logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆದರಿಕೆ ಆರೋಪ; ಕೇಂದ್ರ ಸಚಿವ ಕುಮಾರಸ್ವಾಮಿ-ಪುತ್ರ ನಿಖಿಲ್ ವಿರುದ್ದ ಎಫ್‌ಐಆ‌ರ್, ಹಾಸ್ಯಾಸ್ಪದ ಎಂದ ಎಚ್‌ಡಿಕೆ

ಬೆದರಿಕೆ ಆರೋಪ; ಕೇಂದ್ರ ಸಚಿವ ಕುಮಾರಸ್ವಾಮಿ-ಪುತ್ರ ನಿಖಿಲ್ ವಿರುದ್ದ ಎಫ್‌ಐಆ‌ರ್, ಹಾಸ್ಯಾಸ್ಪದ ಎಂದ ಎಚ್‌ಡಿಕೆ

Jayaraj HT Kannada

Nov 05, 2024 04:17 PM IST

google News

ಬೆದರಿಕೆ ಆರೋಪ; ಕೇಂದ್ರ ಸಚಿವ ಕುಮಾರಸ್ವಾಮಿ-ಪುತ್ರ ನಿಖಿಲ್ ವಿರುದ್ದ ಎಫ್‌ಐಆ‌ರ್

    • ಎಫ್ಐಆರ್ ದಾಖಲಾಗಿರುವುದು ಹಾಸ್ಯಾಸ್ಪದ ಹಾಗೂ ದುರುದ್ದೇಶಪೂರಿತ ಎಂದು ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ. ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ ಎಂದು ಗುಡುಗಿದ್ದಾರೆ. (ವರದಿ: ಎಚ್. ಮಾರುತಿ)
ಬೆದರಿಕೆ ಆರೋಪ; ಕೇಂದ್ರ ಸಚಿವ ಕುಮಾರಸ್ವಾಮಿ-ಪುತ್ರ ನಿಖಿಲ್ ವಿರುದ್ದ ಎಫ್‌ಐಆ‌ರ್
ಬೆದರಿಕೆ ಆರೋಪ; ಕೇಂದ್ರ ಸಚಿವ ಕುಮಾರಸ್ವಾಮಿ-ಪುತ್ರ ನಿಖಿಲ್ ವಿರುದ್ದ ಎಫ್‌ಐಆ‌ರ್

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ಬೆದರಿಸಿ ಸುಳ್ಳು ಆರೋಪಗಳನ್ನು ಹೊರಿಸಿರುವ ಆಪಾದನೆ ಮೇಲೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ ಸಂಜಯನಗರ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಲೋಕಾಯಕ್ತ ಎಸ್‌ಐಟಿ ವಿಭಾಗದ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ಅವರು ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ. ಇವರು ಕುಮಾರಸ್ವಾಮಿ ಆರೋಪಿಯಾಗಿರುವ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಮುಖ್ಯಸ್ಥರೂ ಆಗಿದ್ದಾರೆ.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿಗಾರಿಕೆಗೆ ಅಕ್ರಮವಾಗಿ ಅನುಮತಿ ನೀಡಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸಲು ಎಡಿಜಿಪಿ ಅವರು ರಾಜ್ಯಪಾಲರಿಂದ ಅನುಮತಿ ಪಡೆದುಕೊಂಡಿದ್ದರು. ಸೆಪ್ಟೆಂಬರ್‌ 28 ಮತ್ತು 29ರಂದು ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಜೀವ ಬೆದರಿಕೆ ಹಾಕಿದ್ದಾರೆ. ನನ್ನನ್ನು ಕರ್ನಾಟಕ ರಾಜ್ಯ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ವರ್ಗಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನನ್ನ ವಿರುದ್ದ ಸುಳ್ಳು ಲಂಚದ ಆರೋಪ ಹೊರಿಸಿದ್ದಾರೆ. ನನ್ನ ಕುಟುಂಬದ ವಿರುದ್ಧವೂ ಆಪಾದನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಮುಂದುವರೆಯಲು ನಕಲಿ ವೈದ್ಯಕೀಯ ಪ್ರಮಾಣ ಪತ್ರ ತೆಗೆದುಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರು ಸೆ.29ರಂದು ಇಂತಹುದೇ ಆಪಾದನೆಗಳನ್ನು ನನ್ನ ಮೇಲೆ ಹೊರಿಸಿದ್ದಾರೆ. ಅವರ ಆಪ್ತ ಸುರೇಶ್ ಬಾಬು ನನ್ನ ವಿರುದ್ದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ. ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ಸಾಮಾಜಿಕ ಜಾಲತಾಣದಲ್ಲಿ ಆರೋಪ ಹೊರಿಸಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ದೂರು ನೀಡಲಾಗಿದ್ದು, ನವೆಂಬರ್ 4ರಂದು ಭಾರತೀಯ ನ್ಯಾಯ ಸಂಹಿತೆ 224ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಕುಮಾರಸ್ವಾಮಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಇವರು ಬೆದರಿಕೆ ಒಡ್ಡುವ ಮೂಲಕ ಎಸ್ಐಟಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಈ ಹಿಂದೆ ಚಂದ್ರಶೇಖರ್ ನೀಡಿದ ದೂರು ಆಧರಿಸಿ ಎನ್‌ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಈಗ 42ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಮೇರೆಗೆ ಎಫ್‌ಐಆ‌ರ್ ದಾಖಲಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪ ಮಾಡಿ ಬೆದರಿಕೆ ಹಾಕಿದ್ದರು. ಕರ್ನಾಟಕ ರಾಜ್ಯ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಬೆದರಿಸಿದ್ದರು. ನನ್ನ ಕುಟುಂಬದ ವಿರುದ್ಧವೂ ಸುಳ್ಳು ಆಪಾದನೆ ಮಾಡಿದ್ದರು ಎಂದು ಚಂದ್ರಶೇಖರ್ ದೂರು ಸಲ್ಲಿಸಿದ್ದರು. ಆ ದೂರನ್ನು ಆಧರಿಸಿ ಕುಮಾರಸ್ವಾಮಿ, ನಿಖಿಲ್ ಮತ್ತು ಅವರ ಆಪ್ತ ಸುರೇಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವೇಷಪೂರಿತ ಎಫ್ಐಆರ್‌: ಕುಮಾರಸ್ವಾಮಿ ಆಕ್ರೋಶ

ಐಪಿಎಸ್ ಅಧಿಕಾರಿಯೊಬ್ಬರ ದೂರಿನ ಮೇರೆಗೆ ನನ್ನ ವಿರುದ್ಧ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಹಾಸ್ಯಾಸ್ಪದ, ದುರುದ್ದೇಶಪೂರಿತ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಭಾರಿ ಉಮೇದಿನಿಂದ ನಮ್ಮ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ. ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ ಎಂದು ಗುಡುಗಿದರು.

ಎಫ್ಐಆರ್ ಪ್ರತಿಯನ್ನು ಓದಿದ್ದೇನೆ. ಅದರಲ್ಲಿರುವ ದೂರಿನ ಸಾರಾಂಶವನ್ನೂ ಓದಿದ್ದೇನೆ. ಅದು ಸಂಪೂರ್ಣ ಹಾಸ್ಯಾಸ್ಪದ ಹಾಗೂ ದುರದ್ದೇಶಪೂರಿತ ಎನ್ನುವುದು ನನಗೆ ಅರ್ಥವಾಗಿದೆ. ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿ ಮಾಡಿ ನನ್ನ ವಿರುದ್ಧ ಆರೋಪ ಮಾಡಿದ್ದು, ಕ್ರಮ ಕೈಗೊಳ್ಳಿ ಎಂದು ದೂರುದಾರರು ದೂರಿನಲ್ಲಿ ಹೇಳಿದ್ದಾರೆ. ನಾನು ಅವರ ಬಗ್ಗೆ ತಪ್ಪು ಮಾಹಿತಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಬೇಕಾದರೆ ನನ್ನ ಮಾಧ್ಯಮಗೋಷ್ಠಿಯ ವಿಡಿಯೋ ನೋಡಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದರು.

ಚನ್ನಪಟ್ಟಣದ ಜನರ ಮೇಲೆ ವಿಶ್ವಾಸ ಇದೆ

ಯಾರೂ ಯಾರ ವಿರುದ್ಧ ಮಾತನಾಡಬಾರದು, ದೂರು ನೀಡಬಾರದು ಎಂಬ ಕಾನೂನು ಇದೆಯೇ? ನಮ್ಮ ಬಾಯಿ ಮುಚ್ಚಿಸಲು ಇವರಿಂದ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರು ಕಿಡಿಕಾರಿದರು. ಇದೊಂದು ಷಡ್ಯಂತ್ರ ಹಾಗೂ ಕುತಂತ್ರದ ಭಾಗ. ಯಾವಾಗ ಚನ್ನಪಟ್ಟಣದಲ್ಲಿ ಇವರ ಮೋಸ, ಕುತಂತ್ರ ನಡೆಯುವುದಿಲ್ಲ ಎಂದು ಅರಿವಾದಾಗ ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ. ನಮಗೆ ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನ, ಕಾನೂನಿನ ಮೇಲೆ ಗೌರವ ಇದೆ. ನನ್ನ ಚನ್ನಪಟ್ಟಣದ ಜನರ ಮೇಲೆ ವಿಶ್ವಾಸ ಇದೆ. ಹೀಗಿರುವಾಗ ಇಂತಹ ನೂರು ಎಫ್ಐಆರ್ ಗಳು ದಾಖಲಾದರೂ ನಾವು ಧೃತಿಗೆಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ