Kalaburagi News: ಯುವ ನಿಧಿ ಯೋಜನೆಗೆ ಬಜೆಟ್ನಲ್ಲಿ 2,500 ಕೋಟಿ ಬೇಕು; ಸಚಿವ ಶರಣ ಪ್ರಕಾಶ್ ಪಾಟೀಲ್
Jul 02, 2023 05:25 PM IST
ಯುವ ನಿಧಿ ಯೋಜನೆಗೆ ಬಜೆಟ್ನಲ್ಲಿ 2,500 ಕೋಟಿ ಬೇಕು ಎಂದ ಸಚಿವ ಶರಣ ಪ್ರಕಾಶ್ ಪಾಟೀಲ್
- ರಾಜ್ಯದಲ್ಲಿ 2022-23ರಲ್ಲಿ ಪದವಿ/ಡಿಪ್ಲೊಮಾ ಶಿಕ್ಷಣ ಮುಗಿಸಿರುವ 4.50 ಲಕ್ಷ ಯುವಕರಿದ್ದಾರೆ. ಮುಂದಿನ 2 ವರ್ಷ ಕಾಲ ಅವರಿಗೆ ಮಾಸಿಕ 3 ಸಾವಿರ ನೀಡಲಾಗುತ್ತದೆ. ಬಜೆಟ್ನಲ್ಲಿ 2,500 ಕೋಟಿ ರೂಪಾಯಿ ಈ ಯೋಜನೆಗೆ ಬೇಕಾಗುತ್ತದೆ ಎಂದು ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಹೇಳಿದರು.
ಕಲಬುರಗಿ: ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಯನ್ನು ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಅನುಷ್ಠಾನಕ್ಕೆ ತರಲು ಸಿದ್ಧತೆಗಳು ಭರದಿಂದ ಸಾಗಿವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಹೇಳಿದರು.
ಕಲಬುರಗಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2022-23ರಲ್ಲಿ ಪದವಿ/ಡಿಪ್ಲೊಮಾ ಶಿಕ್ಷಣ ಮುಗಿಸಿರುವ 4.50 ಲಕ್ಷ ಯುವಕರಿದ್ದಾರೆ. ಪದವಿ ಪಡೆದ ದಿನದಿಂದ 6 ತಿಂಗಳಲ್ಲಿ ಉದ್ಯೋಗ ದೊರಕದೆ ಹೋದಲ್ಲಿ ಅಂಥವರು ಯುವನಿಧಿ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗುತ್ತಾರೆ. ಮುಂದಿನ 2 ವರ್ಷ ಕಾಲ ಅವರಿಗೆ ಮಾಸಿಕ 3 ಸಾವಿರ ನೀಡಲಾಗುತ್ತದೆ. ಇದಕ್ಕಾಗಿ ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ವಿತರಿಸಲು ವ್ಯವಸ್ಥೆ ಮಾಡಲಾಗುತ್ತದೆ. ಈ ಬಜೆಟ್ನಲ್ಲಿ 2,500 ಕೋಟಿ ಯುವ ನಿಧಿಗೆ ಬೇಕಾಗುತ್ತದೆ ಎಂದರು.
ಈಗಾಗಲೇ ಪದವೀಧರರು, ಡಿಪ್ಲೋಮಾ ಆದ ಯುವಕರ ಸಮೀಕ್ಷೆ, ಅಂಕಿ-ಅಂಶ ಎಲ್ಲವನ್ನೂ ಕಲೆ ಹಾಕಲಾಗಿದೆ. ಸೌಲಭ್ಯ ಸರಳವಾಗಿ ಯುವಕರನ್ನು ಹೇಗೆ ತಲುಬೇಕು ಎಂಬುದರ ಕುರಿತು ಚರ್ಚೆಗಳು ಸಾಗಿವೆ ಎಂದರು.
ಅಭಿವೃದ್ಧಿಗೆ ಪ್ರಸ್ತಾವನೆ
ಈಗಾಗಲೇ ಕರ್ನಾಟಕದಾದ್ಯಂತ 150 ಸರ್ಕಾರಿ ಸ್ವಾಮ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಇತ್ತೀಚಿನ ಮೂಲಸೌಕರ್ಯ, ಉದ್ಯಮ-ಆಧಾರಿತ ಕೋರ್ಸ್ವಾರು ತರಬೇತಿ ಮತ್ತು ಉನ್ನತೀಕರಿಸಲು ಹಾಗೂ ಆಧುನೀಕರಿಸಲು ಯೋಜನೆ ಅನುಷ್ಠಾನಗೊಳಿಸಿರುವ ಟಾಟಾ ಟೆಕ್ನಾಲಜೀಸ್ ಉದ್ದಿಮೆ ಸಮೂಹದವರು ಈ ವರ್ಷ ರಾಜ್ಯದ ವಿವಿಧ ಭಾಗಗಳಲ್ಲಿರುವ ಇನ್ನೂ 30 ಐಟಿಐಗಳ ಉನ್ನತೀಕರಣಕ್ಕೆ ಮುಂದಾಗಿದ್ದಾರೆ.
150 ಸರ್ಕಾರಿ ಸ್ವಾಮ್ಯದ ಐಟಿಐ ನವೀಕರಿಸಲು ಮತ್ತು ಆಧುನೀಕರಿಸಲು ಸರ್ಕಾರದೊಂದಿಗೆ 10 ವರ್ಷಗಳ ಅವಧಿಗೆ ಒಪ್ಪಂದ ಆಗಿದೆ. ಟಾಟಾ ಸಂಸ್ಥೆಯವರು ಈ ಯೋಜನೆಯಡಿಯಲ್ಲಿ 4,600 ಕೋಟಿ ರೂ ಹೂಡಿಕೆ ಮಾಡಿದ್ದಾರೆ. ಹೊಸತಾಗಿ ಇನ್ನೂ 30 ಐಟಿಐಗಳನ್ನು ಉನ್ನತೀಕರಿಸಲು ಟಾಟಾ ಸಂಸ್ಥೆಯವರಿಗೆ ನೀಡುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಗಳು ಸಾಗಿದ್ದು, ಶೀಘ್ರವೇ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆಂದು ಹೇಳಿದರು.
ಕರ್ನಾಟಕದಲ್ಲಿ 270 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಇವೆ. ಈ ಪೈಕಿ 150 ಅದಾಗಲೇ ಗುರುತಿಸಿ ಟಾಟಾ ಸಂಸ್ಥೆಯ ಸಹಯೋಗದಲ್ಲಿ ಉನ್ನತೀಕರಣ ಸಾಗಿದೆ. ಇದು ಹಂತ ಹಂತವಾಗಿ ಜರುಗುವ ಕೆಲಸವಾದ್ದರಿಂದ ಇನ್ನೂ 30 ಐಟಿಐಗಳು ಈ ಸರಣಿಗೆ ಸೇರಿಸುವ ಯೋಚನೆ ಟಾಟಾ ಸಂಸ್ಥೆಯವರು ಮಾಡಿದ್ದಾರೆ. ಸರ್ಕಾರದ ಹಂತದಲ್ಲಿ ಈ ವಿಚಾರ ಚರ್ಚೆಯಲ್ಲಿದೆ ಎಂದರು.