Explainer: ದೀಪಾವಳಿಗೆ ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಕ್ಯಾಶ್ ಗಿಫ್ಟ್ ? ವಿವಾದದ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
Oct 29, 2022 09:40 PM IST
ಸಾಂದರ್ಭಿಕ ಚಿತ್ರ (pixabay)
- ರಾಜ್ಯ ರಾಜಕೀಯದಲ್ಲಿ ವಿವಾದವೊಂದು ಭುಗಿಲೆದ್ದಿದೆ. ದೀಪಾವಳಿ ಹಬ್ಬಕ್ಕೆ ಉಡುಗೊರೆಯಾಗಿ ಕೆಲವು ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸ್ವೀಟ್ಸ್ ಜೊತೆಗೆ ಒಂದು ಲಕ್ಷ ರೂಪಾಯಿ ನಗದನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ವಿವಾದವೊಂದು ಭುಗಿಲೆದ್ದಿದೆ. ದೀಪಾವಳಿ ಹಬ್ಬಕ್ಕೆ ಉಡುಗೊರೆಯಾಗಿ ಕೆಲವು ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸ್ವೀಟ್ಸ್ ಜೊತೆಗೆ ಒಂದು ಲಕ್ಷ ರೂಪಾಯಿ ನಗದನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ.
ದೀಪಾವಳಿ ಸಂದರ್ಭದಲ್ಲಿ ಪ್ರತಿ ವರ್ಷ ರಾಜಕೀಯ ವರದಿಗಾರರಿಗೆ ಹಾಗೂ ಕೆಲವು ಹಿರಿಯ ಪತ್ರಕರ್ತರಿಗೆ ಸಿಎಂಒ ಕಚೇರಿಯಿಂದ ಸ್ವೀಟ್ಸ್ ಹಾಗೂ ಡ್ರೈ ಫ್ರೂಟ್ಸ್ಗಳ್ನು ಉಡುಗೊರೆಯಾಗಿ ಕಳುಹಿಸಿಕೊಡಲಾಗುತ್ತಿತ್ತು. ಆದರೆ ಈ ಬಾರಿ ಸ್ವೀಟ್ ಬಾಕ್ಸ್ ಜೊತೆಯಲ್ಲಿ ಕ್ರ್ಯಾಶ್ ಅನ್ನು ನೀಡಲಾಗಿದೆ ಎಂದು ಕೆಲವು ಪತ್ರಕರ್ತರೇ ಆರೋಪಿಸಿದ್ದಾಗಿ ವರದಿಯಾಗಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕೆಲವು ಪತ್ರಕರ್ತರು ನಗದು ಉಡುಗೊರೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಸಿಎಂಒಗೆ ಪತ್ರ ಬರೆದಿದ್ದರು ಎಂದು ಹೇಳಲಾಗಿದೆ.
ಕರ್ನಾಟಕದ ದಿಟ್ಟ ಪತ್ರಕರ್ತರಿಗೆ ಹ್ಯಾಟ್ಸ್ ಆಫ್ ಹೇಳಿದ ಸುರ್ಜೇವಾಲ
ಈ ಬಗ್ಗೆ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ '40% ಸರ್ಕಾರ' ಕ್ಯಾಪ್ಶನ್ ಅಡಿ ಟ್ವೀಟ್ ಮಾಡಿ, ಸಿಎಂ ಬೊಮ್ಮಾಯಿ ಮತ್ತು ಅವರ ಕಚೇರಿಯಿಂದ ಲಂಚದ ಆಮಿಷವೊಡ್ಡಿರುವುದನ್ನು ಬಯಲಿಗೆಳೆದ ಕರ್ನಾಟಕದ ದಿಟ್ಟ ಪತ್ರಕರ್ತರಿಗೆ ಹ್ಯಾಟ್ಸ್ ಆಫ್. ಎಲ್ಲರೂ "ಮಾರಾಟಕ್ಕಿಲ್ಲ" ಎಂಬುದನ್ನು ಬಿಜೆಪಿ ಸರ್ಕಾರ ಅರಿತುಕೊಳ್ಳುತ್ತದೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
40% ಬಿಜೆಪಿ ಸರ್ಕಾರವು ಪತ್ರಕರ್ತರಿಗೆ 1 ಲಕ್ಷ ನಗದು ಲಂಚ ನೀಡಲು ಯತ್ನಿಸುತ್ತಿದೆ. ಸಿಎಂ ನೀಡುತ್ತಿರುವುದು "ಲಂಚ" ಅಲ್ಲವೇ? 1 ಲಕ್ಷ ರೂಪಾಯಿಯ ಮೂಲ ಯಾವುದು? ಸಾರ್ವಜನಿಕ ಖಜಾನೆಯಿಂದ ಬಂದಿದೆಯೇ ಅಥವಾ ಸಿಎಂ ಅವರ ಸ್ವಂತ ಹಣವೇ? ಇಡಿ-ಐಟಿ ಇದನ್ನು ಗಮನಿಸುತ್ತದೆಯೇ? ಈ ಪ್ರಶ್ನೆಗಳಿಗೆ ಸಿಎಂ ಬೊಮ್ಮಾಯಿ ಉತ್ತರಿಸುತ್ತಾರೆಯೇ ಎಂದು ಸುರ್ಜೇವಾಲ ಮತ್ತೊಂದು ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.
ಸಿಎಂಒ ಪ್ರತಿಕ್ರಿಯೆ ಏನು?
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂಒ, ನಾವು ಹಲವು ಪತ್ರಕರ್ತರು ಹಾಗೂ ಸಂಪಾದಕರಿಗೆ ಸ್ವೀಟ್ ಬಾಕ್ಸ್ಗಳನ್ನು ಕಳುಹಿಸಿ ಕೊಟ್ಟಿದ್ದೇವೆ. ಆದರೆ ಅದರಲ್ಲಿ ಹಣ ಇದ್ದ ಬಗ್ಗೆ ನಮಗೆ ತಿಳಿದಿಲ್ಕ ಎಂದುದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ಗೆ ಸಿಎಂ ಕಚೇರಿ ಪ್ರತಿಕ್ರಿಯೆ ನೀಡಿದೆ.
ಲೋಕಾಯುಕ್ತಕ್ಕೆ ದೂರು
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್ಪಿ) ಕ್ಯಾಶ್ ಗಿಫ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಲೋಕಾಯುಕ್ತರಿಗೆ ಇ-ಮೇಲ್ ಮೂಲಕ ದೂರು ನೀಡಿದೆ. ಸಿಎಂ ಹಾಗೂ ಅವರ ಮಾಧ್ಯಮ ಸಂಯೋಜಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದೆ.
ಬಿಜೆಪಿ ಸರಣಿ ಟ್ವೀಟ್
ರಣದೀಪ್ ಸಿಂಗ್ ಸುರ್ಜೇವಾಲಗೆ ರಾಜ್ಯ ಬಿಜೆಪಿ ಸರಣಿ ಟ್ವೀಟ್ಗಳ ಮೂಲಕ ತಿರುಗೇಟು ನೀಡಿದ್ದು, ಕಾಂಗ್ರೆಸ್ ಕಾಲದಲ್ಲಿಯೂ ಐಷಾರಾಮಿ ಗಿಫ್ಟ್ಗಳನ್ನು ನೀಡಲಾಗಿದೆ ಎಂದು ಹೇಳಿದೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಮತ್ತು ಕಾಂಗ್ರೆಸ್ ನಾಯಕರು ಅನಗತ್ಯ ಆಧಾರ ರಹಿತ ಆರೋಪ ಮಾಡುತ್ತಿರುವ ಮೂಲಕ ಹಳೆಯ ಟೇಪನ್ನೇ ರಿಪೀಟ್ ಮಾಡುತ್ತಿದ್ದಾರೆ. ಭಾರತ ಜೋಡೊ ಪಾದಯಾತ್ರೆ ಫಲ ನೀಡಿಲ್ಲ ಎನ್ನುವುದು ಅವರಿಗೆ ಅರಿವಾದಂತಿದೆ ಎಂದು ಟ್ವೀಟ್ ಮಾಡಿದೆ.
ಕಳೆದ ಒಂದು ವರ್ಷದಿಂದ ಮಾಡುತ್ತಿರುವ ಆರೋಪಕ್ಕೆ ಯಾವುದೇ ದಾಖಲೆ ನೀಡದೇ ಈಗ ಹೊಸ ರಾಗದಲ್ಲಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು. ಇದು ಕಾಂಗ್ರೆಸ್ ನ ಟೂಲ್ ಕಿಟ್. ಮಾನ್ಯ ಸುರ್ಜೇವಾಲ ಅವರೇ ನಿಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಭ್ರಷ್ಟಾಚಾರದ ದೊಡ್ಡ ಪಟ್ಟಿಯೇ ದೇಶದ ಜನರ ಮುಂದಿದೆ. ಹಾಸಿಗೆ ದಿಂಬು, ರಿಡೂ ಹಗರಣ, ಸೋಲಾರ್ ಹಗರಣಕ್ಕೆ ಉತ್ತರ ಕೊಡುವಿರಾ? ಎಂದು ಬಿಜೆಪಿ ಕೇಳಿದೆ.
ರಾಜ್ಯದಲ್ಲಿ ಹಬ್ಬದ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ನೀಡುವ ಸಂಪ್ರದಾಯ ಮೊದಲಿನಿಂದಲೂ ಇದ್ದು, ಸುರ್ಜೇವಾಲ ಅವರು ಈ ಬಗ್ಗೆ ರಾಜ್ಯದಲ್ಲಿರುವ ತಮ್ಮ ಪಕ್ಷದ ನಾಯಕರಿಂದ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆಶಿ ಅವರು ಐಫೋನ್ ಗಿಫ್ಟ್ ನೀಡಿದ್ದು, ಮಾಜಿ ಸಚಿವರು ಲ್ಯಾಪ್ ಟಾಪ್ ಹಂಚಿದ್ದು, ಗೋಲ್ಡ್ ಕಾಯಿನ್ ಹಂಚಿಕೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲದಿದ್ದರೆ, ಪಕ್ಷದ ರಾಜ್ಯ ಉಸ್ತುವಾರಿಯಾಗಿ, ನಿಮ್ಮ ಪಕ್ಷದಲ್ಲಿನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಒಳಿತು ಎಂದು ಟಾಂಗ್ ನೀಡಿದೆ.
ರಾಜ್ಯ ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ಹಾಗೂ #BharatTodoYatra ಸಂದರ್ಭದಲ್ಲಿ ಆಯ್ದ ಪತ್ರಕರ್ತರಿಗೆ ಸ್ವತಃ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಿಂದಲೇ ಹಣ ಸಂದಾಯವಾಗಿರುವ ಚರ್ಚೆ ನಡೆಯುತ್ತಿದೆ ಈ ಬಗ್ಗೆ ದೇಶದ ಜನತೆಗೆ ಉತ್ತರಿಸುವಿರಾ ಎಂದು ಸುರ್ಜೇವಾಲಾ ಅವರನ್ನು ಬಿಜೆಪಿ ಪ್ರಶ್ನಿಸಿದೆ.