logo
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ; ಆಟೋಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ; ಆಟೋಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

Prasanna Kumar P N HT Kannada

Oct 15, 2024 09:58 PM IST

google News

ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ

    • Tumakuru Rains:  ತುಮಕೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಮಳೆ ಬಿಡುವು ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ, ವರುಣ ಮತ್ತಷ್ಟು ಆರ್ಭಟಿಸುತ್ತಿರುವುದು ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ.
ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ
ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ

ತುಮಕೂರು: ಕಲ್ಪತರ ನಾಡು ತುಮಕೂರು ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನಸಾಮಾನ್ಯರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಪ್ರಯಾಸ ಪಡುವಂತಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಸೋನೆ ಮಳೆ ಹಾಗೂ ಒಮ್ಮೆಮ್ಮೆ ಜೋರು ಮಳೆ ಆಗುತ್ತಿರುವುದರಿಂದ ಜನರು ತತ್ತರಿಸಿದ್ದಾರೆ. ಕೊಂಚ ಮಳೆಯಾದರೂ ನೀರು ಹರಿಯುತ್ತಿದೆ. ಜಿಲ್ಲಾಡಳಿತ ಆರೆಂಜ್, ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಹೊಲಗಳು, ತೋಟಗಳು ಜಲಾವೃತಗೊಂಡಿವೆ. ಪರಿಸ್ಥಿತಿ ಹೀಗಿರುವಾಗ ಹವಾಮಾನ ಇಲಾಖೆ ಇನ್ನು ಐದು ದಿನ ನಿರಂತರ ಮಳೆಯಾಗುವ ಮುನ್ಸೂಚನೆ ನೀಡಿದ್ದು, ರಾಗಿ ಬೆಳೆಗಾರರಿಗೆ ಆತಂಕ ಹೆಚ್ಚಿಸಿದೆ. ವಿದ್ಯಾರ್ಥಿಗಳು, ಬೆಳಗಿನ ಪಾಳಿ ಕೆಲಸಕ್ಕೆ ತೆರಳುವ ಉದ್ಯೋಗಿಗಳು ಸೇರಿದಂತೆ ಎಲ್ಲರೂ ಹೊರ ಬರಲಾಗದೆ ಛತ್ರಿ, ಜರ್ಕಿನ್‌ಗಳ ಮೊರೆ ಹೋಗಿದ್ದಾರೆ. ಮಳೆ ಬಿಡುವು ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ವರುಣ ಮತ್ತಷ್ಟು ಆರ್ಭಟಿಸುತ್ತಿರುವುದು ಎಲ್ಲಾ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ.

ಕೆಲವರು ಕೆಲಸಗಳಿಗೆ ಹೋಗಲಾಗದೆ ರಜೆ ಹಾಕಿ ಮನೆಯಲ್ಲಿದ್ದರೆ, ಇನ್ನು ಕೆಲವರು ದ್ವಿಚಕ್ರ ವಾಹನಗಳನ್ನು ಬಿಟ್ಟು ಆಟೋ ರಿಕ್ಷಾಗಳನ್ನು ಆಶ್ರಯಿಸಿ ಕೆಲಸಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ಡಾಂಬರು ಕಾಣದ ರಸ್ತೆಗಳು ಜಲಾವೃತವಾಗಿವೆ. ನಗರ ಪ್ರದೇಶಗಳ ಕೆಲ ಬಡಾವಣೆಗಳ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದವು. ರೈತರ ಕೃಷಿ ಕೆಲಸಗಳಿಗೂ ತೊಡಕಾಗಿದ್ದು, ಸದ್ಯ ಮಳೆ ಬಿಡುವು ಕೊಟ್ಟರೆ ಸಾಕು ಎಂದು ದೇವರಲ್ಲಿ ಮೊರೆಯಿಡುವಂತಾಗಿದೆ. 

ಆಟೋಗಳಿಗೆ ಡಿಮ್ಯಾಂಡ್

ನಗರ ಪ್ರದೇಶಲ್ಲಿ ವಿದ್ಯಾರ್ಥಿಗಳು, ನೌಕರರು ಹಾಗೂ ಇತರೆ ಕೂಲಿ ಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ ಹೋಗಲು ಸಾಧ್ಯವಾಗದೆ ಆಟೋ ರಿಕ್ಷಾಗಳಿಗೆ ಮುಗಿ ಬೀಳುತ್ತಿದ್ದು, ಇದರಿಂದ ಆಟೋಗಳಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ತುಮಕೂರು ಅಮಾನಿಕೆರೆ, ಶಿರಾ ಕೆರೆ, ಕುಣಿಗಲ್ ಕೆರೆ ಸೇರಿದಂತೆ ಎಲ್ಲಾ ಕೆರೆಗಳು ಕೋಡಿ ಬಿದ್ದಿದ್ದು, ಮಳೆ ಹೀಗೆ ಮುಂದುವರೆದರೆ ಮತ್ತಷ್ಟು ಭರ್ತಿಯಾಗಿ ಕೋಡಿ ಬೀಳುವ ಸಾಧ್ಯತೆ ಇದೆ. 

ಮಧುಗಿರಿ- ಕೊರಟಗೆರೆ ತಾಲ್ಲೂಕಿನಲ್ಲಿರುವ ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದು, ಈಗಾಗಲೇ ನದಿ ಪಾತ್ರದಲ್ಲಿ ಎಚ್ಚರಿಕೆಯಿಂದ ಓಡಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ರಸ್ತೆಗಳು, ಫುಟ್‌ಪಾತ್‌ಗಳು ತೊಯ್ದಿದ್ದು, ಜಡಿ ಮಳೆಯಾಗುತ್ತಿರುವುದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡಬೇಕಾಗಿದೆ. ಹಳ್ಳಿಗಳಲ್ಲಿ ಹಸು, ಕರು, ಎಮ್ಮೆ, ಮೇಕೆ, ಕುರಿಗಳನ್ನು ಮೇಯಿಸಲು ರೈತರು ಪರದಾಡುವಂತಾಗಿದ್ದು, ಜಾನುವಾರುಗಳಿಗೆ ಮೇವು ಒದಗಿಸಲು ಕಷ್ಟಪಡುವಂತಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ