Rain Alert: ನಿಲ್ಲುತ್ತಿಲ್ಲ ವರುಣನ ಆರ್ಭಟ, ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ; ಕರ್ನಾಟಕ ಹವಾಮಾನ ಹೀಗಿದೆ
Oct 21, 2024 09:44 AM IST
ಬೆಂಗಳೂರಿನಲ್ಲಿ ಮಳೆಯಲ್ಲೇ ಆಹಾರ ಪೂರೈಸುತ್ತಿರುವ ಸ್ವಿಗ್ಗಿ ಡಿಲಿವರಿ ಬಾಯ್.
- ಕರ್ನಾಟಕದಲ್ಲಿ ಹಿಂಗಾರು ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯಕ್ಕೆ ವರುಣನ ಅಬ್ಬರ ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅದರಂತೆ ಸೋಮವಾರೂ ಇದೇ ಮಳೆ ಮುಂದುವರಿಯಲಿದ್ದು, ಜನರು ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಅಕ್ಟೋಬರ್ 22ರವರೆಗೂ ರಾಜ್ಯದ ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮಳೆಯ (Heavy Rainfall) ಅಬ್ಬರ ಹೆಚ್ಚಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಕಳೆದೊಂದು ವಾರದಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಈಗಾಗಲೇ 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ, ಜನರಿಗೆ ಎಚ್ಚರಿಕೆ ನೀಡಿದೆ. ಅಕ್ಟೋಬರ್ 21ರ ಸೋಮವಾರವೂ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕೆಲವೆಡೆ ಮಳೆ ಬಾರದಿದ್ದರೂ ಬೆಳಿಗ್ಗೆಯಿಂದ ಸಂಜೆ ತನಕ ಮೋಡ ಕವಿದ ವಾತಾವರಣ ಇರಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಕೆಲಸಕಕ್ಕೆ, ವ್ಯಾಪಾರಿಗಳು, ವಿದ್ಯಾರ್ಥಿಗಳು, ರೈತರು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.
ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ?
ರಾಜ್ಯದ ಬಹುತೇಕ ಕಡೆಗಳಲ್ಲಿ ಸೋಮವಾರೂ ಧಾರಾಕಾರ ಮಳೆ ಸುರಿಯಲಿದೆ. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದರೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಸ್ಥಳಗಳಲ್ಲಿ ಹಗುರ ಮಳೆ ಬೀಳುವ ಸಾಧ್ಯತೆ ಇದೆ.
ಅಕ್ಟೋಬರ್ 22, 23ರಂದೂ ಜೋರು ಮಳೆ
ಅಕ್ಟೋಬರ್ 22ರಂದು ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಬೀಳುವ ಸಾಧ್ಯತೆ ಇದೆ. ಉಳಿದಂತೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಭಾಗಗಳಲ್ಲಿ ಹಗುರ ಮಳೆಯಾಗಲಿದೆ. ಅದೇ ಅ.23ರಂದು ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲೂ ನಿಲ್ಲಲ್ಲ ಮಳೆ-ಮೀನುಗಾರರಿಗೆ ಎಚ್ಚರಿಕೆ
ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಅಲ್ಲದೆ, ಬಿಟ್ಟೂ ಬಿಡದೆ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಕೆಲವು ಭಾಗಗಳಲ್ಲಿ ಮಳೆ ಬಾರದಿದ್ದರೂ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 26° C ಮತ್ತು 20° C ಆಗಿರಬಹುದು. ರಾಜ್ಯಕ್ಕೆ ಮತ್ತೊಂದು ಚಂಡಮಾರುತದ ನಿರೀಕ್ಷೆಯಿರುವ ಕಾರಣ ಕರಾವಳಿ ಭಾಗದ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 35 ಕಿಮೀನಿಂದ 45 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಅಲೆಗಳ ಅಬ್ಬರ ಹೆಚ್ಚಾಗಿರಲಿದೆ.
ಅಕ್ಟೋಬರ್ 20ರಂದು ಹೆಚ್ಚು ಮಳೆಯಾಗಿದ್ದೆಲ್ಲಿ?
ಶಿವಮೊಗ್ಗ ನಗರದಲ್ಲಿ ಅತ್ಯಧಿಕ ಮಳೆ ದಾಖಲಾಗಿದ್ದು, 10 ಸೆಂಟಿ ಮೀಟರ್ ಮಳೆಯಾಗಲಿದೆ. ರಾಮನಗರದ ಜಿಲ್ಲೆಯ ಮಾಗಡಿಯಲ್ಲಿ 9 ಸೆಂ.ಮೀ, ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ 8 ಸೆಂ.ಮೀ, ಮಂಡ್ಯದ ಬೆಳ್ಳೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಎನ್ಆರ್ ಪುರ, ತರಿಕೇರೆಯಲ್ಲಿ 6 ಸೆಂ.ಮೀ ಮಳೆ ಸುರಿದಿದೆ. ಔರಾದ್, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಮೂಡಿಗೆರೆ, ಮಂಗಳೂರು, ಕಡೂರು, ಕೋಲಾರ, ಬೆಂಗಳೂರು ಜಿಕೆವಿಕೆ, ಕುಣಿಗಲ್, ಕೊಪ್ಪ, ಎಲೆಕ್ಟ್ರಾನಿಕ್ಸ್ ಸಿಟಿ, ಲೋಕಾಪುರ, ಲಂಕನಾಪುರ, ಹುಣಸೂರು ಸೇರಿದಂತೆ ಬಹುತೇಕ ಸ್ಥಳಗಳಲ್ಲಿ 5, 4, 3 ಸೆಂಟಿ ಮೀಟರ್ಗಳಲ್ಲಿ ಮಳೆ ಸುರಿದಿದೆ.
ಅ 20ರಂದು ತಾಪಮಾನ
ರಾಜ್ಯದ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 33.1 ಡಿಗ್ರಿ ಸೆಲ್ಸಿಯಸ್
ರಾಜ್ಯದ ಶಿರಾಲಿಯಲ್ಲಿ ಕನಿಷ್ಠ ತಾಪಮಾನ 18.4 ಡಿಗ್ರಿ ಸೆಲ್ಸಿಯಸ್