logo
ಕನ್ನಡ ಸುದ್ದಿ  /  ಕರ್ನಾಟಕ  /  Crime News: ಮೈಸೂರಿನಲ್ಲಿ ಅಧಿಕಾರ ದಾಹಕ್ಕೆ ಕೊಲೆ ಮಾಡಿದ್ದ ಆರೋಪಿಗಳ ಬಂಧನ; ಹುಬ್ಬಳ್ಳಿಯಲ್ಲಿ ಮನೆಗಳ್ಳ ಅರೆಸ್ಟ್

Crime News: ಮೈಸೂರಿನಲ್ಲಿ ಅಧಿಕಾರ ದಾಹಕ್ಕೆ ಕೊಲೆ ಮಾಡಿದ್ದ ಆರೋಪಿಗಳ ಬಂಧನ; ಹುಬ್ಬಳ್ಳಿಯಲ್ಲಿ ಮನೆಗಳ್ಳ ಅರೆಸ್ಟ್

Jayaraj HT Kannada

Oct 24, 2024 05:08 PM IST

google News

ಮೈಸೂರಿನಲ್ಲಿ ಅಧಿಕಾರ ದಾಹಕ್ಕೆ ಕೊಲೆ ಮಾಡಿದ್ದ ಆರೋಪಿಗಳ ಬಂಧನ

    • Karnataka Crime: ಅಧಿಕಾರ ದಾಹದಿಂದ ಅಮಾಯಕ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗಳನ್ನು ಮೈಸೂರಿನ ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಅತ್ತ ಹುಬ್ಬಳ್ಳಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದು, ಬಂಧಿಸಿರುವ ಪೊಲೀಸರು ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಅಧಿಕಾರ ದಾಹಕ್ಕೆ ಕೊಲೆ ಮಾಡಿದ್ದ ಆರೋಪಿಗಳ ಬಂಧನ
ಮೈಸೂರಿನಲ್ಲಿ ಅಧಿಕಾರ ದಾಹಕ್ಕೆ ಕೊಲೆ ಮಾಡಿದ್ದ ಆರೋಪಿಗಳ ಬಂಧನ

ಹುಬ್ಬಳ್ಳಿ : ಮುಂಜಾನೆ ಲಾಕ್‌ ಮಾಡಿರುವ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡಿ ಗೋವಾಕ್ಕೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಗ್ರಾಮೀಣ ಭಾಗದಲ್ಲಿ ಮನೆ ಕಳ್ಳತನ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್‌ ಮುರುಗೇಶ ಚೆನ್ನಣ್ಣವರ ನೇತೃತ್ವದ ತಂಡ ತಾರಿಹಾಳದ ನಿವಾಸಿ ಹುಸೇನ್ ಹಸನಪ್ಪ ಅಂಚಟಗೇರಿ ಎಂಬಾತನನ್ನು ಬಂಧಿಸಿದೆ. ಬಂಧೀತನಿಂದ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಚೆನ್ನಣ್ಣವರ ನೇತೃತ್ವದ ತಂಡದಲ್ಲಿ ಪಿಎಸ್‌ಐ ಸಚಿನ್ ಅಲಮೇಲಕರ, ಎಎಸ್‌ಐ ಎನ್ಎಂ ಹೊನ್ನಪ್ಪನವರ, ಎಎ ಕಾಕರ, ಚನ್ನಪ್ಪ ಬಳ್ಳೋಳ್ಳಿ, ಗಿರೀಶ್ ತಿಪ್ಪಣ್ಣವರ, ಎಎ ಪಾಟೀಲ್, ರವಿ ಮರಡೂರ ಮುಂತಾದವರಿದ್ದರು. ಇವರ ಕಾರ್ಯಾಚರಣೆಗೆ ಎಸ್‌ಪಿ ಗೋಪಾಲ ಬ್ಯಾಕೋಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಧಿಕಾರ ದಾಹ, ಅನುದಾನ ಲೂಟಿಗಾಗಿ ಅಮಾಯಕ ವ್ಯಕ್ತಿಯ ಹತ್ಯೆ

ಅಧಿಕಾರ ದಾಹ ಮತ್ತು ಅನುದಾನ ಲೂಟಿಗಾಗಿ ಅಮಾಯಕ ವ್ಯಕ್ತಿಯ ಹತ್ಯೆ ಮಾಡಿದ ಆರೋಪದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಘಟನೆ. ಡಾಬಾದಲ್ಲಿ ಕುಡಿದು, ಕುಡಿದ ಮತ್ತಿನಲ್ಲಿ ಮರ್ಡರ್ ಮಾಡಲಾಗಿದೆ. ಈದೀಗ ಸಿಕ್ಕಿಬಿದ್ದಿರುವ ಕಿರಾತಕರು ಕಂಬಿ ಎಣಿಸುತ್ತಿದ್ದಾರೆ. ತಪ್ಪಿಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯ ಪತಿ ಅನುಮಾನಾಸ್ಪದವಾಗಿ ಸಾವಿಗೀಡಾದ್ದ ಪ್ರಕರಣದ ಜಾಡು ಹಿಡಿದು ಸಾಗಿದ್ದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಕೊನೆಗೂ ಪ್ರಕರಣ ಬೇಧಿಸಿದ್ದಾರೆ. ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಗೋವರ್ಧನ್ (36) ಸೇರಿದಂತೆ ನಾಲ್ವರನ್ನು ಬಂಧೀಸಲಾಗಿದೆ. ನಂಜನಗೂಡಿನ ನೀಲಕಂಠನಗರದ ನಿವಾಸಿ ಜಹೀರ್ (25), ಹಳ್ಳದಕೇರಿ ನಿವಾಸಿ ಮಣಿಕಂಠ (24), ಕೆಎಚ್‌ಬಿ ಕಾಲೋನಿ ನಿವಾಸಿ ಮಹೇಂದ್ರ (25) ಬಂಧಿತ ಇತರ ಆರೋಪಿಗಳು.

ಅಪಘಾತದಂತೆ ಬಿಂಬಿಸಿದ ಆರೋಪಿಗಳು

ದೇವರಸನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸೌಭಾಗ್ಯರವರ ಪತಿ ಕೆಬ್ಬೇಪುರ ಗ್ರಾಮದ ನಂಜುಂಡಸ್ವಾಮಿ (47) ಅವರನ್ನು ಹತ್ಯೆ ಮಾಡಲಾಗಿತ್ತು. ಹೊಸೂರು ಸಮೀಪ ಅಕ್ಟೋಬರ್ 6ರಂದು ಗಾಯಗೊಂಡ ಸ್ಥಿತಿಯಲ್ಲಿ ನಂಜುಂಡಸ್ವಾಮಿ ಪತ್ತೆಯಾಗಿದ್ದರು. ಕೈಕಾಲು ಮುರಿದು, ತಲೆಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು‌. ಭತ್ತದ ಗದ್ದೆಗೆ ಎಸೆದು ಅಪಘಾತ ಎಂಬಂತೆ ಬಿಂಬಿಸಿದ್ದರು. ಘಟನೆ ಸಂಬಂಧ ತನ್ನ ಪತಿಯನ್ನು ರಾಜಕೀಯ ಪ್ರೇರಿತವಾಗಿ ಕೊಲೆ ಮಾಡಿದ್ದಾರೆಂದು ಪತ್ನಿ ಸೌಭಾಗ್ಯ ದೂರು ನೀಡಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಸೌಭಾಗ್ಯ ಅವರಿಗೆ ಅಧಿಕಾರ ನೀಡಿದರೆ ತನ್ನ ಅಸ್ತಿತ್ವ ಹೋಗುತ್ತದೆ ಎಂದುಕೊಂಡಿದ್ದ ಗ್ರಾಮ ಪಂಚಾಯಿತಿ ಸದಸ್ಯ ಗೋವರ್ಧನ್, ಕೊಲೆಗೆ ಪಿತೂರಿ ನಡೆಸಿದ್ದಾನೆ. ಅಲ್ಲದೆ ಗ್ರಾಮ ಪಂಚಾಯತಿಗೆ ಬಂದಿದ್ದ ಕೋಟ್ಯಾಂತರ ರೂಪಾಯಿ ಅನುದಾನದ ಕಮೀಷನ್ ಕೈ ತಪ್ಪುತ್ತದೆ ಎಂಬ ಆತಂಕದಲ್ಲಿ, ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದಾನೆ. ಆದರೆ, ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಗಳ ಪ್ಲಾನ್‌ ಲೀಕ್‌ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ