logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Elections: ಕರ್ನಾಟಕ ವಿಧಾನಸಭೆ ಚುನಾವಣೆ; ಭದ್ರತೆಗಾಗಿ 1 ಲಕ್ಷ 56 ಸಾವಿರ ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ

Karnataka Elections: ಕರ್ನಾಟಕ ವಿಧಾನಸಭೆ ಚುನಾವಣೆ; ಭದ್ರತೆಗಾಗಿ 1 ಲಕ್ಷ 56 ಸಾವಿರ ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ

HT Kannada Desk HT Kannada

May 08, 2023 06:38 PM IST

google News

ಕರ್ನಾಟಕ ಪೊಲೀಸ್ (ಫೈಲ್)

  • ರಾಜ್ಯ ಚುನಾವಣಾ ಕರ್ತವ್ಯಕ್ಕೆ 304 ಡಿವೈಎಸ್‍ಪಿಗಳು, 991 ಪಿಐಗಳು, 2,610 ಪಿಎಸ್‍ಐಗಳು, 5,803 ಎಎಸ್‍ಐಗಳು ಸೇರಿದಂತೆ ಒಟ್ಟು 84,119 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜನೆಗೊಳಿಸಲಾಗಿದೆ.

ಕರ್ನಾಟಕ ಪೊಲೀಸ್ (ಫೈಲ್)
ಕರ್ನಾಟಕ ಪೊಲೀಸ್ (ಫೈಲ್)

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಬಹಿರಂಗ ಪ್ರಚಾರ ಇಂದು ಅಂತ್ಯಗೊಂಡಿದ್ದು, ಮತದಾನಕ್ಕೆ ಕೇವಲ 1 ದಿನ ಮಾತ್ರ ಬಾಕಿ ಇದೆ. ಶಾಂತಿಯುತ, ನಿರ್ಭೀತ ಹಾಗೂ ನ್ಯಾಯಯುತ ಮತದಾನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮತದಾನಕ್ಕೆ ಸೂಕ್ತ ಭದ್ರತೆ ಕಲ್ಪಿಸುವ ಸಲುವಾಗಿ ಚುನಾವಣಾ ಕರ್ತವ್ಯಕ್ಕೆಂದು 304 ಡಿವೈಎಸ್‍ಪಿಗಳು, 991 ಪಿಐಗಳು, 2,610 ಪಿಎಸ್‍ಐಗಳು, 5,803 ಎಎಸ್‍ಐಗಳು, 46,421 ಹೆಚ್‍ಸಿ/ಪಿಸಿಗಳು, 27,990 ಹೋಮ್‍ಗಾರ್ಡ್‍ಗಳು ಸೇರಿದಂತೆ ಒಟ್ಟು 84,119 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜನೆಗೊಳಿಸಲಾಗಿದೆ.

ಅವಶ್ಯಕತೆಗನುಗುಣವಾಗಿ ಅಧಿಕಾರಿ/ಸಿಬ್ಬಂದಿ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಸುಮಾರು 8,500 ಪೊಲೀಸ್ ಅಧಿಕಾರಿ/ಸಿಬ್ಬಂದಿ, ಗೃಹ ರಕ್ಷಕರನ್ನು ಚುನಾವಣಾ ಕರ್ತವ್ಯಕ್ಕಾಗಿ ಪಡೆಯಲಾಗಿದೆ. 650 ಸಿಎಪಿಎಫ್ ಕಂಪನಿಗಳ ಜೊತೆಗೆ ರಾಜ್ಯ ಸಶಸ್ತ್ರ ಮೀಸಲು ಪಡೆಯನ್ನು ಸಹ ನಿಯೋಜಿಸಲಾಗಿದೆ.

ಮತದಾನ ದಿನದಂದು ಮೇಲೆ ತಿಳಿಸಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿ ಸೇರಿದಂತೆ ಒಟ್ಟಾರೆಯಾಗಿ 1,56,000 ಪೊಲೀಸ್ ಅಧಿಕಾರಿ/ಸಿಬ್ಬಂದಿಯನ್ನು ರಾಜ್ಯದಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

11,417 ಸೂಕ್ಷ್ಮ ಮತಗಟ್ಟೆಗಳು

224 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 18,282 ಮತಗಟ್ಟೆಗಳಿದ್ದು, ಅದರಲ್ಲಿ 11,417 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಅನುಗುಣವಾಗಿ ಸೂಕ್ಷ್ಮ ಮತಗಟ್ಟೆಗಳಿಗೆ ಪೊಲೀಸ್ ಸಿಬ್ಬಂದಿ ಜೊತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಪಡೆಯನ್ನು ನಿಯೋಜನೆ ಮಾಡಲಾಗಿದೆ.

ಒಟ್ಟು 2,930 ಸೆಕ್ಟರ್ ಮೊಬೈಲ್ಸ್‍ಗಳು ಕಾರ್ಯಾಚರಣೆಯಲ್ಲಿದ್ದು, ಒಂದೊಂದು ಸೆಕ್ಟರ್ ಮೊಬೈಲ್‍ಗೆ 20 ಬೂತ್‍ಗಳನ್ನು ನಿಗದಿಪಡಿಸಲಾಗಿದೆ. ಪಿಎಸ್‌ಐ/ಎಎಸ್‍ಐ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ನೇಮಿಸಿ ನಿರಂತರವಾದ ಗಸ್ತನ್ನು ಕೈಗೊಳ್ಳಲಾಗುತ್ತದೆ.

ಸೆಕ್ಟರ್ ಮೊಬೈಲ್‌ಗಳ ಮೇಲ್ವಿಚಾರಣೆಗಾಗಿ 749 ಮೇಲ್ವಿಚಾರಣಾ ಮೊಬೈಲ್‍ಗಳಿದ್ದು, ಮೇಲ್ವಿಚಾರಣಾ ಮೊಬೈಲ್‌ನ ಉಸ್ತುವಾರಿಗಾಗಿ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ನೇಮಿಸಿದ್ದು, ಸದರಿ ಅಧಿಕಾರಿಯು 4 ಸೆಕ್ಟರ್ ಮೊಬೈಲ್‍ಗಳ ಮೇಲ್ವಿಚಾರಣೆಯನ್ನು ನಿರ್ವಹಿಸುತ್ತಾರೆ. ಡಿವೈಎಸ್‍ಪಿ ದರ್ಜೆಯ ಅಧಿಕಾರಿಯ ಉಸ್ತುವಾರಿಯಲ್ಲಿ 236 ಉಪವಿಭಾಗೀಯ ಮೊಬೈಲ್‍ಗಳಿದ್ದು, ಸಹಜವಾಗಿ ಒಂದು ಮೊಬೈಲ್‍ನಿಂದ ಒಂದು ವಿಧಾನಸಭಾ ಕ್ಷೇತ್ರವನ್ನು ನಿರ್ವಹಿಸಲಾಗುತ್ತಿದೆ.

ಮತದಾನ ದಿನದಂದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಮತ್ತು ಚುನಾವಣಾ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ 700ಕ್ಕೂ ಹೆಚ್ಚು ವಿಚಕ್ಷಣಾ ದಳಗಳನ್ನು ನೇಮಿಸಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನೊಳಗೊಂಡಂತೆ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಗಡಿಭಾಗದಲ್ಲಿ ಸುಮಾರು 700 ಕ್ಕೂ ಹೆಚ್ಚು ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ.

ಮುನ್ನೆಚ್ಚರಿಕೆ ಕ್ರಮಗಳು ಹೀಗಿವೆ

ಜಾಮೀನು ರಹಿತ ವಾರೆಂಟ್‍ಗಳು: ಕಳೆದ 6 ತಿಂಗಳಿನಿಂದ ಜಾರಿ ಆಗದೆ ಇರುವ 5,500 ಜಾಮೀನು ರಹಿತ ವಾರೆಂಟ್‍ಗಳನ್ನು ಜಾರಿ ಮಾಡಲಾಗಿರುತ್ತದೆ. ಕಳೆದ 03 ತಿಂಗಳಲ್ಲಿ ಒಟ್ಟು 24,959 ಜಾಮೀನು ರಹಿತ ವಾರೆಂಟ್‍ಗಳನ್ನು ಜಾರಿ ಮಾಡಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ 30,418 ಭದ್ರತಾ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ ಸನ್ನಡತೆ ಆಧಾರದ ಮೇಲೆ 53,406 ವ್ಯಕ್ತಿಗಳನ್ನು ಬಾಂಡ್ ಒವರ್ ಮಾಡಲಾಗಿರುತ್ತದೆ. ಭದ್ರತಾ ಪ್ರಕರಣಗಳನ್ನು ಉಲ್ಲಂಘಿಸಿದ 115 ಪ್ರಕರಣಗಳಲ್ಲಿ 1,57,02,000 ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ಶಾಂತಿಯುತವಾದ ಮತದಾನ ನಡೆಯಲು ಒಟ್ಟು 714 ವ್ಯಕ್ತಿಗಳ ವಿರುದ್ಧ ಗಡಿಪಾರು ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ನೆರೆಹೊರೆಯ ರಾಜ್ಯಗಳ ಗಡಿಭಾಗಗಳಲ್ಲಿ, ಶಾಂತಿ, ಸೌಹಾರ್ದತೆಯ ಕಾಪಾಡುವ ನಿಟ್ಟಿನಲ್ಲಿ ವಿವಿಧ ಹಂತದ ಅಧಿಕಾರಿಗಳಾದ ಐಜಿಪಿ, ಎಸ್‍ಪಿ, ಡಿಸಿ ಹಾಗೂ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ಅಂತರ್ ರಾಜ್ಯ ಗಡಿಭಾಗದ ಜಿಲ್ಲೆಯ ಅಧಿಕಾರಿಗಳೊಂದಿಗೆ 50ಕ್ಕೂ ಹೆಚ್ಚು ಸಮನ್ವಯ ಸಭೆಗಳನ್ನು ಕೈಗೊಳ್ಳಲಾಗಿದೆ.

ಚುನಾವಣೆಯಲ್ಲಿ ನೆರೆ ರಾಜ್ಯಗಳಿಂದ ಅನಧಿಕೃತ ಹಣ, ಮದ್ಯ, ಉಚಿತ ಹಾಗೂ ಇತರೆ ವಸ್ತುಗಳು ಮತ್ತು ರೌಡಿಗಳು, ಸಮಾಜಘಾತುಕ ವ್ಯಕ್ತಿಗಳ ಚಲನವಲನದ ಬಗ್ಗೆ ಸೂಕ್ತ ನಿಗಾ ವಹಿಸುವ ಸಲುವಾಗಿ ಗಡಿಭಾಗದ ಚೆಕ್‍ ಪೋಸ್ಟ್‌ಗಳಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ಗಡಿಗಳಲ್ಲಿ ಟೆಕ್ ಪೋಸ್ಟ್ ಸ್ಥಾಪಿಸಲಾಗಿದೆ.

ಸಿಎಪಿಎಫ್ ನಿಯೋಜನೆ:

ಚುನಾವಣಾ ಕರ್ತವ್ಯಕ್ಕಾಗಿ ನೇಮಿಸಲಾದ ಒಟ್ಟು 650 ಸಿಎಪಿಎಫ್ ಕಂಪನಿಗಳಲ್ಲಿ 101 ಸಿಆರ್‌ಪಿಎಫ್, 108 ಬಿಎಸ್‍ಎಫ್, 75 ಸಿಐಎಸ್‍ಎಫ್, 70 ಐಟಿಬಿಪಿ, 75 ಎಸ್‍ಎಸ್‍ಬಿ, 35 ಆರ್‌ಪಿಎಫ್ ಮತ್ತು 186 ಎಸ್‍ಎಪಿ ಕಂಪನಿಗಳಿದ್ದು, ಅವುಗಳನ್ನು ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನಿಯೋಜಿಸಲಾಗಿದೆ.

ಸ್ಟ್ರೈಕಿಂಗ್ ಪಾರ್ಟಿಗಳು:

ಚುನಾವಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯುತ ಮತದಾನಕ್ಕಾಗಿ 650 ಸಿಎಪಿಎಫ್ ಕಂಪನಿಗಳ ಜೊತೆಗೆ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 224 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿರುತ್ತದೆ. ಹೆಚ್ಚುವರಿಯಾಗಿ ಜಿಲ್ಲಾ ನಗರ ಸಶಸ್ತ್ರ ಪಡೆಗಳನ್ನು ಸೇರಿ ಮತದಾನ ದಿನದಂದು ಒಟ್ಟಾರೆಯಾಗಿ 890 ಸ್ಟ್ರೈಕಿಂಗ್ ಪಾರ್ಟಿಗಳು ಚುನಾವಣಾ ಬಂದೋಬಸ್ತ್ ಕಾರ್ಯವನ್ನು ನಿರ್ವಹಿಸಲಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮೇ 8ರಿಂದ ಮದ್ಯ ಮಾರಾಟ ಸ್ಥಗಿತ; ಇಂದು ಸಂಜೆ 5 ಗಂಟೆಯಿಂದಲೇ ಮದ್ಯದ ಅಂಗಡಿಗಳು ಬಂದ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ