Indian Railways: ಬೆಂಗಳೂರು, ಮಂಗಳೂರು, ಮೈಸೂರು ಸಹಿತ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸಿಗಲಿದೆ ನವರಾತ್ರಿ ವಿಶೇಷ ಥಾಲಿ ಊಟ
Oct 09, 2024 12:16 PM IST
ಭಾರತೀಯ ರೈಲ್ವೆಯು ನವರಾತ್ರಿ ಥಾಲಿಯನ್ನು ನಿಲ್ದಾಣಗಳಲ್ಲಿ ಒದಗಿಸಲಿದೆ.
- Indian Railways Navratri Thali ಭಾರತೀಯ ರೈಲ್ವೆಯು ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿಯೇ ನವರಾತ್ರಿ ಥಾಲಿ ಒದಗಿಸುವ ವ್ಯವಸ್ಥೆಯನ್ನು ಈ ಬಾರಿಯೂ ಮಾಡಿದೆ.
ಬೆಂಗಳೂರು: ನವರಾತ್ರಿ ವೇಳೆ ಪ್ರವಾಸ ಹೊರಟಿದ್ದೀರಾ, ಪ್ರವಾಸದ ವೇಳೆ ನವರಾತ್ರಿ ಶೈಲಿಯ ಊಟ ಸಿಗುವುದಿಲ್ಲ ಎನ್ನುವ ಬೇಸರ ಬೇಡವೇ ಬೇಡ. ಭಾರತೀಯ ರೈಲ್ವೆಯು ನವರಾತ್ರಿ ಹಬ್ಬದ ವೇಳೆ ಪ್ರವಾಸದಲ್ಲಿರುವವರು ಹಾಗೂ ಈ ಹಬ್ಬದ ವಿಶೇಷ ಆಹಾರ ಬಯಸುವವರಿಗೆ ವಿಶೇಷ ಥಾಲಿಯನ್ನು ಸಿದ್ದಪಡಿಸಲಿದೆ. ಇದಕ್ಕಾಗಿ ಭಾರತೀಯ ರೈಲ್ವೆ ಬೆಂಗಳೂರು, ಮಂಗಳೂರು ಸಹಿತ ಭಾರತದ 150 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ವಿಶೇಷ ಥಾಲಿ ಊಟವನ್ನು ಒದಗಿಸಲಿದೆ. ನೀವು ಆನ್‌ಲೈನ್‌ನಲ್ಲಿ ಬುಕ್ ಮಾಡಿಯೂ ಆಹಾರ ಪಡೆಯಬಹುದು. ಆಯಾ ಪ್ರದೇಶಕ್ಕೆ ಅನುಗುಣವಾಗಿ ವಿಶೇಷ ಆಹಾರದ ಮೆನುವನ್ನು ರೈಲ್ವೆ ಸಿದ್ದಪಡಿಸಿದೆ. ಇದು ರುಚಿಕರ ಮಾತ್ರವಲ್ಲ. ಪೌಷ್ಠಿಕ ಭರಿತವೂ ಆಗಿರಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.
ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳಲ್ಲಿಯೇ ಆಹಾರ ಸರಬರಾಜು ವ್ಯವಸ್ಥೆಯನ್ನು ಮಾಡಿಕೊಂಡು ಬರುತ್ತಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಉಪಹಾರ, ರಾತ್ರಿ ಊಟವನ್ನು ಒದಗಿಸಲಿದೆ.
ಅದೇ ರೀತಿ ವಿಶೇಷ ಸಂದರ್ಭಗಳು, ಹಬ್ಬದ ವೇಳೆಯೂ ಆಹಾರವನ್ನು ಒದಗಿಸುತ್ತಾ ಬಂದಿದೆ. ಅದರಲ್ಲೂ ನವರಾತ್ರಿ ವೇಳೆ ವಿಶೇಷ ಥಾಲಿಯನ್ನು ರೈಲ್ವೆ ನಿಲ್ದಾಣಗಳಲ್ಲಿ ಲಭ್ಯವಾಗುವಂತೆ ಮಾಡಲಿದೆ.
ಈ ಬಾರಿಯೂ ಭಾರತೀಯ ರೈಲ್ವೆ 150 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ನವರಾತ್ರಿ ವ್ರತ ವಿಶೇಷ ಥಾಲಿ ಊಟ ಪ್ರಾರಂಭಿಸಿದೆ, ಇದು ನವರಾತ್ರಿ ಹಬ್ಬದ ಋತುವಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆರಾಮ ಮತ್ತು ಅನುಕೂಲವನ್ನು ಒದಗಿಸುತ್ತದೆ. ಪ್ರಯಾಣಿಕರು ಈ ರುಚಿಕರವಾದ ನವರಾತ್ರಿ ವ್ರತ ವಿಶೇಷ ಥಾಲಿಯನ್ನು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಮೂಲಕ ಆನ್ ಲೈನ್ ಮೂಲಕ ಆರ್ಡರ್ ಮಾಡಬಹುದು. ಬೇಡಿಕೆ ಬಂದ ನಂತರ ಆಹಾರವನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತದೆ ಎನ್ನುವುದು ರೈಲ್ವೆ ಅಧಿಕಾರಿಗಳು ನೀಡುವ ವಿವರಣೆ.
ರೈಲುಗಳಲ್ಲಿ ಪ್ರಯಾಣಿಸುವಾಗ, ನವರಾತ್ರಿಯನ್ನು ಆಚರಿಸುವ ಪ್ರಯಾಣಿಕರು ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದಂತೆ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಪರಿಹರಿಸಲು, ಭಾರತೀಯ ರೈಲ್ವೆ ಮುಂಬೈ ಸೆಂಟ್ರಲ್, ದೆಹಲಿ ಜಂಕ್ಷನ್, ಸೂರತ್, ಜೈಪುರ, ಲಕ್ನೋ, ಪಾಟ್ನಾ ಜಂಕ್ಷನ್, ಲುಧಿಯಾನ, ದುರ್ಗ್, ಚೆನ್ನೈ ಸೆಂಟ್ರಲ್, ಸಿಕಂದರಾಬಾದ್, ಅಮರಾವತಿ, ಹೈದರಾಬಾದ್, ತಿರುಪತಿ, ಜಲಂಧರ್ ಸಿಟಿ, ಉದಯಪುರ ಸಿಟಿ, ಬೆಂಗಳೂರು ಕಂಟೋನ್ಮೆಂಟ್, ದೆಹಲಿ, ಥಾಣೆ, ಪುಣೆ, ಮಂಗಳೂರು ಸೆಂಟ್ರಲ್ ನಿಲ್ದಾಣ, ಮೈಸೂರು ಸೇರಿದಂತೆ 150 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ವಿಶೇಷ ಥಾಲಿಯನ್ನು ಪರಿಚಯಿಸಿದೆ.
ನವರಾತ್ರಿಯ ಆಚರಣೆಯನ್ನು ಗೌರವಿಸುವ ವ್ರತ ಥಾಲಿ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ಪೌಷ್ಠಿಕಾಂಶವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಕಾಳಜಿ ವಹಿಸಲಾಗಿದೆ. ಐಆರ್ ಸಿಟಿಸಿ ಅಪ್ಲಿಕೇಶನ್ನಲ್ಲಿ ತಮ್ಮ ಪಿಎನ್ಆರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅಥವಾ ಐಆರ್ ಸಿಟಿಸಿ ಇ-ಕ್ಯಾಟರಿಂಗ್ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಪ್ರಯಾಣಿಕರು ತಮ್ಮ ಥಾಲಿಯನ್ನು ಸುಲಭವಾಗಿ ಕಾಯ್ದಿರಿಸಬಹುದು. ಭಾರತೀಯ ರೈಲ್ವೆಯಲ್ಲಿ ಈ ನವರಾತ್ರಿಯಲ್ಲಿ ತಾಜಾ ಮತ್ತು ಶುದ್ಧ ಆಹಾರವನ್ನು ಸವಿಯಬಹುದು ಎಂದು ತಿಳಿಸಲಾಗಿದೆ.