ್ದೇಶದಿಂದ ನಮ್ಮ ಯುವಕರನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಿ ಥಳಿಸುತ್ತಿದ್ದಾರೆ. ತೀವ್ರ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ತಿಕ ಈಟಿ ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕ ಆನಂದಗೌಡ ಪಾಟೀಲರೇ ಸ್ವತಃ ಕಾರ್ತಿಕ ಒಳ್ಳೆಯ ಹುಡುಗ. ಅವನಿಂದ ಕಳ್ಳತನ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೂ ಪೊಲೀಸರು ಮನಬಂದಂತೆ ಥಳಿಸಿರುವುದನ್ನು ನೋಡಿದರೆ ಇದರ ಹಿಂದೆ ಏನೋ ದುರುದ್ದೇಶ ಅಡಗಿದೆ. ಇದು ಹೀಗೇ ಮುಂದುವರಿದರೆ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ಧ ಎಸ್‌ಪಿಯವರಿಗೆ ದೂರು ನೀಡಿ ಮನವರಿಕೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.