Kerala News: ಕರ್ನಾಟಕ ಆನೆ ದಾಳಿಯಿಂದ ಸಾವು, ಕೇರಳ ವ್ಯಕ್ತಿಗೆ 15 ಲಕ್ಷ ರೂ. ಪರಿಹಾರ, ರಾಹುಲ್‌ಗಾಂಧಿ ಸೂಚನೆಗೆ ಸಿದ್ದರಾಮಯ್ಯ ಸಮ್ಮತಿ
Feb 18, 2024 09:50 PM IST
ಆನೆ ದಾಳಿಯಿಂದ ಮೃತಪಟ್ಟ ಕೇರಳ ವ್ಯಕ್ತಿಗೆ ಕರ್ನಾಟಕ ಸರ್ಕಾರ ಪರಿಹಾರ ನೀಡಲಿದೆ
- ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ರೈತ ಅಜೀಶ್ ಕುಟುಂಬಕ್ಕೆ ಪರಿಹಾರ ನೀಡಲು ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಮ್ಮತಿಸಿದ್ಧಾರೆ. ಹಾಸನ ಜಿಲ್ಲೆಯಲ್ಲಿ ಸೆರೆ ಹಿಡಿದ ಆನೆ ಬಂಡೀಪುರಕ್ಕೆ ಬಿಡಲಾಗಿತ್ತು. ಇದೇ ಆನೆ ದಾಳಿ ಮಾಡಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.
ಬೆಂಗಳೂರು: ಕರ್ನಾಟಕದಿಂದ ಬಂದ ಆನೆ ಕೇರಳದಲ್ಲಿ ರೈತನೊಬ್ಬನ್ನು ಸಾಯಿಸಿದೆ ಎಂದು ಕೇರಳ ಅರಣ್ಯ ಸಚಿವ ಹೇಳಿದ ಬೆನ್ನಲ್ಲೇ ಕರ್ನಾಟಕ ಸರ್ಕಾರವು 15 ಲಕ್ಷ ರೂ. ಪರಿಹಾರ ಪರಿಹಾರ ನೀಡಲು ಸಮ್ಮತಿಸಿದೆ. ಘಟನೆ ಕೇರಳದಲ್ಲಿ ನಡೆದಿದ್ದರೂ ಮೃತಪಟ್ಟ ವ್ಯಕ್ತಿಯನ್ನು ಕರ್ನಾಟಕ ಪ್ರಜೆ ಎಂದು ಪರಿಗಣಿಸಿ ಪರಿಹಾರ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಈ ರೀತಿ ಪರಿಹಾರವನ್ನು ಹೊರ ರಾಜ್ಯದವರಿಗೆ ಕರ್ನಾಟಕ ಅರಣ್ಯ ಇಲಾಖೆ ನೀಡುತ್ತಿರುವುದು ಇದೇ ಮೊದಲು.
ಬಂಡೀಪುರ- ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಿಗೆ ಹೊಂದಿಕೊಂಡಂತಿರುವ ಕೇರಳದ ವಯನಾಡು ಜಿಲ್ಲೆಯಲ್ಲಿ ಕರ್ನಾಟಕದ ಕಾಡಾನೆಗಳು ಉಪಟಳ ನೀಡುತ್ತಿವೆ ಎನ್ನುವ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಕೆಲವೇ ದಿನಗಳ ಅಂತರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಅದರಲ್ಲಿ ಅಜೀಶ್ ಎಂಬುವ ರೈತ ಕಳೆದ ವಾರ ಮನೆಯ ಬಳಿ ನಿಂತಿದ್ದಾಗ ಆನೆ ನುಗ್ಗಿ ದಾಳಿ ಮಾಡಿತ್ತು. ದಾಳಿಯಿಂದ ಅಜೀಶ್ ಮೃತಪಟ್ಟಿದ್ದರು. ಇದಾದ ಕೇರಳ ಅರಣ್ಯ ಸಚಿವ ಶಶೀಂದ್ರನ್ ಅವರು ಕರ್ನಾಟಕದ ಆನೆಗಳು ಕೇರಳಕ್ಕೆ ನುಗ್ಗಿ ನಮ್ಮವರನ್ನು ಸಾಯಿಸುತ್ತಿವೆ ಎಂದು ಆರೋಪಿಸಿದ್ದರು.
ವಯನಾಡು ಜಿಲ್ಲೆಯಲ್ಲಿ ಕಾಡಾನೆ ಕಾಟದಿಂದ ಜನ ರೊಚ್ಚಿಗೆದ್ದಿದರಿಂದ ಸ್ಥಳೀಯ ಸಂಸದರೂ ಆಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷೇತ್ರಕ್ಕೆ ದೌಡಾಯಿಸಿದ್ದರು. ಮೃತ ಅಜೀಶ್ ಕುಟುಂಬಕ್ಕೆ ಸಮಾಧಾನ ಹೇಳಿದ್ದೂ ಅಲ್ಲದೇ ಈ ಕುರಿತು ಮಾಹಿತಿ ಪಡೆದಿದ್ದರು. ಕರ್ನಾಟಕದಿಂದಲೂ ವಿವರಣೆ ಪಡೆದಿದ್ದ ಅವರು ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅರಣ್ಯ ಸಚಿವರಿಗೆ ಸೂಚಿಸಿದ್ದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸಿಎಂ ಜತೆ ಚರ್ಚಿಸಿದ ಬಳಿಕ ಪರಿಹಾರ ನೀಡಲು ಸಮ್ಮತಿಸಲಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ದಂತರಹಿತ ಗಂಡು (ಮಕನಾ) ಆನೆಯನ್ನು 2023 ರ ನವೆಂಬರ್ 30 ರಂದು ಸೆರೆಹಿಡಿಯಲಾಗಿತ್ತು. ನಂತರ ಈ ಆನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಈ ಆನೆಯು ಸುಮಾರು ಎರಡು ತಿಂಗಳ ನಂತರ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಫೆಬ್ರವರಿ 10 ರ ಬೆಳಿಗ್ಗೆ ವಯನಾಡು ಜಿಲ್ಲೆಯ ಬೇಗೂರಿನ ಚತಿಗಡದಲ್ಲಿ ಈ ಆನೆಯೊಂದಿಗೆ ಸಂಘರ್ಷದ ಘಟನೆಯಲ್ಲಿ ರೈತ ಅಜೀಶ್ ಅವರು ಪ್ರಾಣ ಕಳೆದುಕೊಂಡಿದ್ದರು. ಅಜೀಶ್ ರವರ ಸಾವಿಗೆ ಪರಿಹಾರವಾಗಿ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೇರಳದ ಜನಪ್ರತಿನಿಧಿಗಳು ಮತ್ತು ಕೇರಳ ಸರ್ಕಾರವು ಕನಾ೯ಟಕದ ಸರ್ಕಾರವನ್ನು ಕೋರಿತ್ತು.
ಈ ಪ್ರಕರಣದಲ್ಲಿ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಭಾನುವಾರ ಚಚಿ೯ಸಲಾಯಿತು. ಮೃತ ಅಜೀಶ್ ಅವರ ಕುಟುಂಬಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಬಿ ಖಂಡ್ರೆ ತಿಳಿಸಿದ್ದಾರೆ.
ಸೆರೆ ಹಿಡಿದ ಆನೆಗೆ ರೇಡಿಯೋ ಕಾಲರ್ ಹಾಕಲಾಗಿತ್ತು. ಆ ಮಾಹಿತಿ ಆಧರಿಸಿ ಇದೇ ಕರ್ನಾಟಕದ ಆನೆ ಎಂದು ಪತ್ತೆ ಮಾಡಲಾಗಿದೆ. ಈ ಕಾರಣಕ್ಕೆ ಪರಿಹಾರ ನೀಡುವಂತ ಮನವಿ ಮಾಡಲಾಗಿತ್ತು. ನಮ್ಮಿಂದಲೂ ಮಾಹಿತಿ ಕೇಳಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದರು.