Karnataka Budget: ಮನೆ ಯಜಮಾನಿಗೆ 2 ಸಾವಿರ, ಸರ್ಕಾರದ ಖಜಾನೆಗೆ ಬೀಳಬಹುದೇ ಖರ್ಚಿನ ಪ್ರಹಾರ; ಗೃಹಲಕ್ಷ್ಮಿ ಯೋಜನೆಯ ಸವಾಲುಗಳ ವಿವರ
Jul 04, 2023 06:27 PM IST
ಬಜೆಟ್ ಮತ್ತು ಗೃಹಲಕ್ಷ್ಮೀ ಯೋಜನೆ
- Gruha Lakshmi Scheme: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ (Congress Guarantee Scheme)ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ(Gruha Lakshmi Scheme) ಗೆ ರಾಜ್ಯ ಬಜೆಟ್‌ನಲ್ಲಿ ಎಷ್ಟು ಮೊತ್ತವನ್ನು ಸಿಗಬಹುದು, ರಾಜ್ಯದ ಬೊಕ್ಕಸದ ಮೇಲೆ ಇದು ಯಾವ ರೀತಿ ಪರಿಣಾಮ ಬೀರಲಿದೆ, ಯೋಜನೆ ಅನುಷ್ಠಾನದ ಸವಾಲುಗಳು… ಈ ಕುರಿತ ವಿಶ್ಲೇಷಣಾ ಬರಹ ಇಲ್ಲಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಮಂಡಲ ಅಧಿವೇಶನ ಜುಲೈ 3 ರಿಂದ ಆರಂಭವಾಗಿದೆ. ಜುಲೈ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಅವರು ಮಂಡಿಸಲಿರುವುದು 14ನೇ ಬಜೆಟ್.
2023ರ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಹಲವು ಗ್ಯಾರಂಟಿಗಳನ್ನು ಘೋಷಿಸಿತ್ತು. ಅಲ್ಲದೆ ಇದು ಪಕ್ಷದ ಅಮೋಘ ಗೆಲುವಿಗೂ ಕಾರಣವಾಗಿತ್ತು. ಚುನಾವಣೆಯಲ್ಲಿ ಗೆದ್ದ ಬಳಿಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪೋಷಿಸಿದ್ದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಜನರ ಮೆಚ್ಚುಗೆ ಗಳಿಸಿತ್ತು. ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿಯೋಜನೆಯಂತಹ ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿದ ವಿಶೇಷ ಯೋಜನೆಗಳಾಗಿವೆ.
14ನೇ ಬಜೆಟ್ ಮಂಡಲಿಸಲಿರುವ ಸಿದ್ದರಾಮಯ್ಯ ಅವರಿಗೆ ಈ ಬಾರಿಯ ಬಜೆಟ್ ನಿಜಕ್ಕೂ ವಿಶೇಷ ಎನ್ನಬಹುದು. ಹಲವು ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ ಬಳಿಕ ಅದಕ್ಕಾಗಿ ಬಜೆಟ್‌ನಲ್ಲಿ ನಿರ್ದಿಷ್ಟ ಮೊತ್ತವನ್ನು ತೆಗೆದಿರಿಸಬೇಕು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿಗೆ 60,000 ಕೋಟಿಗೂ ಹೆಚ್ಚು ಹಣ ಬೇಕು ಎಂದು ಅಂದಾಜಿಸಲಾಗಿದೆ. ಇದು ಸರ್ಕಾರದ ಖಜಾನೆ ಹೊರೆಯಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಈ ಬಜೆಟ್ ಹೊರೆಯನ್ನು ಯಾವ ರೀತಿ ವಿಂಗಡಿಸಿ ಭಾರ ಇಳಿಸಿಕೊಳ್ಳಬಹುದು ಎಂಬುದನ್ನು ಜುಲೈ 7ರವರೆಗೆ ಕಾದು ನೋಡಬೇಕಿದೆ.
ಗೃಹಲಕ್ಷ್ಮಿ ಯೋಜನೆ ಅನುಷ್ಠಾನ
ರಾಜ್ಯದ ಹೆಣ್ಣುಮಕ್ಕಳ ಕಣ್ಣೊರೆಸುವ ಭಾಗ್ಯ ಎನ್ನಬಹುದಾದ ಗೃಹಲಕ್ಷ್ಮಿ ಯೋಜನೆ ಈಗಾಗಲೇ ಜಾರಿಯಾಗಿದೆ. ಅರ್ಜಿ ಸಲ್ಲಿಕೆ ಕೂಡ ಆರಂಭವಾಗಿದೆ. ಮನೆಯೊಡತಿಗೆ ಪ್ರತಿ ತಿಂಗಳು 2000 ನೀಡುವ ಈ ಯೋಜನೆಯು ಹಲವು ಗೊಂದಲಗಳ ನಡುವೆಯು ಯಶಸ್ವಿಯಾಗಿ ಜಾರಿಯಾಗಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಹೆಣ್ಣುಮಕ್ಕಳ ಪಾಲಿಗೆ ವರ ಅಂತಲೂ ಹೇಳಬಹುದು. ಈ ಯೋಜನೆಗೆ ಸುಮಾರು 32,000 ಕೋಟಿ ಬೇಕಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಯೋಜನೆಯನ್ನು ಪ್ರತಿಯೊಬ್ಬರಿಗೂ ಅನ್ವಯಿಸಿದರೆ ದೊಡ್ಡ ಪ್ರಮಾಣದಲ್ಲಿ ಹಣ ಬೇಕಾಗುತ್ತದೆ, ಆ ಕಾರಣಕ್ಕೆ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಮಾತ್ರ ನೀಡಬೇಕು ಎಂದು ಯೋಜನೆ ಜಾರಿಗೂ ಮೊದಲು ಚರ್ಚಿಸಲಾಗಿತ್ತು. ಅಲ್ಲದೆ ಕೆಲ ಷರತ್ತುಗಳನ್ನು ವಿಧಿಸಿ ನಂತರ ಜಾರಿಗೊಳಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿತ್ತು. ಆದರೆ ಇದೆಲ್ಲವನ್ನೂ ಮೀರಿ ಸಿದ್ದರಾಮಯ್ಯ ಸರ್ಕಾರ ಎಪಿಎಲ್ ಹಾಗೂ ಬಿಪಿಎಲ್ ಎಲ್ಲರಿಗೂ 2000 ರೂ ನೀಡುವ ನಿರ್ಧಾರ ಮಾಡಿದೆ.
ಬಜೆಟ್ ಮೊತ್ತದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಎಷ್ಟು ಮೀಸಲಿರಿಸಬಹುದು?
ಈ ಬಾರಿ ಸಿಎಂ ಸಿದ್ದರಾಮಯ್ಯ 3.35 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಫೆಬ್ರುವರಿಯಲ್ಲಿ ಬಸವರಾಜ ಬೊಮ್ಮಾಯಿ 3.09 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದರು. ಅದಕ್ಕಿಂತ ಸಿದ್ದರಾಮಯ್ಯ ಬಜೆಟ್ ಶೇ 8 ರಷ್ಟು ದೊಡ್ಡ ಮೊತ್ತದ್ದಾಗಿದೆ.
ಈ ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗೆಂದೇ 35,000 ಕೋಟಿ ಮೀಸಲಿಟ್ಟರೆ ಸರ್ಕಾರದ ಮೇಲೆ ಸಾಕಷ್ಟು ಹೊರೆಯಾಗುವುದು ಖಂಡಿತ ಎನ್ನುತ್ತಾರೆ ವಿಶ್ಲೇಷಕರು. ಅದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಸರ್ಕಾರ ತೆಗೆದುಕೊಳ್ಳಲೇಬೇಕಿದೆ. ಆದರೆ ಇದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ದರಾಮಯ್ಯ ಸರ್ಕಾರ ಸೂಕ್ತ ತಯಾರಿಯನ್ನು ಮಾಡಿಕೊಂಡಂತಿದೆ.
ಹಣಕಾಸು ಇಲಾಖೆಯ ಮೂಲಗಳ ಪ್ರಕಾರ ಕಾಂಗ್ರೆಸ್ ಗ್ಯಾರಂಟಿಗಳ ಸರ್ಮಪಕ ಅನುಷ್ಠಾನಕ್ಕೆ ರಾಜ್ಯ ಬಜೆಟ್‌ನ ಶೇ 50 ರಷ್ಟು ಹಣ ಬೇಕು. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಮೊದಲ ಸ್ಥಾನದಲ್ಲಿದೆ. ಆ ಕಾರಣಕ್ಕೆ ಸರ್ಕಾರವು ಆದಾಯ ಹೆಚ್ಚಳವನ್ನು ನಿರೀಕ್ಷೆ ಮಾಡುತ್ತಿದೆ. ಆದಾಯದಲ್ಲಿನ ಹೆಚ್ಚಳವು ಬಜೆಟ್‌ನ ಉಳಿದ ಮೊತ್ತವನ್ನು ವ್ಯವಸ್ಥಿತಗೊಳಿಸಲಿದೆʼ ಎಂದು ತಜ್ಞರು ಹೇಳುತ್ತಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹೊಂದಿಕೆಯಾಗುವ ಕೆಲವು ಯೋಜನೆಗಳನ್ನು ನಿಲ್ಲಿಸುವ ಮೂಲಕ ಹಣಕಾಸಿನ ನಿರ್ವಹಣೆಯನ್ನು ಸರಿದೂಗಿಸುವ ಯೋಚನೆಯು ಸಿದ್ದರಾಮಯ್ಯ ಸರ್ಕಾರದ್ದು ಎಂದು ಹೇಳಲಾಗುತ್ತಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಮಂಡಿಸಿದ ಕ್ಷೇತ್ರವಾರು ಬಜೆಟ್‌ಗಿಂತ ಭಿನ್ನವಾಗಿ, ಸಿದ್ದರಾಮಯ್ಯ ಅವರು ಅದನ್ನು ಇಲಾಖೆವಾರು ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2023-24ಕ್ಕೆ ಆದಾಯ ವೆಚ್ಚ ಸುಮಾರು 2.25 ಲಕ್ಷ ಕೋಟಿ ರೂ. ಇದರಲ್ಲಿ 1.34 ಲಕ್ಷ ಕೋಟಿ ರೂ.ಗಳ ಕಮಿಟೆಡ್ ಎಕ್ಸ್‌ಪೆಂಡಿಚರ್ ಆಗಿದ್ದು, ಇದರಲ್ಲಿ ರೂ.68,491 ಕೋಟಿ ವೇತನ, ರೂ.26,980 ಕೋಟಿ ಪಿಂಚಣಿ, ರೂ.34,023 ಕೋಟಿ ಬಡ್ಡಿ ಪಾವತಿ ಮತ್ತು ರೂ.5,382 ಕೋಟಿ ಆಡಳಿತಾತ್ಮಕ ವೆಚ್ಚಗಳು. ಈ ವೆಚ್ಚವು ರಾಜ್ಯ ಸರ್ಕಾರದಿಂದ ಉತ್ಪತ್ತಿಯಾಗುವ ಆದಾಯದ ಶೇಕಡಾ 60 ರಷ್ಟಿದೆ. ಇದರೊಂದಿಗೆ ಹೊಸ ಯೋಜನೆ ರಾಜ್ಯದ ಆದಾಯದ ವೆಚ್ಚವನ್ನು ಹೆಚ್ಚಿಸುತ್ತವೆ. ಹಾಗಾಗಿ ಈ ಮೊತ್ತದಲ್ಲಿ ಉಳಿದ ಗ್ಯಾರಂಟಿ ಯೋಜನೆಗಳಂತೆ ಗೃಹಲಕ್ಷ್ಮೀ ಯೋಜನೆಗೂ ಹಣ ಹೊಂದಿಸಬಹುದು ಎನ್ನಲಾಗುತ್ತಿದೆ.
ಬೇರೆ ರಾಜ್ಯದಲ್ಲಿ ಅನುಷ್ಠಾನ ಸಾಧ್ಯತೆ
ಮನೆಯೊಡತಿಗೆ ತಿಂಗಳಿಗೆ 2000 ನೀಡುವ ಗೃಹಲಕ್ಷ್ಮಿ ಯೋಜನೆ ಬೇರೆ ರಾಜ್ಯಗಳಲ್ಲಿ ಇನ್ನು ಜಾರಿಯಾಗಿಲ್ಲ. ಆದರೆ ಕರ್ನಾಟಕದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡು ಬಜೆಟ್‌ನಲ್ಲಿ ಇದಕ್ಕೆ ನೀಡಿದ ಪಾಲು ಸರಿದೂಗಿಸಿ ಸರ್ಕಾರಕ್ಕೆ ಇದರಿಂದ ಯಾವುದೇ ನಷ್ಟವಾಗದೇ ಇದ್ದರೆ ಇತರ ರಾಜ್ಯಗಳನ್ನು ಇದನ್ನು ಅನುಕರಿಸುವುದು ಮಾತ್ರ ಖಂಡಿತ ಎನ್ನುತ್ತಿದ್ದಾರೆ ವಿಶ್ಲೇಷಕರು. ಅಲ್ಲದೆ ಇಂತಹ ಯೋಜನೆ ಮಹಿಳಾ ವೋಟ್ ಬ್ಯಾಂಕ್ ಅನ್ನು ತಮ್ಮತ್ತ ಸೆಳೆಯಲು ಒಂದು ಉತ್ತಮ ಮಾರ್ಗ ಎನ್ನುವುದು ಹಲವರ ಅಭಿಪ್ರಾಯ.
ಸದ್ಯದ ಸ್ಥಿತಿಗತಿ
ಗೃಹಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಕಾರಣ ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸರ್ಕಾರವು ಎಲ್ಲಾ ರೀತಿ ಕ್ರಮಗಳನ್ನು ಕೈಗೊಂಡಿರುತ್ತದೆ. ಅಲ್ಲದೆ ಬಜೆಟ್‌ನಲ್ಲಿ ಇದಕ್ಕೆಂದು ಇಂತಿಷ್ಟು ಹಣವನ್ನು ಮೀಸಲಿರಿಸುತ್ತದೆ ಎನ್ನುವುದಂತೂ ಪಕ್ಕಾ. ಆದರೆ ಕೆಲವರು ಈ ವರ್ಷ ಈ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಬೊಕ್ಕಸದಲ್ಲಿ ಹಣವಿದೆ, ಆದರೆ ಮುಂದಿನ ವರ್ಷದ ಕಥೆಯೇನು? ಸರ್ಕಾರದ ಖಜಾನೆ ತುಂಬಿದರಷ್ಟೇ ಯೋಜನೆಗಳು ಮುಂದುವರಿಯಲು ಸಾಧ್ಯ, ಇಲ್ಲದಿದ್ದರೆ ಈ ವರ್ಷಕ್ಕೆ ಯೋಜನೆ ಅಂತ್ಯವಾದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ.