logo
ಕನ್ನಡ ಸುದ್ದಿ  /  ಕರ್ನಾಟಕ  /  ಇಂದಿನಿಂದ 3 ದಿನ ಮಳೆ, ಆ ಬಳಿಕ ರಾಜ್ಯದಲ್ಲಿ ಮೇಲುಗೈ ಸಾಧಿಸಲಿದೆ ಒಣ ಹವಾಮಾನ; ಟೆನ್ಶನ್​ನಲ್ಲಿದ್ದ ರೈತರಿಗೆ ಖುಷಿ ಸುದ್ದಿ

ಇಂದಿನಿಂದ 3 ದಿನ ಮಳೆ, ಆ ಬಳಿಕ ರಾಜ್ಯದಲ್ಲಿ ಮೇಲುಗೈ ಸಾಧಿಸಲಿದೆ ಒಣ ಹವಾಮಾನ; ಟೆನ್ಶನ್​ನಲ್ಲಿದ್ದ ರೈತರಿಗೆ ಖುಷಿ ಸುದ್ದಿ

Prasanna Kumar P N HT Kannada

Nov 16, 2024 07:41 AM IST

google News

ಇಂದಿನಿಂದ 3 ದಿನ ಮಳೆ, ಆ ಬಳಿಕ ರಾಜ್ಯದಲ್ಲಿ ಮೇಲುಗೈ ಸಾಧಿಸಲಿದೆ ಒಣ ಹವಾಮಾನ; ಟೆನ್ಶನ್​ನಲ್ಲಿದ್ದ ರೈತರಿಗೆ ಖುಷಿ ಸುದ್ದಿ

    • Heavy Rainfall in Karnataka: ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ 13 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನವೆಂಬರ್ 18ರ ನಂತರ ಒಣ ಹವಾಮಾನ ಇರಲಿದೆ ಎಂದು ತಿಳಿಸಿದೆ.
ಇಂದಿನಿಂದ 3 ದಿನ ಮಳೆ, ಆ ಬಳಿಕ ರಾಜ್ಯದಲ್ಲಿ ಮೇಲುಗೈ ಸಾಧಿಸಲಿದೆ ಒಣ ಹವಾಮಾನ; ಟೆನ್ಶನ್​ನಲ್ಲಿದ್ದ ರೈತರಿಗೆ ಖುಷಿ ಸುದ್ದಿ
ಇಂದಿನಿಂದ 3 ದಿನ ಮಳೆ, ಆ ಬಳಿಕ ರಾಜ್ಯದಲ್ಲಿ ಮೇಲುಗೈ ಸಾಧಿಸಲಿದೆ ಒಣ ಹವಾಮಾನ; ಟೆನ್ಶನ್​ನಲ್ಲಿದ್ದ ರೈತರಿಗೆ ಖುಷಿ ಸುದ್ದಿ (PTI)

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡಿದೆ. ಹೀಗಾಗಿ, ಕರ್ನಾಟಕ ರಾಜ್ಯದಲ್ಲಿ ತುಂತುರು ಮಳೆಯ ಆರ್ಭಟ ಶುರುವಾಗಿದೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳು, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಚಳಿಯೂ ಇರಲಿದೆ. ಇಂದು (ನವೆಂಬರ್ 16) ಸೇರಿ 3 ದಿನ ಚಳಿಯ ಜೊತೆಗೆ ಮಳೆಯ ಆರ್ಭಟವೂ ಹೆಚ್ಚಾಗಿದೆ. ಆದರೆ ಮುಂಗಾರು ಮಳೆಯಿಂದ ಖುಷಿಯಲ್ಲಿದ್ದ ರೈತರಿಗೆ ಹಿಂಗಾರಿನಲ್ಲಿ ಹೊಸ ಟೆನ್ಶನ್ ಶುರುವಾಗಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ?

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೆ ಉತ್ತರ ಕನ್ನಡ ಸೇರಿದಂತೆ ಅನೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಒಂದು ಅಥವಾ 2 ಸ್ಥಳಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರೆಯಲಿದೆ. ದಕ್ಷಿಣ ಒಳನಾಡಿನಲ್ಲಿ ಚಿತ್ರದುರ್ಗ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆ ಇದೆ.

ರೈತರ ಬೆಳೆ ಕಟಾವಿಗೆ ಅಡ್ಡಿ

ಮುಂಗಾರು ಮಳೆ ಅಬ್ಬರಿಸಿದ ಹಿನ್ನೆಲೆ ರೈತಾಪಿ ವರ್ಗ ಭಾರಿ ಖುಷಿಯಲ್ಲಿತ್ತು. ಆದರೆ ಹಿಂಗಾರು ಮಳೆಯಿಂದಾಗಿ ಅದೇ ರೈತರು ನಿರಾಸೆಯಾಗಿದ್ದಾರೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ರಾಗಿ, ಜೋಳ ಸೇರಿದಂತೆ ಬಹುತೇಕ ಬೆಳೆಗಳು ಕಟಾವಿಗೆ ಬಂದಿವೆ. ಆದರೆ, ಮಳೆಯ ಕಾರಣ ಬೆಳೆಯು ಮಣ್ಣು ಪಾಲಾಗುತ್ತಿದೆ. ಅಲ್ಲದೆ, ರೈತರ ಕೆಲಸ ಕಾರ್ಯಗಳಿಗೂ ಅಡ್ಡಿಪಡಿಸುತ್ತಿದೆ. ಬಿಟ್ಟೂ ಬಿಡದೆ ಸುರಿಯುತ್ತಿರುವ ಕಾರಣ ರೈತರಲ್ಲಿ ಆತಂಕ ಮನೆ ಮಾಡಿದೆ. ಮತ್ತೊಂದೆಡೆ ನಗರ ಪ್ರದೇಶಗಳಲ್ಲಿ ಕೆಲಸಗಳಿಗೆ ಹೋಗುವವರಿಗೂ ತೊಂದರೆಯಾಗುತ್ತಿದೆ. ಆದರೆ ಮೂರು ದಿನಗಳ ನಂತರ ಮಳೆಗೆ ಬ್ರೇಕ್ ಬೀಳಲಿದೆ.

ಬೆಳಿಗ್ಗೆ ಮತ್ತು ಸಂಜೆ ಚಳಿಯ ಆರ್ಭಟ

ರಾಜ್ಯದಲ್ಲಿ ಮಳೆಯ ಆರ್ಭಟದ ಜೊತೆಗೆ ಚಳಿಯೂ ಹೆಚ್ಚಾಗುತ್ತಿದೆ. ಬಹುತೇಕ ಚಳಿಗಾಲದ ಆರಂಭದಲ್ಲಿ ಮಳೆ ಸುರಿಯುವುದಿಲ್ಲ. ಆದರೂ ಮಳೆ ಬರುತ್ತಿರುವುದಕ್ಕೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನವೆಂಬರ್ 15ರಂದು ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ 37.2 ಡಿಗ್ರಿ ಸೆಲ್ಸಿಯಸ್ ಕಾರವಾರದಲ್ಲಿ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 18.4 ಡಿಗ್ರಿ ಸೆಲ್ಸಿಯಸ್ ಬೀದರ್​​ನಲ್ಲಿ ದಾಖಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಚಳಿ ಪ್ರಮಾಣ ಹೆಚ್ಚಾಗಿದೆ.

ನಾಳೆ ಮತ್ತು ನಾಡಿದ್ದು (ನವೆಂಬರ್ 17, 18)

ನವೆಂಬರ್ 17 ಮತ್ತು 18 ರಂದು ಸಹ ಮಳೆ ಇರಲಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಆದರೆ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರೆಯಲಿದೆ. ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನವೆಂಬರ್ 18ರ ನಂತರ ಮಳೆ ಇರುವುದಿಲ್ಲ. ರಾಜ್ಯದಲ್ಲಿ ಒಣ ಹವಾಮಾನ ಮೇಲುಗೈ ಸಾಧಿಸಲಿದೆ. ಮತ್ತೊಂದೆಡೆ ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ.

ನವೆಂಬರ್​ 15ರಂದು ಎಲ್ಲಿ ಅತ್ಯಧಿಕ ಮಳೆ

ನವೆಂಬರ್​ 15ರ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಪುತ್ತೂರು, ಕಳಸದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ತಲಾ 5 ಸೆಂಟಿ ಮೀಟರ್​ಗಳಲ್ಲಿ ಮಳೆ ಸುರಿದಿದೆ. ಗೋಕರ್ಣ, ಸುಳ್ಯ, ಉಪ್ಪಿನಂಗಡಿ, ಸಿದ್ದಾಪುರ, ಮಣಿ, ಕೆಂಭಾವಿ, ಲೋಂಡಾ, ಬೆಳ್ಳೂರು, ಶೃಂಗೇರಿ, ತೊಂಡೇಬಾವಿ, ಕಮ್ಮರಡಿ, ಗೌರಿಬಿದನೂರು, ತುಮಕೂರು, ಹಗರಿಬೊಮ್ಮನಹಳ್ಳಿಯಲ್ಲಿ ತಲಾ 3 ಸೆಂಟಿ ಮೀಟರ್​​ನಲ್ಲಿ ಮಳೆ ಸುರಿದಿದೆ. ಉಡುಪಿ, ಬೆಳ್ತಂಗಡಿ, ಶಿರಾಲಿ, ಬೈಲಹೊಂಗಲ, ಸಿಂದನೂರು, ಬಾಳೆಹೊನ್ನೂರು, ಆಗುಂಬೆ, ಕೊಪ್ಪ, ಜಯಪುರ, ನಾಗಮಂಗಲ, ಕೋಲಾರ, ವೈಎನ್ ಹೊಸಕೋಟೆ, ಮೊಳಕಾಲ್ಮೂರು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ