logo
ಕನ್ನಡ ಸುದ್ದಿ  /  ಕರ್ನಾಟಕ  /  Beach Tourism: ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಯೋಜನೆ; ಬೀಚ್‌ಗಳ ಅಭಿವೃದ್ಧಿಗೆ ಕಾರ್ಯಪಡೆ

Beach Tourism: ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಯೋಜನೆ; ಬೀಚ್‌ಗಳ ಅಭಿವೃದ್ಧಿಗೆ ಕಾರ್ಯಪಡೆ

HT Kannada Desk HT Kannada

Jul 07, 2023 06:16 PM IST

google News

ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಯೋಜನೆಗಳ ಘೋಷಣೆ

    • Karnataka Budget 2023: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್‌ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗುವುದು ಹಾಗೂ ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆಯನ್ನು ತಯಾರಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಯೋಜನೆಗಳ ಘೋಷಣೆ
ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಯೋಜನೆಗಳ ಘೋಷಣೆ

ದಕ್ಷಿಣ ಕನ್ನಡ/ಉಡುಪಿ/ಉತ್ತರ ಕನ್ನಡ: ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಇಂದು ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಕರಾವಳಿಗೆ ಏನೇನು ಲಾಭಗಳಿವೆ?

ಸಿಎಂ ಅವರೇ ಹೇಳುವಂತೆ ‘ಶಕ್ತಿ’ ಯೋಜನೆಯಿಂದ ಟೂರಿಸಂ ಅವಕಾಶಗಳು ಹೆಚ್ಚಾಗಿವೆ. ಈಗಾಗಲೇ ಕರಾವಳಿಯ ಧಾರ್ಮಿಕ ತಾಣಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ, ಶಿರಸಿಗಳಿಗೆ ಮಹಿಳಾ ಪ್ರವಾಸಿಗರು ಜಾಸ್ತಿಯಾಗುತ್ತಿದ್ದಾರೆ. ಇದೀಗ ಈ ಜಾಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಬಜೆಟ್ ನಲ್ಲಿ ಪ್ರಸ್ತಾಪವಾಗಿದೆ.

ಬೀಚ್ ಪ್ರವಾಸೋದ್ಯಮಕ್ಕೆ ಕಾರ್ಯಪಡೆ:

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್‌ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗುವುದು ಹಾಗೂ ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆಯನ್ನು ತಯಾರಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿರುವುದು ಪ್ರಮುಖ ಅಂಶ.

ಸಸಿಹಿತ್ಲು ಕಡಲ ತೀರವನ್ನು ಅಂತಾರಾಷ್ಟ್ರೀಯ ಸರ್ಫಿಂಗ್‌ ತಾಣವಾಗಿ ಅಭಿವೃದ್ಧಿಗೊಳಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ..

ಅಲ್ಲದೆ, ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಯಾತ್ರಿನಿವಾಸ/ಡಾರ್ಮಿಟರಿಗಳನ್ನು ನಿರ್ಮಾಣ ಮಾಡುವುದರಿಂದ ಕರಾವಳಿಗೂ ಲಾಭವಾಗಲಿದೆ.

ಬೀಚ್ ಪ್ರವಾಸೋದ್ಯಮದಿಂದ ಏನು ಲಾಭ:

ಗೋವಾ ಮಾದರಿಯಲ್ಲಿ ಬೀಚ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ, ಕರಾವಳಿ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಶ್ರೀಮಂತವಾಗುತ್ತದೆ. ಪಾರಂಪರಿಕ ಬೀಚ್ ಗಳಲ್ಲದೆ, ಹೊಸ ಸಾಧ್ಯತೆಗಳೊಂದಿಗೆ ಸುರಕ್ಷಿತವಾದ ಕಡಲ ಕಿನಾರೆಯನ್ನು ಶೋಧಿಸಿ, ಅಲ್ಲಿ ಬೇಕಾದ ಮೂಲಸೌಕರ್ಯಗಳನ್ನು ಉತ್ತೇಜಿಸುವುದರ ಮೂಲಕ ಗರಿಷ್ಠ ಮಟ್ಟಿನ ಪ್ರವಾಸಿಗರನ್ನು ಬೇಸಗೆ ಕಾಲದಲ್ಲಿ ಆಕರ್ಷಿಸಬಹುದು. ಹೋಟೆಲ್ ನಿಂದ ಹಿಡಿದು ಸಣ್ಣ ಆಟಿಕೆಗಳನ್ನು ಮಾರುವವರೆಗೆ ಇದರಿಂದ ಲಾಭವಾಗುತ್ತದೆ. ಜೊತೆಗೆ ಸುರಕ್ಷಿತ ಬೀಚ್ ಗಳಾದ ಪಡುಬಿದ್ರಿಯಂತೆ ಎಲ್ಲ ಬೀಚ್ ಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಾಕಷ್ಟು ಬಾರಿ ಚರ್ಚೆಗಳು ನಡೆದಿದ್ದವು. ಬೀಚ್ ಪ್ರವಾಸೋದ್ಯಮಕ್ಕೆ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿರುವುದು ಈ ಎಲ್ಲ ಕನಸುಗಳು ಚಿಗುರೊಡೆಯಲು ಕಾರಣವಾಗಿದೆ. ಅದರಲ್ಲೂ ಕರ್ನಾಟಕ ಕರಾವಳಿಯ ಬೀಚ್ ಗಳಾದ ಮಂಗಳೂರು, ಮಲ್ಪೆ, ಪಡುಬಿದ್ರಿ, ಕಾಪು, ಕುಂದಾಪುರ, ಮುರುಡೇಶ್ವರ, ಗೋಕರ್ಣ ಮತ್ತು ಕಾರವಾರಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸುವ ಕುರಿತು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪಡೆ ನಿರ್ಮಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ