ಕರ್ನಾಟಕದ ಮುಖ್ಯಮಂತ್ರಿ ಆಗುವುದು ಹೇಗೆ?; 7ನೇ ತರಗತಿ ವಿದ್ಯಾರ್ಥಿ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉತ್ತರ ವೈರಲ್
Nov 16, 2024 08:11 PM IST
ಕರ್ನಾಟಕದ ಮುಖ್ಯಮಂತ್ರಿ ಆಗುವುದು ಹೇಗೆ?; 7ನೇ ತರಗತಿ ವಿದ್ಯಾರ್ಥಿ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉತ್ತರ ವೈರಲ್ ಆಗಿದೆ.
ಕರ್ನಾಟಕದ ಮುಖ್ಯಮಂತ್ರಿಯಾಗುವುದು ಹೇಗೆ?; ಇದೊಂದು ರೀತಿ ಬಿಲಿಯನ್ ಡಾಲರ್ ಪ್ರಶ್ನೆ. ಬಿಬಿಎಂಪಿ ಶಾಲಾ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರ ಹೇಳಿದ್ದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್. ಅವರ ಉತ್ತರದ ವಿಡಿಯೋ ವೈರಲ್ ಆಗಿದೆ. ನೀವಿನ್ನೂ ನೋಡಿಲ್ವ.. ಇಲ್ಲಿದೆ ಆ ವಿಡಿಯೋ ಮತ್ತು ವಿವರ.
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂದ ಮಹದಾಸೆ ಹೊಂದಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಕ್ಕಳ ದಿನಾಚರಣೆ ದಿನವೇ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಬಹುದೊಡ್ಡ ಪ್ರಶ್ನೆಯೊಂದನ್ನು ಕೇಳಿದ್ದಾನೆ. ಏನದು ಅಂತೀರಾ- “ಕರ್ನಾಟಕದ ಮುಖ್ಯಮಂತ್ರಿಯಾಗುವುದು ಹೇಗೆ?”. ಬಹಳ ಸರಳವಾದರೂ, ಉತ್ತರ ಹೇಳುವುದು ಸುಲಭವಲ್ಲ. ಬಹಳ ರಾಜಕೀಯ ಲೆಕ್ಕಾಚಾರ ಒಳಗೊಂಡ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಉತ್ತರ ಈಗ ವೈರಲ್ ಆಗಿದೆ. ಮಕ್ಕಳ ದಿನಾಚರಣೆ ನಿಮಿತ್ತ ವಿಧಾನ ಸೌಧದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾಸಾಗರ್ ಎಂಬ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಅವರ ಉತ್ತರದ ವಿಡಿಯೋ ವೈರಲ್ ಆಗಿದೆ. ವಿದ್ಯಾ ಸಾಗರ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಸಾಧಿಸಬಹುದು. ಉತ್ತಮ ಶಿಕ್ಷಣ, ಆರ್ಥಿಕ ಸ್ಥಿರತೆ ಮತ್ತು ನಾಯಕತ್ವದ ಕೌಶಲ್ಯಗಳು ನಿಮ್ಮನ್ನು ಆ ಹಾದಿಯಲ್ಲಿ ಮುಂದುವರಿಯಲು ಅವಕಾಶ ಒದಗಿಸುತ್ತದೆ”ಎಂದು ಅವರು ಹೇಳಿದರು. ಈ ಸನ್ನಿವೇಶ ಪ್ರೇಕ್ಷಕರ ಕುತೂಹಲ ಕೆರಳಿಸಿದ್ದಲ್ಲದೆ, ನಗೆಗಡಲಲ್ಲಿ ತೇಲಿಸಿತ್ತು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಕರ್ನಾಟಕದ ಮುಖ್ಯಮಂತ್ರಿ ಆಗುವುದು ಹೇಗೆ?: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉತ್ತರ ಹೀಗಿತ್ತು
ವಿಧಾನ ಸೌಧದಲ್ಲಿ ಬಿಬಿಎಂಪಿ ಶಾಲೆಗಳ ಮಕ್ಕಳು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ನಡೆಸಿದ ಸಂವಾದ ಬಹಳ ಆಸಕ್ತಿದಾಯಕವಾಗಿತ್ತು. ಒಳನೋಟಗಳೊಂದಿಗೆ ಮತ್ತು ಚೇತೋಹಾರಿಯಾಗಿತ್ತು. ಸಂವಾದವು ವಿದ್ಯಾರ್ಥಿಗಳಿಗೆ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಲು ಅಪರೂಪದ ವೇದಿಕೆಯನ್ನು ಒದಗಿಸಿತು. ದಿನದ ಕಾರ್ಯಕ್ರಮವು ಮಕ್ಕಳಿಗೆ ತೀರಾ ಗಂಭೀರವೂ ಅಲ್ಲದ, ತೀರಾ ಲಘುವೂ ಅಲ್ಲದ ರೀತಿಯ ಹಗುರ ವಿಷಯಗಳ ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿತು. ಇದು ಮಕ್ಕಳ ಸಾರ್ವಜನಿಕ ಭಾಷಣ ಮತ್ತು ನಾಯಕತ್ವದ ಕೌಶಲ್ಯಗಳನ್ನು ನಿರ್ಮಿಸುವಲ್ಲಿ ಮಹತ್ವದ್ದಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಬಿಬಿಎಂಪಿ ಶಾಲೆಗಳ ಮಕ್ಕಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು. ಕರ್ನಾಟಕದ ಪ್ರಾಥಮಿಕ ಮತ್ತು ಸೆಕಂಡರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಉಪಸ್ಥಿತರಿದ್ದರು.
ಹುಡುಗರಿಗೆ ಉಚಿತ ಬಸ್ ಪ್ರಯಾಣ ಸಿಗುತ್ತಾ?
ಬಿಬಿಎಂಪಿ ಶಾಲಾ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ನಡುವೆ, ಚರಣ್ ಎಂಬ ವಿದ್ಯಾರ್ಥಿ ಹುಡುಗರಿಗೂ ಉಚಿತ ಬಸ್ ಪ್ರಯಾಣದ ಪ್ರಯೋಜನ ಒದಗಿಸುವಂತೆ ಕೇಳಿದ್ದ. ಇದು ಹುಡುಗಿಯರಿಗೆ ಮಾತ್ರ ಇದೆ. ಹುಡುಗರಿಗೆ ಯಾಕೆ ಕೊಡುವುದಿಲ್ಲ ಎಂದು ಕೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಭವಿಷ್ಯದಲ್ಲಿ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬಹುದು. ಒಂದು ನಿರ್ದಿಷ್ಟ ವಯೋಮಿತಿಯ ಗಂಡು ಮಕ್ಕಳಿಗೆ ಉಚಿತ ಪ್ರಯಾಣದ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಬಹುದು ಎಂದು ಹೇಳಿದರು.
ಮತ್ತೊಬ್ಬ ವಿದ್ಯಾರ್ಥಿ ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣದ ಪ್ರವೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಕ್ಕೆ ಸ್ಪಂದಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಬೆಂಬಲದೊಂದಿಗೆ ಕರ್ನಾಟಕದಾದ್ಯಂತ ಹಳ್ಳಿಗಳಲ್ಲಿ 2,000 ಹೊಸ ಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ಶಿವಕುಮಾರ್ ಬಹಿರಂಗಪಡಿಸಿದರು.
ಬಿಬಿಎಂಪಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಚೆನ್ನಾಗಿದೆ. ಆದರೂ ಇತರೆ ಖಾಸಗಿ ಶಾಲೆಗಳ ಗುಣಮಟ್ಟ ಇಲ್ಲೂ ಸಿಗಬಹುದೇ? ಅದಕ್ಕೆ ಯೋಜನೆಗಳೇನಾದರೂ ಇದೆಯೇ ಎಂದು ವಿದ್ಯಾರ್ಥಿ ಹರ್ಷ ಕೇಳಿದಾಗ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 46,000 ಕ್ಕೂ ಹೆಚ್ಚು ಸರ್ಕಾರಿ ಮತ್ತು ಬಿಬಿಎಂಪಿ ಶಾಲೆಗಳನ್ನು ಮೆರಿಟ್ ಆಧಾರಿತ ಶಿಕ್ಷಕರ ನೇಮಕಾತಿ ಮತ್ತು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಮಾನದಂಡಗಳ ಮಾದರಿಯ ಪ್ರಕ್ರಿಯೆಗಳ ಮೂಲಕ ಸುಧಾರಿಸುವ ರಾಜ್ಯದ ಯೋಜನೆಗಳ ಕಡೆಗೆ ಗಮನಸೆಳೆದರು.