Indian Railways: 26 ವರ್ಷಗಳ ಬಳಿಕ ಮಂಗಳೂರು ಮುಂಬೈ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ಹೊಸ ರೂಪ; ಎಲ್‌ಹೆಚ್‌ಬಿ ಕೋಚ್ ಅಳವಡಿಕೆಗೆ ಸಿದ್ದತೆ
Oct 17, 2024 11:15 AM IST
ಮಂಗಳೂರು ಹಾಗೂ ಮುಂಬೈ ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಹಳೆ ಕೋಚ್‌ಗಳ ಬದಲಾಗಿ ಎಲ್‌ಎಚ್‌ಬಿ ಕೋಚ್ ಬರಲಿವೆ.
- ಮಂಗಳೂರು ಸೆಂಟ್ರಲ್-ಮುಂಬೈ ಎಕ್ಸ್‌ಪ್ರೆಸ್ ರೈಲಿನ ಕೋಚ್‌ಗಳಲ್ಲಿ ಬದಲಾವಣೆ ಆಗಲಿದೆ. ಇನ್ನು ಮೂರು ತಿಂಗಳಲ್ಲಿ ಎಲ್‌ಎಚ್‌ಬಿ ಕೋಚ್‌ಗಳಿಗೆ ಉನ್ನತೀಕರಣವಾಗಲಿದೆ.
ಮಂಗಳೂರು: ಕರ್ನಾಟಕದ ಕರಾವಳಿಯ ಮಂಗಳೂರು ಸೇರಿದಂತೆ ಪ್ರಮುಖ ನಗರಗಳಿಂದ ಮುಂಬೈ ಮಹಾನಗರ ಸಂಪರ್ಕಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಸದ್ಯವೇ ಹೊಸ ರೂಪ ಪಡೆಯಲಿದೆ. ಸತತ 26 ವರ್ಷಗಳಿಂದ ಕರಾವಳಿ ಹಾಗೂ ಮುಂಬೈ ನಗರದ ಸೇತುವೆಯಂತೆ ಲಕ್ಷಾಂತರ ಜನರ ಸುಖಕರ ಪ್ರಯಾಣದ ಭಾಗವಾಗಿರುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಅತ್ಯಾಧುನಿಕ ಎಲ್‌ಹೆಚ್‌ಬಿ(ಲಿಂಕೆ-ಹಾಫ್‌ಮನ್-ಬುಶ್) ಕೋಚ್ ಪಡೆಯಲಿದೆ. ಈಗಾಗಲೇ ರೈಲ್ವೆ ಮಂಡಳಿಯಿಂದಲೂ ಕೋಚ್ ಬದಲಾವಣೆಗೆ ಅನುಮತಿ ನೀಡಲಾಗಿದ್ದು, ಇದರಿಂದ ಅತ್ಯುತ್ತಮ ಸೇವೆಯನ್ನು ಮಂಗಳೂರು ಹಾಗೂ ಮುಂಬೈ ನಗರಗಳ ನಡುವೆ ಸಂಚರಿಸುವ ಪ್ರಯಾಣಿಕರು ಪಡೆಯಲಿದ್ದಾರೆ.ಈ ಸಂಬಂಧ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಕೂಡ ಅಧಿಕೃತ ಪ್ರಕಟಣೆ ಹೊರಡಿಸಿದೆ.
ರೈಲು ಸಂಖ್ಯೆ 12620 ಮಂಗಳೂರು ಸೆಂಟ್ರಲ್-ಮುಂಬೈ ಎಕ್ಸ್‌ಪ್ರೆಸ್ 2025 ರ ಫೆಬ್ರವರಿ 17 ರಿಂದ ಎಲ್‌ಎಚ್‌ಬಿ ಕೋಚ್‌ಗಳನ್ನು ಪಡೆದರೆ, ರೈಲು ಸಂಖ್ಯೆ 12619 2025 ರ ಫೆಬ್ರವರಿ 19ರಿಂದ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಮುಂಬೈ ಮಂಗಳೂರು ನಡುವೆ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ತಿಳಿಸಿದೆ.
ಹಿಂದೆಲ್ಲಾ ಮಂಗಳೂರು ಜನರಿಗೆ ರೈಲು ಸಂಪರ್ಕ ಇದ್ದುದು ಚಿಕ್ಕಮಗಳೂರಿನ ಕಡೂರು ಮಾರ್ಗ. ಮುಂಬೈನಲ್ಲಿ ನೆಲೆಸಿರುವ ಸಾವಿರಾರು ಕರಾವಳಿ ಜನರು ಕಡೂರಿನ ಮೂಲಕ 30 ಗಂಟೆಗಳ ಬಸ್ ಪ್ರಯಾಣ ಅಥವಾ 40 ಗಂಟೆಗಳ ರೈಲು ಪ್ರಯಾಣವನ್ನು ಸಹಿಸಿಕೊಳ್ಳಬೇಕಾಗಿತ್ತು.ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್ ಅವರು 1998 ರ ಮೇ 1 ರಂದು ಮುಂಬೈನಲ್ಲಿ ಕೊಂಕಣ್ ರೈಲ್ವೆಗೆ ಲೋಕಾರ್ಪಣೆ ಮಾಡಿದ್ದರು.ಆಗಲೇ ಮಂಗಳೂರು- ಮುಂಬೈ ನಡುವಿನ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದರು. 741 ಕಿಮೀ ಪೂರ್ಣಗೊಂಡ ಕೊಂಕಣ್ ರೈಲ್ವೆ ಸಂಪರ್ಕಜಾಲದಲ್ಲಿ ಓಡಿದ ಮೊದಲ ಪ್ರಯಾಣಿಕ ಸೇವಾ ರೈಲು ಇದಾಗಿದೆ. ಸುಮಾರು 17 ಗಂಟೆಗಳಲ್ಲಿ 882.5 ಕಿ.ಮೀ ಕ್ರಮಿಸಿದ ಮತ್ಸ್ಯಗಂಧವು ಕರ್ನಾಟಕ ಕರಾವಳಿಯುದ್ದಕ್ಕೂ ಪ್ರಯಾಣಿಕರ ಸಾರಿಗೆಯಲ್ಲಿ ಬದಲಾವಣೆ ತಂದಿತು. ಜನರ ಬಳಕೆಯೂ ಹೆಚ್ಚಿತು.
ಇದಾದ ನಂತರ ಸಣ್ಣ ಪುಟ್ಟ ಬದಲಾವಣೆಯಾದರೂ ಕೋಚ್‌ಗಳಲ್ಲಿ ಬದಲಾವಣೆ ಬೇಕಿತ್ತು. ಈ ಕಾರಣದಿಂದ ಮಂಗಳೂರು ಸೆಂಟ್ರಲ್-ಮುಂಬೈ ಎಲ್‌ಟಿಟಿ-ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಕೋಚ್ ಬದಲಿಸಲು ನಿರ್ಧರಿಸಲಾಗಿದ್ದು ಮುಂದಿನ ಫೆಬ್ರವರಿಯಿಂದ ಎಲ್‌ಹೆಚ್‌ಬಿ ಕೋಚ್‌ಗಳನ್ನು ಪಡೆಯಲಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಆಗಸ್ಟ್ 19 ರಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಮತ್ಸ್ಯಗಂಧ ಎಕ್ಸ್‌ಪ್ರೆಸ್ ಕರಾವಳಿ ಕರ್ನಾಟಕದ ಜನರಿಗೆ ತುಂಬಾ ಹತ್ತಿರವಾಗಿದೆ. ಇದು ಕೊಂಕಣ್ ರೈಲ್ವೆ ಸಂಪರ್ಕ ಜಾಲ ಕಾರ್ಯಾರಂಭದ ಸಮಯದಲ್ಲಿ ಪ್ರಾರಂಭವಾದ ಮೊದಲ ಪ್ಯಾಸೆಂಜರ್ ರೈಲು. ಇದು ಪಶ್ಚಿಮ ಕರಾವಳಿಯ ಜನರಿಗೆ ಹೆಮ್ಮೆಯ ವಿಷಯವಾಗಿದೆ. ಕಳೆದ ವರ್ಷ ಪ್ರಯಾಣಿಕರು ಅದರ ರಜತ ಮಹೋತ್ಸವವನ್ನು ಆಚರಿಸಿದ್ದರು. ರೈಲು ಉನ್ನತೀಕರಣಕ್ಕೆ ಇದು ಸಕಾಲ ಎಂದು ವಿವರಿಸಿದ್ದರು. ಪೂಜಾರಿಯವರ ಪತ್ರದ ಬೆನ್ನಲ್ಲೇ, ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನ 3-ಎಸಿ ಕೋಚ್‌ನ ಸೀಲಿಂಗ್‌ನ ಮೇಲ್ಛಾವಣಿಯು ಬಿದ್ದು, ಈ ವರ್ಷದ ಆಗಸ್ಟ್‌ನಲ್ಲಿ ಒಬ್ಬ ಪ್ರಯಾಣಿಕ ಅಪಾಯದಿದ ಪಾರಾಗಿದ್ದರು. ಈ ಕಾರಣದಿಂದಲೂ ಕೋಚ್‌ಗಳ ಆಧುನೀಕರಣದ ಬೇಡಿಕೆ ಕೇಳಿ ಬಂದಿತ್ತು. ಸಂಸದರೂ ಕೂಡ ಪತ್ರ ಬರೆದು ಮನವಿ ಮಾಡಿದ್ದರು.
ಎಲ್‌ಎಚ್‌ಬಿ ಪರಿವರ್ತನೆಯ ಪರಿಣಾಮವಾಗಿ, ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನಲ್ಲಿ ನಾಲ್ಕು 2-ಟೈರ್ ಎಸಿ, ತಲಾ ಎರಡು 3-ಟೈರ್ ಎಸಿ ಮತ್ತು 3-ಟೈರ್ ಎಕಾನಮಿ, ಎಂಟು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ಸೆಕೆಂಡ್ ಕ್ಲಾಸ್, ಪ್ರತಿ ಬ್ರೇಕ್ ವ್ಯಾನ್ ಕಮ್ ಲಗೇಜ್ ಮತ್ತು ಒಂದು ಜನರೇಟರ್ ಕಾರ್ ಕೋಚ್‌ಗಳನ್ನು ಹೊಂದಿರಲಿದೆ ಎನ್ನುವುದು ರೈಲ್ವೆ ಅಧಿಕಾರಿಗಳ ವಿವರಣೆ.