ವಕ್ಫ್ ನೋಟಿಸ್ ಹಿಂಪಡೆಯುವಿಕೆ ಸ್ಥಳೀಯ ಚುನಾವಣೆ ಸಂಬಂಧ ಕಣ್ಣೊರೆಸುವ ತಂತ್ರ; ಸಿಎಂ ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ರೈತರಿಗೆ ನೀಡಲಾಗಿದ್ದ ವಕ್ಫ್ ನೋಟಿಸ್ ಹಿಂಪಡೆಯುವಿಕೆ ಕ್ರಮವು ಕೇವಲ ಸ್ಥಳೀಯ ಚುನಾವಣೆ ಸಂಬಂಧ ಕಣ್ಣೊರೆಸುವ ತಂತ್ರ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು: ರೈತರಿಗೆ ನೀಡಲಾಗಿರುವ ವಕ್ಫ್ ನೋಟಿಸ್ ಹಿಂಪಡೆಯಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಬಗ್ಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, “ಇದು ಸ್ಥಳೀಯ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಕೈಗೊಂಡ ಕಣ್ಣೊರೆಸುವ ತಂತ್ರ” ಎಂದು ವ್ಯಾಖ್ಯಾನಿಸಿದರು. ಛಲವಾದಿ ನಾರಾಯಣಸ್ವಾಮಿ, “ಈಗ ನೋಟಿಸ್ ಹಿಂಪಡೆಯಲು ಆದೇಶ ನೀಡಿದ್ದೀರಿ. ಆದರೆ, ಗೆಜೆಟ್‌ನಲ್ಲಿ ಅದು ವಕ್ಫ್ ಆಸ್ತಿ ಮಾತ್ರ. ಹಾಗಾಗಿ ಇದು ಪರಿಹಾರವಲ್ಲ, ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ತತ್‌ಕ್ಷಣ 1974 ರ ಗೆಜೆಟ್ ಅನ್ನು ಹಿಂತೆಗೆದುಕೊಳ್ಳುವುದು, ಇದು ಕೇವಲ ಸ್ಥಳೀಯ ಚುನಾವಣೆಗಳನ್ನು ಗೆಲ್ಲುವುದು ರೈತರಿಗೆ ಯಾವುದೇ ಪರಿಹಾರವನ್ನು ತರುವುದಿಲ್ಲ” ಎಂದು ಹೇಳಿದ್ದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಥಳೀಯ ಚುನಾವಣೆ ಸಂಬಂಧ ಕಣ್ಣೊರೆಸುವ ತಂತ್ರ
ತಾವು ರೈತರ ಪರ ಎಂದು ಬಿಂಬಿಸಲು ತಾತ್ಕಾಲಿಕವಾಗಿ ಪಹಣಿಯಲ್ಲಿರುವ "ವಕ್ಫ್" ಹೆಸರನ್ನು ತೆಗೆದು ರೈತರ ಹಿತಚಿಂತಕನಾಗಿ ಕಾಣಿಸಿಕೊಳ್ಳಲು ಯತ್ನಿಸುತ್ತಿದ್ದೀರಾ. ಆದರೆ, ಇದನ್ನು ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡು ತಾತ್ಕಾಲಿಕ ಶಮನ ಗಿಟ್ಟಿಸಿಕೊಳ್ಳುವ ತಂತ್ರವೇನೂ ಅಲ್ಲದೆ, ರೈತರ ಮೇಲಿನ ನಿಮ್ಮ ನಿಜವಾದ ಕಾಳಜಿಯ ಪರಿಪೂರ್ಣತೆಯ ಆಧಾರವು ಇಲ್ಲ ಎಂದು ಸ್ಪಷ್ಟವಾಗಿದೆ. ನೀವು ಪ್ರಾಮಾಣಿಕವಾಗಿ ರೈತರ ಪರ ಇದ್ದರೆ, 1974 ರಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರವೇ ಪ್ರಕಟಿಸಿದ ರಾಜ್ಯ ಪತ್ರವನ್ನು (ಗೆಜೆಟ್) ಹಿಂಪಡೆಯಿರಿ. ತಾವು ನಿಜವಾಗಿಯೂ ರೈತರನ್ನು ಬೆಂಬಲಿಸುತ್ತಿದ್ದರೆ, ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಅಥವಾ ರದ್ದುಗೊಳಿಸುವ ಶಿಫಾರಸ್ಸು ರಾಜ್ಯ ಸರ್ಕಾರದಿಂದಲೇ ಕೇಂದ್ರಕ್ಕೆ ಮಾಡಿ. ನೋಟೀಸ್ ಅನ್ನು ಹಿಂತೆಗೆದು ಕೇವಲ ಕಣ್ಣೊರೆಸುವ ತಂತ್ರವನ್ನು ತೋರಿಸುತ್ತಿರುವ ನಿಮ್ಮ ಸರ್ಕಾರ, ಹೆಜ್ಜೆ ಹೆಜ್ಜೆಗೂ ತಮ್ಮ ನಿಜವಾದ ಮುಖವಾಡವನ್ನು ಕಳಚುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟ್ವೀಟ್ ಕೂಡ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕೈ ನಾಯಕರು
ಏತನ್ಮಧ್ಯೆ, ಕರ್ನಾಟಕ ಕಾಂಗ್ರೆಸ್ ನಾಯಕ ನಾಗರಾಜ್ ಯಾದವ್ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಬೆಂಬಲಿಸಿದರು ಮತ್ತು ಬಿಜೆಪಿ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದರು.
“ಮುಖ್ಯಮಂತ್ರಿಯವರು ಸರಿಯಾಗಿಯೇ ಮಾಡಿದ್ದಾರೆ. ಯಾವುದೇ ನೋಟಿಸ್‌ಗಳನ್ನು ನೀಡುವುದಿಲ್ಲ ಮತ್ತು ನೀಡಲಾದ ನೋಟಿಸ್‌ಗಳನ್ನು ಹಿಂಪಡೆಯಲಾಗುವುದು. ಏಕೆಂದರೆ ಬಿಜೆಪಿಯು ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ. ಖಂಡಿತವಾಗಿಯೂ ಅಂತಹ ನೋಟಿಸ್‌ಗಳನ್ನು ನೀಡುವ ಅಥವಾ ವಿಭಜನೆ ಮಾಡುವ ಉದ್ದೇಶ ಕಾಂಗ್ರೆಸ್‌ಗೆ ಇಲ್ಲ. ಜಾತಿಯ ಆಧಾರದ ಮೇಲೆ ಸಮಾಜವು ಹಾಗೆ ಮಾಡುವುದು ಬಿಜೆಪಿಯ ಧೋರಣೆ ಮಾತ್ರ” ಎಂದು ಅವರು ಟೀಕಿಸಿದರು.
ಗಜೆಟ್ ಅಧಿಸೂಚನೆ ವಾಪಸ್ ಪಡೆಯಲು ಛಲವಾದಿ ನಾರಾಯಣಸ್ವಾಮಿ ಆಗ್ರಹ
“ರಾಜ್ಯದ ಜನತೆಗೆ ನೀಡಿರುವ ಅವಾಸ್ತವಿಕ ಭರವಸೆಗಳನ್ನು ಈಡೇರಿಸಲಾಗದೆ ಮಾನ್ಯ ಸಿಎಂ ಸಿದ್ದರಾಮಯ್ಯನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದರೆ ಸಾಲದು. ಬದಲಿಗೆ ಕಾಂಗ್ರೆಸ್ ಸರ್ಕಾರವೇ ಹೊರಡಿಸಿರುವ ಗೆಜೆಟ್ ವಾಪಸ್ ಪಡೆಯಬೇಕು” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬಲವಾಗಿ ಆಗ್ರಹಿಸಿದ್ದಾರೆ. ಅವರ ಹೇಳಿಕೆಯ ವಿಡಿಯೋ ಇಲ್ಲಿದೆ
ಸಿಎಂ ಸಭೆ ಮತ್ತು ಆದೇಶ
“ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯಬೇಕು. ನೋಟೀಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು. ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯ ಸಣ್ಣ ತೊಂದರೆಯನ್ನೂ ನೀಡಬಾರದು. ವಕ್ಫ್ ಜಮೀನು ವಿಚಾರದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳಿಂದ ರೈತರಿಗೂ ಬೇಸರವಾಗಿದೆ. ಈ ವಿಚಾರವನ್ನು ಜೆಡಿಎಸ್ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಈ ಮೂಲಕ ಕರ್ನಾಟಕದಲ್ಲಿ ಶಾಂತಿ ಕದಡುವ ದುಷ್ಟ ಪ್ರಯತ್ನವನ್ನು ಆ ಪಕ್ಷಗಳು ಜಂಟಿಯಾಗಿ ಮಾಡುತ್ತಿವೆ. ಇಂತಹ ಹೀನ ಪ್ರಯತ್ನಗಳಿಗೆ ರಾಜ್ಯದ ಜನರು ಸೊಪ್ಪು ಹಾಕದಂತೆ ಸಾರ್ವಜನಿಕರಲ್ಲೂ ವಿನಂತಿಸುತ್ತೇನೆ. ಜೊತೆಗೆ ಜನರು ಅಪಪ್ರಚಾರಗಳಿಗೆ ಕಿವಿಗೊಡಬಾರದು. ಅಧಿಕಾರಿಗಳೂ ಈ ಕುರಿತು ಎಚ್ಚರ ವಹಿಸಬೇಕು. ರೈತರಿಗೆ ತೊಂದರೆ ಆಗುವ ಯಾವುದೇ ತೀರ್ಮಾನವನ್ನು ಕೈಗೊಳ್ಳಬಾರದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿರುವುದಾಗಿ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿತ್ತು.