ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ, ಮುನಿರತ್ನ ಮತ್ತೆ ಬಂಧನ: ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣದಲ್ಲಿ ಅರೆಸ್ಟ್
Sep 20, 2024 10:40 PM IST
ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ, ಮುನಿರತ್ನ ಮತ್ತೆ ಬಂಧನ
- BJP MLA Munirathna: ಬಿಜೆಪಿ ಶಾಸಕ ಮುನಿರತ್ನ ಮತ್ತು ಇತರ ಆರು ಮಂದಿ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಪ್ರಕರಣ ದಾಖಲಾಗಿದೆ. ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬಿಜೆಪಿ ಮುಖಂಡ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಇವರನ್ನು ಮತ್ತೆ ಬಂಧಿಸಲಾಗಿದೆ. ಬಿಜೆಪಿ ಕಾರ್ಯಕರ್ತೆಯೊಬ್ಬರು ಬುಧವಾರ ತಡರಾತ್ರಿ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ದೂರು ದಾಖಲಾಗುತ್ತಿದ್ದಂತೆ ಮತ್ತೊಬ್ಬ ಸಂತ್ರಸ್ತೆ ಹನಿ ಟ್ರ್ಯಾಪ್ ಮತ್ತು ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸಿದ್ದಾರೆ.
ವ್ಯವಹಾರದಲ್ಲಿ ಸಹಕರಿಸದ ಪೊಲೀಸರು ಮತ್ತು ಅಧಿಕಾರಿಗಳನ್ನು ಇಂತಹ ಸಂತ್ರಸ್ತರ ಮೂಲಕ ಮುನಿರತ್ನ ಹನಿ ಟ್ರ್ಯಾಪ್ ಮಾಡಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಈ ಸಂತ್ರಸ್ತೆ ಆರೋಪ ಮಾಡಿದ್ದಾರೆ. ನ್ಯಾಯಾಂಗದ ಬಂಧನದಲ್ಲಿದ್ದ ಮುನಿರತ್ನ ಜಾತಿನಿಂದನೆ ಮತ್ತು ಲಂಚಕ್ಕೆ ಬೇಡಿಕೆ ಇಟ್ಟ ಎರಡೂ ಪ್ರಕರಣಗಳಲ್ಲಿ ನಿನ್ನೆ ಗುರುವಾರ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದರು.
ಶುಕ್ರವಾರ ಬೆಳಿಗ್ಗೆಯೇ ಬಂಧನ
ಜಾಮೀನು ಸಿಕ್ಕ ನಂತರ ಬಿಡುಗಡೆ ಪ್ರಕ್ರಿಯೆಗಳು ತಡವಾಗಿದ್ದರಿಂದ ಜೈಲಿನಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ಇರಬೇಕಾಗಿ ಬಂದಿತ್ತು. ಇಂದು ಬೆಳಗ್ಗೆ ರಾಮನಗರ ಜಿಲ್ಲೆ ಕಗ್ಗಲಿಪುರ ಠಾಣೆ ಪೊಲೀಸರು ಶುಕ್ರವಾರ ಬೆಳಿಗ್ಗೆಯೇ ಬಂಧಿಸಿದ್ದಾರೆ. ಮುನಿರತ್ನ ಪರ ವಕೀಲರು ಜಾಮೀನು ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಬಿಡುಗಡೆ ಪ್ರಕ್ರಿಯೆ ಮುಗಿದ ತಕ್ಷಣವೇ ಕಗ್ಗಲಿಪುರ ಠಾಣೆ ಪೊಲೀಸರು ಮುನಿರತ್ನ ಅವರನ್ನು ವಶಕ್ಕೆ ಪಡೆದುಕೊಂಡರು. ಇವರನ್ನು ವಶಕ್ಕೆ ಪಡೆಯಲು ರಾಮನಗರ ಜಿಲ್ಲಾ ಪೊಲೀಸರು ಗುರುವಾರ ರಾತ್ರಿಯಿಂದಲೇ ಪರಪ್ಪನ ಅಗ್ರಹಾರ ಜೈಲಿನ ಬಳಿ ಬೀಡುಬಿಟ್ಟಿದ್ದರು. ಮಾಗಡಿ ಡಿವೈಎಸ್ಪಿ ಪ್ರವೀಣ್ ಹಾಗೂ ರಾಮನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ಮುನಿರತ್ನ ಅವರನ್ನ ಬಂಧಿಸಿದೆ.
ಅವರನ್ನು ಮೊದಲು ಆರೋಗ್ಯ ತಪಾಸಣೆಗೆ ಒಳಪಡಿಸಿ ವಿಚಾರಣೆ ನಡೆಸಲಾಗುತ್ತದೆ. ನಂತರ ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಇಂದು ಬೆಳಗ್ಗೆ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಜಿ ಸಚಿವ ಮುನಿರತ್ನ ಅವರ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸುವಂತೆ ಮನವಿ ಸಲ್ಲಿಸಿದೆ.