logo
ಕನ್ನಡ ಸುದ್ದಿ  /  ಕರ್ನಾಟಕ  /  Viral News: ಒಂದೇ ಚಿರತೆ, 2 ವಿಭಿನ್ನ ಬಣ್ಣದ ಕಣ್ಣು, ವನ್ಯಜೀವಿ ಮಂಡಳಿ ಸದಸ್ಯ ಧೃವ ಪಾಟೀಲ್‌ ಕ್ಯಾಮರಾ ಕಣ್ಣಿಗೆ ಬಿದ್ದ ಚಿರತೆ ಬಂಡೀಪುರದ್ದು!

Viral News: ಒಂದೇ ಚಿರತೆ, 2 ವಿಭಿನ್ನ ಬಣ್ಣದ ಕಣ್ಣು, ವನ್ಯಜೀವಿ ಮಂಡಳಿ ಸದಸ್ಯ ಧೃವ ಪಾಟೀಲ್‌ ಕ್ಯಾಮರಾ ಕಣ್ಣಿಗೆ ಬಿದ್ದ ಚಿರತೆ ಬಂಡೀಪುರದ್ದು!

Umesha Bhatta P H HT Kannada

Aug 04, 2024 09:54 AM IST

google News

ಧೃವ ಪಾಟೀಲ್‌ ಕಣ್ಣಿಗೆ ಬಿದ್ದ ಭಿನ್ನ ಬಣ್ಣದ ಕಣ್ಣಿನ ಚಿರತೆ.

    • Leopard Eyes ಕರ್ನಾಟಕದ ಅರಣ್ಯ ಹಲವು ವೈವಿಧ್ಯಯಗಳ ಸಂಗಮ. ಯುವ ಛಾಯಾಗ್ರಾಹಕ, ಕನ್ನಡಿಗ ಧೃವ ಪಾಟೀಲ್
ಧೃವ ಪಾಟೀಲ್‌ ಕಣ್ಣಿಗೆ ಬಿದ್ದ ಭಿನ್ನ ಬಣ್ಣದ ಕಣ್ಣಿನ ಚಿರತೆ.
ಧೃವ ಪಾಟೀಲ್‌ ಕಣ್ಣಿಗೆ ಬಿದ್ದ ಭಿನ್ನ ಬಣ್ಣದ ಕಣ್ಣಿನ ಚಿರತೆ.

ಬೆಂಗಳೂರು: ಕಣ್ಣು ಬರೀ ಮನುಷ್ಯನಿಗೆ ಮಾತ್ರವಲ್ಲ. ಪ್ರತೀ ಜೀವಿಯ ಪ್ರಮುಖ ಅಂಗ. ಅದರಲ್ಲೂ ವನ್ಯಜೀವಿಗಳಲ್ಲಂತೂ ಕಣ್ಣಿನ ನೋಟವೇ ಚಂದ. ಚಿರತೆ, ಹುಲಿಯಂತ ಪ್ರಮುಖ ವನ್ಯಜೀವಿಗಳ ಕಣ್ಣಿನ ನೋಟ ಸೆರೆ ಹಿಡಿಯುವುದೇ ವಿಶೇಷ. ಚಿರತೆಯ ಕಣ್ಣಿನ ನೋಟವನ್ನು ಆಧರಿಸಿ ಚಿತ್ರ ಸೆರೆ ಹಿಡಿಯುವಾಗ ವಿಶೇಷವೊಂದು ಬಯಲಾಗಿದೆ. ಅದೂ ಕರ್ನಾಟಕದ ಬಂಡೀಪುರದಲ್ಲಿನ( Bandipur Tiger Reserve) ಚಿರತೆ. ಚಿರತೆ ಒಂದೇ ಆದರೂ ಆ ಚಿರತೆಯ ಎರಡೂ ಕಣ್ಣಿನ ಬಣ್ಣಗಳು ವಿಭಿನ್ನವಾಗಿರುವುದು ಕರ್ನಾಟಕದ ಛಾಯಾಗ್ರಾಹಕ ಹಾಗೂ ವನ್ಯಜೀವಿ ಮಂಡಳಿ ಸದಸ್ಯ ಧೃವ ಎಂ ಪಾಟೀಲ್‌( Dhruv M Patil) ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಈ ಫೋಟೋ ಭಾರೀ ವೈರಲ್‌( Viral photo) ಆಗಿದೆ. ಅಲ್ಲದೇ ಇದೊಂದು ವಿಶಿಷ್ಟತೆ. ಇಂತಹ ಪ್ರಯತ್ನ ಇದೇ ಮೊದಲು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಧೃವ ಪಾಟೀಲ ಅವರು ಈ ವಿಶಿಷ್ಟ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದನ್ನೇ ತಮಿಳುನಾಡು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು( Supriya Sahu) ಕೂಡ ಉಲ್ಲೇಖಿಸಿದ್ದಾರೆ.

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆದ ವನ್ಯಜೀವಿ ಛಾಯಾಗ್ರಹಕ ಧ್ರುವ್ ಪಾಟೀಲ ಅವರು ಹವ್ಯಾಸಿ ಛಾಯಾಗ್ರಾಹಕ.ಸಣ್ಣ ವಯಸ್ಸಿನಿಂದಲೇ ಕಾಡು, ಹಸಿರು,ವನ್ಯಜೀವಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಛಾಯಾಗ್ರಾಹಣ ಕೂಡ ಮಾಡುತ್ತಾರೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುವಾಗ, ಸದ್ಯ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೂ ಕರ್ನಾಟಕಕ್ಕೆ ಬಂದಾಗ ಛಾಯಾಗ್ರಹಣಕ್ಕೆಂದು ಬಂಡೀಪುರ, ನಾಗರಹೊಳೆ ಕಬಿನಿ ಸಹಿತ ಹಲವು ಸ್ಥಳಗಳಿಗೆ ಭೇಟಿ ನೀಡುತ್ತಾರೆ. ದಿನಗಟ್ಟಲೇ ಕಾಡಿನಲ್ಲಿ ಕಳೆಯುತ್ತಾರೆ. ಕೆಲ ದಿನಗಳ ಹಿಂದೆ ಬಂಡೀಪುರಕ್ಕೆ ತೆರಳಿದ್ದರು. ಆಗ ಅವರು ಚಿರತೆಯೊಂದರ ಫೋಟೋವನ್ನು ಸೆರೆ ಹಿಡಿದಿದ್ದರು. ಬೆಂಗಳೂರಿಗೆ ವಾಪಾಸಾಗಿ ಸೂಕ್ಷ್ಮವಾಗಿ ಗಮನಿಸಿದಾಗ ಚಿರತೆಯ ಕಣ್ಣಿನಲ್ಲಿ ವಿಶೇಷ ಇರುವುದು ಕಂಡು ಬಂದಿತ್ತು. ಅಂದರೆ ಚಿರತೆಯ ಎರಡು ಕಣ್ಣುಗಳು ಎರಡು ಬಣ್ಣಗಳಿಂದ ಕೂಡಿದ್ದವು. ಇದನ್ನು ಗಮನಿಸಿ ಅವರು ಹಲವು ತಜ್ಞರೊಂದಿಗೆ ಮಾತುಕತೆ ನಡೆಸಿದಾಗ ಇದು ವಿಶೇಷ ಎನ್ನುವುದು ಗೊತ್ತಾಗಿತ್ತು.

ಬಹಳ ಅಪರೂಪ ಎನ್ನಬಹುದಾದ ವಿಭಿನ್ನ ಬಣ್ಣಗಳ ಕಣ್ಣುಗಳು ಚಿರತೆಯಲ್ಲಿ ಕಂಡುಬರುವುದಕ್ಕೆ ವಂಶವಾಹಿನಿ ರೂಪಾಂತರಗಳು ಕಾರಣವೂ ಇರಬಹುದು. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ‘ಹೆಟೆರೋಕ್ರೋಮಿಯಾ ಇರಿಡಂ’ ಎ(Heterochromia Iridium). ಇದನ್ನು ಧ್ರುವ್ ಅವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು ಚಿರತೆಗಳಿಗೆ ಸಂಬಂಧಿಸಿದ ದಾಖಲೀಕರಣಕ್ಕೆ ಸಹಕಾರಿಯಾಗಲಿದೆ. ಇದು ಹೊಸ ವಿಷಯೂ ಹೌದು ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯ.

ಚಿರತೆ ತಜ್ಞರಾಗಿರುವ ಡಾ.ಸಂಜಯ್‌ ಗುಬ್ಬಿ (Dr Sanjay Gubbi) ಅವರು ಹೇಳುವಂತೆ,ಒಂದೇ ಪ್ರಭೇದದ ಪ್ರಾಣಿಗಳಲ್ಲಿ ಬೇರೆ ಬೇರೆ ಕಣ್ಣಿನ ಬಣ್ಣವಿರುವುದು ಸಾಮಾನ್ಯ. ಆದರೆ ಒಂದೇ ಪ್ರಾಣಿಯಲ್ಲಿ ಬೇರೆ ಬೇರೆ ಬಣ್ಣದ ಕಣ್ಣುಗಳು ಬಹು ಅಪರೂಪ. ದೊಡ್ಡ ಬೆಕ್ಕಿನ ಜಾತಿಯ ಹುಲಿ, ಚಿರತೆಗಳಲ್ಲಿ ಭಿನ್ನ ಕಣ್ಣುಗಳು ಇರುವುದನ್ನು ಗಮನಿಸಿದ್ದೇವೆ. ಆದರೆ ಚಿರತೆಯಲ್ಲಿ ಎರಡು ಬಣ್ಣದ ಕಣ್ಣು ಇರುವುದು ಕಡಿಮೆ. ಇಂತಹದೇ ಚಿರತೆ ಎರಡು ವಿಭಿನ್ನ ಬಣ್ಣದ ಕಣ್ಣು ಹೊಂದಿದ್ದು ದಕ್ಷಿಣ ಆಫ್ರಿಕಾದ ಕೃಗೇರ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡು ಬಂದಿತ್ತು. ಇದನ್ನು ಹೆಟೆರೋಕ್ರೋಮಿಯಾ ಇರಿಡಂ ಎಂದು ಕರೆಯುತ್ತಾರೆ. ಭಾರತದ ಸುಂದರ್‌ಬನ್ಸ್‌ ನಲ್ಲಿರುವ ಚಿರತೆಗಳಿಗೆ ಹೆಟೆರೋಕ್ರೋಮಿಯಾ ಇರಿಡಂನ ಸಮಸ್ಯೆ ಇರುವುದನ್ನು ದಾಖಲಿಸಲಾಗಿದೆ ಎಂದು ಹೇಳುತ್ತಾರೆ.

ಹಿಂದೆಯೂ ಇಂತಹ ಪ್ರಕರಣ ಇದ್ದರೂ ವರದಿಯಾಗಿರಲಿಲ್ಲ. ಈಗ ಯುವ ಛಾಯಾಗ್ರಾಹಕರು ಅತ್ಯಾಧುನಿಕ ಕ್ಯಾಮರಾ ಬಳಸುವುದರಿಂದ ಇವೆಲ್ಲವೂ ಬೆಳಕಿಗೆ ಬರುತ್ತಿವೆ. ಇಂತಹ ಹಲವು ವೈರುಧ್ಯಗಳು ಅರಣ್ಯದಲ್ಲಿವೆ. ಇದು ಸಂಶೋಧನೆಗೂ ಉತ್ತಮ ವಿಷಯವೂ ಹೌದು ಎನ್ನುವುದು ಹಲವರ ಅಭಿಪ್ರಾಯ.

ಇದೇ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ತಮಿಳುನಾಡಿನ ಅಪರ ಮುಖ್ಯ ಕಾರ್ಯದರ್ಶಿಯಾಗಿ ಈ ಹಿಂದೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದ ಸುಪ್ರಿಯಾ ಸಾಹು, ಎಚ್ಚರ, ಈ ಚಿರತೆಯ ಕಣ್ಣುಗಳು ನಿಮ್ಮನ್ನು ಸಮ್ಮೋಹನಗೊಳಿಸಬಹುದು. ಭಾರತದಲ್ಲಿ ಮೊದಲ ಬಾರಿಗೆ ಮಾಡಲಾಗಿರುವ ದಾಖಲೀಕರಣದಲ್ಲಿ ಒಂದೇ ಚಿರತೆ ಎರಡು ಬಣ್ಣದ ಕಣ್ಣುಗಳನ್ನು ಹೊಂದಿದೆ. ಅದರನ್ನೂ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಧೃವಪಾಟೀಲ್‌ ಅವರು ಮಾಡಿದ್ದಾರೆ. ಇದು ನಿಜಕ್ಕೂ ನಂಬಲಾಗದ ಸಂಗತಿ. ಹೆಟೆರೋಕ್ರೋಮಿಯಾ ಇರಿಡಂ ಎನ್ನುವುದು ಅಪರೂಪದ ವಂಶವಾಹಿ ಸಮಸ್ಯೆ. ಈ ವಂಶವಾಹಿಯಿಂದ ರೀತಿಯ ಕಣ್ಣುಗಳು ಭಿನ್ನ ಬಣ್ಣದಲ್ಲಿ ಕಂಡು ಬರುತ್ತವೆ ಎಂದು ಉಲ್ಲೇಖಿಸಿದ್ದಾರೆ.

ಕರ್ನಾಟಕದ ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಮಗನಾದ 21 ವರ್ಷದ ಧ್ರುವ್ ಪಾಟೀಲ್‌ ಅವರಿಗೆ ಕಾಡಿನ ಮೇಲೆ ವಿಶೇಷ ಪ್ರೀತಿ. ಈ ಕಾರಣದಿಂದಲೇ ಹಲವಾರು ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಛಾಯಾಗ್ರಹಣದ ಮೂಲಕವೂ ಗಮನ ಸೆಳೆದಿದ್ದಾರೆ. ಅವರು ಸೆರೆ ಹಿಡಿದ ವಿಶೇಷ ಚಿರತೆಯ ಕಣ್ಣಿನ ಬಣ್ಣದ ಚರ್ಚೆಗೆ ಮಾತ್ರವಲ್ಲದೇ ಸಂಶೋಧನೆಗೂ ಇದು ದಾರಿ ಮಾಡಿಕೊಟ್ಟಿದೆ. ವಾರದ ಹಿಂದೆಯಷ್ಟೇ ಅವರನ್ನು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯರನ್ನಾಗಿ ಸರ್ಕಾರ ನೇಮಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ