Siddaramaiah: ನಡೆಯದ ಹಾದಿಯಲ್ಲಿ ಎಡವಿದೆನೆಂದರೆ ಒಪ್ಪುವುದೆ ಅಯ್ಯಾ; ಸಿದ್ದಯ್ಯ ಪುರಾಣಿಕರ ಸಾಲು ಹೇಳಿ ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು
Jul 07, 2023 03:30 PM IST
ಸಿದ್ದಯ್ಯ ಪುರಾಣಿಕರ ಸಾಲು ಹೇಳಿ ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು
- Siddaramaiah: ಬಜೆಟ್ ಮಂಡಿಸುವುದಕ್ಕೂ ಮುನ್ನ ತಮ್ಮ ವಿರುದ್ಧ ಕೇಳಿ ಬಂದಿದ್ದ ಟೀಕೆ, ಟಿಪ್ಪಣಿಗಳಿಗೆ ಸಿದ್ಧಯ್ಯ ಪುರಾಣಿಕ ರಚಿಸಿದ ಸಾಲುಗಳನ್ನು ಹೇಳುವ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರವು (Congress Government) ಇಂದು ಬಜೆಟ್ ಮಂಡಿಸಿದೆ. ನೂತನಗಳ ಯೋಜನೆಗಳ ಗಮನ ಸೆಳೆದಿದ್ದಾರೆ. ಜನಪರ ಮತ್ತೊಂದು ಬಜೆಟ್ ಮಂಡಿಸಿ ಸೈ ಎನಿಸಿಕೊಂಡಿದೆ. ಆಯವ್ಯಯ ಮಂಡಿಸುವ ಸಮಯದಲ್ಲಿ ಸಿದ್ದರಾಮಯ್ಯ ಅವರು ಸಾಹಿತಿ ಸಿದ್ದಯ್ಯ ಪುರಾಣಿಕ ರಚಿತ ಸಾಹಿತ್ಯದ ಸಾಲುಗಳನ್ನು ಹೇಳಿದರು. ಈ ಸಾಲುಗಳು ಗಮನ ಸೆಳೆದವು. ಹಾಗಾದರೆ ಈ ಸಾಲುಗಳನ್ನು ಹೇಳಲು ಕಾರಣ ಏನು ಎಂಬುದನ್ನು ಈ ಮುಂದೆ ನೋಡೋಣ.
ನಡೆಯದ ಹಾದಿಯಲ್ಲಿ ಎಡವಿದೆನೆಂದರೆ ಒಪ್ಪುವುದೆ ಅಯ್ಯಾ?
ಕಾಣದ ಮುಖದ ಕುಂದನೆಣಿಸಿದರೆ ಒಪ್ಪುವುದೆ ಅಯ್ಯಾ?
ಉಣ್ಣದ ಅಡಿಗೆಯ ರುಚಿಯ ಟೀಕಿಸಿದರೆ ಒಪ್ಪುವುದೆ ಅಯ್ಯಾ?
ನೋಡದುದನ್ನು ನೋಡಿದಂತೆ ವರ್ಣಿಸಿದರೆ ಒಪ್ಪುವುದೆ ಅಯ್ಯಾ?
-ಸಿದ್ದಯ್ಯ ಪುರಾಣಿಕ
ಈ ಸಾಲುಗಳ ಅರ್ಥ ಮತ್ತು ಮಹತ್ವ ಏನೆಂದರೆ, ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತದ್ದು. ಒಬ್ಬ ವ್ಯಕ್ತಿಯು ತಪ್ಪು ಮಾಡದಿದ್ದರೂ, ತಪ್ಪು ಮಾಡಿದ್ದಾರೆ ಎನ್ನುವುದು. ಅಡುಗೆಯನ್ನೇ ಸವಿಯದೆ ಚೆನ್ನಾಗಿಲ್ಲ ಎನ್ನುವುದು, ಅರ್ಥವಿಲ್ಲದೆ, ಸುಖಾಸುಮ್ಮನೆ ಟೀಕೆ, ಆರೋಪಗಳನ್ನು ಹೊರಿಸುವುದೂ ಇದರ ಅರ್ಥವಾಗಿದೆ.
ಬಜೆಟ್ ಮಂಡಿಸುವುದಕ್ಕೂ ಮುನ್ನ ತಮ್ಮ ವಿರುದ್ಧ ಕೇಳಿ ಬಂದಿದ್ದ ಟೀಕೆ, ಟಿಪ್ಪಣಿಗಳಿಗೆ ಸಿದ್ಧಯ್ಯ ಪುರಾಣಿಕ ರಚಿಸಿದ ಸಾಲುಗಳನ್ನು ಹೇಳುವ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ವಿರೋಧ ಪಕ್ಷದವರಿಗೆ ಈ ಮಾತಿನ ಮೂಲಕ ಹೇಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಮಾತು ಹೀಗಿತ್ತು
ನಾನು ಆಯವ್ಯಯ ಪ್ರಸ್ತಾವನೆ ಪ್ರಾರಂಭಿಸುವ ಮೊದಲು, ನಮ್ಮ ಐದು ಗ್ಯಾರಂಟಿಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು, ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಜನರಲ್ಲಿ ಗೊಂದಲ ಮೂಡಿಸುವುದು, ಇಂತಹ ಕೆಲಸ ಮಾಡುತ್ತಿರುವ ವಿರೋಧ ಪಕ್ಷದವರಿಗೆ ಒಂದೇ ಒಂದು ಮಾತು ಹೇಳಲು ಬಯಸುತ್ತೇನೆ. ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಒಮ್ಮೆ ನಮ್ಮ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ ಎಂದರು.
‘ಜನರ ವಿವೇಚನೆಗೆ ಅಪಮಾನ ಮಾಡಬೇಡಿ’
ತಾವು ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ; ಆದರೆ ಶ್ರೀಸಾಮಾನ್ಯರ ವಿವೇಚನೆಗೆ ಅಪಮಾನ ಮಾಡಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಜನರು ಬುದ್ಧಿವಂತರು. ಜನರು ಪ್ರಜ್ಞಾವಂತರು. ಇಂತಹ ತರ್ಕರಹಿತ ಆಲೋಚನೆಗಳನ್ನು ನಂಬುವುದಿಲ್ಲ. ವಾಸ್ತವವೆಂದರೆ, ಜನ ನಿಮ್ಮಿಂದ ಬೇಸತ್ತು ಇಷ್ಟೊಂದು ಭಾರಿ ಬಹುಮತದಿಂದ ನಮ್ಮನ್ನು ಆರಿಸಿ ವಿಧಾನ ಸೌಧಕ್ಕೆ ಕಳುಹಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿತು. ಈಗಾಗಲೇ ನಾವು ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವ ಮೂಲಕ ಅವರ ಕನಸುಗಳಿಗೆ ರೆಕ್ಕೆ ಮೂಡಿಸುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದರು.
ಆಗಸ್ಟ್ನಲ್ಲಿ ಗೃಹಲಕ್ಷ್ಮಿ ಜಾರಿ
ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ ತಿಂಗಳಿನಲ್ಲಿ ಜಾರಿಗೆ ತರುತ್ತೇವೆ. ಯುವನಿಧಿ ಯೋಜನೆಯು 2023ರಲ್ಲಿ ಪದವಿ ಪಡೆದ ಯುವಜನರಿಗಾಗಿ ಜಾರಿಗೆ ಬರಲಿದೆ. ಅನ್ನಭಾಗ್ಯದಡಿ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರದಿಂದ ಒದಗಿಸುತ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಒದಗಿಸುವ ಹೆಚ್ಚುವರಿ 5 ಕೆಜಿ ಸೇರಿದಂತೆ ಒಟ್ಟಾರೆ 10 ಕೆಜಿ ಆಹಾರ ಧಾನ್ಯವನ್ನು ಪ್ರತಿ ತಿಂಗಳು ವಿತರಿಸಲು ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.