Indira Canteen: ಇಂದಿರಾ ಕ್ಯಾಂಟೀನ್ ಊಟದ ಬೆಲೆ ಏರಿಕೆ ಇಲ್ಲ; ಆಹಾರ ಸರಬರಾಜುದಾರರಿಗೆ ನೀಡುವ ದರ ಮಾತ್ರ ಹೆಚ್ಚಳ; ಸರ್ಕಾರ ಸ್ಪಷ್ಟನೆ
Aug 20, 2023 08:21 AM IST
ಇಂದಿರಾ ಕ್ಯಾಂಟೀನ್ ಊಟದ ಬೆಲೆ ಏರಿಕೆ ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ
ಕರ್ನಾಟಕದ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲು 27 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬೆಂಗಳೂರು: ಇಂದಿರಾ ಕ್ಯಾಂಟೀನ್ (Indira Canteen) ಊಟದ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜುದಾರರಿಗೆ ಸರ್ಕಾರ ನೀಡುವ ದರದಲ್ಲಿ 5 ರೂಪಾಯಿ ಹೆಚ್ಚಳ ಮಾಡಲಾಗಿದೆ ಅಷ್ಟೇ. ಗ್ರಾಹಕರಿಗೆ ಹಳೆಯ ದರದಲ್ಲಿ ತಿಂಡಿ ಊಟ ನೀಡಲಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹಳೆಯ ದರವೇ ಮುಂದುವರೆಯಲಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಂದೆರಡು ಗಂಟೆಗಳ ಕಾಲ ಬೆಲೆ ಏರಿಸಲಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿತ್ತು. ನಂತರ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟೀಕರಣ ನೀಡಿ ಗೊಂದಲವನ್ನು ಬಗೆಹರಿಸಿದೆ.
ಈ ಮೊದಲು ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಆಹಾರ ಸರಬರಾಜುದಾರರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಒಟ್ಟು 57 ರೂಪಾಯಿ ನೀಡಲಾಗುತ್ತಿತ್ತು. ಈಗ ಅದನ್ನು 62 ರೂಪಾಯಿಗೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಮೊತ್ತವನ್ನು ಸರ್ಕಾರವೇ ಭರಿಸಲಿದೆ. ಗ್ರಾಹಕರು ಎಂದಿನಂತೆ ತಿಂಡಿಗೆ 5 ರೂಪಾಯಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂಪಾಯಿ ಪಾವತಿಸಿ ಊಟ ಮಾಡಬಹುದಾಗಿದೆ.
ಆಹಾರ ಮೆನು ಬದಲಾವಣೆಯೊಂದಿಗೆ ಈ ಹೆಚ್ಚಳ ಮಾಡಲಾಗಿದೆಯೇ ಹೊರತು ಗ್ರಾಹಕರಿಗೆ ಹಳೆದ ದರದಲ್ಲೇ ಹೊಸ ಮೆನು ಮತ್ತು ಇನ್ನಷ್ಟು ಉತ್ತಮ ಆಹಾರ ದೊರಕಲಿದೆ ಎಂದು ತಿಳಿಸಲಾಗಿದೆ.
ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಡೆಯಿತು. ನಂತರ ಸಚಿವ ಸಂಪುಟದ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್‌ಗಳ ಆರಂಭ
ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹಳೆಯ ದರ ಮುಂದುವರಿಕೆ ಆಗಲಿದೆ ಎಂದು ಸಚಿವ ಎಚ್‌ಕೆ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಹೊಸದಾಗಿ 197 ಇಂದಿರಾ ಕ್ಯಾಂಟೀನ್‌ಗಳ ದುರಸ್ತಿಗೆ 21.29 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಪ್ರಾದೇಶಿಕ ಆಹಾರ ಕ್ರಮ ಆಧರಿಸಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಯಾ ಭಾಗದ ಆಹಾರ ಕ್ರಮವಾದ ರೊಟ್ಟಿ, ಮುದ್ದೆ, ಚಪಾತಿ ಮತ್ತಿತರ ಮೆನು ಸೇರ್ಪಡೆಯನ್ನು ಮಾಡಲು ನಿರ್ಧರಿಸಲಾಗಿದೆ. ಸದ್ಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗಿನ ತಿಂಡಿಗೆ ಪೊಂಗಲ್, ಉಪ್ಪಿಟ್ಟು, ಬಿಸಿಬೇಳೆ ಬಾತ್, ರೈಸ್‌ಬಾತ್, ಇಡ್ಲಿ, ಚಿತ್ರಾನ್ನ ಹಾಗೂ ಮಧ್ಯಾಹ್ನ, ರಾತ್ರಿ ಊಟಕ್ಕೆ ಅನ್ನ ಸಾಂಬಾರ್ ಮತ್ತು ಮೊಸರನ್ನ ಮಾತ್ರ ವಿತರಣೆಯಾಗುತ್ತಿದೆ.
ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ಗಳ ಕಥೆ ಏನು?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 198 ಇಂದಿರಾ ಕ್ಯಾಂಟೀನ್ ಗಳಿವೆ. ಬಿಜೆಪಿ ಸರ್ಕಾರದಲ್ಲಿ ಬಹುತೇಕ ಕ್ಯಾಂಟೀನ್‌ಗಳು ಮುಚ್ಚಿ ಹೋಗಿದ್ದವು. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಈ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದ ಸಿದ್ದರಾಮಯ್ಯ ಅವರು ಮತ್ತೆ ಅಧಿಕಾರ ಹಿಡಿದ ನಂತರ ಮರುಜೀವ ನೀಡಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಆಹಾರ ಸರಬರಾಜು ಮಾಡುವವರಿಗೆ ಬೆಲೆ ಹೆಚ್ಚು ಮಾಡಬಹುದು. ಆದರೆ ಈ ಹೊರೆಯನ್ನು ಸರ್ಕಾರವೇ ಹೊರಲಿದೆ. ವಾರ್ಡ್‌ಗಳ ಸಂಖ್ಯೆ 243ಕ್ಕೆ ಏರಿಕೆಯಾಗಿದ್ದು, ಕ್ಯಾಂಟೀನ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಇದ್ದ 10 ಮೊಬೈಲ್ ಕ್ಯಾಂಟೀನ್‌ಗಳನ್ನು ಮತ್ತೆ ಆರಂಭಿಸಲು ತೀರ್ಮಾನ ಮಾಡಲಾಗಿದೆ ಎಂದು ಪಾಲಿಕೆ ಮೂಲಗಳು ಹೇಳಿವೆ. ಪೌರ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಅಸಹಾಯಕರು ಸೇರಿದಂತೆ ಹತ್ತಾರು ಮಂದಿಗೆ ಇಂದಿರಾ ಕ್ಯಾಂಟೀನ್ ಹಸಿವನ್ನು ನೀಗಿಸುತ್ತಿದೆ.