Doctors Strike: ಭಾರತಾದ್ಯಂತ ವೈದ್ಯರ ಮುಷ್ಕರ ನಾಳೆ, ಕರ್ನಾಟಕದಲ್ಲೂ ವೈದ್ಯಕೀಯ ಸೇವೆ ವ್ಯತ್ಯಯ, ತೊಂದರೆ ಮಾಡದಿರಲು ಸಚಿವರ ಸೂಚನೆ
Aug 16, 2024 12:21 PM IST
Doctors Anger ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಘಟನೆ ಖಂಡಿಸಿ ಶನಿವಾರ ದೇಶಾದ್ಯಂತ ವೈದ್ಯರ ಮುಷ್ಕರಕ್ಕೆ ಕರೆ ನೀಡಲಾಗಿದೆ.
- Health News ವೈದ್ಯ ವಿದ್ಯಾರ್ಥಿನಿ ಮೇಲಿನ ಕೊಲೆ ಖಂಡಿಸಿ ಭಾರತದಾದ್ಯಂತ 24 ಗಂಟೆಗಳ ವೈದ್ಯರ ಮುಷ್ಕರ ಶನಿವಾರ ಬೆಳಿಗ್ಗೆ ಶುರುವಾಗಲಿದೆ.
ಬೆಂಗಳೂರು: ಕೋಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿ ಅತ್ಯಾಚಾರ ಹಾಗೂ ಭೀಕರ ಹತ್ಯೆ ಪ್ರಕರಣವನ್ನು ಖಂಡಿಸಿ ಭಾರತದಾದ್ಯಂತ ವೈದ್ಯರು 24 ಗಂಟೆಗಳ ಮುಷ್ಕವನ್ನು ಶನಿವಾರ ಬೆಳಗಿನ ಜಾವ ಆರಂಭಿಸಲಿದ್ದಾರೆ. ಭಾರತೀಯ ವೈದ್ಯಕೀಯ ಸಂಘ( IMA) ಈ ಮುಷ್ಕರಕ್ಕೆ ಕರೆ ನೀಡಿದ್ದು, ಕರ್ನಾಟಕವೂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಈಗಾಗಲೇ ಘೋಷಣೆ ಮಾಡಿದಂತೆ 2024ರ ಆಗಸ್ಟ್ 17 ಶನಿವಾರ ಬೆಳಿಗ್ಗೆ 6ಕ್ಕೆ ಆರಂಭವಾಗುವ ಮುಷ್ಕರವು ಆಗಸ್ಟ್ 18 ಭಾನುವಾರ ಬೆಳಿಗ್ಗೆ 6ಕ್ಕೆ ಅಂತ್ಯವಾಗಲಿದೆ. ಅಲ್ಲಿಯವರೆಗೂ ತುರ್ತು ಚಿಕಿತ್ಸೆ ಹೊರತುಪಡಿಸಿ ಯಾವುದೇ ಚಿಕಿತ್ಸೆಗಳಿಗೆ ಅವಕಾಶ ಇರುವುದಿಲ್ಲ ಎಂದು ವೈದ್ಯಕೀಯ ಸಂಘ ಈಗಾಗಲೇ ಘೋಷಣೆ ಮಾಡಿದೆ.
ಆಯಾ ರಾಜ್ಯಗಳ ವೈದ್ಯಕೀಯ ಸಂಘ, ಜಿಲ್ಲಾ ಮಟ್ಟದ ಸಂಘಗಳ ನೇತೃತ್ವದಲ್ಲಿ ನಡೆಯುವ ಈ ಮುಷ್ಕರಕ್ಕೆ ವೈದ್ಯರ ಇತರೆ ಸಂಘಟನೆಗಳು, ವೈದ್ಯಕೀಯ ವಿದ್ಯಾರ್ಥಿಗಳ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಲಕ್ಷಾಂತರ ವೈದ್ಯರು ಮುಷ್ಕರಕ್ಕೆ ಕೈ ಜೋಡಿಸಿದ್ದು. ವೈದ್ಯಕೀಯ ವಿದ್ಯಾರ್ಥಿಗಳು ಸೇರುವುದರಿಂದ ಯಾವುದೇ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಸಾಮಾನ್ಯ ಸೇವೆಗಳು ಇರುವುದಿಲ್ಲ. ಇದರಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ಇತರೆ ಚಿಕಿತ್ಸೆ ಇದ್ದವರು ಗಮನಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ನಾನಾ ರಾಜ್ಯಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಮುಷ್ಕರವನ್ನು ಶಾಂತಿಯುತವಾಗಿ ನಡೆಸಿ. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಐಎಂಎ ಪ್ರಕಟಣೆ
ವಾರದ ಹಿಂದೆ ರಾತ್ರಿ ಪಾಳಿ ಸೇವೆಯಲ್ಲಿದ್ದ ಕೋಲ್ಕತಾ ನಗರದ ಆರ್.ಜಿ. ಕರ್ ಸರಕಾರಿ ವೈದ್ಯಕೀಯ ಹಾಗೂ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಪ್ರಮುಖ ಆರೋಪಿ ಬಂಧಿಸಲಾಗಿದೆ. ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಲದಲ್ಲೀ ಈಗಾಗಲೇ ಪ್ರತಿಭಟನೆಗಳು ನಡೆದಿವೆ. ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಿ ಎನ್ನುವ ಬೇಡಿಕೆಯೂ ಕೇಳಿ ಬಂದಿದೆ. ಐಎಂಎ ರಾಷ್ಟ್ರವ್ಯಾಪಿ ಕ್ಯಾಂಡಲ್ ಮಾರ್ಚ್ ಗಳನ್ನು ನಡೆಸುತ್ತಿದೆ. ಇದರ ನಡುವೆಯೇ ಪೈಶಾಚಿಕ ಕೃತ್ಯ ಖಂಡಿಸಿ ಆಗಸ್ಟ್ 17ರ ಶನಿವಾರ ದೇಶಾದ್ಯಂತ ವೈದ್ಯರು ಸೇವೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಈಗಾಗಲೇ ಪ್ರಕಟಿಸಿದ್ದಾರೆ. ಶನಿವಾರ ಬೆಳಗ್ಗೆ 6 ಗಂಟೆಯಿಂದ ಮರುದಿನ ಭಾನುವಾರ ಬೆಳಗ್ಗೆ 6 ಗಂಟೆವರೆಗೆ ತುರ್ತು ಚಿಕಿತ್ಸೆ ಹೊರತು ಪಡಿಸಿ ಇತರೆ ಯಾವುದೇ ರೀತಿಯ ಚಿಕಿತ್ಸೆಗಳು ಇರುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ( IMA) ಪ್ರಕಟಣೆ ಹೊರಡಿಸಿದೆ. ಆಯಾ ಜಿಲ್ಲಾ ಕೇಂದ್ರಗಳ ಮಹಾವಿದ್ಯಾಲಯ, ಆಸ್ಪತ್ರೆಗಳ ಆವರಣದಲ್ಲಿ ಪ್ರತಿಭಟನೆ ನಡೆಯಲಿವೆ. ಸ್ಥಳೀಯವಾಗಿ ಮನವಿ ಸಲ್ಲಿಸುವ ಚಟುವಟಿಕೆಗಳು ಇರಲಿವೆ ಎಂದು ಹೇಳಲಾಗಿದೆ.
ಸಚಿವರ ಮನವಿ
ಕೋಲ್ಕತ್ತಾದಲ್ಲಿನ ವೈದ್ಯಕೀಯ ವಿದ್ಯಾರ್ಥಿನಿ ಪ್ರಕರಣ ಖಂಡಿಸಿ ಶನಿವಾರ ನಡೆಯುವ ಮುಷ್ಕರ ಶಾಂತಿಯುತವಾಗರಲಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕರ್ನಾಟಕದಲ್ಲಿ ತುರ್ತು ಚಿಕಿತ್ಸೆಗಳು ವ್ಯತ್ಯಯವಾಗದಂತೆ ನೋಡಿಕೊಳ್ಳುವ ಸೂಚನೆ ನೀಡಲಾಗಿದೆ. ಪ್ರತಿಭಟಿಸಲು, ಅಭಿಪ್ರಾಯ ಹಂಚಿಕೊಳ್ಳಲು ಯಾವುದೇ ಅಡ್ಡಿಯಿಲ್ಲ. ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲವೂ ಇರಲಿದೆ. ಆದರೆ ಜನರಿಗೆ ತೊಂದರೆಯಾಗದಂತೆ ವೈದ್ಯರು ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಭಾಗ