logo
ಕನ್ನಡ ಸುದ್ದಿ  /  ಕರ್ನಾಟಕ  /  Muda Case: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಮಧ್ಯಂತರ ಆದೇಶ ಆಗಸ್ಟ್ 31ರವರೆಗೆ ವಿಸ್ತರಣೆ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಮಧ್ಯಂತರ ಆದೇಶ ಆಗಸ್ಟ್ 31ರವರೆಗೆ ವಿಸ್ತರಣೆ

Jayaraj HT Kannada

Aug 30, 2024 06:47 AM IST

google News

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಮಧ್ಯಂತರ ಆದೇಶ ಆಗಸ್ಟ್ 31ರವರೆಗೆ ವಿಸ್ತರಣೆ

    • ಮುಡಾ ಪ್ರಕರಣದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಅರ್ಜಿ ವಜಾಗೊಳಿಸುವಂತೆ ಹೈಕೋರ್ಟ್‌ನಲ್ಲಿ ಸಿಎಂ ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆಯನ್ನು ಆಗಸ್ಟ್‌ 31ಕ್ಕೆ ಮುಂದೂಡಲಾಗಿದೆ. (ವರದಿ: ಎಚ್. ಮಾರುತಿ)
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಮಧ್ಯಂತರ ಆದೇಶ ಆಗಸ್ಟ್ 31ರವರೆಗೆ ವಿಸ್ತರಣೆ
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಮಧ್ಯಂತರ ಆದೇಶ ಆಗಸ್ಟ್ 31ರವರೆಗೆ ವಿಸ್ತರಣೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ಇದೇ ಆಗಸ್ಟ್‌ 31ಕ್ಕೆ ಮುಂದೂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡಬೇಕು ಮತ್ತು ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂದು ಆಗಸ್ಟ್ 19ರಂದು ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.

ಈ ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಆಗಸ್ಟ್‌ 30ರ ಗುರುವಾರ ವಿಚಾರಣೆ ನಡೆಸಿದರು.

ಸಿದ್ದರಾಮಯ್ಯ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ದೂರುದಾರ ಟಿಜೆ ಅಬ್ರಹಾಂ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 17ಎ ಅಡಿ ಪೂರ್ವಾನುಮತಿ ಬೇಕಿಲ್ಲ ಎಂದು ಹೇಳಿದ್ದಾರೆ. ಆದರೆ ಮೈಸೂರಿನ ಸ್ನೇಹಮಯಿ ಕೃಷ್ಣ ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಿರುವ ವಿಚಾರವನ್ನು ನಮ್ಮ ಕಕ್ಷಿದಾರರ ಗಮನಕ್ಕೆ ತಂದಿಲ್ಲ. ತನಿಖೆಗೆ ಅನುಮತಿ ನೀಡುವಾಗ ರಾಜ್ಯಪಾಲರು ಸೂಕ್ತ ರೀತಿಯಲ್ಲಿ ತೀರ್ಮಾನ ಕೈಗೊಂಡಿಲ್ಲ. ಆದ್ದರಿಂದ ಮಂಜೂರಾತಿ ಆದೇಶವನ್ನು ವಜಾಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿದ್ದರು.

ನ್ಯಾಯ ತತ್ವದ ಪ್ರಾಮುಖ್ಯತೆ ಬದಿಗೊತ್ತಿ ನಿರ್ಧಾರ

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಮತ್ತು ಮುರುಗೇಶ್ ನಿರಾಣಿ ವಿರುದ್ಧದ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಲಾಗಿರುವ ಮನವಿಗಳು ಹಲವು ವರ್ಷಗಳಿಂದ ರಾಜಭವನದಲ್ಲಿ ನೆನೆಗುದಿಗೆ ಬಿದ್ದಿವೆ. ಈ ಪ್ರಕರಣಗಳ ಬಗ್ಗೆ ರಾಜ್ಯಪಾಲರು ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಪ್ರಕರಣದಲ್ಲಿ ಸಂಪುಟದ ಸಲಹೆಯನ್ನು ತಳ್ಳಿಹಾಕಿ ಸಹಜ ನ್ಯಾಯ ತತ್ವದ ಪ್ರಾಮುಖ್ಯತೆಯನ್ನು ಬದಿಗೊತ್ತಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯಪಾಲರ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ತುಷಾರ್ ಮೆಹ್ತಾ ಅವರು, ಇಡೀ ಪ್ರಕರಣ ಶುದ್ಧ ಕಾನೂನಿನ ಪ್ರಶ್ನೆಯನ್ನು ಒಳಗೊಂಡಿದೆ. ಆದ್ದರಿಂದ ಅವರು ಆಕ್ಷೇಪಣೆ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದರು. ಆದರೆ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಮಂಜೂರಾತಿ ನೀಡಿರುವ ಕಡತ ಹಾಗೂ ಕಾನೂನಿಗೆ ಸಂಬಂಧಿಸಿದ ಲಿಖಿತ ವಾದದ ಅಂಶಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಶುದ್ಧ ಕಾನೂನಿನ ಪ್ರಶ್ನೆ

ಮತ್ತೊಬ್ಬ ದೂರುದಾರ ಪಿಎಸ್ ಪ್ರದೀಪ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ ನಾವದಗಿ, ರಾಜ್ಯಪಾಲರ ಪ್ರಾಸಿಕ್ಯೂಷನ್ ಮಂಜೂರಾತಿ ಪ್ರಶ್ನಿಸಿರುವ ದಾವೆಯು ಶುದ್ಧ ಕಾನೂನಿನ ಪ್ರಶ್ನೆಯಾಗಿದ್ದು, ಯಾವುದೇ ಆಕ್ಷೇಪಣೆ ಸಲ್ಲಿಸುವ ಅಂಶಗಳು ಬಾಕಿ ಉಳಿದಿಲ್ಲ. ಅರ್ಜಿದಾರರೇ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಆಗಸ್ಟ್ 19ರಂದು ನೀಡಿದ್ದ ಆದೇಶವನ್ನು ಇದೇ 31ರವರೆಗೆ ವಿಸ್ತರಿಸಿತು. ಅಲ್ಲಿಯವರೆಗೆ ಆಗಸ್ಟ್ 19ರ ಮಧ್ಯಂತರ ಆದೇಶ ಮುಂದುವರೆಯಲಿದೆ ಎಂದು ಆದೇಶ ಹೊರಡಿಸಿತು. ಮುಂದಿನ ವಿಚಾರಣೆ ಇದೇ ತಿಂಗಳ 31ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಮುಡಾ ಪ್ರಕರಣದಲ್ಲಿ ಆಗಸ್ಟ್ 16ರಂದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಆಗಸ್ಟ್ 19ರಂದು ಸಿದ್ದರಾಮಯ್ಯ ಅವರು ರಾಜ್ಯಪಾಲರು ನೀಡಿರುವ ಅನುಮತಿಯನ್ನು ವಜಾಗೊಳಿಸುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ