ಭಾರತದ ಆರ್ಥಿಕ ಶಿಸ್ತು ಇತರೆ ದೇಶಗಳಿಗೆ ದಾರಿದೀಪ, ಬೃಹತ್ ಸೌಲಭ್ಯ ವಿತರಣೆ ಸಮಾವೇಶದಲ್ಲಿ ಸಚಿವ ಹಾಲಪ್ಪ ಆಚಾರ್ ಅಭಿಮತ
Mar 07, 2023 05:24 PM IST
ಭಾರತದ ಆರ್ಥಿಕ ಶಿಸ್ತು ಇತರೆ ದೇಶಗಳಿಗೆ ದಾರಿದೀಪ, ಬೃಹತ್ ಸೌಲಭ್ಯ ವಿತರಣೆ ಸಮಾವೇಶದಲ್ಲಿ ಸಚಿವ ಹಾಲಪ್ಪ ಆಚಾರ್ ಅಭಿಮತ
- ನಮ್ಮ ದೇಶದ ಆರ್ಥಿಕ ಶಿಸ್ತು ಇತರೇ ದೇಶಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ದಾರಿ ದೀಪವಾಗಿದೆ. ಮೋದಿ ಆಡಳಿತದಲ್ಲಿ ಸರ್ಕಾರದ ಯೋಜನೆಗಳು ನೇರವಾಗಿ ಜನರಿಗೆ ತಲುಪುತ್ತಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಬೃಹತ್ ಸಮಾವೇಶವನ್ನು ಬಳ್ಳಾರಿಯಲ್ಲಿಂದು ಆಯೋಜಿಸಲಾಗಿತ್ತು. ಬಳ್ಳಾರಿ ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಾರಿಗೆ ಸಚಿವ ಬಿ. ಶ್ರೀರಾಮುಲು ಮತ್ತಿತರರು ಪಾಲ್ಗೊಂಡಿದ್ದರು.
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಜನಪರ, ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಜಲಜೀವನ್ ಅಭಿಯಾನದ ಮೂಲಕ ಪ್ರತಿಯೊಂದು ಮನೆ ಮನೆಗೂ ಶುದ್ದ ನೀರು ದೊರೆಯುವಂತೆ ಮಾಡಿದ್ದಾರೆ. ಇದರಿಂದ ಜನರ ಜೀವನ ಮಟ್ಟ ಸುಧಾರಿಸುತ್ತಿದೆ" ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
"ನಮ್ಮ ದೇಶದ ಆರ್ಥಿಕ ಶಿಸ್ತು ಇತರೇ ದೇಶಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ದಾರಿ ದೀಪವಾಗಿದೆ. ಮೋದಿ ಆಡಳಿತದಲ್ಲಿ ಸರ್ಕಾರದ ಯೋಜನೆಗಳು ನೇರವಾಗಿ ಜನರಿಗೆ ತಲುಪುತ್ತಿವೆ. ಈ ಹಿಂದೆ ಮಹಿಳೆ ಕೂಡ ದೇಶದ ಪ್ರಧಾನಿಯಾಗಿದ್ದರು. ಆದರೂ ಮಹಿಳೆಯರ ಕಷ್ಟಗಳ ಅವರಿಗೆ ಕಾಣಲಿಲ್ಲ, ಆದರೆ ಬಿಜೆಪಿ ಸರ್ಕಾರ ಬಡ ಮಹಿಳೆಯರ ಕಣ್ಣೀರು ಒರೆಸುತ್ತಿದೆ" ಎಂದು ಹೇಳಿದರು.
"ಕಾಂಗ್ರೆಸ್ ನಾಯಕರು ರಾಜಕೀಯ ಪ್ರಚಾರಕ್ಕಾಗಿ ಉಚಿತ ವಿದ್ಯುತ್ ಉಚಿತ ಕೊಡುವುದಾಗಿ ಭರವಸೆ ನೀಡುತ್ತಿದ್ದಾರೆ. ಇವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಹಿಂದೆ ಇಡೀ ಜಗತ್ತನ್ನು ಭಾರತ ನೋಡುತ್ತಿತ್ತು. ಇಂದು ಭಾರತ ದೇಶವನ್ನು ಜಗತ್ತು ತಿರುಗಿ ನೋಡುತ್ತಿದೆ" ಎಂದರು.
ವೇದಿಕೆಯಲ್ಲಿ, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಸಂಸದ ವೈ. ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಎಪಿಎಂಸಿ ಅಧ್ಯಕ್ಷ ಶ್ರೀಧರಗಡ್ಡೆ ಬಸವಲಿಂಗನಗೌಡ, ಮಾಜಿ ಸಂಸದೆ ಜೆ. ಶಾಂತಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾರ್ಚ್ 4ರಿಂದ 20ರವರೆಗೆ ಪ್ರತಿ ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರಕಾರದ ಯೋಜನೆಗಳ ಫಲವನ್ನು ಪ್ರತೀ ಮನೆಯ ಒಂದಿಲ್ಲೊಂದು ಫಲಾನುಭವಿಗಳನ್ನು ತಲುಪಿದೆ. ಈ ಮೂಲಕ ಲಕ್ಷಾಂತರ ಜನರು ಸರಕಾರದ ಸಹಾಯವನ್ನು ಪಡೆಯುತ್ತಿದ್ದಾರೆ. ಜಿಲ್ಲಾವಾರು ಅವಲೋಕನ ನಡೆಸಿದರೆ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಂಖ್ಯೆ ನಮ್ಮ ಸರಕಾರ ಬಂದ ಮೇಲೆ ಪ್ರತೀ ಜಿಲ್ಲೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
"ಸರಕಾರದ ಯೋಜನೆಗಳ ಪ್ರಯೋಜನ ಪಡೆದ ಈ ಎಲ್ಲಾ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಅವರೊಡನೆ ಯೋಜನೆಗಳು ತಲುಪಿರುವುದನ್ನು ಖಾತ್ರಿ ಪಡಿಸಬೇಕು ಹಾಗೂ ಈ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಈ ಫಲಾನುಭವಿಗಳೊಡನೆ ಸಮಾಲೋಚಿಸಿ, ಮತ್ತಷ್ಟು ಜನಹಿತ ಚಿಂತನೆಗಳನ್ನು ಯೋಚಿಸಿ, ಯೋಜಿಸಬೇಕೆಂಬುದು ನಮ್ಮ ಮುಖ್ಯಮಂತ್ರಿಗಳ ಆಶಯವಾಗಿದೆ. ಇದಕ್ಕಾಗಿ ನಾವು ಪ್ರತೀ ಜಿಲ್ಲೆಯಲ್ಲೂ ಫಲಾನುಭವಿಗಳ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ" ಎಂದು ಇತ್ತೀಚೆಗೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದರು.