ಚುನಾವಣಾ ಬಾಂಡ್ ಎಂದರೇನು, ಪ್ರಾರಂಭವಾಗಿದ್ದು ಯಾವಾಗ-ಏಕೆ; ಸುಪ್ರೀಂ ಕೋರ್ಟ್ ಈ ಬಾಂಡನ್ನು ನಿಷೇಧಿಸಿದ್ದೇಕೆ?
Sep 30, 2024 11:12 AM IST
ಚುನಾವಣಾ ಬಾಂಡ್
- Electoral Bond: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಸುಲಿಗೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ ನಂತರ ದೇಶದಲ್ಲಿ ಚುನಾವಣಾ ಬಾಂಡ್ ಸದ್ದು ಜೋರಾಗಿದೆ. ಅಸಲಿಗೆ, ಈ ಚುನಾವಣಾ ಬಾಂಡ್‌ಗಳು ಎಂದರೇನು? ಆರಂಭವಾಗಿದ್ದು ಯಾವಾಗ? ಏಕೆ? ಸುಪ್ರೀಂ ಕೋರ್ಟ್ ಇವುಗಳನ್ನೇಕೆ ರದ್ದುಗೊಳಿಸಿತು? ಇಲ್ಲಿದೆ ವಿವರ.
Election Bond: ಚುನಾವಣಾ ಬಾಂಡ್ ಹೆಸರಿನಲ್ಲಿ ನಡೆದಿದೆ ಎನ್ನಲಾದ 8 ಸಾವಿರ ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಮತ್ತು ಇಡಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಕೇಂದ್ರ ಸಚಿವೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ ಆದೇಶದಂತೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇಶಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಹಾಗಾದರೆ ಈ ಚುನಾವಣಾ ಬಾಂಡ್ ಎಂದರೇನು? ಇದು ಪ್ರಾರಂಭವಾಗಿದ್ದು ಯಾವಾಗ? ಇದನ್ನು ನಿಷೇಧಿಸಿದ್ದೇಕೆ?
ಚುನಾವಣಾ ಬಾಂಡ್ ಎಂದರೇನು?
ಭಾರತ ಸರ್ಕಾರ 2017ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯನ್ನು 2018ರ ಜನವರಿ 29ರಂದು ಕಾನೂನುಬದ್ಧವಾಗಿ ಜಾರಿಗೊಳಿಸಿತ್ತು. ಸರಳ ಭಾಷೆಯಲ್ಲಿ ಹೇಳುವುದಾದರೆ, ಚುನಾವಣಾ ಬಾಂಡ್ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಆರ್ಥಿಕ ಸಾಧನ. ಆ ಮೂಲಕ ರಾಜಕೀಯ ಪಕ್ಷಗಳಿಗೆ ಕಪ್ಪು ಹಣ ಹರಿದುಬರುವುದನ್ನು ತಡೆಯುವುದಾಗಿತ್ತು. ಇಂಥ ದೇಣಿಗೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸುವ ಉದ್ದೇಶಕ್ಕಾಗಿ ಚುನಾವಣಾ ಬಾಂಡ್ಗಳನ್ನು ಜಾರಿ ಮಾಡಲಾಗಿತ್ತು. ಇದು ಪ್ರಾಮಿಸರಿ ನೋಟ್ನಂತಿದ್ದು, ಭಾರತದ ಯಾವುದೇ ನಾಗರಿಕ ಅಥವಾ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಶಾಖೆಗಳಿಂದ ಖರೀದಿಸುವ ಅವಕಾಶ ಇತ್ತು.
ಚುನಾವಣಾ ಬಾಂಡ್‌ಗಳು ಹೇಗೆ ಕಾರ್ಯನಿರ್ವಹಿಸುವುದೇಕೆ?
ಕೆವೈಸಿ (KYC) ವಿವರ ಲಭ್ಯವಿರುವ ಬ್ಯಾಂಕ್ ಖಾತೆ ಹೊಂದಿರುವ ಯಾವುದೇ ದಾನಿಯು ಚುನಾವಣಾ ಬಾಂಡ್ ಖರೀದಿಸಬಹುದಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದಿಷ್ಟ ಶಾಖೆಗಳಿಂದ 1,000 ರೂಪಾಯಿ, 10,000 ರೂಪಾಯಿ, 1 ಲಕ್ಷ ರೂಪಾಯಿ, 10 ಲಕ್ಷ ರೂಪಾಯಿ, 1 ಕೋಟಿ ರೂಪಾಯಿ ಮುಖಬೆಲೆಯ ಚುನಾವಣಾ ಬಾಂಡ್ ಖರೀದಿಸಬಹುದಿತ್ತು. ಇಂಥ ದೇಣಿಗೆ ನೀಡುವವರ ಹೆಸರು ಉಲ್ಲೇಖಿಸುವ ಅಗತ್ಯ ಇರಲಿಲ್ಲ. ಚುನಾವಣಾ ಬಾಂಡ್‌ಗಳ ಮಾನ್ಯದ ಅವಧಿ 15 ದಿನಗಳು ಮಾತ್ರ. ಅವುಗಳನ್ನು ಪ್ರಜಾಪ್ರತಿನಿಧಿ ಕಾಯ್ದೆಯಡಿ ನೋಂದಾಯಿಸಲಾದ ರಾಜಕೀಯ ಪಕ್ಷಗಳಿಗೆ ದೇಣಿಗೆಗಾಗಿ ಮಾತ್ರ ಬಳಸಬೇಕಿತ್ತು. ಇದನ್ನು ಸ್ವೀಕರಿಸಿದವರು ನಗದು ರೂಪಕ್ಕೆ ಪರಿವರ್ತಿಸಬಹುದು.
ಚುನಾವಣಾ ಬಾಂಡ್ ಪಡೆಯುವುದು ಯಾರು?
ದೇಶದ ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳು ಈ ಬಾಂಡ್ ಅನ್ನು ಪಡೆಯಬಹುದಿತ್ತು. ಆದರೆ, ಇದಕ್ಕೆ ಷರತ್ತು ಎಂದರೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಆ ಪಕ್ಷವು ಕನಿಷ್ಟ ಶೇಕಡಾ 1ರಷ್ಟು ಮತಗಳನ್ನು ಪಡೆದಿರಬೇಕಿತ್ತು. ಅಂತಹ ನೋಂದಾಯಿತ ಪಕ್ಷವು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಲು ಅರ್ಹವಾಗಿತ್ತು. ಸರ್ಕಾರದ ಪ್ರಕಾರ, 'ಚುನಾವಣಾ ಬಾಂಡ್ ಮೂಲಕ ಕಪ್ಪುಹಣಕ್ಕೆ ಕಡಿವಾಣ ಹಾಕಲು ಈ ಯೋಜನೆ ತರಲಾಗಿತ್ತು. ಇದರಿಂದ ಚುನಾವಣಾ ಫಂಡಿಂಗ್ ಸುಧಾರಣೆಗೂ ನೆರವಾಗುತ್ತಿತ್ತು. ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ 10 ದಿನಗಳ ಅವಧಿಗೆ ಖರೀದಿಸಲು ಲಭ್ಯವಿರುತ್ತಿತ್ತು.
ಚುನಾವಣಾ ಬಾಂಡ್‌ಗಳ ವಿವಾದ ಏಕೆ?
ಚುನಾವಣಾ ಬಾಂಡ್‌ಗಳ ವಿರುದ್ಧ ಹಲವು ಅಪಸ್ವರಗಳು ಎದ್ದಿದ್ದವು. ಈ ಬಾಂಡ್ ಖರೀದಿಸಿದವರ ಹೆಸರನ್ನು ಬಹಿರಂಗವಾಗಿ ಪ್ರಕಟಿಸಲು ವಿಧಿಸಿದ ನಿರ್ಬಂಧಕ್ಕೆ ಹಲವು ಟೀಕೆಗಳು ಎದುರಾಗಿದ್ದವು. ಕಪ್ಪು ಹಣ ನಿಗ್ರಹಿಸಲು ಜಾರಿಗೆ ತರಲಾದ ಈ ಬಾಂಡ್ಗಳಿಂದ ಕಪ್ಪು ಹಣವನ್ನು ಬೇರೆ ರೀತಿಯಲ್ಲಿ ಪಡೆದ ಹಾಗಾಗುತ್ತದೆ ಎನ್ನಲಾಗಿತ್ತು. ರಾಜ್ಯ ಅಥವಾ ಕೇಂದ್ರ ಸರ್ಕಾರದಲ್ಲಿ ಯಾವ ಪಕ್ಷವು ಅಧಿಕಾರದಲ್ಲಿರುತ್ತದೋ ಆ ಪಕ್ಷಕ್ಕೆ ಹೆಚ್ಚಿನ ದೇಣಿಗೆ ಸಿಗುತ್ತದೆ ಎನ್ನುವ ಆರೋಪವೂ ಇತ್ತು. ಎಲ್ಲಾ ಪಕ್ಷಗಳಿಗೆ ಸಮಾನ ದೇಣಿಗೆ ಸಿಗಲ್ಲ ಎನ್ನಲಾಗಿತ್ತು. ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪವೂ ಇತ್ತು.
ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ರದ್ದು ಮಾಡಿದ್ದೇಕೆ?
ಚುನಾವಣಾ ಬಾಂಡ್‌ಗಳ ವಿರುದ್ಧ ಕೇಳಿ ಬಂದ ಟೀಕೆ, ಆರೋಪಗಳು ಸುಪ್ರೀಂ ಕೋರ್ಟ್ನಲ್ಲೂ ಪ್ರತಿಧ್ವನಿಸಿತ್ತು. ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸೇರಿದಂತೆ ನಾಲ್ವರು ಚುನಾವಣಾ ಬಾಂಡ್ ರದ್ದುಪಡಿಸಲು ಅರ್ಜಿ ಹಾಕಿದ್ದರು. ವರ್ಷಗಳ ಕಾಲ ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, 2024ರ ಫೆಬ್ರವರಿ 15ರಂದು ನಿಷೇಧಿಸಿತು. ಅಲ್ಲದೆ, ಇಲ್ಲಿಯವರೆಗೂ ಯಾವ ಪಕ್ಷಕ್ಕೆ ಎಷ್ಟು ಹಣ ಸಂದಾಯವಾಗಿದೆ ಎಂಬುದರ ವಿವರ ನೀಡುವಂತೆ ಮಾಹಿತಿ ಕೇಳಿತ್ತು.
ದೇಣಿಗೆ ನೀಡುವವರ ಮಾಹಿತಿ ಗೌಪ್ಯವಾಗಿ ಇರಿಸಿದರೆ ಮಾಹಿತಿ ಕಾಯ್ದೆ ಉಲ್ಲಂಘನೆ ಆಗುತ್ತದೆ. ಸಂವಿಧಾನದ 19 (1) (ಎ) ಅನುಚ್ಛೇದದಲ್ಲಿ ಹೇಳಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಈ ನಿರ್ಧಾರ ಕೈಗೊಂಡಿತು. ಸುಪ್ರೀಂಗೆ ಎಸ್ಬಿಐ ಸಲ್ಲಿಸಿದ ದತ್ತಾಂಶದ ಮಾಹಿತಿಯಂತೆ, 2018ರಿಂದ 2022ರವರೆಗೆ ದೇಶಾದ್ಯಂತ 9,208 ಚುನಾವಣಾ ಬಾಂಡ್ಗಳನ್ನು ಖರೀದಿಸಲಾಗಿತ್ತು. ಈ ಪೈಕಿ ಶೇ 58 ರಷ್ಟು ಹಣವು ಬಿಜೆಪಿ ಹರಿದು ಬಂದಿದೆ. ಇದು ಟೀಕಾಕಾರರ ಆರೋಪಕ್ಕೆ ಸಾಕ್ಷಿ ಎನ್ನುವಂತಿತ್ತು.