Hubli Dharwad News: ಹುಬ್ಬಳ್ಳಿ ಧಾರವಾಡ ಮೇಯರ್ ಉಪಮೇಯರ್ ಚುನಾವಣೆ, ಬಿಜೆಪಿಗೆ ಮತ್ತೆ ಅಧಿಕಾರ
Jun 29, 2024 05:09 PM IST
ಹುಬ್ಬಳ್ಳಿ ಧಾರವಾಡ ಮೇಯರ್ ರಾಮಣ್ಣ ಹಾಗೂ ಉಪಮೇಯರ್ ದುರ್ಗಮ್ಮ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿನಂದಿಸಿದರು.
- Mayor election ಹುಬ್ಬಳ್ಳಿ ಧಾರವಾಡ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಚುನಾವಣೆ ನಡೆದು ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದರು.
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮುಖ್ಯಸ್ಥರ ಹುದ್ದೆಗೆ ಶನಿವಾರ ಚುನಾವಣೆ ನಡೆದು, 23ನೇ ಮೇಯರ್ ಆಗಿ ಬಿಜೆಪಿಯ ರಾಮಣ್ಣ ಬಡಿಗೇರ ಹಾಗೂ ಉಪ ಮೇಯರ್ ಆಗಿ ದುರ್ಗಮ್ಮ ಶಶಿಕಾಂತ ಬಿಜವಾಡ ಚುನಾಯಿತರಾದರು. ಬಹುಮತ ಇರುವ ಬಿಜೆಪಿ ಸುಸೂತ್ರವಾಗಿ ಅಧಿಕಾರವನ್ನು ಹಿಡಿದುಕೊಂಡಿತು. ಈ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಪಾಲಿಕೆ ಸಭಾಭವನದಲ್ಲಿ ಶಾನಿವಾರ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಸಮ್ಮುಖದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಕಾಂಗ್ರೆಸ್ ಹಾಗೂ ಮುಸ್ಲೀಂ ಲೀಗ್ ನ ಅಭ್ಯರ್ಥಿಗಳನ್ನು ಮಣಿಸಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 30ನೇ ವಾರ್ಡಿನ ಸದಸ್ಯ ಬಡಿಗೇರ 11ಮತಗಳ ಅಂತರದಿಂದ ಮಹಾಪೌರರಾಗಿ ಆಯ್ಕೆಯಾದರು. ರಾಮಣ್ಣ ಪರ 47 ಮತ ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಯಲಿಗಾರ 36, ಮುಸ್ಲೀಂ ಲೀಗ್ ನ ಹುಸೇನಬಿ ಮೂರು ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಉಪಮೇಯರ್ ಚುನಾವಣೆಯಲ್ಲಿ 69ನೇ ವಾರ್ಡಿನ ಸದಸ್ಯೆ ದುರ್ಗಮ್ಮ ಬಿಜವಾಡ ಸಹ 47 ಮತ ಪಡೆದು ಚುನಾಯಿತರಾದರೆ, ಕಾಂಗ್ರೆಸ್‌ನ ಮಂಗಳಮ್ಮ ಹಿರೇಮನಿಗೆ 36 ಮತಗಳು ಬಂದವು.ಎರಡೂ ಪ್ರಕ್ರಿಯೆಯಲ್ಲಿ ಮೂವರು ತಟಸ್ಥರಾದರೆ, ನಾಲ್ವರು ಗೈರಾಗಿದ್ದು ಕಂಡು ಬಂದಿತು.
ಕಳೆದ ಬಾರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿದ್ದರು. ಇದಾದ ನಂತರ ಪಕ್ಷಕ್ಕೆ ಮರಳಿದ್ದರು. ಇದರಿಂದ ಕೆಲ ಸದಸ್ಯರು ಜಗದೀಶ್ ಶೆಟ್ಟರ್ ಜತೆ ಗುರುತಿಸಿಕೊಂಡು ಪಕ್ಷಕ್ಕೆ ವಾಪಾಸಾಗಿದ್ದರು. ಇದಾದ ಬಳಿಕ ಪಾಲಿಕೆಯ ಮೇಯರ್ ಚುನಾವಣೆಗೆ ಮತದಾನ ಇದ್ದುದರಿಂದ ಕುತೂಹಲವಿತ್ತು. ಆದರೂ ಬಹುಮತವಿದ್ದ ಬಿಜೆಪಿ ಅಧಿಕಾರ ಸ್ಥಾಪಿಸುವುದು ಖಚಿತವಾಗಿತ್ತು. ಬಿಜೆಪಿ ಹಿರಿಯ ನಾಯಕರೂ ಮುತುವರ್ಜಿ ವಹಿಸಿದ್ದರು. ಪಕ್ಷದ ನಾಯಕರ ನಿರೀಕ್ಷೆಯಂತೆಯೇ ಬಿಜೆಪಿ ಅಧಿಕಾರ ಹಿಡಿಯುವ ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿಯೇ ನಡೆಯಿತು.
ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ 43ನೇ ವಾರ್ಡಿನ ಬೀರಪ್ಪ ಖಂಡೇಕರ ಕುರುಬ ಸಮುದಾಯಕ್ಕೆ ಪಟ್ಟ ನೀಡಲೇಬೇಕೆಂದು ಪಟ್ಟು ಹಿಡಿದಿದ್ದರು. ಜನತಾ ದಳದಿಂದ ಎರಡು ಬಾರಿ ಹಾಗೂ ಬಿಜೆಪಿಯಿಂದ ಎರಡು ಬಾರಿ ಆಯ್ಕೆಯಾಗಿರುವ ಬಡಿಗೇರ ಅವರೂ ಪ್ರಬಲ ಆಕಾಂಕ್ಷಿಯಾಗಿದ್ದರು. ಇಬ್ಬರಲ್ಲಿ ಹಿರಿತನ ಅಧಾರದ ಮೇಲೆ ಬಡಿಗೇರ ಅವರಿಗೆ ಅವಕಾಶ ದೊರೆಯಿತು. ಅದೇ ರೀತಿ ಪಕ್ಷೇತರರಾಗಿ ಗೆದ್ದರೂ 2022ರಲ್ಲಿ ಬಿಜೆಪಿಗೆ ಅಧಿಕೃತವಾಘಿ ಸೇರ್ಪಡೆಯಾಗಿದ್ದ ದುರ್ಗಮ್ಮ ಬಿಜವಾಡ ಅವರಿಗೆ ಪಕ್ಷಕ್ಕೆ ಸೇರಿಸಿಕೊಳ್ಳುವಾಗಲೇ ಉಪಮೇಯರ್ ಹುದ್ದೆ ಭರವಸೆ ಕೊಡಲಾಗಿತ್ತು. ಅವರಿಗೂ ಉಪಮೇಯರ್ ಸ್ಥಾನಕ್ಕೆ ಹೆಸರು ಅಂತಿಮಗೊಳಿಸಲಾಯಿತು.
ಹುಬ್ಬಳ್ಳಿಗೆ ಶುಕ್ರವಾರ ಸಂಜೆಯೇ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ರಾತ್ರಿ ಸಭೆ ನಡೆದರೂ ಯಾವುದೇ ಅಂತಿಮ ನಿರ್ಧಾರ ಆಗಿರಲಿಲ್ಲ. ಶನಿವಾರ ಬೆಳಿಗ್ಗೆ ಜೋಶಿಯವರು ಶಾಸಕರುಗಳಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ, ಲಿಂಗರಾಜ ಪಾಟೀಲ, ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅವರೊಂದಿಗೆ ಚರ್ಚೆ ನಡೆಸಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಿದರು.
ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ರಾಮಣ್ಣ ಬಡಿಗೇರ ಹಾಗೂ ಉಪ ಮೇಯರ್ ಸ್ಥಾನಕ್ಕೆ ದುರ್ಗಮ್ಮ ಬಿಜವಾಡ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ ನಿಂದ ಇಮ್ರಾನ್ ಎಲಿಗಾರ ಮೇಯರ್ ಹುದ್ದೆಗೆ ಹಾಗೂ ಮಂಗಳಾ ಹಿರೇಮನಿ ಉಪ ಮೇಯರ್ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದರು. ಕೇವಲ ಮೂರು ಸದಸ್ಯರನ್ನು ಹೊಂದಿರುವ ಎಐಎಂಐಎಂ ಪಕ್ಷದ ಹುಸೇನಬಿ ನಾಲತವಾಡ ಕೂಡ ಮೇಯರ್ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದರು. ಅಂತಿಮವಾಗಿ ಮತದಾನ ನಡೆಯಿತು.ಮತದಾನ ಪ್ರಕ್ರಿಯೆಯಲ್ಲಿ ಜನಪ್ರತಿನಿಧಿಗಳಾದ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ಮಹೇಶ ಟೆಂಗಿನಕಾಯಿ, ಎಸ್.ವಿ.ಸಂಕನೂರ ಪಾಲ್ಗೊಂಡರು.
ಬಿಜೆಪಿಯಲ್ಲಿ ಮಹಾಪೌರರ ಸ್ಥಾನಕ್ಕೆ ತೀವ್ರ ಪೈಪೋಟಿಯಿದ್ದರೂ ಹಿರಿತನಕ್ಕೆ ಮಣೆ ಹಾಕಿದ್ದು,ವಿಶ್ವಕರ್ಮ ಸಮುದಾಯದ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಆಪ್ತರಾಗಿರುವ ಬಡಿಗೇರ ಹಾಗೂ ಪಕ್ಷ ನಿಷ್ಠೆ ತೋರಿದ ಬಿಜವಾಡ ಚುನಾಯಿತರಾದರು.