ಮುಡಾದಲ್ಲಿ 30 ಗಂಟೆ ದಾಖಲೆಗಳ ಜಾಲಾಡಿದ ಇಡಿ; ವೈಟ್ನರ್ ಹಾಕಿ ತಿದ್ದಿದ್ದ ಸಿಎಂ ಪತ್ನಿ ಪತ್ರ ವಶಕ್ಕೆ ಪಡೆದ ಅಧಿಕಾರಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾದಲ್ಲಿ 30 ಗಂಟೆ ದಾಖಲೆಗಳ ಜಾಲಾಡಿದ ಇಡಿ; ವೈಟ್ನರ್ ಹಾಕಿ ತಿದ್ದಿದ್ದ ಸಿಎಂ ಪತ್ನಿ ಪತ್ರ ವಶಕ್ಕೆ ಪಡೆದ ಅಧಿಕಾರಿಗಳು

ಮುಡಾದಲ್ಲಿ 30 ಗಂಟೆ ದಾಖಲೆಗಳ ಜಾಲಾಡಿದ ಇಡಿ; ವೈಟ್ನರ್ ಹಾಕಿ ತಿದ್ದಿದ್ದ ಸಿಎಂ ಪತ್ನಿ ಪತ್ರ ವಶಕ್ಕೆ ಪಡೆದ ಅಧಿಕಾರಿಗಳು

ಮುಡಾ ಹಗರಣಕ್ಕೆ ಸಂಬಂಧಿಸಿ ಕಚೇರಿಯಲ್ಲಿ ಎರಡು ದಿನಗಳ ಕಾಲ ತಲಾಶ್ ನಡೆಸಿದ ಇ.ಡಿ ಅಧಿಕಾರಿಗಳು, ಕಳೆದ ತಡರಾತ್ರಿವರೆಗೂ ಶೋಧ ನಡೆಸಿದರು. ತನಿಖೆಗೆ ಬೇಕಿರುವಂತಹ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಮುಡಾ ಕಚೇರಿಯಲ್ಲಿ ಸಿಆರ್​​ಪಿಎಫ್ ಸಿಬ್ಬಂದಿ ಭದ್ರತೆಯಲ್ಲಿ ತೊಡಗಿದ್ದ ಕ್ಷಣ.
ಮುಡಾ ಕಚೇರಿಯಲ್ಲಿ ಸಿಆರ್​​ಪಿಎಫ್ ಸಿಬ್ಬಂದಿ ಭದ್ರತೆಯಲ್ಲಿ ತೊಡಗಿದ್ದ ಕ್ಷಣ.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿರುವ ಹಗರಣಕ್ಕೆ ಸಂಬಂಧಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇ.ಡಿ), ಪ್ರಕರಣಕ್ಕೆ ಬೇಕಾದ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಎರಡು ದಿನಗಳ ಕಾಲ ಮುಡಾದಲ್ಲಿ ತಲಾಶ್ ನಡೆಸಿದ ಇ.ಡಿ, ಕಳೆದ ತಡರಾತ್ರಿವರೆಗೂ ದಾಖಲೆ ಶೋಧ ನಡೆಸಿತು. ತನಿಖೆಗೆ ಬೇಕಿರುವಂತಹ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಒಟ್ಟು 30 ಗಂಟೆಗಳ ಕಾಲ ಶೋಧ ನಡೆಸಿದ್ದಾರೆ.

ಸಿಎಂ ಪತ್ನಿ ಪಾರ್ವತಿ ಅವರ ಸೈಟ್​ಗೆ ಸೇರಿದ ದಾಖಲೆಯನ್ನು ವಶಕ್ಕೆ ಪಡೆದರು. ಹಾರ್ಡ್ ಡಿಸ್ಕ್​ನಲ್ಲೂ ದಾಖಲೆ ಸಂಗ್ರಹಿಸಿದ್ದಾರೆ. ಬಂಡಲ್ ಗಟ್ಟಲೆ ದಾಖಲೆ ಹೊತ್ತು ತೆರಳಿದ ಇಡಿ ಅಧಿಕಾರಿಗಳು, ರಾತ್ರಿ 2.30ರ ನಕ ದಾಖಲೆಗಳ ಹುಡುಕಾಟ ನಡೆಸಿದರು. ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ದಾಖಲೆಗಳ ರವಾನಿಸಿದರು. ರಾತ್ರಿಯಿಡಿ ನಡೆದ ಕಾರ್ಯಾಚರಣೆಗೆ ಮುಡಾ ಸಿಬ್ಬಂದಿ ಸಾಥ್ ನೀಡಿದರು. ಮುಡಾದ ಆಯುಕ್ತ ರಘುನಂದನ್, ಕಾರ್ಯದರ್ಶಿ ಪ್ರಸನ್ನಕುಮಾರ್ ಸಾಥ್ ನೀಡಿದರು. ಇ.ಡಿ ಅಧಿಕಾರಿಗಳು ಹಾರ್ಡ್ ಡಿಸ್ಕ್ ಜೊತೆಗೆ ಜೆರಾಕ್ಸ್, ಮೂಲ ಪ್ರತಿಗಳನ್ನು ಕೊಂಡೊಯ್ದರು.

ವೈಟ್ನರ್​ ಹಾಕಿದ್ದ ಪ್ರತಿ ವಶಕ್ಕೆ

ಸಂಪೂರ್ಣ ಕಾರ್ಯಾಚರಣೆ ಮುಗಿಸಿ ವಾಪಸ್ ತೆರಳಿದ ಇ.ಡಿ ಅಧಿಕಾರಿಗಳು, 8000 ಪುಟಗಳ ದಾಖಲೆಯೊಂದಿಗೆ ತೆರಳಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಅಂದರೆ, ವೈಟ್ನರ್ ಹಾಕಿ ತಿದ್ದಿದ್ದ ಸಿಎಂ ಪತ್ನಿ ಪತ್ರದ ಮೂಲ ಪ್ರತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಲ್ಲಾ ದಾಖಲೆಗಳನ್ನೂ ಹಾರ್ಡ್​​​ ಡಿಸ್ಕ್​ನಲ್ಲಿ ದಾಖಲಿಸಿರುವ ಅಧಿಕಾರಿಗಳು, ಜೆರಾಕ್ಸ್ ಪ್ರತಿ ಜೊತೆ ಮೂಲ ಪ್ರತಿ ಕೊಂಡೊಯ್ದಿದ್ದಾರೆ. ಎರಡು ದಿನಗಳಿಂದ ಅಧಿಕಾರಿಗಳಿಂದ ತುಂಬಿದ್ದ ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಮುಡಾ ಕಚೇರಿ, ಇಂದು ಭಾನುವಾರದ ಕಾರಣ ಬಿಕೋ ಎನ್ನುತ್ತಿದೆ. ಸ್ಥಳೀಯ ಪೊಲೀಸರನ್ನು ಹೊರತುಪಡಿಸಿ ಖಾಲಿ ಖಾಲಿಯಾಗಿದೆ.

ಕುಮಾರನಾಯ್ಕ್​​ಗೆ ಫುಲ್ ಡ್ರಿಲ್

ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಅಂದು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂಸದ ಕುಮಾರನಾಯ್ಕ್​ ಅವರನ್ನು ಇ.ಡಿ ಅಧಿಕಾರಿಗಳು ಫುಲ್ ಡ್ರಿಲ್ ಮಾಡಿದ್ದಾರೆ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಾಲು- ಸಾಲು ಪ್ರಶ್ನೆಗಳಿಗೆ ಉತ್ತರಿಸಲು ನಿವೃತ್ತ ಐಎಎಸ್ ಅಧಿಕಾರಿ ಚಡಪಡಿಸಿದರು. ಲೋಕಾಯುಕ್ತದಲ್ಲಿ ಕುಮಾರನಾಯ್ಕ್ ವಿಚಾರಣೆ ನಡೆಸಲಾಗಿತ್ತು. ಅಂದಿನ ಡಿಸಿಯಾಗಿದ್ದ ಕುಮಾರನಾಯ್ಕ್ ದಾಖಲೆಗಳಿಗೆ ಸಹಿ ಮಾಡಿದ್ದರು. ಸ್ಪಷ್ಟ ಪ್ರಶ್ನೆಗಳಿಗೆ ಕುಮಾರನಾಯ್ಕ್ ಅಸ್ಪಷ್ಟ ಉತ್ತರ ನೀಡಿದ್ದಾರೆ.

ಕುಮಾರನಾಯ್ಕ್​ಗೆ ಕೇಳಲಾದ ಪ್ರಶ್ನೆಗಳು

ಬಡಾವಣೆ ನಿರ್ಮಾಣವಾದ ಕೃಷಿ ಭೂಮಿಯ ಅನ್ಯಕ್ರಾಂತ ಮಾಡಿದ್ದು‌ ಹೇಗೆ?

ಕರಾರು ಪತ್ರದ ದಿನಾಂಕ ವ್ಯತ್ಯಾಸ ಆಗಿದ್ದು ಹೇಗೆ?

ಮಲ್ಲಿಕಾರ್ಜುನ ಸ್ವಾಮಿ ಭೂಮಿ ಖರೀದಿ ಮಾಡಿದಾಗ ನೀವು ಸ್ಥಳ ವೀಕ್ಷಣೆ ಮಾಡಿದ್ರಾ?

ಎ4 ಆರೋಪಿ ದೇವರಾಜು ಡಿನೋಟಿಫೈ, ನೋಟಿಫೈ ದಾಖಲೆಗಳನ್ನು ನೀಡಿದ್ರಾ?

ಜಮೀನನ್ನು ಹೇಗೆ ಡಿನೋಟಿಫೈ ಮಾಡಿದ್ರಿ?

2005ರ ಜುಲೈ 17ರಂದು ಮಲ್ಲಿಕಾರ್ಜುನಸ್ವಾಮಿ ಷರತ್ತಿಗೊಳಪಡುವ ಕರಾರುಪತ್ರ ನೀಡಿದ್ರಾ?

2005ರ ಜುಲೈ 22ರಂದು ಭೂ ಖರೀದಿ ಮಾಡಿರುವ ದಾಖಲೆ ಇದೆಯಾ?

ಭೂಮಿ ಕನ್ವರ್ಷನ್ ಆಗಿದ್ದರೂ ಕೃಷಿ ಭೂಮಿ ಎಂದು ಅನ್ಯಕ್ರಾಂತ ಹೇಗೆ ಮಾಡಿದ್ರಿ?

ಮಲ್ಲಿಕಾರ್ಜುನ ಸ್ವಾಮಿ ಷರತ್ತಿಗೊಳಪಡಿಸಲು ನೀಡಿದ್ದ ಪತ್ರದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಸಹಿಯಾಗಲಿ ಅಥವಾ ಸಾಕ್ಷಿದಾರರ ಸಹಿಯಾಗಲಿ ಇಲ್ಲ, ಏಕೆ?

Whats_app_banner