logo
ಕನ್ನಡ ಸುದ್ದಿ  /  ಕರ್ನಾಟಕ  /  Sandur Assembly Elections: ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಲದ ಎದುರು ಮೊದಲ ಬಾರಿಗೆ ಕಮಲ ಅರಳುವುದೇ; ಹೇಗಿದೆ ಕಣ ಚಿತ್ರಣ

Sandur Assembly Elections: ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಲದ ಎದುರು ಮೊದಲ ಬಾರಿಗೆ ಕಮಲ ಅರಳುವುದೇ; ಹೇಗಿದೆ ಕಣ ಚಿತ್ರಣ

Umesha Bhatta P H HT Kannada

Oct 31, 2024 04:30 PM IST

google News

ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಅನ್ನಪೂರ್ಣ ತುಕಾರಾಂ, ಬಿಜೆಪಿಯ ಬಂಗಾರು ಹನುಮಂತು ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

  • Sandur assembly elections: ಸಂಡೂರು ಕ್ಷೇತ್ರದಿಂದ ತುಕಾರಾಂ ತಮ್ಮ ಪತ್ನಿಯನ್ನು ಆರಿಸಿ ವಿಧಾನಸಭೆಗೆ ಕಳುಹಿಸುವರೇ ? ಚೊಚ್ಚಲ ಗೆಲುವನ್ನು ದಾಖಲಿಸಲು ಬಿಜೆಪಿಗೆ ಸಾಧ್ಯವೇ?; ಕೈ, ಕಮಲಕ್ಕಿರುವ ಪ್ಲಸ್‌, ಮೈನಸ್‌ ಪಾಯಿಂಟ್‌ ಗಳೇನು? ಇಲ್ಲಿವೆ ಕುತೂಹಲಕಾರಿ ಅಂಶಗಳು.

    ವಿಶ್ಲೇಷಣೆ: ಎಚ್‌.ಮಾರುತಿ.ಬೆಂಗಳೂರು

ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಅನ್ನಪೂರ್ಣ ತುಕಾರಾಂ, ಬಿಜೆಪಿಯ ಬಂಗಾರು ಹನುಮಂತು ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಅನ್ನಪೂರ್ಣ ತುಕಾರಾಂ, ಬಿಜೆಪಿಯ ಬಂಗಾರು ಹನುಮಂತು ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ಎಸ್‌ ಟಿ ಮೀಸಲು ಕ್ಷೇತ್ರದ ಉಪ ಚುನಾವಣೆಗೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಈ ಕ್ಷೇತ್ರದ ಶಾಸಕ ಇ.ತುಕಾರಾಂ ಅವರು ಬಳ್ಳಾರಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ. 1985ರಲ್ಲಿ ಒಮ್ಮೆ ಮಾತ್ರ ಸಿಪಿಎಂ ಅಭ್ಯರ್ಥಿ ಯು. ಸಭಾಪತಿ ಇಲ್ಲಿಂದ ಆಯ್ಕೆಯಾಗಿದ್ದರು. 2004ರಲ್ಲಿ ಜೆಡಿಎಸ್‌ ಅಭ್ಯರ್ಥಿ ಸಂತೋಷ್‌ ಲಾಡ್‌ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಉಳಿದಂತೆ ಈ ಕ್ಷೇತ್ರ ಘೋರ್ಪಡೆ ಕುಟುಂಬವೂ ಸೇರಿ ಕಾಂಗ್ರೆಸ್‌ ನ ಭದ್ರಕೋಟೆಯಾಗಿ ಉಳಿದಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರತಿ ಚುನಾವಣೆಯಲ್ಲೂ ಹವಣಿಸುತ್ತಲೇ ಇದೆ. ಈವರೆಗೂ ಫಲ ಸಿಕ್ಕಿಲ್ಲ. ಕಾಂಗ್ರೆಸ್‌ ಬಲವಿರುವ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಬಹುದೇ ಎನ್ನುವ ಚರ್ಚೆ ಕ್ಷೇತ್ರಾದ್ಯಂತ ನಡೆದಿದೆ.

ನಿರೀಕ್ಷೆಯಂತೆ ಕಾಂಗ್ರೆಸ್‌ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಮತ್ತು ಬಿಜೆಪಿ ಬಂಗಾರು ಹನುಮಂತು ಅವರಿಗೆ ಟಿಕೆಟ್‌ ಘೋಷಿಸಿದ್ದು ಅಭ್ಯರ್ಥಿಗಳ ಪ್ರಚಾರ ಜೋರಿದೆ

ಕಾಂಗ್ರೆಸ್‌ ಭದ್ರಕೋಟೆ

ಈ ಕ್ಷೇತ್ರ ಕಾಂಗ್ರೆಸ್‌ ನ ಭದ್ರಕೋಟೆ ಎನ್ನಲು ಹಲವು ಕಾರಣಗಳಿವೆ. ಸಂಡೂರಿನಿಂದ ಇ.ತುಕಾರಾಂ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ನ ಬಹುತೇಕ ಸದಸ್ಯರು ಕಾಂಗ್ರೆಸ್‌ ನಿಂದ ಆರಿಸಿ ಬಂದಿದ್ದಾರೆ. ಗ್ರಾಮ ಪಂಚಾಯತ್‌ ಗಳಲ್ಲೂ ಕೈ ಆಡಳಿತವೇ ವಿಜೃಂಭಿಸುತ್ತಿದೆ.

ರಾಜವಂಶಸ್ಥ ಘೋರ್ಪಡೆಯವರ ಕಚೇರಿಯಲ್ಲಿ ನೌಕರರಾಗಿದ್ದ ಸಂತೋಷ್‌ ಲಾಡ್‌ ಅವರು ಘೋರ್ಪಡೆಯವರನ್ನೇ ಪರಾಭವಗೊಳಿಸಿ ಆಯ್ಕೆಯಾಗಿದ್ದರು. ಅವರು ಈ ಸರಕಾರದಲ್ಲಿ ಸಚಿರಾಗಿದ್ದಾರೆ. ಲಾಡ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತುಕಾರಾಂ ಅವರನ್ನೂ ಅಯ್ಕೆ ಮಾಡಿರುವುದು ಈ ಕ್ಷೇತ್ರದ ಮತದಾರರ ವಿಶೇಷ. ಈ ಬಾರಿ ಬಿಜೆಪಿ ಪ್ರಬಲ ಸ್ಪರ್ಧೆಯೊಡ್ಡಿದ್ದು, ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಅನುದಾನ

ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಸಿದ್ದರಾಮಯ್ಯ ಸಂಡೂರಿನಲ್ಲಿ ನೂರಾರು ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಪ್ರಚಾರ ಆರಂಭಿಸಿದ್ದರು. ಇಲ್ಲಿ ಒಂದು ಬಾರಿಯೂ ಗೆಲ್ಲಲಾಗದಿದ್ದರೂ ಕಾಂಗ್ರೆಸ್‌ ಗಿಂತ ಬಿಜೆಪಿಯಿಂದಲೇ ಡಜನ್‌ ಗೂ ಹೆಚ್ಚು ಆಕಾಂಕ್ಷಿಗಳಿದ್ದರು. ಶ್ರೀರಾಮುಲು, ಮಾಜಿ ಸಂಸದ ವೈ. ದೇವೇಂದ್ರಪ್ಪ, ಕೆ.ಎಸ್.‌ ದಿವಾಕರ್‌, ಬಂಗಾರು ಹನುಮಂತು, ಡಿ.ಪ್ರಹ್ಲಾದ್‌, ತೋರಂಗಲ್‌ ರಾಮಕೃಷ್ಣ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಹೈಕಮಾಂಡ್ ಬಂಗಾರು ಹನುಮಂತು ಅವರಿಗೆ ಮಣೆ ಹಾಕಿದೆ.

ಸಂಡೂರು ಕ್ಷೇತ್ರದಲ್ಲಿ 1,18,279 ಮಹಿಳಾ 1,17,739 ಪುರುಷ ಸೇರಿ ಒಟ್ಟು 2,36,047 ಮತದಾರರಿದ್ದಾರೆ. ಎಸ್‌ ಸಿ ಸಮುದಾಯದ 41,676, ಎಸ್‌ ಟಿ ಸಮುದಾಯದ 59,312, ಲಿಂಗಾಯತ ಸಮುದಾಯದ 30,024, 24,701 ‌ಕುರುಬ, 24,588 ಮುಸ್ಲಿಂ, ಹಿಂದುಳಿದ ವರ್ಗಗಳ 41,506 ಇತರೆ ಸಮುದಾಯಗಳ 15,000 ಮತದಾರರಿದ್ದಾರೆ. ಸುಮಾರು 1.50 ಲಕ್ಷದಷ್ಟು ಗ್ರಾಮೀಣ ಮತದಾರರಿದ್ದು ಇವರ ಒಲವು ಯಾರ ಕಡೆಗೆ ಎನ್ನುವುದ ನಿಗೂಢವಾಗಿದೆ. ಒಳ ಮೀಸಲಾತಿಗಾಗಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿರುವುದು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆ ವರದಾನವಾಗಲೂಬಹುದು.

ಮೀಸಲು ಕ್ಷೇತ್ರವನ್ನು ಗೆಲ್ಲದಿದ್ದರೆ ಅಹಿಂದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನೆಡೆಯಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಅವರು ಈ ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲು ಎಲ್ಲ ತಂತ್ರಗಳನ್ನು ಅನುಸರಿಸಲಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ.

ಬಿಜೆಪಿ ಸತತ ಪ್ರಯತ್ನ

ಬಿಜೆಪಿ ಈ ಬಾರಿ ಚೊಚ್ಚಲ ಗೆಲುವು ದಾಖಲಿಸಲು ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್‌ ಸರ್ಕಾರದ ವಾಲ್ಮೀಕಿ ಹಗರಣ, ವಕ್ಫ್‌ ಆಸ್ತಿ ವಿವಾದ, ಮುಡಾ ಹಗರಣಗಳನ್ನು ಪ್ರಸ್ತಾಪಿಸುತ್ತಾ ಮತದಾರರನ್ನು ಓಲೈಸಲು ಹವಣಿಸುತ್ತಿದೆ. ಬಿ.ವೈ.ವಿಜಯೇಂದ್ರ ಗೆಲುವಿಗಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ ಬಿಜೆಪಿಯ ಬಣ ರಾಜಕೀಯ ಗೆಲುವಿಗೆ ತೊಡಕಾಗಬಹುದು ಎಂದು ಭಾವಿಸಲಾಗಿದೆ. ಎಸ್‌ ಟಿ ಸಮುದಾಯದ ಶಾಸಕ ರಮೇಶ್‌ ಜಾರಕಿಹೊಳಿ ಪ್ರಚಾರ ಮಾಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿರುವುದು ಬಿಜೆಪಿಗೆ ಮುಜಗರವನ್ನುಂಟು ಮಾಡಿದೆ. ಆದರೆ ಒಮ್ಮೆ ಬಳ್ಳಾರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಕಮಲ ಅರಳಿಸಿದರೂ ಸಂಡೂರು ಗಣಿ ಧೂಳಿಯಲ್ಲಿ ಕಮಲ ಕಾಣಲು ಸಾಧ್ಯವಾಗಿಲ್ಲ. ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿ ಬಿಜೆಪಿಗೆ ಮರಳಿರುವ ಜನಾರ್ದನ ರೆಡ್ಡಿ ಪ್ರತಿಷ್ಠೆ ಇಲ್ಲಿ ಕೆಲಸ ಮಾಡುವುದೇ ಕಾದು ನೋಡಬೇಕಿದೆ.

ರಾಜಕೀಯ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುತ್ತದೆ. ಶಾಸಕರ ಕಚೇರಿಯ ನೌಕರರೇ ಇಲ್ಲಿ ಗೆದ್ದಿರುವಾಗ ಬಂಗಾರು ಹನುಮಂತುವೂ ಗೆಲ್ಲಬಾರದು ಎಂದೇನೂ ಇಲ್ಲವಲ್ಲ ಎನ್ನುವ ಮಾತುಗಳಿಗೆ ಬರವಿಲ್ಲ. ಫಲಿತಾಂಶಕ್ಕಾಗಿ ನವೆಂಬರ್‌ 23ರವರೆಗೆ ಕಾಯಲೇಬೇಕು.

ವಿಶ್ಲೇಷಣೆ: ಎಚ್.ಮಾರುತಿ, ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ