ಆರು ಜಿಲ್ಲೆಗಳ ರೈತರ ನಿದ್ದೆಗೆಡಿಸಿದ ವಕ್ಫ್‌ ನೋಟಿಸ್‌: ತೇಜಸ್ವಿ ಸೂರ್ಯ ಅವರೇ ಈ ಗೊಂದಲ ಪರಿಹರಿಸಿ; ಲೇಖಕ ಅರವಿಂದ ಸಿಗದಾಳ್ ಮನವಿ
ಕನ್ನಡ ಸುದ್ದಿ  /  ಕರ್ನಾಟಕ  /  ಆರು ಜಿಲ್ಲೆಗಳ ರೈತರ ನಿದ್ದೆಗೆಡಿಸಿದ ವಕ್ಫ್‌ ನೋಟಿಸ್‌: ತೇಜಸ್ವಿ ಸೂರ್ಯ ಅವರೇ ಈ ಗೊಂದಲ ಪರಿಹರಿಸಿ; ಲೇಖಕ ಅರವಿಂದ ಸಿಗದಾಳ್ ಮನವಿ

ಆರು ಜಿಲ್ಲೆಗಳ ರೈತರ ನಿದ್ದೆಗೆಡಿಸಿದ ವಕ್ಫ್‌ ನೋಟಿಸ್‌: ತೇಜಸ್ವಿ ಸೂರ್ಯ ಅವರೇ ಈ ಗೊಂದಲ ಪರಿಹರಿಸಿ; ಲೇಖಕ ಅರವಿಂದ ಸಿಗದಾಳ್ ಮನವಿ

ರೈತರಿಗೆ ವಕ್ಫ್ ನೋಟಿಸ್‌, ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದು ಇತ್ಯಾದಿ ಸಮಸ್ಯೆಗಳಿಂದ ಆರು ಜಿಲ್ಲೆಗಳ ರೈತರು ಕಂಗಾಲಾಗಿದ್ದಾರೆ. ಆದರೆ, 'ಸತ್ಯ' ಹೇಳಿ ಧೈರ್ಯ ತುಂಬುವ ಒಬ್ಬನೇ ಒಬ್ಬ ಜನಪ್ರತಿನಿಧಿ ಕಾಣಲಿಲ್ಲ. ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ. ಅಲ್ಲಿರುವ ಗೊಂದಲ, ಅನುಮಾನ ಬಗೆಹರಿಸಬೇಕು ಎಂದು ಲೇಖಕ ಅರವಿಂದ ಸಿಗದಾಳ್‌ ಮೇಲುಕೊಪ್ಪ ಹೇಳಿದ್ದಾರೆ.

ಆರು ಜಿಲ್ಲೆಗಳ ರೈತರ ನಿದ್ದೆಗೆಡಿಸಿದ ವಕ್ಫ್‌ ನೋಟಿಸ್‌ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಸ್ಪಂದಿಸಿದ್ದಾರೆ. ಅವರು ಕೂಡ ಕೆಲವು ಗೊಂದಲ ಪರಿಹರಿಸಬೇಕು ಎಂದು ಲೇಖಕ ಅರವಿಂದ ಸಿಗದಾಳ್ ಮೇಲುಕೊಪ್ಪ ಆಗ್ರಹಿಸಿದ್ದಾರೆ. (ಸಾಂಕೇತಿಕ ಚಿತ್ರ)
ಆರು ಜಿಲ್ಲೆಗಳ ರೈತರ ನಿದ್ದೆಗೆಡಿಸಿದ ವಕ್ಫ್‌ ನೋಟಿಸ್‌ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಸ್ಪಂದಿಸಿದ್ದಾರೆ. ಅವರು ಕೂಡ ಕೆಲವು ಗೊಂದಲ ಪರಿಹರಿಸಬೇಕು ಎಂದು ಲೇಖಕ ಅರವಿಂದ ಸಿಗದಾಳ್ ಮೇಲುಕೊಪ್ಪ ಆಗ್ರಹಿಸಿದ್ದಾರೆ. (ಸಾಂಕೇತಿಕ ಚಿತ್ರ)

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರ ಜಮೀನಿನ ಮೇಲೆ ವಕ್ಫ್‌ ಬೋರ್ಡ್‌ ಕಣ್ಣು ಹಾಕಿರುವುದು, ಅವರಿಗೆ ನೋಟಿಸ್ ಕಳುಹಿಸಿದ್ದು ವ್ಯಾಪಕ ಚರ್ಚೆಯಲ್ಲಿದೆ. ನೋಟಿಸ್ ಪಡೆದುಕೊಂಡ ರೈತರೂ ಕಂಗಾಗಲಾಗಿದ್ದಾರೆ. ದೇಶವಾಸಿಗಳಿಗೆ ತೊಂದರೆ ಉಂಟುಮಾಡುವ ವಕ್ಫ್‌ ಬೋರ್ಡ್‌ನ ಈ ವಿಶೇಷಾಧಿಕಾರ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಹಿಂದಿನ ಸರ್ಕಾರ ಮಾಡಿದ ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ. ಇದಕ್ಕಾಗಿ ರಚನೆಯಾಗಿರುವ ಜಂಟಿ ಸಂಸದೀಯ ಸಮಿತಿ ಸದಸ್ಯರಾಗಿರುವ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು, ರಾಜ್ಯದ ವಿದ್ಯಮಾನಗಳಿಗೆ ಸ್ಪಂದಿಸಿ ಹೇಳಿಕೆ ನೀಡಿದ್ದಾರೆ. ನೋಟಿಸ್ ಬಂದರೆ ಏನು ಮಾಡಬೇಕು ಎಂದೂ ತಿಳಿಸಿದ್ದರು. ಈ ತಿಳಿವಳಿಕೆ ಮಾತಿನಿಂದಾಗಿ ಗೊಂದಲ ಉಂಟಾಗಿದ್ದು, ಅದನ್ನು ತೇಜಸ್ವಿ ಸೂರ್ಯ ಅವರು ಬಗೆಹರಿಸಬೇಕಾದ ಗೊಂದಲಗಳ ವಿವರನ್ನು ಎಂದು ಲೇಖಕ ಅರವಿಂದ ಸಿಗದಾಳ್‌ ಮೇಲುಕೊಪ್ಪ ತೆರೆದಿಟ್ಟಿದ್ದಾರೆ.

'ಸತ್ಯ' ಹೇಳಿ ಧೈರ್ಯ ತುಂಬುವ ಒಬ್ಬನೇ ಒಬ್ಬ ಜನಪ್ರತಿನಿಧಿ ಕಾಣಲಿಲ್ಲ

ರೈತರಿಗೆ ವಕ್ಫ್ ನೋಟಿಸ್‌, ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದು ಇತ್ಯಾದಿ ಸಾಂಕ್ರಾಮಿಕ ಸಮಸ್ಯೆಗಳ ಬಗ್ಗೆ ಬಾರಿ ಚರ್ಚೆ ನೆಡೆಯುತ್ತಿದೆ. ಮೊನ್ನೆ ಒಂದು ಜಿಲ್ಲೆಯಲ್ಲಿ ಹರಡಿದ್ದ ಈ ಸಾಂಕ್ರಾಮಿಕ ಸಮಸ್ಯೆ, ನಿನ್ನೆ ಮತ್ತೆರಡು ಜಿಲ್ಲೆಗೆ ಹಬ್ಬಿ, ಈಗ ಆರು ಜಿಲ್ಲೆಗಳ ರೈತರ ನಿದ್ದೆ ಕೆಡಿಸಿ ವ್ಯಾಪಿಸಿದೆ!

ವಕ್ಫ್ ನೋಟಿಸ್‌, ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದುಗಳ ಸಾಂಕ್ರಾಮಿಕ ಸಮಸ್ಯೆ ಈಗ ದಲಿತರ ಜಮೀನು, ಎಸ್‌ಸಿ-ಎಸ್‌ಟಿ ಜಮೀನು, ಮಠ-ದೇವಸ್ಥಾನಗಳ ಜಮೀನುಗಳಿಗೂ ವ್ಯಾಪಿಸುತ್ತಿದೆ. ನಾಳೆ ರಾಜ್ಯಾದ್ಯಂತ ಹರಡುವ ಸಾಧ್ಯತೆ ಸ್ಪಷ್ಟವಾಗಿ ಕಾಣಿಸ್ತಾ ಇದೆ. ಇಡೀ ರಾಜ್ಯದ ರೈತರು ಕಂಗಲಾಗಿದ್ದಾರೆ, ಆತಂಕದಲ್ಲಿದ್ದಾರೆ.

ರಾಜ್ಯ ಘನ ಸರಕಾರದ ಗೌರವಾನ್ವಿತ ಸಚಿವರು "ನೋಟಿಸ್‌ ಕೊಟ್ಟೇ ಇಲ್ಲ, ವದಂತಿಗಳಿಗೆ ಕಿವಿ ಕೊಡಬೇಡಿ, ತಹಸೀಲ್ದಾರ್ ಒಬ್ಬರ ಅಚಾತುರ್ಯದಿಂದ ಎಲ್ಲೋ ಒಂದು 'ನಲವತ್ತೊಂದು' ಪಹಣಿಯಲ್ಲಿ ಸಣ್ಣ ಲೋಪ ಆಗಿದೆ" ಅಂತ ಪತ್ರಿಕಾಗೋಷ್ಠಿ ನೆಡೆಸಿ ಕಾಗೆ ಹಾರಿಸುತ್ತಿದ್ದಾರೆ! "ನೋಟಿಸ್‌ ಕೊಟ್ಟಿದ್ದು ಹೌದು, ಗಮನಿಸುತ್ತೇವೆ, ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ" ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಯಾವುದೋ ಒತ್ತಡಕ್ಕೆ ಸಿಲುಕಿದ ಜಿಲ್ಲಾಧಿಕಾರಿ ಅಸ್ಪಷ್ಟ ಮಾಹಿತಿ ಕೊಡ್ತಾರೆ. ಸತ್ಯಕ್ಕೆ ಸಂಪೂರ್ಣ ದೂರವಾದ! (ಸುಳ್ಳು ಅನ್ನುವ ಅಸಂವಿಧಾನಿಕ ಪದ ಬಳಸಬಾರದು, ಅದರ ಬದಲಿಗೆ ಸತ್ಯಕ್ಕೆ ದೂರವಾದ ಎಂದು ಬಳಸಲು ಸೂಚನೆ ಇರುವುದರಿಂದ ಈ ಪದಗಳನ್ನು ಬಳಸಲಾಗಿದೆ!) ಮಾಹಿತಿಗಳು ಆತಂಕದಿಂದ ಸಣ್ಣ ಕಂಪನಗಳೊಂದಿಗೆ ಮೊಬೈಲ್ ಹಿಡಿದಿರುವ ರೈತರ ಕೈಗೆ ತಲುಪುತ್ತಿವೆ.

"ಡೋಂಟ್ ವರಿ, ನಾವಿದ್ದೇವೆ, 24 ಗಂಟೆಗಳಲ್ಲಿ ಈ ಎಲ್ಲಾ ಸಾಂಕ್ರಾಮಿಕ ಸಮಸ್ಯೆಗಳನ್ನು ಸರಿ ಪಡಿಸಿ, ಕ್ಲಿಯರನ್ಸ್ ಕೊಡ್ತೇವೆ" ಅಂತ ಸಾಮಾನ್ಯ ರೈತರ, ಹಿಂದುಳಿದ ರೈತರ, ಎಸ್‌ಸಿ-ಎಸ್‌ಟಿ ರೈತರ, ಮಠಗಳ, ದೇವಸ್ಥಾನಗಳ ಪರವಾಗಿ ನಿಂತು ಬೆಂಬಲಿಸುವ, 'ಸತ್ಯ' ಹೇಳಿ ಧೈರ್ಯ ತುಂಬುವ ಒಬ್ಬನೇ ಒಬ್ಬ ಜನಪ್ರತಿನಿಧಿ, ಶಾಸಕ, ಸಚಿವ ಈ ರಾಜ್ಯದಲ್ಲಿ ಕಾಣಿಸುತ್ತಿಲ್ಲ. ನೋಟಿಸ್‌ ಬಂದರೆ ರೈತರು ದಾಖಲೆಗಳನ್ನು ಕೊಟ್ರಾಯ್ತು ಅನ್ನುವ ಉಡಾಫೆಯವರೇ ಟಿವಿಯಲ್ಲಿ ಠೀವಿಯಿಂದ ಕಾಣಿಸಿಕೊಳ್ತಾ ಇದ್ದಾರೆ!

ಸರ್ಕಾರದ ಬಳಿಯೇ ದಾಖಲೆ ಇಲ್ವಾ…

ಅಷ್ಟಕ್ಕೂ ಸರಕಾರದ ಬಳಿಯೇ ರೈತರ ಜಮೀನಿನ ಪ್ರತೀ ಸರ್ವೇ ನಂಬರ್‌ಗಳ ಪಹಣಿ, ಇಸಿ (ಎನ್‌ಕಂಬರೆನ್ಸ್ ಸರ್ಟಿಫಿಕೇಟ್), ಮ್ಯುಟೇಷನ್, ಖಾತಾ, ಪಟ್ಟಾ, ಕಂದಾಯ ಕಟ್ಟಿದ ಪೇಮೆಂಟ್ ದಾಖಲೆ, ಆಧಾರ್, ಆಧಾರ್ ಸೀಡಿಂಗ್, ಕೆವೈಸಿ, ಹಕ್ಕುಪತ್ರ, ಪರಭಾರೆ ಪತ್ರ, ನೊಂದಣಿ ಆಗಿರುವ ಚಾಪಾ ಪತ್ರಗಳು, ಸೇಲ್ ಡೀಡ್, ಮದರ್ ಡೀಡ್... ಹೀಗೆ ಎಲ್ಲಾ ಇರುತ್ತೆ ಮತ್ತು ಇರಬೇಕು.

ಈಗ ಅದನ್ನೆಲ್ಲ ರೈತರಿಂದ ನೋಟೀಸ್ ಕೊಟ್ಟು ಕೇಳುವ ಬದಲು ತಾನೇ ತನ್ನ ಇಲಾಖೆಗಳಲ್ಲಿ ಕಡತಗಳ ಕಟ್ಟು ಬಿಚ್ಚಿ ತೆಗೆಯುವುದಕ್ಕಾಗುವುದಿಲ್ಲವಾ? 50 ವರ್ಷಗಳ ಹಿಂದಿನ ದಾಖಲೆಗಳೆಲ್ಲ ಈಗ ಎಲ್ಲ ರೈತರ ಬಳಿ ಇರ್ತಾವಾ? ಅಕಸ್ಮಾತ್ ರೈತರ ಬಳಿ ಇತ್ತೀಚಿನ (10-20 ವರ್ಷಗಳ) ಕೆಲವೇ ದಾಖಲೆಗಳು ಮಾತ್ರ ಇದ್ದರೆ ಅವೆಲ್ಲ ಸಾಕಾ? 1974 ಕ್ಕಿಂತ ಹಿಂದನ ದಾಖಲೆಗಳು ರೈತರ ಬಳಿ ಇಲ್ಲದಿದ್ದರೆ ರೈತರ ಕತೆ ಏನು? ಬಹುತೇಕ ಯಾವ ರೈತರ ಬಳಿಯೂ ಅಷ್ಟು ಹಿಂದಿನ ದಾಖಲೆಗಳು ಇರುವುದಿಲ್ಲ. ರೈತರು ಬೀದಿಗೆ ಬರಬೇಕಾ? ಸಾಯಬೇಕಾ?

ಇನ್ನು ಕಂದಾಯ ಇಲಾಖೆಗಳಲ್ಲಿ ಅಷ್ಟು ಹಿಂದಿನ ಇಸಿ ದಾಖಲೆ ಇಟ್ಟುಕೊಳ್ಳುವಷ್ಟು ಕಂದಾಯ ಇಲಾಖೆಯ ರೆಕಾರ್ಡ್ ರೂಮು ಸುಭದ್ರವಾಗಿದೆಯಾ? ರೈತರು ಕೇಳಿದ ತಕ್ಷಣ ಕಂದಾಯ ಇಲಾಖೆಗೆ ಅದನ್ನು ಕೊಡಲು ಸಾಧ್ಯವಾ? "ನಾಳೆ ಬನ್ನಿ" ಅಂತ ಕತೆ ಹೇಳಿ ದಿನ ತಳ್ಳುವ ಕಂದಾಯ ಇಲಾಖೆಗೆ ರೈತರು ದಿನಾ ಅಲೆಯಬೇಕಾ? ವಕ್ಫ್ ಬೋರ್ಡ್ ದಾಖಲೆ ಕೇಳಿದೆ ಅಂತ, ದಿನಾ ಅಲ್ಲಿಗೆ ಅಲೆಯುತ್ತಿದ್ರೆ ಕೃಷಿ ಕೆಲಸ ಮಾಡುವುದು ಯಾರು? ರೈತರು ಕಂದಾಯ ಇಲಾಖೆ, ವಕ್ಫ್ ಇಲಾಖೆ, ಗ್ರಾಮ ಒನ್, ಬಾಪೂಜಿ ಕೇಂದ್ರ, ನಾಡ ಕಚೇರಿ, ವಿಎ ಆಫೀಸ್, ಆರ್‌ಐ ಆಫೀಸು, ಭೂ ಮಾಪನ ಇಲಾಖೆ, ನೋಟರಿ ಆಫೀಸು, ಗ್ರಾಮ ಪಂಚಾಯತಿ, ತಹಸೀಲ್ದಾರ್, ಲಾಯರ್ ಆಫೀಸು, ಜೆರಾಕ್ಸ್ ಸೆಂಟರ್‌ಗಳಿಗೆ ಅಲಿತಾ ಇದ್ರೆ ಜಮೀನಲ್ಲಿ ಬೇಸಾಯ ಮಾಡುವುದು ಯಾರು?, ಫಸಲು ತೆಗೆಯುವುದು ಯಾವಾಗ?

**

ನಿಮ್ಮ ಆಸ್ತಿ ನಮ್ಮದು ಅಂತ ವಕ್ಫ್‌ ಬೋರ್ಡ್ ನೋಟಿಸ್ ಕಳುಹಿಸಿದೆಯೇ

ಇಷ್ಟು ಅದ್ವಾನಗಳ ನಡುವೆ, ರೈತರಿಗೆ ಸಮಾಧಾನಕರ ನೈತಿಕ ಬೆಂಬಲ ಒಂದು ಸಿಕ್ಕಿದೆ!? "ಯಾರಾದರು ರೈತರಿಗೆ ವಕ್ಫ್ ನೋಟಿಸ್‌, ವಕ್ಫ್ ಪಹಣಿ ಸಾಂಕ್ರಾಮಿಕ ಬಂದರೆ, ನೇರವಾಗಿ ನನ್ನ ಜಯನಗರ ಕಚೇರಿಗೆ ಬನ್ನಿ, ನಿಮ್ಮ ಪರವಾಗಿ ಹೈಕೋರ್ಟಿನಲ್ಲಿ ಉಚಿತವಾಗಿ ಕೇಸ್ ನೆಡೆಸಿ ನ್ಯಾಯ ಕೊಡಿಸುತ್ತೇನೆ" ಅಂತ ಸಂಸದ ತೇಜಸ್ವಿ ಸೂರ್ಯ ಒಂದು ಭರವಸೆಯ ಮಾತಾಡಿದ್ದಾರೆ. (ಇದರೊಂದಿಗಿರುವ ಪೂರ್ತಿ ವೀಡಿಯೋ ಗಮನಿಸಿ)

ಇಲ್ಲೂ ಒಂದು ಅನುಮಾನ ಇದೆ

ವಕ್ಫ್ ಕೇಸ್‌ಗಳನ್ನು ವಕ್ಫ್ ಟ್ರಿಬ್ಯೂನಲ್‌ನಲ್ಲಿ ಮಾತ್ರ ಪ್ರಶ್ನಿಸಲು ಅವಕಾಶ ಇರುವುದು ಅಂತ ಹೇಳಿದ ತೇಜಿಸ್ವಿ ಸೂರ್ಯರವರೇ, ಹೈಕೋರ್ಟಿನಲ್ಲಿ ಉಚಿತವಾಗಿ ಕೇಸ್ ನಡೆಸಿ ನ್ಯಾಯ ಕೊಡಿಸುತ್ತೇನೆ ಅಂತ ಹೇಗೆ ಹೇಳೋಕೆ ಸಾಧ್ಯ?, ಆದರೂ ಸ್ವತಃ ಲಾಯರೂ ಆಗಿರುವ ಜೊತೆಗೆ ವಕ್ಫ್ JPC (ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ) ಸದಸ್ಯರೂ ಆಗಿರುವ ತೇಜಸ್ವಿ ಸೂರ್ಯರವರ ಬಳಿ, ಸದರಿ ಸಮಸ್ಯೆಯಿಂದ ರೈತರನ್ನು ಬಚಾವ್ ಮಾಡಲು ಯಾವುದಾದರು ಒಂದು ದಾರಿ ಇರಬಹುದು ಎಂದು ನಂಬೋಣ.

ಯಾವುದಕ್ಕೂ ತೇಜಸ್ವಿ ಸೂರ್ಯರವರ ಈ ವೀಡಿಯೋ ಲಿಂಕ್‌ನ್ನು ಪಹಣಿ ಜೊತೆ ಇಟ್ಕೊಂಡಿರಿ. ಜಯನಗರ ಹೋಗುವ ಪರಿಸ್ಥಿತಿ ಬಂದಾಗ ಉಪಯೋಗಕ್ಕೆ ಬರಬಹುದು!! ಅವಧಿ ಕಮ್ಮಿ ಇರುವುದರಿಂದ, ರಜೆಗಳು ಇರುವುದರಿಂದ, ಈ ದೀಪಾವಳಿಗೆ ಮಲೆನಾಡಿನ ರೈತರ ಜಮೀನಿಗೆ ವಕ್ಫ್ ನೋಟೀಸ್, ವಕ್ಫ್ ಪಹಣಿ ಸಾಂಕ್ರಾಮಿಕಗಳು ಬರಲಿಕ್ಕಿಲ್ಲ ಎಂಬ ಬರವಸೆಯಲ್ಲಿ ಸಧ್ಯಕ್ಕೆ ನಮ್ಮದೇ ಆಗಿರುವ ಜಮೀನಿಗೆ ನಾವೇ ಪಟಾಕಿ ತ್ಯಜಿಸಿ ಬರಿ ಕೋಲು ಹಚ್ಚಿ ಸಂಭ್ರಮಿಸೋಣ.

- ಅರವಿಂದ ಸಿಗದಾಳ್, ಮೇಲುಕೊಪ್ಪ

Whats_app_banner