Huilgol Narayana Rao: ಸದಾ ನೆನಪಾಗುವ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಕವಿ ಹುಯಿಲಗೋಳ ನಾರಾಯಣರಾಯರು
Oct 04, 2023 01:47 PM IST
ಹುಯಿಲಗೋಳ ನಾರಾಯಣ ರಾಯರು
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡು ಇಂದಿಗೂ ಕನ್ನಡಿಗರು ಮೆಚ್ಚುವ ಗೀತೆ. ಇದನ್ನು ರಚಿಸಿದ ಹುಯಿಲಗೋಳ ನಾರಾಯಣರಾವ್ ಅವರ ಹೆಸರು ಕೇಳಿಯೇ ಇರುತ್ತೇವೆ. ಅವರ ಬದುಕು, ಸಾಧನೆ, ಜೀವನಾದರ್ಶಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಈ ದಿನ ಒಂದು ನಿಮಿತ್ತ.
ಉದಯವಾಗಲಿ ಚೆಲುವ ಕನ್ನಡ ನಾಡು ಹಾಡು ಕೇಳಿದ ಕೂಡಲೇ ಕನ್ನಡಿಗರ ಕಿವಿ ನೆಟ್ಟಗಾಗುತ್ತೆ. ಮನಸ್ಸು ಆ ಹಾಡಿನ ಸಾಲುಗಳನ್ನು ಪುನರುಚ್ಚರಿಸತೊಡಗುತ್ತೆ.. ಹೌದು ಆ ಹಾಡಿನಲ್ಲೊಂದು ಆಪ್ತಭಾವ ಇದೆ. ನಮ್ಮ ನಾಡು, ನುಡಿಯ ಪ್ರೀತಿಯ ಪ್ರತೀಕ ಅದು. ಕರ್ನಾಟಕದ ನಾಡಗೀತೆಯೆಂದೇ ಅಂದು ಜನಪ್ರಿಯವಾಗಿದ್ದ ಹಾಡು ಇದು. ಈ ಗೀತೆ ರಚನೆಕಾರ ಸದಾ ಸ್ಮರಣೀಯರು.
ಹೌದು ಅವರು ಕವಿ, ಸಾಹಿತಿ, ನಾಟಕ ರಚನೆ ಮೂಲಕ ಇಂದಿಗೂ ಕನ್ನಡ ಸಾಹಿತ್ಯ ಲೋಕದ ಪ್ರಾತಸ್ಮರಣೀಯರಲ್ಲಿ ಒಬ್ಬರಾದ ಗದುಗಿನ ವೀರನಾರಾಯಣ. ಇದೇ ಹೆಸರಿನಲ್ಲಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಗದುಗಿನ ವೀರನಾರಾಯಣ ಎಂಬುದು ಅವರ ಅಂಕಿತ ನಾಮ. ಹುಯಿಲಗೋಳ ನಾರಾಯಣರಾವ್ ಎಂಬುದು ಅವರ ನಿಜ ಹೆಸರು. ಹುಯಿಲಗೋಳ ನಾರಾಯಣರಾಯರು ಎಂದೇ ಜನಪ್ರಿಯರು. ಇಂದು ಅವರ ಜಯಂತಿ ಆಚರಣೆ ದಿನ.
ಹುಯಿಲಗೋಳ ನಾರಾಯಣ ರಾಯರು ಯಾರು
ಹುಯಿಲಗೋಳ ನಾರಾಯಣರಾವ್
ಜನನ - 04.10.1884
ನಿಧನ - 04.07.1971
ತಂದೆ - ಕೃಷ್ಣ ರಾವ್ (ಕೃಷ್ಣ ರಾಯರು) (ವೃತ್ತಿಯಲ್ಲಿ ಶಿಕ್ಷಕರು)
ತಾಯಿ - ರಾಧಾ ಬಾಯಿ (ಬಹಿಣಕ್ಕ)
ಹುಟ್ಟೂರು - ಗದಗದ ಹುಯಿಲಗೋಳ
ಹುಯಿಲಗೋಳ ನಾರಾಯಣ ರಾಯರು ಗದಗ, ಗೋಕಾಕ, ಧಾರವಾಡಗಳಲ್ಲಿ ಬಾಲ್ಯದ ಶಿಕ್ಷಣವನ್ನು ಪೂರೈಸಿದರು. ಬಾಲ್ಯದಲ್ಲೇ ಅವರಿಗೆ ಸೂತ್ರದ ಗೊಂಬೆಯಾಟ, ಕಿಳ್ಳಿಕ್ಯೇತರ ಆಟ, ಸಣ್ಣಾಟ, ಬಯಲಾಟ, ದೊಡ್ಡಾಟಗಳನ್ನು ನೋಡುವ ಹವ್ಯಾಸ ಬೆಳೆದಿತ್ತು. ಇದರ ಪರಿಣಾಮ, ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಇಂದ್ರಜೀತವಧೆ, ಗರುಡ ಗರ್ವಭಂಗ ಎಂಬ ನಾಟಕಗಳನ್ನು ತಾವೇ ಮಾರ್ಪಡಿಸಿಕೊಂಡು ಬರೆದು ಗೆಳೆಯರೊಡಗೂಡಿ ನಾಟಕ ಪ್ರಸ್ತುತಪಡಿಸಿದ್ದರು.
ಧಾರವಾಡದಲ್ಲಿ 1902ರಲ್ಲಿ ಮೆಟ್ರಿಕ್ ಪರೀಕ್ಷೆ ಪೂರ್ಣಗೊಳಿಸಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಸೇರಿದ್ದರು. ಅಲ್ಲಿ ರಾಂಗುಲರ್ ಪರಾಂಜಪೆ ಪ್ರಾಂಶುಪಾಲರಾಗಿದ್ದರು. ತಾರುಣ್ಯದಲ್ಲಿದ್ದ ಅವರು ಸ್ವಾತಂತ್ರ್ಯ ಹೋರಾಟದೆಡೆ ಸಹಜವಾಗಿಯೇ ಆಕರ್ಷಿತರಾಗಿದ್ದರು. ಗೋಪಾಲಕೃಷ್ಣ ಗೋಖಲೆಯವರ ಭಾಷಣಗಳಿಂದ ಪ್ರಭಾವಿತರಾಗಿದ್ದರು.
ಪುಣೆಯಲ್ಲಿ ಮರಾಠಿ ಭಾಷೆಯೇ ಮುಖ್ಯಭಾಷೆ ಆದ ಕಾರಣ, ಕನ್ನಡಕ್ಕೆ ಮನ್ನಣೆ ಇರಲಿಲ್ಲ. ಗ್ರಂಥಾಲಯದಲ್ಲೂ ಕನ್ನಡ ಪುಸ್ತಕಗಳು ಇರಲಿಲ್ಲ. ಪ್ರಾಚಾರ್ಯರಿಗೆ ಮನವಿ ಸಲ್ಲಿಸಿ ಕನ್ನಡ ಪುಸ್ತಕಗಳು ಗ್ರಂಥಾಲಯ ಸೇರುವುದಕ್ಕೆ ನಾರಾಯಣರು ಕಾರಣರಾದರು. ಮರಾಠಿಗರು ಕನ್ನಡದಲ್ಲಿ ಏನಿದೆ ಎಂದು ಹೀಯಾಳಿಸುತ್ತಿದ್ದರು. ಕನ್ನಡಿಗರು ಸುಮ್ಮನಿರುವುದನ್ನು ಕಂಡು ಕನ್ನಡಾಭಿಮಾನ ಬೆಳೆಸಿಕೊಳ್ಳುವಂತೆ ಮನವಿ ಮಾಡಿದ್ದರು ಎಂಬ ಅಂಶ ಅವರ ಜೀವನ ಪರಿಚಯದ ಪುಸ್ತಕದಲ್ಲಿ ಉಲ್ಲೇಖವಾಗಿದೆ.
ಆ ಕಾಲೇಜಿನಲ್ಲಿ 1907ರಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಆಯ್ದುಕೊಂಡು ಪದವಿ ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಶುರುಮಾಡಿದರು. ಅಲ್ಲಿ ದ.ರಾ.ಬೇಂದ್ರೆಯವರು ವಿದ್ಯಾರ್ಥಿಯಾಗಿದ್ದರು. ಮರ್ಚೆಂಟ್ ಆಫ್ ವೆನ್ನಿಸ್ ನಾಟಕವನ್ನು ಅಲ್ಲಿನ ವಿದ್ಯಾರ್ಥಿಗಳಿಂದಲೇ ಆಡಿಸಿದ್ದರು. 1908ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನಕ್ಕೆ ನಾರಾಯಣರು ಹೋಗಿದ್ದರು. 1910ರಲ್ಲಿ ವಜ್ರಮುಕುಟು ನಾಟಕ ಬರೆದರು. ಇದಾಗಿ ಅವರು ಶಿಕ್ಷಕ ವೃತ್ತಿ ಬಿಟ್ಟು, ಮುಂಬಯಿಗೆ ತೆರಳಿದರು. ಅಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿದರು. ಬಳಿಕ ಗದುಗಿನಲ್ಲಿ ವಕೀಲಿಕೆ ಆರಂಭಿಸಿದರು.
ಸ್ವಾತಂತ್ರ್ಯ ಸಂಗ್ರಾಮ, ಕನ್ನಡಾಭಿಮಾನ, ದೇಶಾಭಿಮಾನ ಹೆಚ್ಚಿಸುವ ಕೆಲಸಕ್ಕಾಗಿ ಸಾಹಿತ್ಯ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾರಾಯಣ ರಾಯರು ಸರಳ, ನಿರಾಡಂಬರ ವ್ಯಕ್ತಿ. ಶುಭ್ರ ಖಾದಿ ಧೋತರ, ಖಾದಿ ಶರ್ಟು, ಕೊರಳನ್ನು ಬಿಗಿಯಾಗಿ ಸುತ್ತಿಕೊಂಡಂತಿದ್ದ ತುಂಬು ತೋಳಿನ ಖಾದಿ ಜೋಧಪುರಿ ಕೋಟು, ಇನ್ನು ತಲೆ ಮೇಲೆ ಅಂದವಾಗಿ ಸುತ್ತಿದ ಖಾದಿ ರುಮಾಲು, ಹೆಗಲ ಮೇಲೊಂದು ಬಿಳಿ ಶಲ್ಯ. ಇದು ಅವರ ನಿತ್ಯ ಉಡುಪಾಗಿತ್ತು.
ಹುಯಿಲಗೋಳ ನಾರಾಯಣ ರಾಯರ ನಾಟಕಗಳು
ನಾಟಕದ ಹೆಸರು ಮತ್ತು ನಾಟಕ ರಚನೆಯ ವರ್ಷದ ವಿವರ ಹೀಗಿದೆ
- ವಜ್ರಮುಕುಟ 1910
- ಪ್ರಮಾರ್ಜುನ 1911
- ಕನಕವಿಲಾಸ 1912
- ಮೋಹಲಹರಿ 1913
- ಅಜ್ಞಾತವಾಸ 1914
- ಪ್ರೇಮವಿಜಯ 1915
- ಕುಮಾರರಾಮ 1916
- ಭಾರತ ಸಂಧಾನ 1917
- ಸ್ತ್ರೀ ಧರ್ಮ ರಹಸ್ಯ 1918
- ಶ್ರೀವಿದ್ಯಾರಣ್ಯ 1919
- ಶಿಕ್ಷಣ ಸಂಭ್ರಮ 1920
- ಉತ್ತರ ಗೋಗ್ರಹಣ 1920
- ಪತಿತೋದ್ಧಾರ 1923
- ಪುನರಾಗಮನ
- ಶ್ರೀ ಕನಕದಾಸ (ಅಪೂರ್ಣ ನಾಟಕ)
ಹುಯಿಲಗೋಳ ನಾರಾಯಣರಾವ್ ಅವರ ಸಾಧನೆಗಳು
ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಹಿತ್ಯ ಬಳಕೆ, ಲೇಖನಗಳ ಮೂಲಕವೂ ಜನ ಜಾಗೃತಿ
ನಮ್ಮ ನಾಟ್ಯ ವಿಲಾಸಿ ಮಿತ್ರರ ಸಹಕಾರದೊಂದಿಗೆ ಗದುಗಿನ ವಿದ್ಯಾದಾನ ಸಮಿತಿಯ ಪ್ರೌಢಶಾಲೆ ಸ್ಥಾಪನೆ
ಯಂಗ್ ಮೆನ್ಸ್ ಫುಟ್ಬಾಲ್ ಕ್ಲಬ್ ಸ್ಥಾಪನೆ ಮೂಲಕ ಕ್ರೀಡೆಗೂ ಪ್ರೋತ್ಸಾಹ
ವಸಂತೋತ್ಸವ, ನಾಡಹಬ್ಬ, ಪುಸ್ತಕ ಬಿಡುಗಡೆ, ಕಾವ್ಯ ವಾಚನ, ಸಾಹಿತ್ಯ ಸಮ್ಮೇಳನ,
ಗದುಗಿನ ಎರಡು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನಾಯಕತ್ವ
ನಾಟಕ ರಚನೆ ಮಾಡಿದ್ದು, ರಾಷ್ಟ್ರ ಪ್ರೇಮವನ್ನು ಬಿಂಬಿಸುವ ನಾಟಕಗಳು ಕೆಲವು ಇವೆ.
ಉದಯವಾಗಲಿ ಚೆಲುವ ಕನ್ನಡ ನಾಡು
ಇಂದಿಗೂ ಕನ್ನಡಿಗರು ಗುನುಗುವ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡಿನ ರಚಿಸಿದ್ದು ಇದೇ ಹುಯಿಲಗೋಳ ನಾರಾಯಣ ರಾಯರು. ಈ ಗೀತೆ ಅಂದು ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಬೆಳಗಾವಿ ಜಿಲ್ಲಾ ಟಿಳಕವಾಡಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅವೇಶನದಲ್ಲಿ ಉದಯವಾಗಲಿ ಚೆಲುವ ಕನ್ನಡನಾಡು ಗೀತೆಯನ್ನು ಪ್ರಸಿದ್ಧ ಗಾಯಕ ಸುಬ್ಬರಾಯರು ಹಾಡಿದ್ದರು. ಅದನ್ನು ಆಲಿಸಿದ ಜನರಿಂದ ಹರ್ಷೋದ್ಗಾರ ಮಾಡಿದ್ದರು.
ಹುಯಿಲಗೋಳ ನಾರಾಯಣ ರಾಯರ ಕೌಟುಂಬಿಕ ಬದುಕು
ನಾರಾಯಣ ರಾಯರು ಪುಣೆಯಲ್ಲಿ ಓದುತ್ತಿರುವಾಗಲೇ ಅವರ ವಿವಾಹ ನಿಶ್ಚಯವಾಗಿತ್ತು. 1905ರಲ್ಲಿ ಹುಬ್ಬಳ್ಳಿಯ ಲಕ್ಷ್ಮೀಬಾಯಿ ಜತೆಗೆ ಮದುವೆ ನಡೆಯಿತು. ಅದಾಗಿ, ತಾಯಿ ರಾಧಾ ಬಾಯಿ ಅವರ ಒತ್ತಾಯದ ಮೇರೆಗೆ ಕಡಕೋಳದ ಬಿಂದೂರಾವ್ ದೇಶಪಾಂಡೆಯವರ ಮಗಳು ತುಳಸಾಬಾಯಿ ಅವರನ್ನು ವಿವಾಹವಾದರು. ಈ ದಾಂಪತ್ಯದಲ್ಲಿ ಅವರಿಗೆ ಏಳು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು. ಮನೆಯವರೆಲ್ಲರೂ ನಾರಾಯಣ ರಾಯರನ್ನು ನಾನಾ ಎಂದೇ ಪ್ರೀತಿಯಿಂದ ಕೂಗುತ್ತಿದ್ದರು. ಬದುಕಿನ ನಡುವೆ ಅವರು ಪತ್ನಿ ಲಕ್ಷ್ಮೀ ಬಾಯಿ ಅವರನ್ನು ಕಳೆದುಕೊಂಡರು. ಅದಾಗಿ, 1946ರಲ್ಲಿ ಎರಡನೇ ಪತ್ನಿ ತುಳಸಾಬಾಯಿ ನಿಧನರಾದರು.
ನಾರಾಯಣ ರಾಯರು ತಮ್ಮ ವೃದ್ಧಾಪ್ಯವನ್ನು ಗದಗ, ಹುಬ್ಬಳ್ಳಿ, ಬಳ್ಳಾರಿಗಳಲ್ಲಿ ತಮ್ಮ ಗಂಡು ಮಕ್ಕಳ ಮನೆಯಲ್ಲಿ ಕಳೆದರು. 1971ರ ಜುಲೈ 4ರಂದು ಕೊನೆಯುಸಿರೆಳೆದರು. ಅವರಿಗೆ ಆಗ 81 ವರ್ಷ ವಯಸ್ಸಾಗಿತ್ತು. ಆದಾಗ್ಯೂ, ಸಾಹಿತ್ಯ ಲೋಕಕ್ಕೆ, ನಾಡಿಗೆ ಅವರ ಕೊಡುಗೆಗಳು ಅವರನ್ನು ಇಂದಿಗೂ ಸ್ಮರಿಸುವಂತೆ ಮಾಡಿದೆ.
ಹುಯಿಲಗೋಳ ನಾರಾಯಣರಾಯರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಹುಯಿಲಗೋಳ ನಾರಾಯಣರಾಯರು ಕೃತಿಯ ಪಿಡಿಎಫ್ ಕರ್ನಾಟಕ ಕಣಜದಲ್ಲಿದೆ. ಅದರ ಕೊಂಡಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಉಮೇಶ್ ಕುಮಾರ್ ಶಿಮ್ಲಡ್ಕ