ಬೆಂಗಳೂರನ್ನು ತೆಗಳಿದ ಇನ್‌ಫ್ಲೂಯೆನ್ಸರ್‌ ಅಪೂರ್ವ; ಬೆಂಗಳೂರಿಗೆ ಆತ್ಮವಿಲ್ಲ, ಕನ್ನಡ ಕಾರಣದಿಂದ ಆಟೋ ಚಾಲಕರು ನನ್ನಲ್ಲಿ ಮಾತನಾಡಿಲ್ಲ!
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರನ್ನು ತೆಗಳಿದ ಇನ್‌ಫ್ಲೂಯೆನ್ಸರ್‌ ಅಪೂರ್ವ; ಬೆಂಗಳೂರಿಗೆ ಆತ್ಮವಿಲ್ಲ, ಕನ್ನಡ ಕಾರಣದಿಂದ ಆಟೋ ಚಾಲಕರು ನನ್ನಲ್ಲಿ ಮಾತನಾಡಿಲ್ಲ!

ಬೆಂಗಳೂರನ್ನು ತೆಗಳಿದ ಇನ್‌ಫ್ಲೂಯೆನ್ಸರ್‌ ಅಪೂರ್ವ; ಬೆಂಗಳೂರಿಗೆ ಆತ್ಮವಿಲ್ಲ, ಕನ್ನಡ ಕಾರಣದಿಂದ ಆಟೋ ಚಾಲಕರು ನನ್ನಲ್ಲಿ ಮಾತನಾಡಿಲ್ಲ!

ನನಗೆ ಕನ್ನಡ ಗೊತ್ತಿಲ್ಲ ಎನ್ನುವ ಕಾರಣಕಕೆ ಆಟೋ ಚಾಲಕರು ಬೆಂಗಳೂರಿನಲ್ಲಿ ನನ್ನಲ್ಲಿ ಮಾತನಾಡಿಲ್ಲ, ಬೆಂಗಳೂರು ಆತ್ಮ ಕಳೆದುಕೊಂಡಿದೆ ಎಂದು ಇನ್‌ಸ್ಟಾಗ್ರಾಮರ್‌ ಅಪೂರ್ವ ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯತೆ ಪಡೆಯಲು ಬೆಂಗಳೂರನ್ನು ದೂರುವುದು ಸಾಮಾನ್ಯವಾಗಿದೆ ಎಂದು ಕೆಲವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಉದ್ಯಾನನಗರಿಯನ್ನು ತೆಗಳಿದ  ಇನ್‌ಫ್ಲೂಯೆನ್ಸರ್‌ ಅಪೂರ್ವ
ಉದ್ಯಾನನಗರಿಯನ್ನು ತೆಗಳಿದ ಇನ್‌ಫ್ಲೂಯೆನ್ಸರ್‌ ಅಪೂರ್ವ (YouTube/AyushWadhwa)

ಬೆಂಗಳೂರಿನ ಕುರಿತು ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ. ಮುಂಬೈ ಮೂಲದ ಇನ್‌ಸ್ಟಾಗ್ರಾಮರ್‌ ಕರ್ನಾಟಕದ ರಾಜಧಾನಿಯನ್ನು "ಆತ್ಮವಿಲ್ಲದ ನಗರ" ಎಂದು ಹೇಳಿದ ಬಳಿಕ ಮತ್ತೆ ಈ ಚರ್ಚೆ ಕಾವೇರಿದೆ. ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಈಕೆಗೆ ಕನ್ನಡ ಗೊತ್ತಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕರು ಮಾತನಾಡುತ್ತಿರಲಿಲ್ಲ ಎಂದು ಯೂಟ್ಯೂಬ್‌ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ. ಇದರಿಂದ ಈಕೆಗೆ ಬೆಂಗಳೂರಿಗೆ ಆತ್ಮ ಕಾಣಿಸಲಿಲ್ಲವಂತೆ.

ಅಪೂರ್ವ ಹೇಳಿದ್ದೇನು?

ಉದ್ಯಮಿ ಆಯುಷ್ ವಾಧ್ವಾ ಹೋಸ್ಟ್ ಮಾಡಿದ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ಅಪೂರ್ವ ಬೆಂಗಳೂರಿಗೆ ಆತ್ಮವಿಲ್ಲ ಎಂದು ಹೇಳಿದ್ದಾರೆ. "ನಾನು ಮೊದಲ ಬಾರಿಗೆ ಬೆಂಗಳೂರಿಗೆ ಉದ್ಯೋಗಕ್ಕೆ ಹೋದಾಗ ಆ ನಗರವನ್ನು ದ್ವೇಷಿಸುತ್ತಿದ್ದೆ. ಬೆಂಗಳೂರಿನ ಜನರಲ್ಲಿ ನನಗೆ ಯಾವುದೇ ಸೃಜನಶೀಲತೆ ಕಂಡು ಬರಲಿಲ್ಲ. ಅವರು ಸದಾ ನೂಕು ನುಗ್ಗಲು ಸ್ಥಿತಿಯಲ್ಲಿರುವಂತೆ ಕಾಣಿಸಿದೆ. ಜನರು ಅತ್ಯಧಿಕ ಗಂಟೆ ಕೆಲಸ ಮಾಡುತ್ತಾರೆ, ನಂತರ ಏನೂ ಮಾಡುವುದಿಲ್ಲ. ಬೆಂಗಳೂರಿಗೆ ಆತ್ಮವೇ ಇಲ್ಲ" ಎಂದು ಅಪೂರ್ವ ಹೇಳಿದ್ದಾರೆ.

 

ನನಗೆ ಕನ್ನಡ ಗೊತ್ತಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕರು ಮಾತನಾಡುತ್ತ ಇರಲಿಲ್ಲ ಎಂದಿದ್ದಾರೆ. "ನನಗೆ ಕನ್ನಡ ಗೊತ್ತಿಲ್ಲ. ಇದೇ ಕಾರಣಕ್ಕೆ ಆಟೋ ಚಾಲಕರು ನನ್ನಲ್ಲಿ ಮಾತನಾಡುತ್ತ ಇರಲಿಲ್ಲ. ಸಹೋದರ, ನಾನು ನಿನಗೆ ಹಣ ಪಾವತಿಸುತ್ತೇನೆ, ದಯವಿಟ್ಟು ಮಾತನಾಡಿ" ಎಂದು ಪಾಡ್‌ಕಾಸ್ಟ್‌ನಲ್ಲಿ ಅಪೂರ್ವ ಹೇಳಿದ್ದಾರೆ.

ಇದೇ ಸಮಯದಲ್ಲಿ ಬೆಂಗಳೂರನ್ನು ಮುಂಬೈ ಜತೆ ಹೋಲಿಕೆ ಮಾಡಿದ್ದಾರೆ. ತನ್ನ ಕುಡಿದ ಕಥೆಯನ್ನೂ ಹಂಚಿಕೊಂಡಿದ್ದಾರೆ. "ಮುಂಬೈನಲ್ಲಿ ಜನದಟ್ಟಣೆ ಇದೆ, ನೂಕುನುಗ್ಗಲು ಇದೆ. ಆದರೆ, ಮುಂಬೈ ಜನರು ಕ್ರಿಯೆಟಿವ್‌ ಆಗಿರುತ್ತಾರೆ. ಇದು ಜಗತ್ತಿನ ಸುಂದರ ಟ್ಯಾಲೆಂಟ್‌. ನಾನೊಮ್ಮೆ ಕುಡಿದು ರಾತ್ರಿ 3 ಗಂಟೆಗೆ ಆಟೋ ಹತ್ತಿದ್ದೆ. ಆ ಚಾಲಕ ನನ್ನ ಎಬ್ಬಿಸಿ ಮೇಡಂ ನಿಮ್ಮ ಮನೆ ಬಂತು, ಇಳಿಯಿರಿ ಎಂದಿದ್ದ. ನನಗೆ ಅದು ಸುರಕ್ಷಿತ ಎನಿಸಿತು" ಎಂದು ಅಪೂರ್ವ ಹೇಳಿದ್ದಾರೆ.

ಸೋಷಿಯಲ್‌ ಮೀಡಿಯಾ ಸೆಳೆಯಲು ಬೆಂಗಳೂರು ತೆಗಳಿಕೆ

ಈ ಪಾಡ್‌ಕಾಸ್ಟ್‌ ಕ್ಲಿಪ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. "ಸೋಷಿಯಲ್‌ ಮೀಡಿಯಾದಲ್ಲಿ ಇನ್‌ಫ್ಲೂಯೆನ್ಸರ್‌ಗಳು ಪ್ರಚಲಿತದಲ್ಲಿ ಇರಲು ಬೆಂಗಳೂರನ್ನು ದೂರುತ್ತಿದ್ದಾರೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ನಿಮಗೆ ವೈರಲ್‌ ಆಗಬೇಕೇ ಬೆಂಗಳೂರನ್ನು ದೂರಿರಿ" ಎಂದು ಇನ್ನೊಬ್ಬರು ಕಾಮೆಂಟ್‌ಮಾಡಿದ್ದಾರೆ. "ನಾನು ವೈಯಕ್ತಿಕವಾಗಿ ಮುಂಬೈಯನ್ನು ಇಷ್ಟಪಡುವೆ. ಆಟೋ ಚಾಲಕರ ಕುರಿತು ನನಗೆ ತುಂಬಾ ಗೌರವ ಇದೆ. ಆದರೆ, ಬೆಂಗಳೂರಿನ ವ್ಯಕ್ತಿಯಾಗಿ ಇನ್‌ಫ್ಲೂಯೆನ್ಸರ್‌ಗಳು ಬೆಂಗಳೂರನ್ನು ದೂರುವುದನ್ನು ನೋಡಲು ಕಷ್ಟವಾಗುತ್ತಿದೆ. ಕೆಲವು ಆಟೋ ಚಾಲಕರ ಕಾರಣದಿಂದ ಬೆಂಗಳೂರನ್ನೂ ದೂರುವುದು ಸರಿಯಲ್ಲ. ಬೆಂಗಳೂರು ಭಾರತದ ಅತ್ಯಂತ ಸುರಕ್ಷಿತ ಮತ್ತು ಶಾಂತಿಯುತ ನಗರಗಳಲ್ಲಿ ಒಂದಾಗಿದೆ, ಈ ರೀತಿ ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಿ" ಎಂದು ಇನ್ನೊಬ್ಬರು ಬರೆದಿದ್ದಾರೆ.

ಈ ಪಾಡ್‌ಕಾಸ್ಟರ್‌ ನೀಡಿರುವ ಮಾಹಿತಿಯೇ ಸರಿಯಿಲ್ಲ ಎಂದು ಕೆಲವರು ಹೇಳಿದ್ದಾರೆ. ಈಕೆ ಆಟೋದಲ್ಲಿ ಹೋದಾಗ ಚಾಲಕನಿಗೆ ಹಿಂದಿ ಬಾರದೆ ಇರಬಹುದು, ಆತ ಹೆಚ್ಚು ಮಾತನಾಡದ ವ್ಯಕ್ತಿಯಾಗಿರದೆ ಇರಬಹುದು, ಪ್ರಯಾಣಿಕರಲ್ಲಿ ವಟವಟ ಮಾತನಾಡುವುದು ಸಭ್ಯತೆ ಅಲ್ಲ ಎಂದುಕೊಂಡಿರಬಹುದು ಎಂದು ಕೆಲವರು ಹೇಳಿದ್ದಾರೆ. ಮುಂಬೈನಲ್ಲಿ ಕುಡಿದು ಆಟೋದಲ್ಲಿ ಹೋಗಿದ್ದೆ, ಮನೆ ತಲುಪಿದಾಗ ಎಬ್ಬಿಸಿದ ಎನ್ನುವುದು ಸರಿಯಾದ ಉದಾಹರಣೆಯಲ್ಲ ಎಂದು ಇನ್ನು ಕೆಲವರು ಹೇಳಿದ್ದಾರೆ.

Whats_app_banner