ಕರ್ನಾಟಕ ಬಜೆಟ್ 2024; ಮುಂದುವರಿಯಲಿದೆ ಶಕ್ತಿ ಯೋಜನೆ, 4500 ಕೋಟಿ ರೂಪಾಯಿ ಅನುದಾನದ ನಿರೀಕ್ಷೆ
Feb 14, 2024 05:04 AM IST
ಕರ್ನಾಟಕ ಬಜೆಟ್ 2024-25 ಮಂಡನೆಗೆ ದಿನಗಣನೆ ಶುರುವಾಗಿದೆ. ಈ ಸಲದ ಬಜೆಟ್‌ನಲ್ಲೂ ಶಕ್ತಿ ಯೋಜನೆ ಮುಂದುವರಿಯಲಿದೆ. 4500 ಕೋಟಿ ರೂಪಾಯಿ ಅನುದಾನದ ನಿರೀಕ್ಷೆ ಮಾಡಲಾಗುತ್ತಿದೆ.
ಕರ್ನಾಟಕ ಬಜೆಟ್ 2024: ಅಭಾದಿತವಾಗಿ ಮುಂದುವರಿಯಲಿದೆ ಶಕ್ತಿ ಯೋಜನೆ. ಮಾಸಿಕ 18-20 ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಸಾರಿಗೆ ನಿಗಮಗಳಿಗೆ 180-200 ಕೋಟಿ ರೂ ಆದಾಯ, 2024-25 ನೇ ಸಾಲಿನಲ್ಲಿ 4500 ಕೋಟಿ ರೂಪಾಯಿ ಅನುದಾನ ನಿರೀಕ್ಷೆ (ವಿಶೇಷ ವರದಿ-ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ ಜಾರಿಯಾಗಿದ್ದು ಜುಲೈ 11 ರಂದು. ಕಾಂಗ್ರೆಸ್ ಪಕ್ಷ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಇದೂ ಒಂದಾಗಿತ್ತು. ಮಹಿಳೆಯರಿಗಾಗಿಯೇ ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ.
ಯೋಜನೆ ಜಾರಿಯಾದಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆಯ ಜೊತೆಗೆ ಬಸ್ಸಿನಲ್ಲಿ ಪ್ರಯಾಣಿಸುವ ಪುರುಷರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ಸರ್ಕಾರದ ಆದಾಯವೂ ಹೆಚ್ಚಳ ಕಂಡಿದೆ. ಈ ಯೋಜನೆಯಡಿಯಲ್ಲಿ ಈಗ ದಿನವೊಂದಕ್ಕೆ ಸುಮಾರು 50-60ಲಕ್ಷದಷ್ಟು ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇವರ ಪ್ರಯಾಣದ ಟಿಕೆಟ್ ಮೌಲ್ಯ ಅಂದಾಜು 6-8 ಕೋಟಿ ರೂಪಾಯಿಗಳಾಗುತ್ತವೆ.
ಯೋಜನೆ ಜಾರಿಗೆ ಮುನ್ನಾ, ಅಂದಾಜು 84.5 ಲಕ್ಷ ಜನ ಸಾರಿಗೆ ಬಸ್‌ಗಳಲ್ಲಿ ಪ್ರತಿ ನಿತ್ಯ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ಬಳಿಕ ಈಗ ದಿನವೊಂದಕ್ಕೆ ಸುಮಾರು 1.06 ಕೋಟಿಯಷ್ಟು ಜನರು ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ, ಶೇ 55ರಷ್ಟು ಮಹಿಳೆಯರು ಮತ್ತು ಶೇ 45ರಷ್ಟು ಪುರುಷರು ಸೇರಿದ್ದಾರೆ.
ಜೂನ್ 15 ರಿಂದ ನವಂಬರ್ 15ರ ವರೆಗೆ 95.5 ಕೋಟಿ ಮಹಿಳಾ ಪ್ರಯಾಣಿಕರು, 74.5 ಕೋಟಿ ಪುರುಷ ಸೇರಿ ಒಟ್ಟು 170 ಕೋಟಿ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇದರಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೊತ್ತ 2,286 ರೂಪಾಯಿಗಳಷ್ಟು ಆಗಿದೆ.
ಜೂನ್ 11ರಿಂದ ನವೆಂಬರ್ 22 ರವರೆಗೆ
ಜೂನ್ 11 ರಿಂದ ನವೆಂಬರ್ 22 ರವರೆಗೆ ಬಿಡುಗಡೆಯಾದ ಯೋಜನೆಯಡಿ ನೀಡಲಾದ ಒಟ್ಟು ಟಿಕೆಟ್ ಮೌಲ್ಯ (ಶೂನ್ಯ ಟಿಕೆಟ್‌ಗಳು) 2,397 ಕೋಟಿ ರೂ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 32.69 ಕೋಟಿ ರೂ. ಲಾಭ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದು, 30.12 ಕೋಟಿ ಮಹಿಳಾ ಪ್ರಯಾಣಿಕರೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಎರಡನೇ ಸ್ಥಾನದಲ್ಲಿದೆ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 23.37 ಕೋಟಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 14.28 ಕೋಟಿ ಇತ್ತು.
ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯದಲ್ಲಿ ಕೆಎಸ್‌ಆರ್‌ಟಿಸಿ 900.29 ಕೋಟಿ ರೂ.ಗಳೊಂದಿಗೆ ಮೊದಲ ಸ್ಥಾನದಲ್ಲಿದೆ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 600.69 ಕೋಟಿ ರೂ. ಕೆಕೆಆರ್‌ಟಿಸಿಯ ಟಿಕೆಟ್ ಮೌಲ್ಯ 475.98 ಕೋಟಿ ರೂ. ಮತ್ತು ಬಿಎಂಟಿಸಿ 420.82 ಕೋಟಿ ರೂ ಆಗಿದೆ.
100 ದಿನ ತುಂಬಿದಾಗ...
ಈ ಯೋಜನೆಗೆ ಸೆಪ್ಟಂಬರ್ 18 ಕ್ಕೆ 100 ದಿನಗಳು ತುಂಬಿದಾಗ ಈ ಅವಧಿಯಲ್ಲಿ ಒಟ್ಟು 64 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದು, ಇದಕ್ಕಾಗಿ ರೂ. 1,442 ಕೋಟಿ ವೆಚ್ಚವಾಗಿದೆ. 100 ದಿನಗಳಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ 18.5 ಕೋಟಿ ಮಹಿಳಾ ಪ್ರಯಾಣಿಕರು, ಬಿಎಂಟಿಸಿಯಲ್ಲಿ 21 ಕೋಟಿ,
ಕಲ್ಯಾಣ ಕರ್ನಾಟಕ ಸಂಸ್ಥೆಯಲ್ಲಿ 8.5 ಕೋಟಿ ಮತ್ತು ನೈರುತ್ಯ ಸಾರಿಗೆಯಲ್ಲಿ 14.5 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಯಡಿ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ 100 ಕೋಟಿ ದಾಟಿದೆ.
ರಾಜ್ಯದ ವಿವಿಧ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಕುಟುಂಬ ಸಹಿತ ಜನರು ಪ್ರಯಾಣ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪುರುಷರ ಬಸ್ ಪ್ರಯಾಣ ಪ್ರಮಾಣವೂ ಏರಿಕೆಯಾಗಿದೆ. ಜೊತೆಗೆ ವಿವಾಹ, ನಾಮಕರಣ ಸೇರಿದಂತೆ ಕೌಟುಂಬಿಕ ಕಾರ್ಯಕ್ರಮಗಳಿಗೆ ಜನರು ಬಸ್ ಮೂಲಕವೇ ಪ್ರಯಾಣ ಮಾಡಲು ಆರಂಭಿಸಿದ್ದಾರೆ.
ಒಂದೆರಡು ಕಿಲೋಮೀಟರ್ ದೂರಕ್ಕೆ ನಡೆದುಕೊಂಡೇ ಸಾಗುತ್ತಿದ್ದ ಗಾರ್ಮೆಂಟ್ಸ್ ಮಹಿಳಾ ನೌಕರರು, ಮಹಿಳಾ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿ ಮಹಿಳೆಯರು ಬಸ್‌ಗಳಲ್ಲಿ ಸಂಚರಿಸಲು ಆರಂಭಿಸಿದ್ದಾರೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ಒಟ್ಟು 24,352 ಬಸ್‌ಗಳಿದ್ದು, 22,017 ಬಸ್ ಗಳು ಚಾಲನೆಯಲ್ಲಿದೆ. ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, 5000 ಬಸ್ಸುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈಗಾಗಲೇ ಬಸ್ ಖರೀದಿಗೆ ಚಾಲನೆ ದೊರೆತಿದೆ. ಈ ಯೋಜನೆಗೆ 2024-2 5ರಲ್ಲಿ ವಾರ್ಷಿಕ 4000-4500 ಕೋಟಿ ರೂಪಾಯಿ ವೆಚ್ಚ ತಗುಲಬಹುದು ಎಂದು ನಿರೀಕ್ಷಿಸಲಾಗಿದೆ. ಸಹಜವಾಗಿಯೇ ಬಜೆಟ್ ನಲ್ಲಿ ಅನುದಾನ ಲಭ್ಯವಾಗಲಿದೆ. 2023ರ ಜೂನ್ ತಿಂಗಳಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆತಿದ್ದು, ಈ ಆರ್ಥಿಕ ವರ್ಷದಲ್ಲಿ 3000-3200 ಕೋಟಿ ರೂಪಾಯಿ ಖರ್ಚು ತಗುಲುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.
ಆರಂಭದಲ್ಲಿ ಉಚಿತ ಎಂದು ಪುಣ್ಯಕ್ಷೇತ್ರ, ಶುಭ ಸಮಾರಂಭ ಎಂದು ಮಹಿಳೆಯರು ಪ್ರಯಾಣ ಮಾಡಿರಬಹುದು. ಆದರೆ ವರ್ಷವಿಡೀ ಬಸ್ ನಲ್ಲಿ ಕಾಲ ಕಳೆದರೆ ಜೀವನ ನಡೆಯುವುದಿಲ್ಲ. ಆದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ
(ವಿಶೇಷ ವರದಿ-ಎಚ್. ಮಾರುತಿ, ಬೆಂಗಳೂರು)
(This copy first appeared in Hindustan Times Kannada website. To read more like this please logon to kannada.hindustantime.com)